ಎಲ್ಲಾ ಹೊಸತುಗಳಿಗೆ ಎದೆಯ ಹದ ಮಾಡಿಕೊಂಡಿದ್ದೇನೆ, ಹುಟ್ಟು ಸಾವುಗಳೆಲ್ಲವೂ ಈ ನೆಲದೊಂದಿಗೆ ಮೊದಲಾದವು ನನಗೆ…ಈ ಸಾಲುಗಳು ಕವಿಯತ್ರಿ ಮಂಜುಳಾ ಹುಲಿಕುಂಟೆ ಅವರ ಲೇಖನಿಯಲ್ಲಿ ಅರಳಿದ ಸಾಲುಗಳು, ತಪ್ಪದೆ ಓದಿ…
ಹುಟ್ಟು ಸಾವುಗಳ ಲೆಕ್ಕವಿಟ್ಟೇ
ಬದುಕಿನ ಸುತ್ತಾ ಸುತ್ತಿಕೊಂಡಿರುವ
ಎಲ್ಲವನ್ನು ಪ್ರೀತಿಸಿದ್ದೇನೆ
ನನ್ನ ಗಾಯಗಳ ಸುಖಿಸುವವರ ನಡುವೆ
ನೋವುಗಳ ಬದುಕುವುದ ಕಲಿತಿದ್ದೇನೆ
ಛಿದ್ರವಾಗಿದ್ದೇನೆ ನಿಜಾ..
ಮತ್ತೆ ಹುಟ್ಟುಪಡೆದಿದ್ದೇನೆ
ನನ್ನಂಥವಳೊಬ್ಬಳನ್ನ
ಮತ್ಯಾರೋ ಕೂಡಿಡಲಾಗದ್ದಕ್ಕೆ
ನಾನೇ ಒಟ್ಟಾಗಿದ್ದೇನೆ
ಕ್ಷುದ್ರಗ್ರಹವೊಂದು ಹೊಸ ಜಗತ್ತಾಗುವಂತೆ
ಚೂರಾದ ಪ್ರತೀಭಾರೀ ಹೊಸದೊಂದು ಜಗತ್ತೇ ಆಗಿದ್ದೇನೆ…
ಅಣಕಿಸುವವರ ಬೆರಳ ತುದಿಗೆ ಬೆರಗಾಗೇ ಉಳಿದಿದ್ದೇನೆ
ಹಾ ಉಳಿದಿದ್ದೇನೆ…
ಕಳೆದುಕೊಂಡವರ, ಕಳೆದುಹೋದವರ
ಹಾದಿಗಳಿಗೆಲ್ಲಾ ಮರೆವಿನ ಬಳ್ಳಿಗಳ ಹಬ್ಬಿಸಿ
ಹೊಸ ಹಬ್ಬವೊಂದಕ್ಕೆ ಅಣಿಯಾಗಿದ್ದೇನೆ….
ಎದೆಯಂಗಳದಲ್ಲೆಲ್ಲಾ ನಿರಾಳತೆಯ
ಮಲ್ಲಿಗೆ ಹರಡಿ ಕಂಪುಸೂಸುವಂತೆ
ಇರುವಷ್ಟು ದಿನ ನನ್ನಂಥೇ ನಸುನಗುತ್ತಾ
ಬದುಕಿ ಮಲ್ಲಿಗೆಯಂತೆಯೇ ಮುಗಿದುಹೋಗುತ್ತೇನೆ..
ಎಲ್ಲಾ ಹೊಸತುಗಳಿಗೆ ಎದೆಯ ಹದ ಮಾಡಿಕೊಂಡಿದ್ದೇನೆ
ಹುಟ್ಟು ಸಾವುಗಳೆಲ್ಲವೂ ಈ ನೆಲದೊಂದಿಗೆ ಮೊದಲಾದವು ನನಗೆ…
- ಮಂಜುಳಾ ಹುಲಿಕುಂಟೆ