ಕೆ.ಸತ್ಯನಾರಾಯಣ ಅವರ ‘ನಾವೇನು ಬಡವರಲ್ಲ’ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಪುಸ್ತಕ : ನಾವೇನು ಬಡವರಲ್ಲ
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶಕರು : ಅಭಿನವ ಪ್ರಕಾಶನ
ಬೆಲೆ : ೧೦೦.೦೦
ಪುಟಗಳು : ೧೫೨
ಕೆ.ಸತ್ಯನಾರಾಯಣ. ಅವರ ಆತ್ಮ ಚರಿತ್ರೆಯ ಮೊದಲ ಭಾಗವಾದ ಇದು ಕನ್ನಡದ ಸಂದರ್ಭದಲ್ಲಿ ವಿಶಿಷ್ಟವಾಗಿದೆ. ಇದಕ್ಕೆ ಕಾರಣ ವೈಯಕ್ತಿಕತೆಯ ಜತೆಗೆ ಒಂದು ಸಮುದಾಯದ ಆತ್ಮ ಚರಿತ್ರೆಯಾಗಿ ಪರಿಣಮಿಸಿದೆ. ಅದರ ಪಲ್ಲಟಗಳನ್ನು ಸೆರೆಹಿಡಿದಿರುವುದು ಇದರ ಪ್ರಧಾನ ಧಾರೆಯಾಗಿದೆ. ಇದನ್ನು ಇವರು ಮೂರು ನೆಲೆಗಳ ಮೂಲಕ ಸಾಧಿಸಿದ್ದಾರೆ.

ನೆಲೆ ೧: ಮೊದಲ ಭಾಗದಲ್ಲಿ ಸಾಂದ್ರವಾದ ಬಾಲ್ಯದ ನೆನಪುಗಳು ಇವೆ.ಭ್ರಷ್ಟಗೊಂಡ ಬ್ರಾಹ್ಮಣ ಸಮುದಾಯದ ಕಥನವಾಗಿದೆ. ಇದಕ್ಕೆ ಒಂದು ನಿದರ್ಶನ ಕೊಡುವುದಾದರೆ ಒಂದೇ ಸಮುದಾಯದ ಹಳ್ಳಿ ಮತ್ತು ನಗರಗಳಲ್ಲಿ ವಾಸಿಸುವವರ ನಡುವೆ ಇರುವ ಅಂತರ. ಇವರೊಮ್ಮೆ ತಮ್ಮ ತಾಯಿಯನ್ನು ಮಂಡ್ಯದಲ್ಲಿ ವಾಸಿಸುತ್ತಿದ್ದ ಅವರ ಬಂಧುಗಳ ಮನೆಗೆ ಕರೆದುಕೊಂಡು ಹೋಗಿ, ಅವರು ಇವರ ಕುರಿತು ತೋರಿದ ದಿವ್ಯ ನಿರ್ಲಕ್ಷ್ಯದಿಂದ ಇವರು ಉಂಟಾದ ತಳಮಳ, ಅವಮಾನದ ಕುರಿತು ಆರ್ದ್ರವಾಗಿ ಬರೆದಿದ್ದಾರೆ. ಅಂತಹ ಅನುಭವವನ್ನು ವ್ಯಕ್ತಪಡಿಸುವ ನುಡಿಗಟ್ಟೆ ಇನ್ನೂ ಸಿದ್ದವಾಗಿಲ್ಲ ಎಂದು ಇವರು ಖೇದ ವ್ಯಕ್ತಪಡಿಸಿದ್ದಾರೆ.ಆದರೆ ಇವರ ಮೆಚ್ಚಿನ ಲೇಖಕರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ಭಾವ ಆತ್ಮಚರಿತ್ರೆಯ ಸಂಪುಟದಲ್ಲಿ ಬಾಲ್ಯದ ವಾರಾನ್ನದ ಹುಡುಗನಾಗಿದ್ದಾಗ , ಆ ಮನೆಯ ಹುಡುಗಿ ವಿನಾಕಾರಣ ಇವರನ್ನು ‘ಎ ಡಲ್ ಬಾಯ್’ ಎಂದು ಕರೆದಾಗ ಎದುರಿಸಿದ, ಅವಮಾನಕರ ಪ್ರಸಂಗವನ್ನು ದಾಖಲಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು.

ನೆಲೆ ಎರಡು: ಮೊದಲ ನೆಲೆಯ ಅನುಭವದ ಆಧಾರದ ಮೇಲೆ, ತಾವು ಕಲಿತ ಸಮಾಜವಿಜ್ಞಾನ ಮತ್ತು ಆಡಳಿತದ ಅನುಭವದ ಆಧಾರದ ಮೇಲೆ, ಜಾತಿ ಮತ್ತು ಸಮುದಾಯದ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಇವರ ಪ್ರಕಾರ ಯಾವುದೇ ಒಂದು ಜಾತಿಯ ಪಲ್ಲಟಕ್ಕೆ ಸಾರ್ವಜನಿಕ ಸಂಪನ್ಮೂಲಗಳು ಕಾರಣ. ಆದ್ದರಿಂದ ನಿರಂತರವಾಗಿ ಇನ್ನೊಂದು ಜಾತಿಯ ಮೇಲೆ ಗೂಬೆ ಕೂರಿಸುತ್ತಾ ಹೋಗುವುದು ತಪ್ಪು. ತಮ್ಮ ತಮ್ಮ ಚಹರೆಗಳ ಜತೆಗೆ ಸದಾಕಾಲವೂ ಗುರುತಿಸಿಕೊಂಡು ನರಳುವುದು ಅಪಾಯಕಾರಿ ಪ್ರವೃತ್ತಿ. ಅದರಿಂದ ಬಿಡುಗಡೆ ಪಡೆದಷ್ಟು ಸಮಾಜದ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ವಿಜ್ಞಾನವಾಗಲಿ, ವೈಚಾರಿಕತೆಯಾಗಲಿ, ಧಾರ್ಮಿಕತೆಯಾಗಲಿ ದೈನಿಕ ಜೀವನದಲ್ಲಿ ಎಷ್ಟರಮಟ್ಟಿಗೆ ತನ್ನ ಮತ್ತು ಸಮಾಜದ ಜತೆ ಸಾಮರಸ್ಯ ಸ್ಥಾಪಿಸಲು ಸಾಧ್ಯ ಎನ್ನುವುದೆ ಮುಖ್ಯ ಎನ್ನುವ ಸರಳ ತೀರ್ಮಾನಕ್ಕೆ ಬರುತ್ತಾರೆ.
ಮೂರನೇ : ನೆಲೆ ಸಾಮಾಜಿಕ ಆರ್ಥಿಕ ಪಲ್ಲಟಗಳ ಪರಿಣಾಮವಾಗಿ ತಮ್ಮ ಭೌತಿಕ ಸ್ಥಿತಿಯಲ್ಲಿ ಉನ್ನತಿಯನ್ನು ಸಾಧಿಸಿದವರು, ತಾವು ನಿಜವಾಗಿ ಬಡವರಲ್ಲ ಎಂದು ಒಪ್ಪಿಕೊಳ್ಳುವ ಮೂಲಕ, ನಿಜವಾದ ಅರ್ಹ ಬಡವರಿಗೆ ಸವಲತ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಬೇಕು, ಎಂಬ ಆರೋಗ್ಯಕರವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಈ ದೃಷ್ಟಿಯಿಂದ ಈ ಆತ್ಮಚರಿತ್ರೆಯ ಮೊದಲ ಭಾಗಕ್ಕೆ ಕನ್ನಡದ ಆತ್ಮಚರಿತ್ರೆಯ ಸಂದರ್ಭದಲ್ಲಿ ವಿಶಿಷ್ಠವಾದ ಸ್ಥಾನವಿದೆ.ಏಕಕಾಲದಲ್ಲಿ ಇದು ವ್ಯಕ್ತಿ ಚರಿತ್ರೆಯಾಗಿರುವಂತೆ ಸಮುದಾಯದ ಚರಿತ್ರೆಯು ಆಗಿದೆ.
- ರಘುನಾಥ್ ಕೃಷ್ಣಮಾಚಾರ್
