ಪ್ರತಿಯೊಬ್ಬರ ಆಹಾರ ಪದ್ದತಿ ಒಂದೊಂದು ತರ, ಒಬ್ಬರು ಮಾಂಸಾಹಾರಿ ಪ್ರಿಯರಾದರೆ, ಇನ್ನೊಬ್ಬರು ಸಸ್ಯಾಹಾರಿ ಪ್ರಿಯರು, ಅವರವರ ಆಹಾರ ಅವರವರಿಷ್ಟ ಹಾಗೆಂದು ಇನ್ನೊಬ್ಬರ ಆಹಾರ ಪದ್ದತಿಯನ್ನು ಆಡಿಕೊಳ್ಳುವುದು ಸರಿಯಲ್ಲ ….
ಮೊನ್ನೆ ನಮ್ಮ ಆಫ಼ೀಸಿನ ಆವರಣದಲ್ಲಿ ಓಡಾಡುತ್ತಿದ್ದಾಗ ಆಕಸ್ಮಿಕವಾಗಿ ನನ್ನ ಹಳೆಯ ಸಹೋದ್ಯೋಗಿ ಮಿತ್ರನೊಬ್ಬ ಎದುರಿಗೆ ಪ್ರತ್ಯಕ್ಷವಾದ. ಉಭಯ ಮಾತುಕತೆಯಲ್ಲಿ ಆತ ಬೆಂಗಳೂರಿಗೆ ವರ್ಗವಾಗಿ ಬಂದಿರುವುದಾಗಿ ತಿಳಿಯಿತು. ನಂತರ ನಾನು ತುಂಬಾ ತಮಾಷೆಯಾಗಿ ” ಏನು ಬೇಕಾದ್ರೂ ಹೇಳಪ್ಪಾ….#ಬಾಡಿಗೆ_ಮನೆ ಹುಡುಕೋಣ ಅಂತ ಮಾತ್ರ ಕೇಳ್ಬೇಡ..ಎಂದು ಕಿಚಾಯಿಸಿದ್ದೆ. ಅದಕ್ಕೆ ಕಾರಣವೂ ಇತ್ತು…
ಅದು… ಹೆಚ್ಚು ಕಡಿಮೆ ಮೂರು ವರ್ಷಗಳ ಹಿಂದೆ...
ಹೊಸದಾಗಿ ನಮ್ಮ ಗುಲ್ಬರ್ಗದ ಆಫ಼ೀಸಿಗೆ ವರ್ಗವಾಗಿ ಬಂದಿದ್ದ ಇದೇ ಸಹೋದ್ಯೋಗಿಗೆ ಬಾಡಿಗೆ ಮನೆ ಕೊಡಿಸಲು ಅವನೊಂದಿಗೆ ಗುಲ್ಬರ್ಗದ ಕೆಲವು ಏರಿಯಾಗಳಿಗೆ ಲಗ್ಗೆ ಇಟ್ಟಿದ್ದೆವು. ಅವನು ಈಗಾಗಲೇ ನನಗೆ ಪರಿಚಯವಿದ್ದಿದ್ದರಿಂದ ಹಾಗೂ ನಾನೂ ಅಷ್ಟೊತ್ತಿಗಾಗಲೇ ಸ್ವಲ್ಪ ಮಟ್ಟಿಗೆ ಕಲ್ಬುರ್ಗಿಗೆ ಪರಿಚಿತನಾಗಿದ್ದರಿಂದ ಒಳ್ಳೆಯ ಮನೆ ಕೊಡಿಸಲಿಕ್ಕಾಗಿ ಸ್ಥಳೀಯನೊಬ್ಬನನ್ನು ಕರೆದುಕೊಂಡು ಅವನೊಂದಿಗೆ ಹೊರಟೆ.
ಇದ್ದಿದರಲ್ಲಿ ಒಳ್ಳೆಯ ಏರಿಯಾದಲ್ಲಿ ಮನೆಯೊಂದನ್ನು ಶಾರ್ಟ್ ಲಿಸ್ಟ್ ಮಾಡಿ ಅಲ್ಲಿಗೆ ಹೋದೆವು . ನನ್ನ ಕೊಲೀಗ್ ತಾನು, ತನ್ನ ಹುದ್ದೆ , ಅವರ ಮನೆಯಲ್ಲಿನ ಸದಸ್ಯರು, ಬಾಡಿಗೆ, ಇತ್ಯಾದಿ ಕಂಡೀಷನ್ಸ್ ಎಲ್ಲವನ್ನೂ ಹೇಳಿದಾಗ ಅವುಗಳು ತಕ್ಕಮಟ್ಟಿಗೆ ಮನೆ ಓನರ್ ಗೆ ಒಪ್ಪಿಗೆಯಾಯ್ತು ಅನ್ಸುತ್ತೆ. ಈ ಏರಿಯಾ ಸಹ ಕಚೇರಿಗೆ, ಮಕ್ಕಳ ಶಾಲೆ ಕಾಲೇಜಿಗೆ ಅನುಕೂಲವಾಗುವಂತೆ ಇದ್ದಿದ್ದರಿಂದ ಆತನಿಗೂ ಓಕೆ ಎನಿಸಿ ಅದನ್ನೇ ಫ಼ೈನಲ್ ಮಾಡಿಸಿ ಎಂದ. ಇವನು ಸ್ವಲ್ಪ ನೇರ ಹಾಗೂ ಸರಳ. ವಿಷಯವನ್ನು ಮುಚ್ಚಿಟ್ಟು ಸುಳ್ಳು ಹೇಳುವಂತಹವನಲ್ಲ. ಎಲ್ಲವನ್ನೂ ಇದ್ದ ಹಾಗೆಯೇ ಹೇಳುವಾತ. ಸ್ವಲ್ಪ ಸಮಯದ ನಂತರ ಮನೆ ಮಾಲೀಕನ ಜೊತೆ ನೆಗೋಷಿಯೇಶನ್ ಗೆ ಇಳಿದೆವು.

ಫೋಟೋ ಕೃಪೆ : housing.com
ರೆಂಟೂ ನಂಟೂ ಎಲ್ಲಾ ಒಪ್ಪಿಗೆಯಾದ ಮೇಲೆ ಕೊನೆಗೆ ಮನೆ ಮಾಲೀಕ ಒಂದು ಮುಖ್ಯ ವಿಚಾರ ಅಂತ ಹೇಳಿದ. ” ನೋಡಿ ಸಾರ್ , ನಮ್ಮ ಮನೆಯಲ್ಲಿ ಓನ್ಲಿ ವೆಜಿಟೇರಿಯನ್ನೇ ಮಾಡ್ಬೇಕು. ನಾನ್ ವೆಜ್ ಅಡಿಗೆ ಮಾಡೋ ಹಂಗಿಲ್ಲ. ಮಾಂಸಾಹಾರ ಮಾಡೋರಿಗೆ ನಾವು ಮನೆ ಕೊಡೋಲ್ಲ. ನಮ್ಮ ಮನೆಯಲ್ಲಿ ಅವೆಲ್ಲವೂ ನಿಷಿದ್ಧ…. ”
ನನ್ನ ಸಹೋದ್ಯೋಗಿ ಅದಕ್ಕೆ ” ಆಯ್ತು ಬಿಡಿ. ನಾವೂ ಸಹಾ ಮನೆಯಲ್ಲಿ ಅದನ್ನೆಲ್ಲಾ ಮಾಡೋಲ್ಲ, ತಿನ್ನೋಲ್ಲ ” ಎಂದ ! . ಮನೆ ಚೆನ್ನಾಗಿದ್ದಿದ್ದರಿಂದ ಅವನ ಎಲ್ಲಾ ಕಂಡೀಷನ್ಸ್ ಗೆ ಒಪ್ಪಿಕೊಂಡ.
ಅಷ್ಟಕ್ಕೇ ಸುಮ್ಮನಾಗದ ಆ ಪಾರ್ಟಿ ನಮ್ಮೊಂದಿಗೆ ಅದೂ ಇದೂ ಸಲಿಗೆಯಿಂದ ಮಾತನಾಡುತ್ತಾ …
” ನೀವು ನಾನ್ ವೆಜ್ ತಿನ್ನುತ್ತೀರಾ…. ? ಎಂದು ಈತನನ್ನು ಮಾತಿನ ಓಘದಲ್ಲಿ ಕೇಳಿದ.
ಅದಕ್ಕೆ ನನ್ನ ಕೊಲೀಗ್ ” ನೋಡಿ ಆಗಲೇ ಹೇಳಿದೆನಲ್ಲಾ…! ಮನೆಯಲ್ಲಿ ಅದನ್ನೆಲ್ಲಾ ಮಾಡೋಲ್ಲಾ ಹಾಗೂ ನಾವ್ಯಾರೂ ತಿನ್ನಲ್ಲ! ಆದರೆ ನನಗೆ ಮಾತ್ರ ಆಗಾಗ್ಗೆ ಹೊರಗಡೆ ತಿನ್ನುವ ಅಭ್ಯಾಸವಿದೆ. “… ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಇದ್ದ ನಿಜವನ್ನೇ ಹೇಳಿದ. ಅದರಲ್ಲಿ ಸುಳ್ಳಿರಲಿಲ್ಲ. ಏಕೆಂದರೆ ನಾವುಗಳು ಆಗಾಗ್ಗೆ ಪಾರ್ಟಿ ಫ಼ಂಕ್ಷನ್ನು ಅಂತ ಮಾಡಿದಾಗ ನಾನ್‌ವೆಜ್ ಅನ್ನೋದು ಕಾಮನ್….ಹೀಗಾಗಿ ಇದ್ದದ್ದನ್ನೇ ಅವನು ಹೇಳಿದ್ದ.
ಆ ಮನೆ ಓನರ್ ಗೆ ಏನನಿಸಿತೋ ಏನೋ…
“ಹಾಂ….. ನೀವು ಹೊರಗಡೆ ತಿಂದು ಬರ್ತೀರಾ…?? ಹಾಗಾದ್ರೆ ನಾನು ಮನೆ ಕೊಡೋಕಾಗಲ್ಲ . ಹೊರಗೋ, ಒಳಗೋ…. ನಾನ್ ವೆಜ್ ತಿನ್ನೋರಿಗೆ ನಾವು ಮನೆ ಕೊಡೋಲ್ಲ…. ಎಂದು ಖಡಕ್ಕಾಗಿ ಹೇಳಿಯೇ ಬಿಟ್ಟ. !
ಅಲ್ಲಾ ಸಾರ್… ನಾವು ಮನೇನಾ ಚೆನ್ನಾಗಿ ಇಟ್ಟುಕೊಳ್ಳುತ್ತೇವೆ. ಪ್ರತೀ ತಿಂಗಳ ಕೊನೆಯಲ್ಲಿಯೇ ನಿಮ್ಮ ಖಾತೆಗೆ ಬಾಡಿಗೆ ಹಣ ಜಮಾ ಮಾಡ್ತೀವೆ, ಮನೆಯಲ್ಲಿ ನಾನ್ ವೆಜ್ ಮಾಡೋಲ್ಲ – ತಿನ್ನಲ್ಲ ! ಆದ್ರೆ ಫ಼್ರೆಂಡ್ಸು..ಪಾರ್ಟಿ ಅಂತ ಇದ್ದಾಗ ಹೊರಗಡೆ ನಾನು ನಾನ್ ವೆಜ್ ತಿನ್ನೋದನ್ನು ಪ್ರಾಮಾಣಿಕವಾಗಿ ಹೇಳಿದೆ ಅಷ್ಟೇ . ಅದರಿಂದ ನಿಮಗೇನು ತೊಂದರೆ…?? ಈತ ಒಂದೇ ಸಮನೆ ಸಮಝಾಯಿಷಿ ಕೊಡುತ್ತಲೇ ಹೋದ.
ನೋ ನೋ…. Whether outside Or Inside, I don’t want non veg eaters to be in my apartment !
ಅಲ್ಲಿಯವರೆಗೂ ಸುಮ್ಮನಿದ್ದ ನಾನು ಆಗ ಮಧ್ಯ ಪ್ರವೇಶಿಸಿ ” ಸಾರ್, ಮನೆ ಕೊಡೋದು ಬಿಡೋದು ನಿಮ್ಮಿಷ್ಟ. ನಾವು ಬಲವಂತ ಮಾಡೋಲ್ಲ. ಆದರೆ ಅವರು ಮನೆಯೊಳಗೆ ಮಾಂಸಹಾರ ಮಾಡೊಲ್ಲ ತಿನ್ನೋಲ್ಲ ಅಂತ ಹೇಳಿದ್ದಾರಲ್ಲ. ಅವರೂ ಸಹಾ ಸಸ್ಯಾಹಾರಿಗಳೇ. ಆದರೆ ಹೊರಗಡೆ ತಿನ್ನುವುದಕ್ಕೂ ನಿಮ್ಮ ಮನೆಗೂ ಯಾಕೆ ಲಿಂಕ್ ಕಲ್ಪಿಸುತ್ತೀರ. ಅವನು ಹೊರಗೆ ತಿನ್ನುವುದಾಗಿ ನಿಜ ಹೇಳಿದ. ಒಂದೊಮ್ಮೆ ಸುಳ್ಳು ಹೇಳಿದ್ದಲ್ಲಿ ಏನಾಗುತ್ತಿತ್ತು..??
ಬಾಡಿಗೆ ಮನೆಯಲ್ಲಿರೋರು ಹೊರಗಡೆ ಏನ್ ತಿಂತಾರೆ ಅನ್ನೋದು ಮುಖ್ಯಾನಾ ಅಥವಾ ಮನೆಯನ್ನು ನೀಟಾಗಿ ನೆಟ್ಟಗೆ ಇಟ್ಟುಕೊಂಡು ಯಾವುದೇ ತಂಟೆ ತಕರಾರಿಲ್ಲದೇ ತಿಂಗಳ ಕೊನೆಗೆ ಬಾಡಿಗೆ ಬರೋದು ಮುಖ್ಯಾನಾ..??
ಇದರ ಮೇಲೆ ನಿಮ್ಮಿಷ್ಟ ……
ನಾನೂ ಸಹ ಸ್ವಲ್ಪಮಟ್ಟಿಗೆ ಅಸಹನೆಯಿಂದಲೇ ನೇರವಾಗಿ ಹೇಳಿದ್ದೆ .
ಅವರು ಕೊನೆಗೆ..” ನನಗೆ ಗೊತ್ತಿಲ್ಲ ಅಂದರೆ ಸುಮ್ಮನಿರುತ್ತಿದ್ದೆ. ಈಗ ನೀವು ಮಾಂಸ ತಿನ್ನುವಿರೆಂದು ಗೊತ್ತಾಗಿಯೂ ಮನೆ ಕೊಡಲು ಮನಸ್ಸು ಬರುತ್ತಿಲ್ಲ. ಸಾರೀ… ಕೊಡಕಾಗಲ್ಲ……. ಅಂದೇ ಬಿಟ್ಟ !
ಅಲ್ಲಿಂದ ಅವರಿಗೆ ಥ್ಯಾಂಕ್ಸ್ ಹೇಳಿ ವಾಪಾಸು ಬರುವಾಗ ನನ್ನ ಸಹೋದ್ಯೋಗಿಗೆ ” ತೆಪ್ಪಗೆ ಬಾಯ್ ಮುಚ್ಕೊಂಡು ಇದ್ದಿದ್ರೆ ಏನೂ ಆಗ್ತಾ ಇರ್ಲಿಲ್ಲ. ನೀನು ಹೊರಗಡೆ ತಿನ್ನೋದು ಕುಡಿಯೋದನ್ನೆಲ್ಲಾ ಹೇಳೋ ಅಗತ್ಯವೇನಿತ್ತು..? ಅಂದೆ…
” ನನಗೇನ್ ಗೊತ್ತು ಸಮಾಜದಲ್ಲಿ ಇಂಥವರೂ ಇರ್ತಾರೆ ಅಂತ..? ಇನ್ಮೇಲೆ ಬುದ್ದಿ ಕಲಿತುಕೊಳ್ಳಬೇಕು. ಎಂದು ಅಸಮಾಧಾನದಿಂದಲೇ ಅವನು ಹೇಳುತ್ತಾ ಕೊನೆಗೆ ಒಂದು ಮಾತು ಕೇಳಿದ…..
ಪ್ರಕಾಶ್…. ಮಾಂಸ ತಿನ್ನೋದೇ ತಪ್ಪಾ……??? ಯಾಕೆ ಜನಾ ಹಿಂಗೆಲ್ಲಾ ಆಡ್ತಾರೆ. ನಾನೂ ಸಹ ಮನೆಯಲ್ಲಿ ಅವೆಲ್ಲಾ ಮಾಡೋಲ್ಲಾ. ಆದರೂ …..ಕೊನೆಗೆ ಸತ್ಯ ಹೇಳಿದ್ದಕ್ಕೆ ಇದೇನಾ ಸಿಕ್ಕ ಬೆಲೆ…??? ಆತ ಹೀಗೆ ಕೇಳುವಾಗ ” ಒಳ್ಳೆಯ ಮನೆ ಸಿಕ್ಕಿದ್ದನ್ನು ನಿಜ ಹೇಳಿ ಕಳೆದುಕೊಳ್ಳ ಬೇಕಾಯ್ತಲ್ಲ” ಎಂಬ ಕೊರಗು ಅವನ ದನಿಯಲ್ಲಿದ್ದಿದ್ದನ್ನು ಗಮನಿಸಿದ್ದೆ.
ಅದಕ್ಕೆ ” ಏನೂ ಮಾಡೋಕಾಗಲ್ಲಪ್ಪ. ಇಂದಿನ ದಿನಗಳಲ್ಲಿ ನಮ್ಮ ನಮ್ಮ ಆಹಾರ ಪದ್ದತಿಯ ಆಧಾರದ ಮೇಲೂ ಕೂಡಾ ವ್ಯಕ್ತಿಯನ್ನು ಕನಿಷ್ಠ- ಉತ್ಕೃಷ್ಟ ಎಂದು ವರ್ಗೀಕರಿಸುವಂತಾಗಿದೆ. ಮಾಂಸ ತಿನ್ನೋರು ಕನಿಷ್ಠರು ಎಂಬ ಅವಾಸ್ತವಿಕ ಪ್ರಜ್ಞೆ ಬೈ ಡೀಫ಼ಾಲ್ಟ್ ಸಮಾಜದಲ್ಲಿ ಹರಡಿಬಿಟ್ಟಿದೆ. ಅವಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ. ಏನು ತಿನ್ನಬೇಕು ಅನ್ನೋದು ಅವರವರ ಇಚ್ಚೆ ಮತ್ತು ಆಹಾರ ಪದ್ದತಿ. ನನ್ನ ಕಚೇರಿಯಲ್ಲೇ ಎಷ್ಟೋ ಜನ ಮನೆಯಲ್ಲಿ ಪೂಜೆ , ವ್ರತ, ನೇಮ ಅಂತಾ ಇರೋರೂ ಕೂಡ ಹೊರಗೆ ಮೊಘಲ್ ದರ್ಬಾರ್, ಖಬಾಬಿಷ್ , ಗ್ರಾಂಡ್ ಹೋಟೆಲ್ ಗಳಲ್ಲಿ ನಮ್ ಜೊತೆಗೇನೇ ಕದ್ದು ಮುಚ್ಚಿ #ನಾನ್_ವೆಜ್ ತಿಂತಾರೆ, ಜೊತೆಗೆ ಎಣ್ಣೆನೂ ಹೊಡೀತಾರೆ. ಯಾರೋ ನಿನ್ನಂಥವ್ರು ಓಪನ್ನಾಗಿ ಹೇಳ್ಕೋತಾರೆ…. ಬಿಡಪ್ಪಾ ಫ಼ೀಲ್ ಮಾಡ್ಕೋಬೇಡ…..ಇವೆಲ್ಲಾ ಕಾಮನ್….. ನಾನೂ ಸಹಾ ಅವನಿಗೆ ಹೀಗೆ ಹೇಳಿ ಸಮಾಧಾನ ಮಾಡಿದ್ದೆ.
ಆನಂತರ ಅವನಿಗೆ ಅದಕ್ಕಿಂತ ಒಳ್ಳೆಯ ಮನೇನೇ ಸಿಕ್ತು ಅನ್ನೋದು ಬೇರೆ ಮಾತು. ಆದರೆ ಆ ಘಟನೆ ಮಾತ್ರ ಎಲ್ಲೋ ಒಂದು ಕಡೆ ಈ ವಿಚಾರದಲ್ಲಿ ಯಾತನೆ ಅನುಭವಿಸಿದವರ ಮನದಲ್ಲಿ ಆಗಾಗ್ಗೆ ಕೊರೆಯುತ್ತಲೇ ಇರುತ್ತದೆ….
ಯಾಕೋ ಈ ಮನುಷ್ಯನನ್ನು ಅಂದು ನೋಡಿದಾಗ ಇವೆಲ್ಲಾ ನೆನಪುಗಳ ಫ಼್ಲಾಷ್ ಬ್ಯಾಕ್ ಗೆ ಹೋಗುವಂತಾಗಿತ್ತು..!
ಮರೆಯುವ ಮುನ್ನ
ಆಹಾರ ಪದ್ದತಿಯೆನ್ನುವುದು ತಿನ್ನುವವರ ಇಷ್ಟ. ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆ ಕೊಡೋದು ಸಹಾ ಮನೆ ಮಾಲೀಕನ ಇಷ್ಟ. ಎರಡೂ ಸರಿಯೇ. ಹೀಗಾಗಿ ಇವೆರಡರ ಬಗೆಗಿನ ಯಾವ ಚರ್ಚೆ , ವಾದ ವಿವಾದ ಮಾಡೋದು ಸರಿಯಿರಲ್ಲ. ಮತ್ತೊಬ್ಬರ ಆಹಾರ ಪದ್ದತಿಯನ್ನು ಗೌರವಿಸುವ ಹಾಗೆ ಅವರ ಆಚಾರ ವಿಚಾರಗಳನ್ನೂ ಗೌರವಿಸಬೇಕು. ಅವರ ಅನ್ನ- ಅವರಿಷ್ಟ ! ಅವರ ಮನೆ – ಅವರಿಷ್ಟ.
ಆದರೆ ಮೇಲೆ ಹೇಳಿದ ಘಟನೆ ಮಾತ್ರ ಸ್ವಲ್ಪ ಡೀಫರೆಂಟ್ ! ವ್ಯಕ್ತಿಯೊಬ್ಬ ಹೊರಗಡೆ ತೆಗೆದುಕೊಳ್ಳುವ ಆಹಾರ ಪದ್ದತಿ ಆಧಾರದ ಮೇಲೆ ಮನೆ ಕೊಡೋಲ್ಲ ಅಂತ ಪಟ್ಟು ಹಿಡಿದದ್ದು ಯಾಕೋ ಸ್ವಲ್ಪ “ಅತಿ ” ಎನಿಸಿತ್ತು. ಹಾಗೆ ಮಾಡುವುದಾದಲ್ಲಿ ದೇಶದಲ್ಲಿ ಮುಕ್ಕಾಲು ಪಾಲು ಬಾಡಿಗೆದಾರರಿಗೆ ಮನೆ ಸಿಗುತ್ತಲೇ ಇರಲಿಲ್ಲವೆನಿಸುತ್ತೆ !
ಹೀಗಾಗಿಯೇ ಕೆಲವರು ಕುದುರೆಗೆ ಕೊಂಬು ಇದೆ ಎಂದು ವಿತಂಡವಾದ ಮಾಡಿದರೂ ಅದಕ್ಕೆ ಪ್ರತಿವಾದ ಮಾಡದೇ ಜಸ್ಟ್ ಇಗ್ನೋರ್ ಮಾಡಿ ಅಂತಹವರಿಂದ ಕಳಚಿಕೊಳ್ಳುವುದೇ ಬೆಟರ್….!
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
