ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (82) ಸೋಮವಾರ ಬೆಳಿಗ್ಗೆ ಹೈದರಾಬಾದ್‌ನ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ಕುರಿತು ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಒಂದು ಪುಟ್ಟ ಬರಹ, ಮುಂದೆ ಓದಿ….
ಕೆ .ವಿ. ತಿರುಮಲೇಶ್ ತಮ್ಮ” ಸೀಸನ್ ಟಿಕೆಟ್ ಮತ್ತು ಬಾಚಣಿಗೆ ‘ ಕವಿತೆಯಲ್ಲಿ ಉದ್ಯೋಗ ಇರುವವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಸೆರೆಹಿಡಿದ್ದಾರೆ. ಕವನದ ಮೊದಲ ಭಾಗದಲ್ಲಿ ಉದ್ಯೋಗ ಇರುವವರ ದ್ಯೋತಕವಾಗಿ ಅವರಿಗೆ ಸೀಸನ್ ಟಿಕೆಟ್ ಮತ್ತು ಬಾಚಣಿಗೆ ಗಳು ಇವೆ. ಮೊದಲನೆಯದು ಅವರ ಸ್ಥಿರ ಉದ್ಯೋಗದ ರೂಪಕವಾದರೆ ,ಎರಡನೆಯದು ಅಲ್ಲಿ ಅವರು ಶಿಸ್ತಾಗಿ ಕಾಣಿಸಿಕೊಳ್ಳಲು ಆವಶ್ಯಕವಾದ ಪ್ರತೀಕ. ಆದರೆ ಎರಡನೇ ಭಾಗದಲ್ಲಿ ಕೆಲಸವಿಲ್ಲದವರ ಪಾಡನ್ನು “ಕೆಲಸವಿಲ್ಲದವರು ಸುಮ್ಮನೆ ಅಲೆಯುತ್ತಾರೆ ಬಜಾರುಗಳಲ್ಲಿ ಅಂಗಡಿಗಳ ಮುಂದೆ ನಿಲ್ಲುತ್ತಾರೆ” ಇದೊಂದು ವಿದ್ಯಾವಂತ ನಿರುದ್ಯೋಗಿಗಳ ಸಮರ್ಥ ಶಬ್ದ ಚಿತ್ರವಾಗಿದೆ.
ಅಲ್ಲದೆ ” ಉದ್ದ ಕೂದಲಿನ ಅವರು ಭಯೋತ್ಪಾದಕರಂತೆ ಕಾಣಿಸುತ್ತಾರೆ” ಎನ್ನುವುದರ ಮೂಲಕ ಮುಂದಿನ ಭಯಂಕರ ಭವಿಷ್ಯದ ಅಪಾಯಕಾರಿ ಸ್ಥಿತಿಯ ಕಡೆಗೆ ಬೆರಳು ಮಾಡಿ ತೋರಿಸುತ್ತದೆ.
ಕೆಲಸ ಇರುವವರು ಮತ್ತು ಇಲ್ಲದವರ ನಡುವಿನ ಅಂತರ ಕಡಿಮೆ ಆಗುವವರೆಗೆ ಭಯೋತ್ಪಾದಕ ಎಂಬ ಮಹಾಸ್ಪೊಟದ ಮೇಲೆ ಆಧುನಿಕ ಜಗತ್ತು ನಿಂತಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಇದನ್ನು ಮೊದಲ ಬಾರಿಗೆ ಕನ್ನಡ ಕಾವ್ಯದಲ್ಲಿ ಗುರುತಿಸಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ ಶ್ರೇಯಸ್ಸು ದಿವಂಗತ ಶ್ರೀ ಕೆ.ವಿ.ತಿರುಮಲೇಶ್ ಅವರಿಗೆ ಸಲ್ಲಬೇಕು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು