‘ಸರ್ಕಾರಿ ಶಾಲೆ’ ಕವನ – ಡಾ.ಲಕ್ಷ್ಮಿಕಾಂತ ಮಿರಜಕರ

‘ಸರಕಾರಿ ಶಾಲೆಯೆಂದರೆ ಕೋಟಿ ಕೋಟಿ ಯುವಶಕ್ತಿಗಳ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನಗಳ ಕರುಣಿಸುವ ಅಕ್ಷಯ ಪಾತ್ರೆ’…ಡಾ.ಲಕ್ಷ್ಮಿಕಾಂತ ಮಿರಜಕರ ಅವರ ಲೇಖನಿಯಲ್ಲಿ ಸರ್ಕಾರಿ ಶಾಲೆಯ ಕುರಿತು ಅರಳಿದ ಸುಂದರ ಸಾಲುಗಳು, ತಪ್ಪದೆ ಮುಂದೆ ಓದಿ…

ಸರ್ಕಾರಿ ಶಾಲೆ ಎಂದರೆ
ಕೇವಲ
ಬರಿ ಮುರುಕಲು ಕುರ್ಚಿ ಹಲಗೆಗಳ
ಹಳೆಯ ಮಾಸಲು ಬಣ್ಣದ
ಸುಣ್ಣ ಬಣ್ಣ ಕಾಣದ
ಬಿರುಕು ಒಡಕುಗಳಿರುವ ಗೋಡೆಗಳ ಕಟ್ಟಡವಲ್ಲ

ಸರಕಾರಿ ಶಾಲೆಯೆಂದರೆ
ಕೋಟಿ ಕೋಟಿ ಯುವಶಕ್ತಿಗಳ
ಬೆಲೆ ಕಟ್ಟಲಾಗದ ಅನರ್ಘ್ಯ ರತ್ನಗಳ
ಕರುಣಿಸುವ ಅಕ್ಷಯ ಪಾತ್ರೆ
ಲಕ್ಷಾಂತರ ಬಡ ಕುಟುಂಬದ ಮಕ್ಕಳ
ಭವಿಷ್ಯ ರೂಪಿಸುವ ಜ್ಞಾನಜ್ಯೋತಿ
ವ್ಯಕ್ತಿತ್ವ ರೂಪಿಸುವ ಬೌದ್ಧಿಕ ಸಾಧನಗಳ ಆಗರ
ಅಸಂಖ್ಯಾತ ಸಾಧಕರಿಗೆ ಜನ್ಮ ಕೊಡುವ ಅಕ್ಷಯ ಗರ್ಭ ಕೋಟ್ಯಂತರ ಬಡಜೀವಗಳ
ಬದುಕನ್ನು ತೂಗಿಸಲು ನೆರವಾಗುವ ತೊಟ್ಟಿಲು

ಸರಕಾರಿ ಶಾಲೆ ಎಂದರೆ
ಕೇವಲ
ಅಕ್ಷರ ಕಾಗುಣಿತ ಕಲಿಸುವ
ಯಾಂತ್ರಿಕ ಕಟ್ಟಡವಲ್ಲ
ಮೂಲಭೂತ ಸೌಲಭ್ಯಗಳನ್ನೇ ಕಾಣದ
ಒಡಕು ಹಂಚುಗಳಿರುವ
ಮಳೆ ಬಂದರೆ ಸೋರುವ
ಈಗಲೋ ಆಗಲೋ ಬೀಳುತ್ತೇನೋ ಎಂಬಂತಿರುವ
ಪುರಾತನ ಕಾಲದ ಕಟ್ಟಡವಲ್ಲ

ಸರಕಾರಿ ಶಾಲೆಯೆಂದರೆ
ಸಾಮಾಜಿಕ ಸಂಬಂಧಗಳ ಸೂಕ್ಷ್ಮತೆಯ
ಅರಿವು ನೀಡುವ ಪವಿತ್ರ ತಾಣ
ಸುತ್ತಲಿನ ಜಗತ್ತಿನ ವಾಸ್ತವವನ್ನು ಪರಿಚಯಿಸುವ ಜ್ಞಾನಾಭಿವೃದ್ಧಿಯ ಬಿಡಾರ

ದುರಂತವೇನೆಂದರೆ

ಸರಕಾರಿ ಶಾಲೆ ಎಂದರೆ
ಆಳುವವರ ಪಾಲಿಗೆ ಅನುತ್ಪಾದಕ ಜಡವಸ್ತು
ಬಂಡವಾಳಶಾಹಿಗಳ ಕೊಬ್ಬಿಸಲು
ಸಿಕ್ಕ ಹರಕೆಯ ಕುರಿ
“ವಿಲೀನ”ದ ಹೆಸರಿನಲ್ಲಿ
ಶಿಕ್ಷಣದ ಖಾಸಗಿಕರಣದ ಬೆಳವಣಿಗೆಗೆ
ಹಾಸಿಕೊಟ್ಟ ರೆಡ್ ಕಾರ್ಪೆಟ್.


  • ಡಾ.ಲಕ್ಷ್ಮಿಕಾಂತ ಮಿರಜಕರ – ಶಿಗ್ಗಾಂವ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading