ಬೆರಗಾಯ್ತು ಜಗವೆಲ್ಲ ಇವಳ ಹಂಸ ನಡಿಗೆಗೆ…ಸಂಚಲ್ಲೇ ಸಂಜ್ಞೆಯಾಯ್ತು ಮಾರ್ಜಾಲ ನಡಿಗೆ…ಕವಿ ಶೀತಲ್ ಹೆಗಡೆ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅವಳ ನಡಿಗೆಯಲ್ಲಿ ಅದೇನು ಒನಪುವಯ್ಯಾರ
ಅಂಕುಡೊಂಕಿಗೂ ಬಂತೇ ಬಿಂಕಬಿಗುಮಾನ
ನುಣುಪಾದ ಪಾದಗಳು ನೆಲಸ್ಪರ್ಶಿಸಿದಂತೆಲ್ಲ
ಬೆರಗಾಯ್ತು ಜಗವೆಲ್ಲ ಇವಳ ಹಂಸ ನಡಿಗೆಗೆ
ಅವಳ ಕಣ್ಗಳ ಹೊಳಪು ಉರಿವ ಹಣತೆಯಂತೆ
ದೃಷ್ಟಿಹರಿಸಿದಲ್ಲೆಲ್ಲ ಸೂಜಿಮೊನೆ ತಿವಿದಂತೆ
ಕಣ್ರೆಪ್ಪೆಯ ನೆರಳಲ್ಲಿ ಕರಿಮೋಡ ಕವಿದಂತೆ
ನೇರನೋಟಕೆ ಬಕವು ಮುದುರಿ ಕೂಡುವಂತೆ
ಅವಳ ಮಸ್ತಿಷ್ಕದ ಆವಿರ್ಭಾವ ಸಂಚಲನ
ದಶದಿಕ್ಕುಗಳಿಗೂ ಸಮನಾದ ದೃಷ್ಟಿಮಂಜರ
ಮಿಕಗಳಿಗೆ ಪೂರ್ಣದೈವತ್ವದ ಪಾರಿತೋಷಕ
ಸಂಚಲ್ಲೇ ಸಂಜ್ಞೆಯಾಯ್ತು ಮಾರ್ಜಾಲ ನಡಿಗೆ
ಅವಳೊಂದು ಸೊಗಸಾದ ದಂತ ಕಥೆಯಾಗಿ
ವಿಶ್ವವೇ ಒಂದಾಗಿ ಅವಳಲ್ಲಿ ಲೀನವಾದಂತೆ
ಅವಳು ಮೃದುಮದುಲ ಭಾವಕೆ ದರ್ಪಣವಾಗಿ
ಅನೀರ್ವಚನೀಯ ಕವಿತೆಗೆ ಮುನ್ನಡಿಯಿದ್ದಂತೆ.
- ಶೀತಲ್ ಹೆಗಡೆ
