ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬೆಟ್ಟದಲ್ಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದರ್ಶನವೇ ಪ್ರಾಮುಖ್ಯವಾಗಿತ್ತು. ಮೈಸೂರಿನಿಂದ ಬೆಟ್ಟದಪುರ ಸುಮಾರು 82 ಕಿಲೋಮೀಟರ್ ಇದ್ದು, ಮೈಸೂರಿನಿಂದ ಸುಮಾರು 2 ಗಂಟೆ ಪ್ರಯಾಣ. ದೇವರಾಜ ಚಾರ್ ಅವರ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮತ್ತು ಯೋಗಾಭ್ಯಾಸ ಮಾಡಲು ಒಂದು ಚಾರಣ ಡಿಸೆಂಬರ್ ೧೫ , ೨೦೨೪ ರಂದು ಮೈಸೂರಿನ ಶ್ರೀರಾಂಪುರದಲ್ಲಿ ಇರುವ (ayushmath wellness yoga center) ಯೋಗ ಕೇಂದ್ರದಿಂದ ಶ್ರೀಯುತ ಜಯರಾಮ್ ಯೋಗ ಗುರುಗಳು ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಅವರ ಕೇಂದ್ರದ ಯೋಗಾರ್ತಿಗಳು ಮತ್ತು ಅವರ ಕುಟುಂಬ ವರ್ಗವು ಸೇರಿ ಸುಮಾರು 30 ಜನ ಇದ್ದೇವು. ವಿವಿಧ ವಯಸ್ಸಿನ ಮಕ್ಕಳು, ಮಹಿಳೆಯರು, ಪುರುಷರು ಇದ್ದ ಒಂದು ಗುಂಪು.ಆ ಗುಂಪಿನಲ್ಲಿ ನಾಲ್ಕು ವರ್ಷದ ಮಗುವಿನಿಂದ 75 ವರ್ಷದ ಮಹನೀಯರು ಸಹ ಇದ್ದದ್ದು ಒಂದು ವಿಶೇಷ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬೆಟ್ಟದಲ್ಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದರ್ಶನವೇ ಪ್ರಾಮುಖ್ಯವಾಗಿತ್ತು. ಮೈಸೂರಿನಿಂದ ಬೆಟ್ಟದಪುರ ಸುಮಾರು 82 ಕಿಲೋಮೀಟರ್ ಇದೆ. ಮೈಸೂರು – ಹುಣಸೂರು – ಪಿರಿಯಾಪಟ್ಟಣ ಮಾರ್ಗವಾಗಿ ಹೋಗಿದ್ದೆವು. ಪಿರಿಯಾಪಟ್ಟಣ- ಹಾಸನ ರಸ್ತೆಯಲ್ಲಿ ಸುಮಾರು 18 ಕಿಲೋಮೀಟರ್ ಅಂತರದಲ್ಲಿ ಸಿಗುವ ಬೆಟ್ಟದಪುರ ತಲುಪುವುದು ನಮ್ಮ ಗುರಿಯಾಗಿತ್ತು. ಮೈಸೂರಿನಿಂದ ಸುಮಾರು 2 ಗಂಟೆ ಪ್ರಯಾಣ. ಎಲ್ಲರೂ ಬೆಳಗಿನ ಜಾವ 8:45 ಕ್ಕೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟದ ಬುಡವನ್ನು ತಲುಪಿದೆವು.
ಯೋಗ ಕೇಂದ್ರದವರು ಮಾಡಿದ್ದ ವ್ಯವಸ್ಥೆಯಂತೆ ಎಲ್ಲರೂ ಒಂದು ವೃತ್ತಕಾರದಲ್ಲಿ ನಿಂತೆವು. ಯೋಗ ಗುರುಗಳು ಕ್ಷೇತ್ರದ ಬಗ್ಗೆ ಸಂಕ್ಷಿಪ್ತ ವಿವರ ನೀಡಿ, ಒಬ್ಬರಿಗೊಬ್ಬರು ಪರಿಚಯ ಮಾಡಿಸಿದರು.ಪ್ರಯಾಣ ಮಾಡಿ ಬಂದಿದ್ದರಿಂದ ವಾರ್ಮ್ ಅಪ್ ಮಾಡಿಸಿದರು. ನಂತರದಲ್ಲಿ ಗೈಡ್ ಒಬ್ಬರು ನಮ್ಮನ್ನು ಸೇರಿಕೊಳ್ಳುತ್ತಾರೆ ಎಂದಿದ್ದರು. ಉಪ್ಪಿಟ್ಟು, ಕೇಸರಿಬಾತ್ ಮತ್ತು ಮಸಾಲೆ ವಡೆ ವಿತರಣೆಯಾಯಿತು. ಯೋಗ ಗುರುಗಳ ಅಣತೆಯಂತೆ ಉಪಹಾರವನ್ನು ಎಲ್ಲರೂ ಮಿತವಾಗಿ ತೆಗೆದುಕೊಂಡರು. ಸುಮಾರು 9.15 ಕ್ಕೆ ಬೆಟ್ಟದ ಪಾದದಿಂದ ಬೆಟ್ಟವೇರಲು ಸಿದ್ಧವಾದರು.

ಈ ಬೆಟ್ಟವು ಮೈಸೂರು ಮತ್ತು ಕೊಡಗಿನ ಗಡಿಯಲ್ಲಿ ಇದೆ. ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಎತ್ತರವಿರುವ ಬೆಟ್ಟ ಅಂದರೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ. ಬೆಟ್ಟದಪುರವು ಸಮುದ್ರಮಟ್ಟದಿಂದ ಸುಮಾರು 2,910 ಅಡಿ ಇದೆ. ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 4310 ಅಡಿ ಇದೆ.ಬೆಟ್ಟದ ಎತ್ತರ ಸುಮಾರು 1400 ಅಡಿ.(ಚಾಮುಂಡಿ ಬೆಟ್ಟದ ಎತ್ತರವು 870 ಅಡಿಗಳು ಇದೆ.) ಸುಮಾರು 3200 ಮೆಟ್ಟಿಲುಗಳು ಇವೆಯಂತೆ. ಬೆಟ್ಟ ತಲುಪಲು ಸುಮಾರು 2 ಗಂಟೆ ಬೇಕಾಗುತ್ತದೆ.
ಸಂಕೇತಿಗಳು ತಮಿಳುನಾಡಿನಿಂದ ಸ್ಥಳಾಂತರಗೊಂಡು ಬೆಟ್ಟದಪುರ ಮತ್ತು ಇತರ ಹಳ್ಳಿಗಳಲ್ಲಿ ಸುಮಾರು 600 ವರ್ಷಗಳಿಂದ ವಾಸವಾಗಿದ್ದಾರಂತೆ ಎಂದು ತಿಳಿದುಬಂತು. ಬೆಟ್ಟದ ತಳ ಭಾಗ, ಮೆಟ್ಟಿಲುಗಳು ಮತ್ತು ಬೆಟ್ಟದ ಮೇಲ್ಭಾಗ ಎಲ್ಲವೂ ಸಂರಕ್ಷಿತ ಪ್ರದೇಶವಾಗಿದೆ.ಇದನ್ನು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಸಂರಕ್ಷಿಸಲ್ಪಟ್ಟಿದೆ.ದೇವಾಲಯವನ್ನು ಕರ್ನಾಟಕ ಸರ್ಕಾರದ ದತ್ತಿಇಲಾಖೆಯೂ ನೋಡಿಕೊಳ್ಳುತ್ತಿದೆ.

ಇತಿಹಾಸ:
ಈ ಪ್ರದೇಶವು ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನವಾದದ್ದು ಎಂದು ಸ್ಥಳೀಯರುಉಲ್ಲೇಖಿಸುತ್ತಾರೆ. ಈ ಪ್ರದೇಶವು ವಿಜಯನಗರ ಅರಸರಿಗೆ ಸೇರಿತ್ತಂತೆ, ತದನಂತರದಲ್ಲಿ ಮೈಸೂರಿನ ಸಂಸ್ಥಾನದ ರಾಜರಿಗೂ ಮತ್ತು ಟಿಪ್ಪು ಸುಲ್ತಾನರಿಗು ಸೇರಿತ್ತಂತೆ.
ಈಗ ಚಾರಣಕ್ಕೆ ಬರೋಣ:
ಗುಂಪಿನ ಸದಸ್ಯರೆಲ್ಲ ಸರಸರನೆ ಮೆಟ್ಟಲು ಏರುತ್ತಾ ಮುಂದೆ ಸಾಗಿದರು. 7 ವರ್ಷದ ನನ್ನ ಮೊಮ್ಮಗಳು ಆ ಗುಂಪಿನಲ್ಲಿ ಸೇರಿಕೊಂಡಳು.ನಮ್ಮ ಕುಟುಂಬದ ನಾಲ್ಕು ಜನ ಹಿಂದೆ ಉಳಿದೆವು. ಮೊದಲಿಗೆ ರಾಜ ಗೋಪುರ ನೋಡಿದೆವು. ಗೋಪುರದ ಒಂದು ಕಡೆ ನಾಗ ಪ್ರತಿಮೆ, ಇನ್ನೊಂದು ಬದಿಯಲ್ಲಿ ಆಮೆಯ ಪ್ರತಿಮೆ ಇತ್ತು. ಮುಂಭಾಗದಲ್ಲಿ ಆನೆಗಳ ಪ್ರತಿಮೆ ಇದ್ದವು.ಎದುರು ಬದುರು ಎರಡು ಗುಡಿಗಳು.ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಅಲ್ಲಲ್ಲಿ ಮೆಟ್ಟಿಲುಗಳ ಮೇಲೆ ಕೆತ್ತನೆಯ ಚಿತ್ರಗಳು ಸಿಗುತ್ತಿದ್ದವು.ಅಲ್ಲಲ್ಲಿ ತೋರಣ ಕಂಬಗಳು ಸಿಗುತ್ತಿದ್ದವು.ಕಂಬಗಳ ಮೇಲೆ ನಂದಿ ಇರುತ್ತಿತ್ತು.

ಚಾರಣ ಮಾಡುತ್ತಾ ಸುಸ್ತಾದವರು, ವಿಶ್ರಮಿಸಲು ಅಲ್ಲಲ್ಲಿ ಮಂಟಪಗಳು ಇವೆ. ಮಂಟಪದಲ್ಲಿ ಎರಡು ಕಡೆ ದೇವರ ಶಿಲ್ಪಗಳು ಇದ್ದವು. ಮಂಟಪದ ಸ್ತಂಭಗಳಲ್ಲಿ ಕೆಲವು ಉಬ್ಬು ಶಿಲ್ಪಗಳು ಸಹ ಇದ್ದವು. ಮೆಟ್ಟಿಲುಗಳ ಎರಡು ಬದಿಯಲ್ಲೂ ಹಸಿರು ಕಂಗೊಳಿಸುತ್ತಿತ್ತು. ನಾನು ನನ್ನ ಮಗಳು ಹಿಂದೆ ಉಳಿದೆವು. ಪೂರ್ಣ ಹತ್ತಲಾರೆವು ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿತ್ತು.
ಹೀಗಾಗಿ ನನ್ನ ಮಗನನ್ನು ಮತ್ತು ಶ್ರೀಮತಿಯನ್ನು ಮುಂದೆ ಹೋಗಲು ಹೇಳಿದೆವು. ಇಷ್ಟೊಂದು ಮೆಟ್ಟಿಲುಗಳನ್ನು ನಾನು ಹತ್ತಲಾರೆನು ಎಂದು ಬರುವಾಗಲೇ ಮನೆಯಲ್ಲಿ ಹೇಳಿದ್ದೆ.ಅದಕ್ಕೆ ಮಗಳು ಇಲ್ಲ ನಮ್ಮ ಸದಸ್ಯರಲ್ಲಿ ಕೆಲವರು ಹಿಂದೆ ಉಳಿಯಬಹುದು.ಹೀಗಾಗಿ ನಾವು ಚಿಂತಿಸಬೇಕಿಲ್ಲ. ಸಾಧ್ಯವಾದಷ್ಟು ಹತ್ತಿ ಮತ್ತೆ ವಾಪಸು ಬಂದರಾಯಿತು ಎಂದು ಹೇಳಿದ್ದಳು. ಒಬ್ಬರಿಗೊಬ್ಬರು ಸಪೋರ್ಟ್ ನಿಂದ ನಾವಿಬ್ಬರು ಸುಮಾರು ದೂರ ಹೋದೆವು.
ಎಷ್ಟು ಹತ್ತಿದರೂ ಬೆಟ್ಟವು ಕಾಣಿಸುತ್ತಿರಲಿಲ್ಲ. ಹೋಗುವ ಬರುವವರನ್ನೆಲ್ಲಾ ಕೇಳುತ್ತಿದ್ದೆವು,ಇನ್ನು ಎಷ್ಟು ಮೆಟ್ಟಿಲು ಎಂದು.ಇನ್ನು ಮುಕ್ಕಾಲು ಭಾಗ ಇದೆ ಎಂದು ಹೇಳುತ್ತಿದ್ದರು. ಹೀಗಾಗಿ ಸಾಧ್ಯವಾಗದು ಎಂದು ನಾವು ಅಲ್ಲಲ್ಲಿ ವಿಶ್ರಮಿಸಿಕೊಂಡು ಮುಂದೆ ಹೋಗುತ್ತಿದ್ದೆವು.ಶ್ರೀಮತಿಯಿಂದ ಫೋನ್ನಲ್ಲಿ ಉತ್ತೇಜನ ಸಿಗುತ್ತಿತ್ತು. ನಿಧಾನವಾಗಿ ಹತ್ತಿ ಬನ್ನಿ ಎಂದು ಹೇಳುತ್ತಿದ್ದರು.ಮುಂದೆ ಹೋದೆವು. ಸುತ್ತಮುತ್ತ ಗಮನಿಸುತ್ತಾ, ನಾವು ನಿಧಾನದಲ್ಲಿ ಹೊರಟೆವು.
ಕೊನೆಗೂ ಬೆಟ್ಟದ ಮೇಲಿನ ದೊಡ್ಡ ದೊಡ್ಡ ಬಂಡೆಗಳು ಕಾಣಲು ಖುಷಿಯಾಯಿತು.ಬೆಟ್ಟದ ಮೇಲಕ್ಕೆ ಹೋಗಿದ್ದ ಕೆಲವು ಸದಸ್ಯರು ಇಳಿಯಲು ಪ್ರಾರಂಭಿಸಿದರು. ಇನ್ನು ಐದುನೂರು ಮೆಟ್ಟಿಲುಗಳು ಇದೆ. ನಿಧಾನದಲ್ಲಿ ಹೋಗಿ ಎಂದರು. ಕಡಿದಾದ ಮೆಟ್ಟಿಲುಗಳು ಇವೆ ಎಂದು ಸಹ ಹೇಳಿದರು. ಅಷ್ಟರಲ್ಲಿ ಯೋಗ ಕೇಂದ್ರದ ವೆಂಕಟೇಶ್ ಎನ್ನುವವರು ನಮಗೆ ಸಿಕ್ಕಿ,ನಿಮ್ಮ ಶ್ರೀಮತಿಯವರು ಅಲ್ಲಿ ಕಾಯುತ್ತಿದ್ದಾರೆ, ಬನ್ನಿ ಸರ್ ಹೋಗೋಣ ಎಂದರು. ಸಪೋರ್ಟ್ ಕೊಡ್ತೀನಿ,ಚಿಂತೆ ಮಾಡಬೇಡಿ ಎಂದು ಸಪೋರ್ಟ್ ಕೊಟ್ಟು,ನನ್ನನ್ನು 20 ನಿಮಿಷದಲ್ಲಿ ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋದರು.

ಮಗಳು ಸಹ ಇಂದಿನಿಂದ ಬಂದು ಸೇರಿಕೊಂಡಳು.ಬೆಟ್ಟದ ತುದಿ ತಲುಪಿದೆವಲ್ಲ ಎಂದು ಖುಷಿಯಾಯಿತು. ಅಲ್ಲೇ ಇದ್ದ ಕೆಲವು ಯೋಗ ಕೇಂದ್ರದ ಕೆಲಮಿತ್ರರು ದೇವಸ್ಥಾನದ ಒಳಗಡೆ ಕರೆದುಕೊಂಡು ಹೋಗಿ ಪ್ರಾರ್ಥನೆ ಮಾಡಿಸಿ,ಸಂಕಲ್ಪ ಮಾಡಿಕೊಳ್ಳಲು ಹೇಳಿದರು. ದೇವಸ್ಥಾನವು ಕಲ್ಲಿನಿಂದ ಕಟ್ಟಲ್ಪಟ್ಟಿದೆ.ಕಲ್ಲಿನ ಸ್ತಂಭಗಳು, ಕಲ್ಲಿನ ಗೋಡೆಗಳು, ಕಲ್ಲಿನ ನೆಲಹಾಸು ಮತ್ತು ಕಲ್ಲಿನ ಚಾವಣಿಯಿಂದ ಕೂಡಿದೆ. ದೇವಸ್ಥಾನ ವಿಶಾಲ ಪ್ರಾಂಗಣ ಹೊಂದಿದೆ.
ಮೊದಲಿಗೆ ಈ ದೇವಸ್ಥಾನವನ್ನು ಅನ್ನದಾನಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಕರೆಯುತ್ತಿದ್ದರಂತೆ. ಆವಾಗಿನ ಕಾಲದಲ್ಲಿ ಬೆಟ್ಟದ ಮೇಲೆ ಅನ್ನ ಸಂತರ್ಪಣೆ ಯಾಗುತ್ತಿತ್ತಂತೆ. ನಂತರ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಕರೆಯಲು ಪ್ರಾರಂಭಿಸಿದರಂತೆ. ಕಾರಣ ಮಳೆಗಾಲಕ್ಕೂ ಮೊದಲು ಸಿಡಿಲು ಈ ವಿಗ್ರಹಕ್ಕೆ ತಾಕುತ್ತಿದ್ದಂತೆ.ಅಲ್ಲಿಂದ ಬೆಳಕಿನ ರೂಪದಲ್ಲಿ ದೇವಸ್ಥಾನದ ಸುತ್ತ ಪಸರಿಸುತಿದ್ದಂತೆ. ನಂತರದಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ನಾಮಕರಣವಾಯಿತು ಎಂದು ಪ್ರವಾಸಿಗರು ಹೇಳಿದರು.ಲಿಂಗದ ರೂಪದಲ್ಲಿರುವ ಸ್ವಾಮಿ ಮಲ್ಲಿಕಾರ್ಜುನರ ದರ್ಶನವಾಯಿತು. ಪಕ್ಕದಲ್ಲಿದ್ದ ಪಾರ್ವತಮ್ಮನವರ ದರ್ಶನವು ಸಹ ಆಯಿತು.

ದೇವಸ್ಥಾನದ ಹೊರಗಡೆ ಬಂದು, ಬೆಟ್ಟದ ತುದಿಯಿಂದ ಕೆಳಗೆ ನೋಡಿದಾಗ ಹಳ್ಳಿಗಳು,ಗದ್ದೆಗಳು, ಕೆರೆಗಳು, ರಸ್ತೆಗಳು ತುಂಬಾ ಸುಂದರವಾಗಿ ಕಾಣುತ್ತಿತ್ತು. ಬೆಟ್ಟದ ಸುತ್ತಲಿಂದ ಕೆಳಗಿನ ನೆಲವನ್ನು ನೋಡಿದಾಗ ದೃಶ್ಯವು ರಮಣೀಯವಾಗಿತ್ತು.ಬೆಟ್ಟದ ಇನ್ನೊಂದು ಬದಿಯಲ್ಲಿ ನೋಡಿದಾಗ ವಿಸ್ತಾರವಾದ ಬಂಡೆ,ಆ ಬಂಡೆಯ ಮೇಲೆ ಕಲ್ಲಿನ ಸ್ತಂಭ ನೋಡಿದೆವು. ಎಂಟು ಅಡಿ ಸ್ತಂಭದ ಮೇಲೆ ನಂದಿ ವಿಗ್ರಹವಿತ್ತು. ಕೆಲವರು ಸಾಹಸ ಮಾಡಿ ಆ ಬಂಡೆಯ ಮೇಲೆ ಹೋಗಿ ತಿರುಗಾಡುತ್ತಿದ್ದರು. ದೇವಸ್ಥಾನದ ಬಲಭಾಗದಲ್ಲಿ ಕೆಳಗಡೆ ಹೋಗುವ ಮೆಟ್ಟಿಲುಗಳಿದ್ದವು.ಆ ಮೆಟ್ಟಿಲಲ್ಲಿ ಇಳಿದು ಆ ಬಂಡೆ ಹತ್ತುತ್ತಿದ್ದರಂತೆ. ಅಲ್ಲೇ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಡೆಗಳು ಇದ್ದವು.ಎರಡು ಬಂಡೆಗಳ ಮಧ್ಯದಲ್ಲಿ ಸುಮಾರು ಜಾಗ ಉಳಿದಿತ್ತು, ಈ ಜಾಗದ ಮೇಲೆ ದೊಡ್ಡ ಬಂಡೆ ಒಂದು ಚಾವಣಿಯಾಗಿ ನಿಂತಿತ್ತು.ಒಟ್ಟಿನಲ್ಲಿ ವಿಶಾಲವಾದ ಗುಹೆ ಯಂತಿತ್ತು.
ಆ ಗುಹೆಯಂತ ಜಾಗದಲ್ಲಿ ಯೋಗ ಗುರುಗಳು ಸದಸ್ಯರಿಂದ ಒಂದು ಪ್ರಾಣಾಯಾಮ ಮಾಡಿಸಿದರೆಂದು ನಂತರದಲ್ಲಿ ತಿಳಿಯಿತು. ದೇವಸ್ಥಾನದ ಪ್ರಾಂಗಣದಲ್ಲೂ ಭಜನೆ ಮಾಡಿಸಿದರಂತೆ.ಬೆಟ್ಟದಿಂದ ಕೆಳಗೆ ಇಳಿಯುತ್ತಿದ್ದಂತೆ ಬಲಭಾಗದಲ್ಲಿ ವಿಶಾಲವಾದ ಬಂಡೆ ಹರಡಿತ್ತು. ಆ ಬಂಡೆಯ ಮೇಲೆ ಸದಸ್ಯರೆಲ್ಲ ಮಲಗಿ ವಿಶ್ರಾಂತಿ ತೆಗೆದುಕೊಂಡರಂತೆ. ಪಕ್ಕದಲ್ಲಿ ಕೊಳದ ರೀತಿಯಲ್ಲಿ ನೀರು ಸಂಗ್ರಹವಾಗಿತ್ತು.

ಮುಂದೆ ಇಳಿಯುತ್ತಿದ್ದಂತೆ ಬಲಭಾಗದಲ್ಲಿ ಮತ್ತೊಂದು ಬಂಡೆಯ ಮೇಲೆ ಸ್ತಂಭ, ಅದರ ಮೇಲೊಂದು ನಂದಿ ವಿಗ್ರಹವಿತ್ತು. ಅಲ್ಲಿಗೂ ಸಹ ಪ್ರವಾಸಿಗರು ಹತ್ತಿದ್ದನ್ನು ನೋಡಿದೆ. ಹೀಗೆ ಕೆಳಗೆ ಇಳಿಯುತ್ತಿದ್ದಂತೆ, ಎಡಭಾಗದಲ್ಲಿ ವೀರಭದ್ರ ಸ್ವಾಮಿ ಮಂಟಪ ತೋರಿಸಿದರು. ಇಳಿಯುವಾಗ ವೆಂಕಟೇಶರವರ ಸಪೋರ್ಟ್ ನಲ್ಲಿ ಬಂದೆ.ಅಲ್ಲಲ್ಲಿ ಫೋಟೋ ಕ್ಲಿಕ್ಕಿಸಿಕೊಂಡೆವು. ಬೆಟ್ಟ ಇಳಿಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಕೆಳಗೆ ಬಂದು ವಿಶ್ರಮಿಸಿಕೊಂಡು, ನಂತರ ಮಂಟಪದಲ್ಲಿ ತರಿಸಿ ಇಟ್ಟಿದ್ದ ಊಟವನ್ನು ಮಾಡಿದೆವು. ಊಟ ಮಾಡಿ ವಿಶ್ರಮಿಸಿಕೊಂಡೆವು.ಅಲ್ಲಿ ಊರಿನ ಕೆಲವರು ಸಿಕ್ಕಿದರು.ಅವರಿಂದ ಕೆಲವು ವಿಷಯವನ್ನು ತಿಳಿದು ಈ ಕೆಳಗೆ ಸಂಗ್ರಹ ರೂಪದಲ್ಲಿ ಕೊಟ್ಟಿರುತ್ತದೆ.

“ದೀಪಾವಳಿ ಅಮವಾಸ್ಯೆಯಂದು ಉತ್ಸವ /ಜಾತ್ರೆ”
ಬೆಟ್ಟದಪುರದ ಜನರ ಆರಾಧ್ಯ ದೈವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ. ದೀಪಾವಳಿಯ ಅಮಾವಾಸ್ಯೆ ದಿನ ಊರಿನಲ್ಲಿರುವ ಉತ್ಸವಮೂರ್ತಿಗಳಾದ ಗಣೇಶ, ಶಿವ, ಪಾರ್ವತಿ, ಬೆಳ್ಳಿ ಬಸಪ್ಪ ಇವರನ್ನು ಹೊತ್ತುಕೊಂಡು ಪಂಜಿನ ಮೆರವಣಿಗೆಯಲ್ಲಿ ಬೆಟ್ಟದ ಮೇಲಕ್ಕೆ ಸಾಗುತ್ತಾರಂತೆ. ದೇವಟಿಗೆ ಮೆರವಣಿಗೆ ಎಂದು ಕರೆಯುತ್ತಾರೆ. ಬೆಟ್ಟದಮೇಲೆ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸಿ ವಾಪಸ್ಸು ಹೊರಡುತ್ತಾರಂತೆ.
ಊರಿನ ಪೇಟೆ ಬದಿಯಲ್ಲಿ ಮೆರವಣಿಗೆ ಮಾಡಿಕೊಂಡು ಉತ್ಸವ ಮೂರ್ತಿಗಳನ್ನು ಅವರ ಸ್ವಸ್ಥಾನಗಳಿಗೆ ಇಳಿಸಿಕೊಳ್ಳುತ್ತಾರಂತೆ.
ಪ್ರವಾಸಿಗರಿಗೆ ಸಲಹೆಗಳು:
1.ನೀರಿನ ಬಾಟಲು ಮತ್ತು ಒಂದು ಬಿಸ್ಕೆಟ್ ಪ್ಯಾಕೆಟ್ ತೆಗೆದುಕೊಂಡು ಹೋಗಿ.
2. ಅಲ್ಲಲ್ಲಿ ವಿಶ್ರಮಿಸಿಕೊಳ್ಳುವುದು ಒಳ್ಳೆಯದು.ಇದಕ್ಕಾಗಿ ಮಂಟಪಗಳು ಇವೆ.
3.ಸಡಿಲವಾದ ಬಟ್ಟೆ ಹಾಕಿಕೊಳ್ಳಿ. ಶೂ ಧರಿಸಿರಿ.
4.ಚಾರಣಕ್ಕೆ ಬೆಳಗಿನ ಜಾವ ಉತ್ತಮ
5.ಒಬ್ಬರೇ ಹೋಗಬೇಡಿ.ಗುಂಪಿನಲ್ಲಿ ಹೋಗಿ.
ಧಾರ್ಮಿಕ ದತ್ತಿ ಇಲಾಖೆಯವರಿಗೆ ವಿನಂತಿ:
1.ಬೆಟ್ಟದ ತುದಿಯವರೆಗೂ ವಿದ್ಯುತ್ ಕಂಬಗಳು ಮತ್ತು ಲೈನ್ ಇದೆ.ಆದರೆ ದೇವಸ್ಥಾನದಲ್ಲಿ ವಿದ್ಯುತ್ ಇಲ್ಲ. ದುರಸ್ತಿ ಕಾರ್ಯ ಕೈಗೊಳ್ಳಬೇಕು.
2.ಬೆಟ್ಟದ ತುದಿಯವರೆಗೂ ನೀರಿನ ಪೈಪ್ ಲೈನ್ ಇದೆ ಆದರೆ ದೇವಸ್ಥಾನ ದಲ್ಲಿ ನೀರಿನ ಸರಬರಾಜು ಇಲ್ಲ
- ದೇವರಾಜ ಚಾರ್ – ಮೈಸೂರು
