ಮಂಜುಳ ಪಾವಗಡ ಅವರ ‘ಕಾರುಣ್ಯದ ಕಡಲು’ ಕವನಸಂಕಲನಕ್ಕೆ ಕನ್ನಡ ಹಿರಿಯ ಲೇಖಕರು ಪದ್ಮಶ್ರೀ ಪುರಸ್ಕೃತರು ಅದ ಡಾ. ದೊಡ್ಡ ರಂಗೇಗೌಡರವರ ಸೊಗಸಾದ ಮುನ್ನುಡಿ, ನಿವೃತ್ತ ಐ ಎ ಎಸ್ ಅಧಿಕಾರಿಗಳಾದ ಡಾ. ಸಿ ಸೋಮಶೇಖರ್ ರವರ ಬೆನ್ನುಡಿ ಹಲವಾರು ಉದಯೋನ್ಮುಖ ಲೇಖಕರಿಂದ ಹಾರೈಕೆಯ ನುಡಿಗಳಿಂದ ಮೂಡಿ ಬಂದಿರುವ ಈ ಕೃತಿಯನ್ನು ಓದುಗರು ಓದಿ ಕವಯಿತ್ರಿಯನ್ನು ಪ್ರೋತ್ಸಾಹಿಸಬೇಕಾಗಿದೆ. ಈ ಕೃತಿಯ ಕುರಿತು ನಾರಾಯಣಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಕಾರುಣ್ಯದ ಕಡಲು (ಕವನಸಂಕಲನ)
ಲೇಖಕರು : ಮಂಜುಳ ಪಾವಗಡ
ಪ್ರಕಾಶಕರು: ಅಕ್ಷರನಾದ ಪ್ರಕಾಶನ
ಬೆಲೆ: ನೂರ ನಲವತ್ತೊಂಭತ್ತು ರೂಪಾಯಿಗಳು
ಕನ್ನಡ ಸಾಹಿತ್ಯ ಮತ್ತು ಪತ್ರಿಕಾರಂಗದ ಎರಡೂ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುತಿಸಿಕೊಂಡ ಮಂಜುಳ ಪಾವಗಡ ರವರು ಶಿಕ್ಷಕಿಯಾಗಿ, ಕವಯತ್ರಿ, ಪತ್ರಕರ್ತೆಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಕೆಲಕಾಲ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು, ನಂತರ ಪತ್ರಿಕಾ ರಂಗದ ಕಡೆಗೆ ತಮ್ಮ ಪಯಣ ಆರಂಭಿಸುತ್ತಾರೆ. ಕಣ್ಣು ಪತ್ರಿಕೆಯ ವರದಿಗಾರಳಾಗಿ, ನಂತರ ಮುಖ್ಯ ವರದಿಗಾರ್ತಿಯಾಗಿ, ಅನಂತರ ಉಪಸಂಪಾದಕಿಯಾಗಿದರು. ಜೊತೆಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡ ಸಾಹಿತ್ಯಲೋಕದಲ್ಲಿ ಪ್ರವೇಶಿಸಿ ಇವರು ‘ಬಯಲು ಭಾವನೆಗಳ ಸಾಗರ’ ಎಂಬ ಚೊಚ್ಚಲ ಕವನಸಂಕಲನವನ್ನು ಕನ್ನಡ ಸಾರಸತ್ವ ಲೋಕಕ್ಕೆ ಕೊಡುಗೆಯಾಗಿ ನೀಡುವುದರ ಮೂಲಕ ಕವಯಿತ್ರಿ ಎಂದು ಗುರುತಿಸಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಮತ್ತೊಂದು ಪ್ರಯತ್ನವಾಗಿ “ಸಾಧಕರಿಗೊಂದು ಸಲಾಂ” ಕೃತಿಯ ಮೂಲಕ ನಾಡಿನ ಅನೇಕ ಸಾಧಕ ಶ್ರೇಷ್ಠರನ್ನು ಗುರುತಿಸಿ, ಅವರ ಜೀವನದ ಅನುಭವಗಳನ್ನು, ಸಾಧನೆಗಳನ್ನು ಅವರದ್ದೇ ಮಾತುಗಳಲ್ಲಿ ಸಂದರ್ಶಸಿ ಹೆಕ್ಕಿ ತೆಗೆದ ಅನೇಕ ಮಜಲುಗಳನ್ನು ದಾಖಲಿಸಿದರು.

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರು ತಮ್ಮ ಮೂರನೆಯ ಕೃತಿಯಾಗಿ” ಕಾರುಣ್ಯತೆಯ ಕಡಲು’ ಎಂಬ ಕವನಸಂಕಲನವನ್ನು ಅಕ್ಷರನಾದ ಪ್ರಕಾಶನದಲ್ಲಿ ಹೊರತಂದಿದ್ದಾರೆ. ಕಾರುಣ್ಯತೆಯ ಕಡಲು ಕವನಸಂಕಲನವು ಹಲವು ಕವಿತೆಗಳು, ಹನಿಗವಿತೆಗಳು, ಚುಟುಕುಗಳ ಸಮ್ಮಿಲನ ಸಾಲುಗಳಿಂದ ರಚಿತವಾಗಿದೆ. ಈ ಸಾಲುಗಳಲ್ಲಿ ಪ್ರೀತಿ ಮೋಹವಿದೆ, ಕನ್ನಡ ನಾಡನ್ನು ವರ್ಣಿಸುವ ಸಾಲುಗಳಿವೆ. ಲಕ್ಷಾಂತರ ಜನರ ಸಾವಿಗೆ ಕಾರಣವಾದಂತಹ ಕರೋನ ವೈರಸ್ ಬಗ್ಗೆ, ಪ್ರಪಂಚದ ಜನರ ಮನಸ್ಸನ್ನು ತನ್ನ ಅಂಗೈಯಲ್ಲಿ ಇಟ್ಟುಕೊಂಡು ಅಟವಾಡಿಸುತ್ತಿರುವ ಮೊಬೈಲ್ ನ ಮೋಡಿ ಇದೆ. ಮನುಷ್ಯ ಮನಸ್ಸಿಗೆ ಒಂದು ಮುದ ನೀಡುವ ಜ್ಞಾನವನ್ನು ಹೆಚ್ಚಿಸುವ, ವಿಜ್ಞಾನದ ಅರಿವನ್ನು ಮೂಡಿಸಿ ಮೌಢ್ಯವನ್ನು ತೊರೆದು ವೈಚಾರಿಕತೆಯತ್ತಾ ಕೊಂಡೊಯ್ಯುವ ಸಾಧನವಾದ ಪುಸ್ತಕದ ಬಗ್ಗೆ ಕವಿತೆಯಿದೆ. ಹೆಣ್ಣು ಮಕ್ಕಳು ಅತಿಯಾಗಿ ಪ್ರೀತಿಸುವ ತವರಿದೆ. ಈ ದೇಶಕ್ಕಾಗಿ ದೇಶದ ರಕ್ಷಣೆಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟು ಹೋರಾಡುವ ವೀರ ಯೋಧ ಇದ್ದಾನೆ
ಈ ಕಾರುಣ್ಯತೆಯ ಕಡಲು ಕವನಸಂಕಲನ ಒಂದಷ್ಟು ಕವಿತೆಯ ಸಾಲುಗಳನ್ನು ಗಮನಿಸುವುದಾದರೆ. ಶಿಕ್ಷಕರು ಎಂಬ ಶೀರ್ಷಿಕೆಯಲ್ಲಿ ಬರೆದ ಕವಿತೆಯ ಸಾಲುಗಳಲ್ಲಿ ಶಿಕ್ಷಕರ ಮನದೊಳಗೆ ಚಿಂತೆಗಳಿದ್ದರೂ ಕೂಡ ಅವರು ಶಾಲೆಗೆ ಬಂದಾಗ ಮುಗ್ಧ ಮಕ್ಕಳ ಜೊತೆಯಲ್ಲಿ ಬೆರೆತಾಗ ತಮ್ಮೆಲ್ಲಾ ನೋವುಗಳನ್ನು ಮರೆತು ಒಂದಷ್ಟು ಕ್ಷಣಗಳು ಖುಷಿಯಿಂದ ಕಳೆಯುತ್ತಾರೆ. ಶಾಲೆಗೆ ಬರುವ ಮಕ್ಕಳು ಶ್ರೀಮಂತನಾಗಿರಲಿ ಬಡವನಾಗಿರಲಿ ಜಾತಿ ಮತವನ್ನು ಮರೆತು ಯಾವ ಭೇಧಭಾವ ತೋರದೆ ಸಮಾನತೆಯಿಂದ ನೋಡುತ್ತಾ ಎಲ್ಲರಿಗೂ ಕೂಡಾ ಒಂದೇ ರೀತಿಯ ಪಾಠವನ್ನು ಮಾಡುತ್ತಾರೆ. ವಿದ್ಯಾರ್ಥಿ ಶಿಕ್ಷಣ ಮೂಲ ಶಿಕ್ಷಕರೆ ಯಾವುದೇ ವಿದ್ಯೆಯನ್ನು ಗುರುವಿಲ್ಲದೆ ಕಲಿತಾಗ ಅದು ಸಫಲವಾಗಲಾರದು ಎಂದು ಶಿಕ್ಷಕ ಬಗ್ಗೆ ಸೊಗಸಾಗಿ ಸಾಲುಗಳನ್ನು ರಚಿಸಿದ್ದಾರೆ.
ಮೊಬೈಲ್ ಮೋಡಿ ಶೀರ್ಷಿಕೆಯ ಕವಿತೆಯಲ್ಲಿ ಬರುವ ಸಾಲುಗಳು
ಕಷ್ಟದಲಿ ಬೆರೆಯುವ ಕ್ಷಣಗಳು
ಆದರ್ಶವಾಗಿ ಬಾಳುವ ಬದುಕುಗಳು
ಕಣ್ಮರೆಯಾಗಿ ವಿಚ್ಛೇದನ ಹೆಚ್ಚುತ್ತಿವೆ
ಮೊಬೈಲ್ ಎಂಬ ಮೋಡಿಗೆ ಬಿದ್ದು…..
ಮೊಬೈಲ್ ಎಂಬ ಈ ಮಾಯಲೋಕ ಮನುಷ್ಯರನ್ನು ತನ್ನ ಹಿಡಿತದಿಂದ ಬಂಧಿಸಿದೆ. ಮೊಬೈಲ್ ಇಲ್ಲದೆ ಬದುಕಲಾರವೇನೋ ಎನ್ನುವ ಸ್ಥಿತಿಗೆ ಬಂದು ತಲುಪಿದ್ದಾನೆ. ಮೊಬೈಲ್ ಇಲ್ಲದ ಕಾಲದಲ್ಲಿ ಜನರು ಪತ್ರಿಕೆ ಪುಸ್ತಕ ಓದುತ್ತಿದ್ದರು. ಮನೆ ಮಂದಿಯೆಲ್ಲಾ ಕುಳಿತು ಒಂದೆಡೆ ಮಾತನಾಡುತ್ತಿದ್ದರು. ಮನೆಯೊಳಗೆ ಹಿರಿಯರಿಂದ ನೀತಿ ಪಾಠಗಳನ್ನು, ಮಾನವೀಯ ಮೌಲ್ಯಗಳ ಪಾಠವನ್ನು ಓದಿಸುತ್ತಿದ್ದರು. ಅದರೆ ಮಕ್ಕಳ ಜೊತೆಯಲ್ಲಿ ತಂದೆತಾಯಿಗಳು ಕೂಡ ಮೊಬೈಲ್ ದಾಸರಾಗಿ ಅದರೊಳಗೆ ಮುಳುಗಿ ಹೋಗಿರುವಾಗ ಮಕ್ಕಳಿಗೆ ಸಂಸ್ಕಾರ ಸಾಹಿತ್ಯದ ಅರಿವಿಲ್ಲದೆ ಹೋಗಿದೆ. ಈ ಮೊಬೈಲ್ ನಿಂದ ಸ್ನೇಹ ಪ್ರೀತಿ ಪ್ರೇಮಗಳಿಗೆ ವಯಸ್ಸಿನ ಮಿತಿಯಿಲ್ಲದ ಮಾರುಹೋಗುತ್ತಿದ್ದಾರೆ. ಮೋಹದ, ಮೋಸದ ಮಾತುಗಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಬಲಿಯಾಗುತ್ತಿದ್ದಾರೆ. ಸಂಸಾರದಲ್ಲಿ ಬಿರುಕು ಮೂಡಿ ವಿಚ್ಛೇದನದತ್ತ ಸಾಗಿ ತಮ್ಮ ಬಾಳ ಪಯಣವನ್ನು ಅಂತ್ಯಗೊಳ್ಳಿಸಿ ಜೀವನದಲ್ಲಿ ಮೋಸ ಹೋಗಿ ಜೀವನದಲ್ಲಿ ಜುಗುಪ್ಸೆಯಾಗಿ ಜೀವವನ್ನೇ ಅಂತ್ಯಗೊಳಿಸುವ ಸ್ಥಿತಿಗೆ ಮನುಕುಲ ತಲುಪುತಿದೆ. ಇನ್ನೂ ಯುವ ಜನಾಂಗ ಈ ಮಾಯಲೋಕದ ರಂಗಿನ ಲೋಕದಲ್ಲಿ ವಿಹರಿಸಿ ಅದರಿಂದ ಹೊರಬರಲಾಗದೆ ಸಾವನ್ನು ಅಪ್ಪುತ್ತಿದ್ದಾರೆ.
ಬಾಲ್ಯ ಎಂಬ ಶೀರ್ಷಿಕೆಯ ಕವಿತೆಯ ಬರುವ ಸಾಲುಗಳು
ಬಡತನದ ಬೇಗೆಯಲಿ ಸಿರಿತನದ ಬದುಕು
ಹಬ್ಬ ಹರಿದಿನಗಳಲಿ ಸಾಲದ ಸಿಹಿಯೂಟ
ಅಪ್ಪನ ಬೆವರಿನ ದುಡಿಮೆಯಲಿ
ಮಕ್ಕಳ ಹೊಸ ಬಟ್ಟೆಯ ನಲಿದಾಟ
ಅಪ್ಪ ಅಮ್ಮನಿಗೆ ಅದೇ ಸ್ವರ್ಗದ ನೋಟ…….
ತಮ್ಮ ಬಾಲ್ಯದ ಜೀವನ ಆ ದಿನಗಳನ್ನು ಕವಯಿತ್ರಿ ಇಲ್ಲಿ ಮೆಲುಕು ಹಾಕಿದ್ದಾರೆ ಅನಿಸುತ್ತದೆ. ಅಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಬಡತನ ತಾಂಡವಾಡುತ್ತಿತ್ತು. ಅದರೆ ಆ ಜೀವನ ಇಂದಿನ ಜೀವನ ಶೈಲಿಗೆ ಹೊಲಿಸಿಕೊಂಡರೆ ಶ್ರೀಮಂತ ಜೀವನದಂತೆ ಕಾಣುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಕೂಲಿಯಿಂದ ಜೀವನ ಸಾಗಿಸಿ ಮಕ್ಕಳನ್ನು ಪೋಷಿಸುತ್ತಿದ್ದ ತಂದೆ ತಾಯಿಗಳು ಹಬ್ಬಕ್ಕೆ ಮಕ್ಕಳಿಗೆ ಸಿಹಿಯ ಊಟವನ್ನು ಬಡಿಸಬೇಕು ಎಂಬ ಉದ್ದೇಶದಿಂದ ತಮ್ಮ ಊರ ಯಜಮಾನನಿಂದಲೊ, ತಾವು ಕೂಲಿ ಕೆಲಸ ಮಾಡುವ ಜಮೀನ ಮಾಲೀಕನಿಂದಲೊ ಒಂದಷ್ಟು ಹಣವನ್ನು ಸಾಲವಾಗಿ ತಂದು ಸಂತೆಗೆ ಹೋಗಿ ಹಬ್ಬದ ಸಾಮಾನುಗಳನ್ನು ತಂದು ಮಕ್ಕಳಿಗೆ ಉಣಬಡಿಸಿ ಮಕ್ಕಳು ಖುಷಿಯಿಂದ ಊಟ ಮಾಡುವುದನ್ನು ಕಂಡು ಖುಷಿ ಪಡುತ್ತಿದ್ದರು. ಬೇರೆಯವರ ಹೊಲದೊಳಗೊ ತೋಟದೊಳಗೊ ಬೆವರು ಸುರಿಸಿ ಹೊಸ ಬಟ್ಟೆಗಳನ್ನು ತಂದು ಕೊಟ್ಟಾಗ ಆ ಮಕ್ಕಳು ಪಡುವ ಸಂತೋಷವನ್ನು ಕಂಡು ತಂದೆತಾಯಿಗಳು ಪಡುತ್ತಿದ್ದ ಖುಪಿಯ ಪರಿಯನ್ನು ಸಾಲುಗಳಾಗಿ ಮೂಡಿಸಿದ್ದಾರೆ.
ಅನ್ನದಾತ ಶೀರ್ಷಿಕೆಯ ಕವಿತೆಯಲ್ಲಿ ಬರುವ ಸಾಲಗಳೆಂದರೆ
ಹಸಿವನು ನೀಗಿಸುವ ಅನ್ನದಾತ
ಭೂತಾಯಿಯ ಹೆಮ್ಮೆಯ ಸುತಾ
ಬೆವರ ಹರಿಸಿ ದುಡಿಯುವಾತ
ಸಾಲ ಸೋಲ ಮಾಡಿ ಬಿತ್ತುವಾತ
ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ
ಸಾಲದಲ್ಲೆ ಸಾಯುವಾತ….
ಈ ಕವಿತೆಯಲ್ಲಿ ಕವಯಿತ್ರಿ ಈ ದೇಶದ ಬೆನ್ನೆಲುಬಾದ ರೈತನ ಬಗ್ಗೆ ಬರೆಯುತ್ತಾರೆ. ಭುವಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ದೇಹದ ಹಸಿವನ್ನು ನೀಗಿಸುವವನು ರೈತ, ಅವನನ್ನು ಅನ್ನದಾತನೆಂದು ಕರೆಯುತ್ತೇವೆ. ಅನ್ನದಾತನು ಈ ಭೂಮಿ ತಾಯಿಯ ಹೆಮ್ಮೆಯ ಮಗನು ಮಳೆ ಗಾಳಿ ಚಳಿ ಬಿಸಿಲು ಎನ್ನದೇ ಸದಾ ಭೂತಾಯಿಯ ಮಡಿಲಿನಲ್ಲಿ ದುಡಿಯುತ್ತಾನೆ. ಅವನು ಸಾಲ ಮಾಡಿ ಬೀಜ ರಸಗೊಬ್ಬರ ತಂದು ಬಿತ್ತನೆ ಮಾಡುತ್ತಾನೆ. ಅದರೆ ಅವನು ವರ್ಷ ಪೂರ್ತಿ ದುಡಿದು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಸಾಲವನ್ನು ತೀರಿಸಲಾದೇ ಆತ್ಮಹತ್ಯೆಯನ್ನು ಮಾಡಿಕೊಂಡ ಸಾಯುತ್ತಾನೆ ಎಂದು ಈ ದೇಶದ ರೈತ ಸಮುದಾಯದದ ಭವಣೆಯನ್ನು ಅವನ ಜೀವನ ಪರಿಸ್ಥಿತಿಯನ್ನು ಕವಿತೆಯ ಸಾಲುಗಳಲ್ಲಿ ಮನೋಜ್ಞವಾಗಿ ವಿವರಿಸುತ್ತಾರೆ.

ತ್ಯಾಗಮಯಿ ಲೀಲಾವತಿ ಎಂಬ ಶೀರ್ಷಿಕೆಯ ಕವಿತೆಯಲ್ಲಿ ಹೇಳುತ್ತಾರೆ.
ಲೀಲಾವತಿಗಾದ ಮೋಸ
ನಾಡಿನ ಪ್ರತಿ ಪ್ರಜೆಗೂ ತಿಳಿದಿತ್ತು
ಹೋರಾಟ ಮಾಡುವ ದಮ್ಮು
ಯಾರಿಗೂ ಇರಲಿಲ್ಲ……
ಕನ್ನಡ ಹೆಸರಾಂತ ಚಿತ್ರನಟಿ ದಿವಂಗತ ಲೀಲಾವತಿಯ ಬದುಕಿನ ನೋವನ್ನು ವಿವರಿಸುತ್ತಾರೆ. ಅವರ ವೈವಾಹಿಕ ಬದುಕಿನಲ್ಲಿ ಅವರಿಗಾದ ಮೋಸ ಈ ನಾಡಿನ ಪ್ರತಿಯೊಬ್ಬ ಪ್ರಜೆಗೂ ಕೂಡ ತಿಳಿದಿತ್ತು. ಅದರೆ ಅವರ ಬದುಕಿನಲ್ಲಿ ಬಂದು ಅವರ ಮಗನ ಜನನಕ್ಕೆ ಕಾರಣದ ವ್ಯಕ್ತಿಯ ವಿರುದ್ಧ ಮಾತನಾಡುವ ಹೋರಾಟ ಮಾಡುವ ಎದೆಗಾರಿಕೆ ಮಾತ್ರ ಯಾರಿಗೂ ಬರಲಿಲ್ಲ ಎಂದು ನೊಂದ ಹೃದಯದಿಂದ ಈ ಕವಿತೆಯ ಸಾಲುಗಳನ್ನು ಕಟ್ಟುತ್ತಾರೆ.
ಆಂದಿನ ಪ್ರೇಮ ಕವಿತೆಯಲ್ಲಿ ಆ ಕಾಲದಲ್ಲಿ ಅಂಕುರವಾಗುತ್ತಿದ್ದ ಪ್ರೀತಿಯು ಒಂದು ರೀತಿಯ ವಿಶೇಷವಾಗಿ ಇರುತ್ತಿತ್ತು. ಬಸ್ಸಿನಲ್ಲಿ ಕದ್ದು ಮುಚ್ಚಿ, ನೋಡುತ್ತಾ ವರ್ಷಗಟ್ಟಲೆ ಅವರನ್ನು ಹಿಂಬಾಲಿಸುತ್ತಾ ಪ್ರೀತಿಯ ವಿಷಯವನ್ನು ಭಯ ಪಡುತ್ತಲೇ ಹೇಳುತ್ತಿದ್ದರು. ಕೊನೆಗೆ ಅವನು ಹೇಗೆ ಸಾಹಸವನ್ನು ಮಾಡಿ ತನ್ನ ಪ್ರೀತಿಯನ್ನು ಅವರ ಮುಂದೆ ನಿವೇದಿಸುತ್ತಿದ್ದರು.
ಇಂದಿನ ದಿನಗಳಲ್ಲಿ ಪ್ರೀತಿ ಪ್ರೇಮ ಒಂದು ಆಟದಲ್ಲಿ ಬೆಳಗ್ಗೆ ಪ್ರಾರಂಭವಾಗಿ ಸಂಜೆ ಮುಗಿದು ಹೋಗುತ್ತದೆ. ವಿಜ್ಞಾನದ ತಾಂತ್ರಿಕತೆಯ ಬೆಳವಣಿಗೆಯಲ್ಲಿ ಪ್ರೀತಿ ಪ್ರೇಮ ಇಂದಿನ ದಿನಮಾನಗಳಲ್ಲಿ ಬಹುಬೇಗ ಕಮರಿ ಹೋಗುತ್ತೇವೆ ಎಂದು ತಿಳಿಸುತ್ತಾರೆ. ಮಾಯಾ ಲೋಕವೆಂಬ ಶ್ರೀ ಮುಖಪುಟದಲ್ಲಿರುವಂತಹ ಇನ್ಸ್ತಗ್ರಮ್ ಫೆಸ್ಬುಕ್ ನಲ್ಲಿ ಪರಿಚಯರಾಗುತ್ತಾರೆ, ಕೆಲವೇ ತಮ್ಮ ಮೊಬೈಲ್ ಸಂಖ್ಯೆಗಳನ್ನ ಹಂಚಿಕೊಂಡು, ಆಗಾಗ ಪಾರ್ಕ್ ಪಬ್ ಅಂತ ತಿರುಗಿ, ಮತ್ತಿನಲ್ಲಿ ಮುತ್ತಿನ ಮಳೆಗೆರೆಯುತ್ತಾರೆ. ಇಂಟರ್ನೆಟ್ ನಲ್ಲಿಯೆ ತಮ್ಮ ದೈಹಿಕ ಛಾಂಭೆಗಳನ್ನು ಪೂರೈಸಿಕೊಂಡು, ನೋಂದಣಿ ಕಛೇರಿಯಲ್ಲಿ ವಿವಾಹ ಬಂಧನದ ಸರ್ಟಿಫಿಕೇಟ್ ಪಡೆದು ಹೆತ್ತವರು ಸಂಬಂಧಿಕರನ್ನು ತೊರೆದು, ಬಾಡಿಗೆ ಮನೆಯಲ್ಲಿ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತಾರೆ. ನಂತರ ಮನಸ್ಥಿತಿಗಳು ಬದಲಾಗಿ ಹೊಡೆದಾಡಿಕೊಳ್ಳುತ್ತಾರೆ ಎರಡು ಮೂರು ತಿಂಗಳೊಳಗೆ ಮದುವೆಯೆಂಬ ಬಂಧನವನ್ನು, ಸುಂದರ ಕ್ಷಣಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ವಿಚ್ಛೇದನದ ಮೂಲಕ ತಮ್ಮ ಬದುಕನ್ನು ಘೋರವಾಗಿಸಿಕೊಂಡು ಬದುಕಿನ ದಿನಗಳನ್ನು ದೂಡುತ್ತಾರೆ.
ಕಾರುಣ್ಯದ ಕಡಲು ಕವನಸಂಕಲನದಲ್ಲಿ ಕವಿತೆಗಳ ಜೊತೆಯಲ್ಲಿ ಹನಿಗವಿತೆಗಳು ಚುಟುಕು ಕೂಡ ಓದುಗರ ಮನವನ್ನು ಸೆಳೆಯುತ್ತವೆ.
ನೋವುಗಳು ನನ್ನನ್ನ
ಕೊಂದು ಆನಂದಿಸಲಿ
ನನ್ನ ಕಿರುನಗೆಯೊಂದೇ
ಮತ್ತೊಬ್ಬರಿಗೆ
ಸ್ಪೂರ್ತಿಯಾಗಲಿ
ಕಾರುಣ್ಯದ ಕಡಲು, ನನ್ನ ನಾಡು ನನ್ನ ಬೀಡು, ನೋವಿನ ಕಥೆಗೆ ನಾಯಕರಾರು, ಅಕ್ಕತಂಗಿಯ ಕಥೆ, ಅಶ್ರುತರ್ಪಣ ಅರ್ಪಣಾ ಮುಂತಾದ ಹಲವಾರು ಕವಿತೆಗಳು ಓದುಗರ ಗಮನವನ್ನು ಸೆಳೆಯುತ್ತವೆ. ಕಾರುಣ್ಯದ ಕಡಲು ಕವನಸಂಕಲನಕ್ಕೆ ಕನ್ನಡ ಹಿರಿಯ ಲೇಖಕರು ಪದ್ಮಶ್ರೀ ಪುರಸ್ಕೃತರು ಅದ ಡಾ. ದೊಡ್ಡ ರಂಗೇಗೌಡರವರ ಸೊಗಸಾದ ಮುನ್ನುಡಿ, ನಿವೃತ್ತ ಐ ಎ ಎಸ್ ಅಧಿಕಾರಿಗಳಾದ ಡಾ. ಸಿ ಸೋಮಶೇಖರ್ ರವರ ಬೆನ್ನುಡಿ ಹಲವಾರು ಉದಯೋನ್ಮುಖ ಲೇಖಕರಿಂದ ಹಾರೈಕೆಯ ನುಡಿಗಳಿಂದ ಮೂಡಿ ಬಂದಿರುವ ಈ ಕೃತಿಯನ್ನು ಓದುಗರು ಓದಿ ಕವಯಿತ್ರಿಯನ್ನು ಪ್ರೋತ್ಸಾಹಿಸಬೇಕಾಗಿದೆ.
ಇವರು ಮುಂದೆಯೂ ಕನ್ನಡ ಸಾಹಿತ್ಯದಲ್ಲಿ ಮತ್ತು ಪತ್ರಿಕಾರಂಗದಲ್ಲಿ ತಮ್ಮನ್ನು ಮತ್ತಷ್ಟು ತೊಡಗಿಸಿಕೊಂಡು ಬೆಳೆಯಲಿ. ಇವರ ಸಾಹಿತ್ಯ ಸೇವೆ ಈಗೇ ಸಾಗುತಿರಲಿ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ತಮ್ಮ ವೃತಿಯ ಜೊತೆಗೆ ಪ್ರವೃತ್ತಿಯಾದ ಕನ್ನಡದ ಬರವಣಿಗೆಯನ್ನು ಮತ್ತಷ್ಟು ವೃದ್ಧಿಸಿಕೊಂಡು ಮತ್ತಷ್ಟು ಕೃತಿಗಳನ್ನು ಹೊರತಂದು ಕನ್ನಡಮ್ಮ ಸೇವೆಯನ್ನು ಮಾಡಲಿ. ಮುಂಬರುವ ಸಾಹಿತ್ಯದ ಬರಹಗಳು, ಮಹಿಳೆಯರ ಬದುಕಿನ ತಲ್ಲಣಗಳಾಗಲಿ. ಇನ್ನಷ್ಟು ಗೌರವ ಪುರಸ್ಕಾರಗಳಿಗೆ ಭಾಜನರಾಗಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ.
- ನಾರಾಯಣಸ್ವಾಮಿ – ವಕೀಲರು ಮತ್ತು ಲೇಖಕರು, ಮಾಸ್ತಿ. ಮಾಲೂರು ತಾಲ್ಲೂಕು
