ಇರುವ ಜಾಗದಲ್ಲೇ ತನ್ನ ಇತಿಮಿತಿಯೊಳಗೆ ಮನೆಯನ್ನು ಕಟ್ಟುವುದಾಗಿ ತೀರ್ಮಾನಿಸಿ ಜಾಗವನ್ನು ಸ್ವಚ್ಛಗೊಳಿಸಿದ್ದ ದೇವರಾಜ. ಪೋಸ್ಟ್ ಮ್ಯಾನ್ ಬಂದು ನಿಮಗೊಂದು ರಿಜಿಸ್ಟರ್ ಪೋಸ್ಟ್ ಬಂದಿದೆ ಎಂದಾಗ ಗಾಬರಿಯಾಗಿದ. ತಾಲ್ಲೂಕು ಪಂಚಾಯ್ತಿಂದ ನಿಮಗೆ ಈಗಾಗಲೆ ಮನೆ ಇರುವುದೆಂದು ಅರ್ಜಿ ಬಂದಿದೆ. ಹಾಗಾಗಿ ಮನೆ ಕೊಡಲು ಇನ್ನೊಮ್ಮೆ ಪರಿಶೀಲಿಸಲಾಗುತ್ತಿದೆ ಎಂಬ ಬರಹದ ಸಾಲುಗಳನ್ನು ನೋಡಿ ದೇವರಾಜ ತಳಮಳಗೊಂಡನು. ಮುಂದೇನಾಯಿತು ತಪ್ಪದೆ ಓದಿ…
ದೇವರಾಜ ಬೆಳ್ ಬೆಳಿಗ್ಗೆ ಇನ್ನೂ ಕತ್ಲಿದ್ದಂಗೆ ಎದ್ದು ಗಡಿಬಿಡಿಯಲ್ಲಿ ಮುಖಕ್ಕೆ ನೀರಾಕ್ಯಂಡು ಮುಖ ತೊಳೆದ ಶಾಸ್ತ್ರ ಮಾಡಿದ ಹೆಂಡತಿ ಕಮಲಮ್ಮ ನಿದ್ದೆಗಣ್ಣಲ್ಲೆ ನಿನ್ ಮಖನಾದ್ರು ನೆಟ್ಟುಗ್ ತೊಳಿಬಾರ್ದ ಅಂದದ್ದು ಕೇಳಿಸಿತೊ ಇಲ್ಲವೊ ಎಂಬಂತೆ ಲಗುಬಗೆಯಿಂದ ಬಟ್ಟೆ ಹಾಕ್ಯಂಡು ಬಸ್ಸು ಎಲ್ಲಿ ಹೊರ್ಟೋಗಿದ್ಯೊ ಅಂದ್ಕಂಡು ಬಿರ್ ಬಿರ್ನೆ ಹೆಜ್ಜೆ ಹಾಕ್ತ ನಡೆಯತೊಡಗಿದನು. ಬಸ್ಸೇನು ಆತನಿಗೆ ಸುಲಭವಾಗೇನು ಸಿಗಂಗಿರ್ಲಿಲ್ಲ. ಎರಡು ಮೈಲಿ ನಡೆದರಷ್ಟೆ ಹೋಗ್ಬೌದಿತ್ತು ಇದೆಲ್ಲಾ ಗೊತ್ತಿದ್ದೆ ಕತ್ಲಿಗೆ ಎದ್ದು ಬಸ್ಸಿನ ದಾರಿ ಹಿಡಿದಿದ್ದ ಬರ್ಬೇಕಾದ್ರೆ ಮನೆಕಡೆ ಹುಷಾರು ಅಂತ ಹೆಂಡತಿಗೆ ಹೇಳೊದನ್ನ ಮಾತ್ರ ಮರ್ತಿರ್ಲಿಲ್ಲ. ಏದುಸಿರು ಬಿಡುತ್ತಲೆ ಹೆಜ್ಜೆ ಹಾಕುತ್ತ ನಡೆಯುತ್ತಿದ್ದನು. ಆಗಾಗ ಕೈಚೀಲದಲ್ಲಿದ್ದ ಕಾಗದ ಪತ್ರಗಳನ್ನು ಪದೆ ಪದೆ ನೋಡುತ್ತಿದ್ದದ್ದು ಮಾತ್ರ ಯಾವುದೋ ಮಹತ್ತರ ಕೆಲ್ಸಕ್ಕೆ ಹೊರಟಿದ್ದ ಅಂಬೋದ್ನ ಮಾತ್ರ ಸೂಚಿಸುತ್ತಿತ್ತು.
ದೇವರಾಜ ಶ್ರಮಜೀವಿ ಆರ್ಥಿಕ ವರಮಾನದ ಯಾವ ಮೂಲವು ಇಲ್ಲದ ಬಡತನದ ಹಿನ್ನೆಲೆಯ ಕುಟುಂಬ ಅವರದಾಗಿತ್ತು. ತಂದೆ ಶಿವಪ್ಪನು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಜೀವನ ನಡೆಸಲು ನಾಲ್ಕೈದು ಕುರಿಗಳನ್ನು ಕಷ್ಟಪಟ್ಟು ತಗೊಂಡಿದ್ದ ಊರವರ ಒಂದಿಷ್ಟು ಕುರಿಗಳನ್ನು ವರ್ಷಕ್ಕಿಷ್ಟು ಕುರಿಗಳ ಲೆಕ್ಕದಲ್ಲಿ ಮೇಯಿಸುತ್ತಿದ್ದ. ದಿನ ಕಳೆದಂತೆ ಅವುಗಳ ಸಂಖ್ಯೆಯು ಜಾಸ್ತಿಯಾಗಿ ಜೋಪಡಿಯಲ್ಲಿದ್ದ ಶಿವಪ್ಪ ಹದಿನಾರು ಗೂಟದ ಮನೆ ಕಟ್ಟಿಸಿಕೊಂಡಿದ್ದ ಆಗಿನ ಕಾಲದಲ್ಲಿ ಮಣ್ಣು ಕಲಸಿ ಯಂಡೆಅಂಗ್ ಮಾಡಿ ಒಣಗಿಸಿ ಮನೆಕಟ್ತಾ ಇದ್ರು ಅಂತದ್ದೆ ಮನೆಯನ್ನು ಕಟ್ಸಿದ್ದ ಅದ್ರಲ್ಲೆ ಒಂದು ತಲೆಮಾರಿನ ಬದುಕು ನಡೆದು ಹೋಗಿತ್ತು. ಶಿವಪ್ಪನಿಗೆ ಬಹಳ ದಿನಗಳ ನಂತರ ದೇವರಾಜ ಹುಟ್ಟಿದ್ದ ಹದಿನಾರು ವರ್ಷದವನಿದ್ದಾಗ ತಂದೆ ಅಕಾಲಿಕ ಮರಣಕ್ಕೆ ತುತ್ತಾಗಿ ಸಾವನ್ನಪ್ಪಿದ್ದ. ಹೆಂಡತಿ ರಂಗಮ್ಮ ಮಗ ದೇವರಾಜನನ್ನು ಶಾಲೆಯಿಂದ ಬಿಡಿಸಿ ಉಳಿದಿದ್ದ ಕುರಿ ಕಾಯುವ ಕಾಯಕಕ್ಕೆ ಅಟ್ಟಿದ್ದಳು. ದಿನಕಳೆದಂತೆ ಕಾಯುವ ಕೆಲ್ಸ ದೇವರಾಜನಿಗೆ ಬೇಸರ ಉಂಟು ಮಾಡಿತು, ಆದ್ರೆ ಬದುಕು ನಡೆಯಬೇಕಲ್ಲ ಅಂದ್ಕೊಂಡು ಐದಾರು ವರ್ಷ ಕಳೆದನು. ಆತನು ಓದಿನಲ್ಲಿ ಚುರುಕಾಗಿದ್ದವನು ಲೆಕ್ಕದಲ್ಲಂತು ಬಲು ಚುರುಕು ನಾನೇಕೆ ಒಂದು ಚಿಲ್ರಂಗ್ಡಿ ಮಾಡ್ಬಾರ್ದು ಊರ್ನಲ್ಲಿ ಯಾವೊಂದು ಅಂಗಡಿ ಇಲ್ಲ ಅಂದ್ಕೊಳ್ತಿದ್ದವನು ಒಂದಿನ ತಾಯಿಗೂ ಹೇಳ್ದೆ ಹತ್ತಿರದ ಊರಿನ ಸಂತೆಗೆ ಇದ್ಬದ್ದ ಕುರಿಗಳನ್ನೆಲ್ಲ ಮಾರಿ ಒಂದಿಷ್ಟು ಹಣವನ್ನು ತಂದು ತಾಯಿಗೆ ಹೇಳಿದ್ದ ಇನ್ಮೇಲೆ ಊರ್ನಾಗೆ ಒಂದು ಅಂಗ್ಡಿ ಹಾಕ್ತೀನಿ ಕಣವ ನನ್ಗು ಸಾಕಾಗಿತ್ತು ಕುರಿ ಮೇಯ್ಸಿ ಅಂದಾಗತಾಯಿ ರಂಗಮ್ಮ ಗುಯ್ಗುಟ್ಟಿಏನಾರ ಮಾಡಪ್ಪ ನಂದೇನ್ ಐತೆ ಅಂದು ಸುಮ್ಮನಾಗಿದ್ದಳು.
ಅಂಗ್ಡಿ ಅಂದ್ರೆ ಅಂತ ದೊಡ್ಡ ಅಂಗ್ಡಿಯೇನು ಅಲ್ಲ ಹೊಟ್ಟೆ ಬಟ್ಟೆಗಾಗುವಷ್ಟು ಅಷ್ಟೇ ಅದರಿಂದ ಬರ್ತಿದ್ದ ಆದಾಯ. ನನ್ಗೂ ವಯಸ್ಸಾತ್ಕಣಪ್ಪ ನಾನ್ಯಾವಾಗ ಹೋಗ್ತಿನೊ ಗೊತ್ತಿಲ್ಲ ಬೇಗ ಒಂದು ಮದ್ವೆ ಮಾಡ್ಕಳಪ್ಪ ಅಂತಿದ್ದಳು ರಂಗಮ್ಮ. ದೇವರಾಜನಿಗೂ ಕೇಳಿ ಕೇಳಿ ಸಾಕಾಗಿ ಒಂದಿನ ಮದ್ವೆ ಆಗೇ ಬಿಡೋಣ ಅನ್ನೋ ತೀರ್ಮಾನಕ್ಕೆ ಬಂದಿದ್ದ ಊರು ನಾಡು ಎಲ್ಲಾ ತಿರ್ಗಿ ಕೊನೆಗೆ ಪಕ್ಕದ ಊರಿನ ಕಮಲಮ್ಮನೊಂದಿಗೆ ಮದುವೆಯೂ ಆಯಿತು. ಅಪ್ಪ ಕಟ್ಟಿದ ಹದಿನಾರು ಗೂಟದ ಮನೆಯಲ್ಲಿಯೇ ಬದುಕು ಸಾಗುತ್ತಿತ್ತು. ಅಂಗ್ಡಿ ವ್ಯಾಪಾರದ ದೆಸೆಯಿಂದಲೆ ಊರಿನಲ್ಲಿ ಒಂದಿಷ್ಟು ವಿರೋಧಿಗಳು ಹುಟ್ಟಿಕೊಂಡಿದ್ದರು. ಇವ್ಯಾವ ಪರಿವೆಯೂ ಇಲ್ಲದೆ ಜೀವನ ನಡೆಯುತ್ತಿತ್ತು.
ಮದುವೆಯಾದ ಎರಡು ವರ್ಷದಲ್ಲಿ ಮಗ ರಾಜೇಶ್ ಹುಟ್ಟಿದ್ದನು. ರಂಗಮ್ಮ ಮೊಮ್ಮಗನನ್ನು ನೋಡಿ ಸಂತಸಪಟ್ಟಿದ್ದಳು. ತನ್ನ ನಡುಗುವ ಸ್ವರದಿಂದಲೇ ಲಾಲಿ ಹಾಡ್ತಿದ್ದಳು. ಮೊಮ್ಮಗನೊಂದಿಗೆ ಆಡಿಪಾಡಿ ಕಾಲ ಕಳೆಯುತ್ತಿದ್ದಳು. ದೇವರಾಜ ಮಾತ್ರ ತನ್ನ ಅಂಗ್ಡಿ ವ್ಯಾಪಾರದಲ್ಲೇ ಮಗ್ನನಾಗಿರುತ್ತಿದ್ದನು. ನಿಧಾನವಾಗಿ ಅಲ್ಲೊಂದು ಇಲ್ಲೊಂದು ಅಂಗಡಿಗಳು ಪ್ರಾರಂಭವಾದವು. ದೇವರಾಜನ ಸಣ್ಣಂಗ್ಡಿಯಲ್ಲಿ ವ್ಯಾಪಾರವೂ ಕಡಿಮೆಯಾಗುತ್ತಾ ಬಂತು. ಶಿವಪ್ಪ ಕಟ್ಟಿಸಿದ ಮನೆಯನ್ನು ಮದುವೆಯ ಸಂದರ್ಭದಲ್ಲಿ ಸುಣ್ಣ ಬಣ್ಣ ಬಳಿದು ಸಿಂಗರಿಸಿದ್ದನು. ಆದ್ರೆ ಮದುವೆಯಾದ ವರ್ಷವೇ ವಿಪರೀತ ಮಳೆ ಬಂದು ಅಲ್ಲಲ್ಲಿ ಸೋರಿ ಮನೆಯ ಅಂದವೆ ಕೆಟ್ಟು ಅದನ್ನು ನೋಡಿದಾಗಲೆಲ್ಲಾ ನಾನೊಂದು ಮನೆಯ ಕಟ್ಟಬೇಕು ಎಂಬ ಕನಸು ಆಗಾಗ ತಲೆತುಂಬಾ ಓಡಾಡಿ ಹೃದಯದ ಗೂಡೊಳಗೆ ಬೆಚ್ಚಗೆ ಮಲಗಿ ಬಿಟ್ಟಿತ್ತು. ರಂಗಮ್ಮನು “ಮಗ ಊರ್ತುಂಬಾ ಹೊಸ ಮನೆಗಳಾಗ್ತಾವೆ ನಮಗೊಂದು ಶಂದಾಕಿರೋದು ಮನೆ ಬೇಡ್ವಾ” ಎಂದಾಗ ಅಲ್ವೆ ಮತ್ತೆ ಯಾರ್ಯಾರೋ ಬದಲಾದ್ರು ನಾವ್ ಮಾತ್ರ ಅಪ್ಪ ಹಾಕಿದ್ ಆಲ್ದಮರ ಅಮ್ತ ಇದರಾಗೆ ನೇತಾಡ್ತಾ ಇದೀವಿ “ಎಂದು ತಾನು ಶೃತಿ ಸೇರಿಸುತ್ತಿದ್ದಳು. ದೇವರಾಜನಿಗೆ ಸಂಕಟವಾದಂತಾಗಿ ಏನು ಮಾತಾಡ್ದೆ ಸುಮ್ಮನಾಗುತ್ತಿದ್ದನು. ಎದೆಯ ಕಪಾಟಿನಲ್ಲಿದ್ದ ಕನಸು ಆಗಾಗ ಜಿಗಿದು ಹೃದಯದ ಅಂಗಳದ ತುಂಬಾ ಕುಣಿದು ದಣಿದು ಸುಮ್ಮನಾಗುತ್ತಿತ್ತು.
ಆ ವರ್ಷ ಸುರಿದ ವಿಪರೀತ ಮಳೆಯಿಂದಾಗಿ ಮನೆಯೆಲ್ಲಾ ಸೋರಲು ರಾತ್ರಿಯೆಲ್ಲಾ ನಿದ್ರೆ ಇಲ್ಲದೆ ಜಾಗರಣೆ ಮಾಡುವಂತಾಯಿತು. “ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಹಾಗೆ ”
ತಾಯಿಗೂ ವಿಷಮ ಶೀತ ಜ್ವರ ಬಂದು ಔಷಧಿ ತೆಗೆದು ಕೊಂಡರು ವಾಸಿಯಾಗದೆ ಕಣ್ಮುಚ್ಚಿದಳು. ದೇವರಾಜನಿಗೆ ಉಸಿರುಕಟ್ಟಿದಂತಾಗಿ ಏನು ಮಾಡಲು ತೋಚದೆ ಇದ್ದ ಒಂದಿಷ್ಟು ಹಣದಲ್ಲಿಯೇ ತಾಯಿಯ ಅಂತ್ಯ ಸಂಸ್ಕಾರದ ಕಾರ್ಯಗಳನ್ನು ಮುಗಿಸಿ ಕೈ ತೊಳೆದು ಕೊಂಡಿದ್ದನು.
ವ್ಯಾಪಾರವು ಕಡಿಮೆಯಾಗಿ ಕ್ರಮೇಣ ಮುಚ್ಚುವ ಸ್ಥಿತಿಗೆ ಬಂದಾಗ ಸಂಸಾರ ನಡೆಸುವುದು ಹೇಗೆ ಎಂಬ ಚಿಂತೆ ಆತನನ್ನು ಬಾದಿಸ ತೊಡಗಿತು ಹೀಗಾಗಲೆ ವ್ಯಾಪಾರದಲ್ಲಿ ನುರಿತವನಾದ್ದರಿಂದ ಹಳ್ಳಿ ಹಳ್ಳಿಗೂ ತರಕಾರಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಲಾಭದಲ್ಲಿ ಸಂಸಾರ ತೂಗಿಸುತ್ತಿದ್ದನು. ಆ ದಿನ ವ್ಯಾಪಾರಕ್ಕೆ ಹೋಗಿ ಮನೆಗೆ ದೇವರಾಜ ಮಗ ರಾಜೇಶನೊಂದಿಗೆ ಮಾತನಾಡುತ್ತ ಪಡಸಾಲೆಯಲ್ಲಿ ಕುಳಿತ್ತಿದ್ದನು ಕಮಲಮ್ಮನು ಊಟವನ್ನು ಮಾಡಿ ಮಳೆಯ ಅವಾಂತರದ ಬಗ್ಗೆಯೆ ಮಾತನಾಡುತ್ತ ಇರಬೇಕಾದರೆ ಅಡಿಗೆ ಮನೆಯಿಂದ ದೊಪ್ಪನೆ ಶಬ್ದವನ್ನು ಕೇಳಿ ಗಾಬರಿಯಾಗಿ ನೋಡುತ್ತಾರೆ.
ಒಂದೇ ಸಮನೆ ಸುರಿದ ಮಳೆಗೆ ಮಣ್ಣಿನ ಯಂಡೆಯ ಗೋಡೆಯಾಗಿದ್ದುದರಿಂದನೆಂದು ಒಂದು ಭಾಗ ಬಿದ್ದೇ ಹೋಗಿತ್ತು. ಕಮಲಮ್ಮ ಅಳುತ್ತಾ ಗಂಡನನ್ನು ಬೈಯುತ್ತ ಹಿಂಗಾದರೆ ನಾವು ಯಾವ ಧೈರ್ಯದಲ್ಲಿ ಬದುಕಬೇಕು ಮೊದಲೆ ಬಟ್ಕೊಂಡೆ ಇರೋ ಬರೊ ದುಡ್ನೆಲ್ಲಾ ಆ ಮುದ್ಕುಕಿಗೆ ಇಕ್ಕಿ ಅವಳು ಉಳಿಲಿಲ್ಲ ನಮಗೂ ಈಗ ಉಳಿಗಾಲವಿಲ್ಲ ಅಯ್ಯೋ…! ಶಿವನೆ ಕಾಪಾಡಪ್ಫ…!? ಎಂದು ತನ್ನ ಗಂಡನನ್ನು ಬೈಯ್ದು ಕೊನೆಗೆ ದೇವರಿಗೆ ಬೇಡಿ ಸುಮ್ಮನಾದಳು. ಇದನ್ನೆಲ್ಲಾ ನೋಡಿ ದೇವರಾಜನಿಗೂ ಹೊಟ್ಟೆ ತೊಳಿಸಿದಂತಾಗಿ ದುಃಖ ಉಮ್ಮಳಿಸಿಬಂದು ಪಕ್ಕದಲ್ಲಿದ್ದ ರಾಜೇಶ್ನನ್ನು ಎದೆಗವಚಿಕೊಂಡು ದುಃಖಿಸಿದನು.
ಈ ಹಿಂದೆ ಕಮಲಮ್ಮ ತನ್ನ ಗಂಡನಿಗೆ ಪಂಚಾಯ್ತಿಂದ ಮನೆ ಕೊಡ್ತರಲ್ಲ ನಾವ್ಯಕೆ ತಗೋಬಾರ್ದು ಅಂತ ಎಷ್ಟೋ ಬಾರಿ ಕೇಳಿದ್ದಳು. ಇದಕ್ಕೆ ಸ್ವಾಭಿಮಾನ ಅಡ್ಡಬಂದು ದೇವರಾಜ ಸುಮ್ಮನಾಗಿದ್ದನು.ಇದರಲ್ಲಿ ಯಾವ ಸ್ವಾಭಿಮಾನದ ಪ್ರಶ್ನೆಯೂ ಇಲ್ಲ ಅದು ಸರ್ಕಾರದ ಯೋಜನೆ ಮನೆ ಇಲ್ಲದವರಿಗಲ್ಲವೆ ಕೊಡುವುದು ಎಂದುಕೊಂಡು ಈ ಬಾರಿ ಮನೆ ಕೇಳಬೇಕೆಂದು ಕೊಂಡು ಕನಸು ಕಾಣುತ್ತಾ ಮಲಗಿಕೊಂಡನು.
ಪ್ರಾಮಾಣಿಕವಾಗಿದ್ದ ದೇವರಾಜನು ಊರಿನ ಕೆಲವು ವಿಚಾರಗಳಲ್ಲಿ ನಿಷ್ಟುರವಾಗಿ ಮಾತನಾಡುತ್ತಿದ್ದನು. ಹಾಗಾಗಿ ಇದ್ದುದರಲ್ಲಿಯೇ ಬದುಕಬೇಕು ಎಂದುಕೊಂಡು ಸರ್ಕಾರದ ಯಾವ ಯೋಜನೆಯು ಬೇಡ ಎನ್ನುತ್ತಿದ್ದ ದುಡಿದೇ ಮನೆಯನ್ನು ಕಟ್ಟಿಸುತ್ತೇನೆ ಎಂಬ ಆತ್ಮವಿಶ್ವಾಸದ ಮಾತು ಆತನಲ್ಲಿ ಚೈತನ್ಯವನ್ನುಂಟು ಮಾಡುತ್ತಿತ್ತು ಆದ್ರೆ ಈಗ ಬದುಕಿನ ಉಳಿವಿಗಾಗಿ ಮನೆಯನ್ನು ಕೇಳೋಣ ಎಂದುಕೊಂಡು ಗ್ರಾಮ ಸಭೆಯಲ್ಲಿ ಮನೆಯನ್ನು ಕೇಳಿದ್ದನು ಪರ ವಿರೋಧದ ನಡುವೆಯೂ ಆತನ ಸ್ಥಿತಿಗೆ ಮರುಕ ಪಟ್ಟು ಕೆಲವು ಗ್ರಾಮಸ್ಥರು ಒಪ್ಪಿ ಮನೆಯನ್ನು ಕೊಟ್ಟಿದ್ದರು.
ಇರುವ ಜಾಗದಲ್ಲೇ ತನ್ನ ಇತಿಮಿತಿಯೊಳಗೆ ಮನೆಯನ್ನು ಕಟ್ಟುವುದೆಂದು ತೀರ್ಮಾನಿಸಿ ಜಾಗವನ್ನು ಸ್ವಚ್ಛಗೊಳಿಸಿ ಅದಕ್ಕೆ ಅಗತ್ಯವಾದ ಕಾಗದ ಪತ್ರಗಳನ್ನು ರೆಡಿ ಮಾಡಿಕೊಂಡನು ಪಂಚಾಯ್ತಿ ಕಛೇರಿಗೆ ಹೋಗಿ ವಿಚಾರಿಸುತ್ತಿದ್ದನು ಅಲೆದು ಅಲೆದು ಸುಮ್ಮನಾಗಿ ಮನೆಯಲ್ಲಿ ಕುಳಿತಿದ್ದಾಗ ಪೋಸ್ಟ್ ಮ್ಯಾನ್ ಬಂದು ನಿಮಗೊಂದು ರಿಜಿಸ್ಟರ್ ಪೋಸ್ಟ್ ಬಂದಿದೆ ಎಂದಾಗ ಗಾಬರಿಯಾಗಿದ್ದನು. ತಾಲ್ಲೂಕು ಪಂಚಾಯ್ತಿಂದ ನಿಮಗೆ ಈಗಾಗಲೆ ಮನೆ ಇರುವುದೆಂದು ಅರ್ಜಿ ಬಂದಿದೆ. ಹಾಗಾಗಿ ಮನೆ ಕೊಡಲು ಇನ್ನೊಮ್ಮೆ ಪರಿಶೀಲಿಸಲಾಗುತ್ತಿದೆ ಎಂಬ ಬರಹದ ಸಾಲುಗಳನ್ನು ನೋಡಿ ದೇವರಾಜ ತಳಮಳಗೊಂಡನು. ಯಾರಿಗೂ ತೊಂದರೆ ಕೊಡದ ನನಗೇಕೆ ಹೀಗೆ ಮಾಡುತ್ತಾರೆ. ಸಮಾಜದಲ್ಲಿ ಒಳ್ಳೆಯವರು ಬದುಕುವುದಕ್ಕಾಗುವುದಿಲ್ಲವೆ ನನಗೆಲ್ಲಿದೆ ಮನೆ ಇರುವ ಅರ್ಧಂಬರ್ಧ ಮನೆಯಲ್ಲಿ ಜೀವ ಹಿಡಿದು ಬದುಕುತಿದ್ದೇನೆ. ನನ್ನ ಮಗನಿಗಾದರೂ ಒಂದು ಮನೆ ಬೇಡವೆ ಎಂದು ಗೋಳಾಡಿದನು. ಕಮಲಮ್ಮನು ಶಪಿಸುತ್ತ ಹಿಡಿ ಹಿಡಿ ಶಾಪ ಹಾಕಿದಳು. ನಾಳೆ ಪಂಚಾಯ್ತಿ ಕಛೇರಿಯಲ್ಲಿ ವಿಚಾರಿಸುವುದೆಂತುಕೊಂಡು ಮಲಗಿದನು.
ಹಾಗಾಗೆ ಬಸ್ಸಿಗಾಗಿ ದೇವರಾಜನ ನಡೆಯುತ್ತಿದ್ದದ್ದು ತಾಲ್ಲೂಕು ಪಂಚಾಯ್ತಿ ಕಛೇರಿಯನ್ನು ಸೇರಿದ್ದು. ಕಾಗದ ಪತ್ರಗಳನ್ನೆಲ್ಲಾ ತೆಗೆದುಕೊಂಡು ಪಂಚಾಯ್ತಿ ಇ. ಓ. ಅವರಿಗೆ ತೋರಿಸಿದನು. ಹೊಸದಾಗಿ ಬಂದಿದ್ದ ಇ. ಒ. ವಾಸುದೇವ ಅವರು ಯುವ ಅಧಿಕಾರಿ ಸಮಾಜದ ಬದಲಾವಣೆಯ ಆಶಯವನ್ನಟ್ಟುಕೊಂಡಿದ್ದ ಅವರು ಪರಿಶೀಲಿಸುವುದಾಗಿ ತಿಳಿಸಿದರು. ದೇವರಾಜನು ನನ್ನ ಬದುಕಿನ ಕನಸು ಮನೆಕಟ್ಟಬೇಕು ನನ್ನ ಮಗನಿಗೊಂದು ಸೂರು ಮಾಡಬೇಕು ಸರ್ ಬಂದು ಪರಿಶೀಲಿಸಿ ನಾನು ಅರ್ಹ ಫಲಾನುಭವಿ ಅನ್ನಿಸಿದರೆ ಕೊಡಿ ಸರ್ ಎಂದೇಳಿ ವಾಪಸ್ ಊರಿಗೆ ಬಂದನು. ಮರುದಿನ ಬಂದ ಅಧಿಕಾರಿಯೂ ಅವರ ಮನೆಯ ಸ್ಥಿತಿಯನ್ನು ನೋಡಿ ಇವರಿಗೆ ಮನೆ ಮಂಜೂರು ಮಾಡಿರುವುದು ಸರಿಯಾಗಿದೆ ಎಂದು ತಿಳಿದು ಮನೆ ಕಟ್ಟಲು ಅನುಮತಿ ಪತ್ರವನ್ನು ಸ್ಥಳದಲ್ಲಿಯೇ ನೀಡಿದನು. ಒಳ್ಳೆಯರಿಗೆ ಒಳ್ಳೆಯದೆ ಆಗುತ್ತದೆ ಎಂದು ಮನಸ್ಸಿನಲ್ಲೆ ಅಂದುಕೊಂಡ ದೇವರಾಜ ಅಧಿಕಾರಿಯೂ ನೀಡಿದ ಅನುಮತಿ ಪತ್ರವನ್ನು ಕಮಲಮ್ಮನ ಕೈಗಿಟ್ಟು ಚಿಕ್ಕ ಚೊಕ್ಕವಾದ ನನ್ನ ಕನಸಿನ ಮನೆಯನ್ನು ಕಟ್ಟಲು ಪೂರ್ವ ತಯಾರಿಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದನು.
- ಮಾರುತಿ ಗೋಪಿಕುಂಟೆ