ಇನ್ನಿತರ ನೋವಿನಂತೆ ತಲೆನೋವೂ ಸಹ ಒಂದು ರೋಗಲಕ್ಷಣವೇ ಹೊರತು ಅದೇ ಒಂದು ಕಾಯಿಲೆಯಾಗಿರುವುದಿಲ್ಲ.ಯಾವುದೇ ಒಂದು ಕಾಯಿಲೆಯಿಂದಲೋ ಅಥವಾ ದೇಹದ ಸಹಜಸ್ಥಿತಿಯಲ್ಲಿ ಉಂಟಾಗಿರುವ ಏರುಪೇರಿನಿಂದಲೋ ತಲೆನೋವು ಬರುತ್ತದೆಂಬುದನ್ನು ಮೊದಲು ನಾವೆಲ್ಲರೂ ಮನದಟ್ಟುಮಾಡಿಕೊಳ್ಳಬೇಕು.ಮಕ್ಕಳ ತಲೆನೋವಿನ ಬಗ್ಗೆ ಡಾ.ಕೆ.ಬಿ.ರಂಗಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
20 ವರ್ಷಗಳ ಹಿಂದಿನ ಮಾತು. ಸುಮಾರು 10 ವರ್ಷದ ಬಾಲಕಿಯನ್ನು ತಜ್ಞವೈದ್ಯ ಮಿತ್ರರೊಬ್ಬರು ನನ್ನ ಬಳಿ ಕಳಿಸಿಕೊಟ್ಟಿದ್ದರು. ಸುಮಾರು ಹದಿನೈದು ದಿನಗಳಿಂದ ತಲೆನೋವು ಮತ್ತು ಆಗಾಗ ವಾಂತಿ ಎಂಬುದು ಅವಳ ಸಮಸ್ಯೆಯಾಗಿತ್ತು. ಅವಳನ್ನು ಕೂಲಂಕಷವಾಗಿ ವಿಚಾರಿಸಿದಾಗ ತಲೆನೋವು ಬೆಳಿಗ್ಗೆ ಹಾಸಿಗೆಯಿಂದ ಎದ್ದೊಡನೆ ಉಲ್ಬಣಿಸುವುದೆಂದು ಮತ್ತು ವಾಂತಿ ಬಹಳ ಬಲಯುತವಾಗಿರವುದೆಂದು ತಿಳಿಯಿತು. ನಾನು ತಲೆಬುರುಡೆಯ ಒಳಭಾಗದಲ್ಲಿ ಯಾವುದೋ ಗಂಭೀರ ಸಮಸ್ಯೆ ಇರಬಹುದೆಂದು ಶಂಕಿಸಿ, ಸಿ ಟಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ಹೇಳಿದೆ. ಅದರ ಪ್ರಕಾರ ಆಕೆಗೆ ಪಿಟ್ಯೂಟರಿ ಗ್ರಂಥಿಯಿರುವ ಭಾಗದಲ್ಲಿ ‘ಕ್ರೇನಿಯೋಫೆರಿಂಜಿಯೋಮ’ ಎಂಬ ಒಂದು ಮಿದುಳುಗಡ್ಡೆ ಇರುವುದಾಗಿ ತಿಳಿದು ಬಂದಿತು. ಮುಂದಿನ ಕ್ರಮಕ್ಕಾಗಿ ಅವಳನ್ನು ನರಮಂಡಲದ ಶಸ್ತ್ರಚಿಕಿತ್ಸಕರ ಬಳಿ ಕಳಿಸಿಕೊಟ್ಟಿದ್ದೆ.
‘ಯಾಕೋ ಬೆಳಿಗ್ಗೆಯಿಂದ ಒಂದೇ ಸಮನೆ ತಲೆನೋಯ್ತಿದೆ’ ಎಂತಲೋ ‘ತಲೆ ಸಿಡಿದ್ಹಂಗೆ ಆಗ್ತಿದೆ’ ಎಂತಲೋ ಅವರಿವರು ಹೇಳುವುದನ್ನು ದಿನನಿತ್ಯದ ಬದುಕಿನಲ್ಲಿ ನಾವು ಕೇಳುತ್ತಲೇ ಇರುತ್ತೇವೆ. ತಲೆನೋವು, ತಲೆಬೇನೆ, ತಲೆಶೂಲೆ ಹೀಗೆ ಯಾವುದೇ ಪದ ಬಳಸಿದರೂ ಅನುಭವ ಮಾತ್ರ ಒಂದೇ ಆಗಿರುತ್ತದೆ. ತಮ್ಮ ಮುದ್ದಿನ ಮಗು ‘ತಲೆನೋವು’ ಎಂದು ಹೇಳಿದರಂತೂ ಹೆತ್ತವರಿಗೆ ಆಕಾಶವೇ ಕಳಚಿಬಿದ್ದಂತಾಗುತ್ತದೆ. ಇದೇ ಕಾರಣದಿಂದ ಹಲವು ಮಕ್ಕಳು ಶಾಲೆಗೆ ಗೈರು ಹಾಜರಾಗುವುದು ಉಂಟು. ವಾಸ್ತವವಾಗಿ ಇನ್ನಿತರ ನೋವಿನಂತೆ ತಲೆನೋವೂ ಸಹ ಒಂದು ರೋಗಲಕ್ಷಣವೇ ಹೊರತು ಅದೇ ಒಂದು ಕಾಯಿಲೆಯಾಗಿರುವುದಿಲ್ಲ. ಯಾವುದೇ ಒಂದು ಕಾಯಿಲೆಯಿಂದಲೋ ಅಥವಾ ದೇಹದ ಸಹಜಸ್ಥಿತಿಯಲ್ಲಿ ಉಂಟಾಗಿರುವ ಏರುಪೇರಿನಿಂದಲೋ ತಲೆನೋವು ಬರುತ್ತದೆಂಬುದನ್ನು ಮೊದಲು ನಾವೆಲ್ಲರೂ ಮನದಟ್ಟುಮಾಡಿಕೊಳ್ಳಬೇಕು. ಅಂತಹ ಸಮಸ್ಯೆ ಲಘುಸ್ವರೂಪದ್ದೋ ತೀವ್ರಸ್ವರೂಪದ್ದೋ ಎಂಬ ಮಾಹಿತಿ ಸ್ವಲ್ಪಮಟ್ಟಿಗಿದ್ದರೆ ಅದಕ್ಕೆ ತಕ್ಕಂತೆ ಸ್ಪಂದಿಸಲು ಅನುಕೂಲವಾಗುತ್ತದೆ.

ಫೋಟೋ ಕೃಪೆ : google
ತಲೆನೋವು ಹೇಗೆ ಉಂಟಾಗುತ್ತದೆ?
ವಾಸ್ತವವಾಗಿ ನೋವಿನ ಸಂವೇದನೆಯನ್ನು ಮಿದುಳು ಹೊಂದಿರುವುದಿಲ್ಲ. ಆದರೆ ತಲೆ ಬುರುಡೆಯ ಒಳಗಿರುವ ಮಿದುಳುಪೊರೆ ಮತ್ತು ರಕ್ತನಾಳಗಳು ನೋವಿಗೆ ಶೀಘ್ರವೇ ಸ್ಪಂದಿಸುತ್ತವೆ. ಹಾಗೆಯೇ ತಲೆಬುರುಡೆಯ ಹೊರಗಿನ ಅಂಗಗಳಾದ ಕಣ್ಣುಗುಡ್ಡೆ, ಕಿವಿ, ಮೂಗಿನಕುಳಿ, ಗಂಟಲು ಮತ್ತು ಹಲ್ಲುಗಳ ಸಮಸ್ಯೆಯಿಂದ ನೋವು ತಲೆಯಲ್ಲಿ ಕಾಣಿಸಿಕೊಳ್ಳಬಹುದು. ಮುಖ ಮತ್ತು ಕುತ್ತಿಗೆಯ ಸ್ನಾಯುಗಳ ಸೆಳೆತದಿಂದಲೂ ನೋವು ಉಂಟಾಗಬಹುದು. ಕೆಲವೊಮ್ಮೆ ಬೇರಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆಯೂ ತಲೆನೋವು ಬರುವುದುಂಟು. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಮೈಗ್ರೇನ್ ಮತ್ತು ಒತ್ತಡದ ತಲೆನೋವು.
ವಿವಿಧ ಬಗೆಯ ತಲೆನೋವು ಮತ್ತು ಕಾರಣಗಳು:
ಅಲ್ಪಾವಧಿಯ ತಲೆನೋವು
1) ಗಂಟಲಿನ ಉರಿಯೂತ
2) ಮೂಗಿನ ಕುಳಿಗಳ ಉರಿಯೂತ
3) ಮಿದುಳುಪೊರೆಯ ಉರಿಯೂತ
4) ತಲೆಬುರುಡೆಯೊಳಗಿನ ರಕ್ತಸ್ರಾವ
5) ರಕ್ತದ ಏರೊತ್ತಡ

ಪದೇ ಪದೇ ಬರುವ ತಲೆನೋವು
ಮೈಗ್ರೇನ್
ದೀರ್ಘಾವಧಿಯ ತಲೆನೋವು
1) ಮಿದುಳಿನ ಗಡ್ಡೆಗಳು
2) ಮಿದುಳಿನ ಕೀವುಗಡ್ಡೆ
3) ದೀರ್ಘಾವಧಿಯ ಮಿದುಳುಪೊರೆಯ ಉರಿಯೂತ
4) ನೀದರ್ಲೆ
5) ರಕ್ತನಾಳದ ಸಮಸ್ಯೆಗಳು
6) ತಲೆಬುರುಡೆಯೊಳಗಿನ ಏರೊತ್ತಡ (ಇದು ದಿನೇ ದಿನೇ ತೀವ್ರವಾಗುತ್ತದೆ)
7) ದೃಷ್ಟಿದೋಷದಂಥ ಕಣ್ಣಿನ ಸಮಸ್ಯೆಗಳು
*****
ಒಂದೇ ಗತಿಯಲ್ಲಿರುವ ತಲೆನೋವು :
1) ದೀರ್ಘಾವಧಿಯ ಮಾನಸಿಕ ಒತ್ತಡದ ತಲೆನೋವು
2) ದೀರ್ಘಾವಧಿಯ ಮೂಗಿನ ಕುಳಿಗಳ ಸಮಸ್ಯೆ
3) ದೀರ್ಘಾವಧಿಯ ದಂತ ಸಮಸ್ಯೆ
4) ದೀರ್ಘಾವಧಿಯ ಬಹುದಿನಗಳ ಮಿದುಳಿನ ರಕ್ತಸ್ರಾವ

ಫೋಟೋ ಕೃಪೆ : google
ತಲೆನೋವಿನ ಕಾರಣ ತಿಳಿಸಬಹುದಾದ ಸುಳಿವುಗಳು :
1) ಜ್ವರ: ಇನ್ಫ್ಞೂಯೆಂಝೂ, ಡೆಂಗೆ, ಚಿಕಂಗುನ್ಯಾ ಮುಂತಾದ ವೈರಾಣುಗಳ ಸೋಂಕು (ಡೆಂಗೆಜ್ವರದಲ್ಲಿ ಕಣ್ಣುಗಳ ಹಿಂಬದಿಯಲ್ಲಿ ನೋವಿರುತ್ತದೆ). ಮಿದುಳುಪೊರೆಯ ಉರಿಯೂತ, ಮೂಗಿನಕುಳಿಗಳ ಉರಿಯೂತ ಇತ್ಯಾದಿ.
2) ವಾಂತಿ: ಮಿದುಳುಪೊರೆಯ ಉರಿಯೂತ, ಮಿದುಳು ಗಡ್ಡೆಗಳು, ಮೈಗ್ರೇನ್ ಇತ್ಯಾದಿ.
3) ಕೆಮ್ಮಿದಾಗ ನೋವು ತೀವ್ರವಾಗುವುದು: ತಲೆಬುರುಡೆಯೊಳಗಿನ ಏರೊತ್ತಡ.
4) ಬೆಳಿಗ್ಗೆ ಹಾಸಿಗೆಯಿಂದ ಎದ್ದೊಡನೆ ಉಲ್ಬಣಿಸುವ ತಲೆನೋವು ಮತ್ತು ತಲೆಬುರುಡೆಯ ಒಂದು ನಿರ್ದಿಷ್ಟ ಭಾಗಕ್ಕೆ ಸೀಮಿತವಾದ ತಲೆನೋವು – ಮಿದುಳಿನ ಗಡ್ಡೆ.
****
ಮೈಗ್ರೇನ್
1) 4 – 72 ಗಂಟೆಗಳವರೆಗೆ ಇರುತ್ತದೆ
2) ಒಂದೇ ಪಾಶ್ರ್ವದಲ್ಲಿ ತಲೆನೋವು. ಮಕ್ಕಳಲ್ಲಿ ಎರಡೂ ಪಾಶ್ರ್ವಗಳಲ್ಲಿ ಇರಬಹುದು
3) ತೀವ್ರ ಸ್ವರೂಪದ ನಾಡಿ ಮಿಡಿತದಂಥ ನೋವು
4) ದಿನನಿತ್ಯದ ಚಟುವಟಿಕೆಯಲ್ಲಿ ಏರುಪೇರು
5) ವಾಂತಿ ಮತ್ತು ವಾಕರಿಕೆ
6) ಬೆಳಕನ್ನು ದೃಷ್ಟಿಸಲು ತೊಂದರೆ
7) ಕುಟುಂಬದ ಸದಸ್ಯರಲ್ಲಿ ಇಂಥದೇ ತಲೆನೋವಿರುವುದು
****
ತಲೆನೋವಿನ ಸುಳಿವು ನೀಡಬಹುದಾದ ಕೆಲ ಪರೀಕ್ಷೆಗಳು :
1) ಸಿ ಟಿ ಸ್ಕ್ಯಾನ್/ ಎಂ ಅರ್ ಐ
2) ಮಿದುಳುದ್ರವದ ಪರೀಕ್ಷೆ
3) ಮೂಗಿನಕುಳಿಗಳ ಎಕ್ಸರೇ
4) ದೃಷ್ಟಿ ಪರೀಕ್ಷೆ
5) ದಂತ ಪರೀಕ್ಷೆ ಇತ್ಯಾದಿ
ಚಿಕಿತ್ಸಾ ಕ್ರಮಗಳು :
ತಲೆನೋವಿನ ಕಾರಣವನ್ನು ಸಮರ್ಪಕವಾಗಿ ಗುರುತಿಸಿ ಮತ್ತು ಪರೀಕ್ಷೆಗಳಿಂದ ದೃಢೀಕರಿಸಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ವೈರಾಣುಗಳ ಸೋಂಕು, ಒತ್ತಡದ ತಲೆನೋವು ಮುಂತಾದ ಲಘು ಸ್ವರೂಪದ ತಲೆನೋವಿಗೆ ಪ್ಯಾರಸಿಟಮಾಲ್, ಐಬುಪ್ರೊಫೆನ್ ನಂಥ ನೋವು ನಿವಾರಕಗಳು ಸಾಕಾಗುತ್ತವೆ. ಆದರೆ ದೃಷ್ಟಿದೋಷ, ಮೈಗ್ರೇನ್ ಮುಂತಾದ ತಲೆನೋವಿಗೆ ಕಾರಣಕ್ಕನುಗುಣವಾದ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ತೀವ್ರಸ್ವರೂಪದ ಬಹುದಿನಗಳ ಮಗುವಿನ ತಲೆನೋವಿಗೆ ಮಿದುಳು ಪೊರೆಯ ಉರಿಯೂತ, ಮಿದುಳುಗಡ್ಡೆ ಮುಂತಾದ ಗಂಭೀರ ಸಮಸ್ಯೆಗಳಿರಬಹುದಾದ್ದರಿಂದ ಯಾವುದೇ ಕಾರಣಕ್ಕೂ ಉದಾಸೀನ ತೋರದೆ ಮಗುವನ್ನು ಪರಿಣಿತ ವೈದ್ಯರ ಬಳಿ ತೋರಿಸಬೇಕು.
- ಡಾ.ಕೆ.ಬಿ.ರಂಗಸ್ವಾಮಿ – ಮಕ್ಕಳ ತಜ್ಞರು, ತುಮಕೂರು.
