‘ಜ್ಞಾನದ ಬಾವಿಯನು ನಿತ್ಯವು ನೀ ತೋಡುತಿರು ಹೊಸನೀರಿನ ಶುಚಿಯಂತೆ ನಿನ್ನಲಿ ತುಂಬುತಿರು’…ಸವಿತಾ ಮುದ್ಗಲ್ ಅವರ ರಚನೆಯ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಜೀವನ ಎಂಬುದು
ವರವಿದು ನಮಗೆ
ತಿಳಿದು ನಡೆಯುವ
ಮನವು ಬೇಕಾಗಿದೆ
ಅರಿತು ಬಾಳು,
ಸ್ವರ್ಗವು ಈ ಧರೆಯಲ್ಲಿದೆ
ಮನದ ಕಲ್ಮಶದಿ
ಇದುವೇ ನರಕವಾಗಲಿದೆ ||
ಎಲ್ಲರೂ ಶೂನ್ಯ
ಈ ಪ್ರಪಂಚದಲ್ಲಿ ಅರಿತರೆ
ಧರೆಗೆ ಮರೆಯಾಗುವರು
ನಿನ್ನ ಉಸಿರೋದರೆ
ಇಲ್ಲಿ ಮರೆಯಲಾಗದ
ಮಾಣಿಕ್ಯನಂತೆ ನೀನಾದರೆ
ಮರೆಯದೆ ಪ್ರತಿಷ್ಠಾಪಿಸಿ
ನಿತ್ಯವು ಪೂಜಿಸುವರೆ ||
ಜ್ಞಾನದ ಬಾವಿಯನು
ನಿತ್ಯವು ನೀ ತೋಡುತಿರು
ಹೊಸನೀರಿನ ಶುಚಿಯಂತೆ
ನಿನ್ನಲಿ ತುಂಬುತಿರು
ದಾಹಕೆ ಎಂದಿಗೂ
ಒರತೆಯಂತೆ ಕೊರೆಯುತಿರು
ವಿದ್ಯೆಯನು ಎಲ್ಲರಿಗೂ
ನೀಡಲು ಮರೆಯದಿರು ||
ಬಹುದಿನದ ದಾರಿಯನ್ನು
ನಡೆಸಿ ಮುಂದೋಗಬೇಕು
ನೆನೆಪುಗಳ ಬುಟ್ಟಿಯನ್ನು
ಹೊತ್ತು ಸಾಗಲೇಬೇಕು
ಕಹಿಸಿಹಿಗಳ ಸ್ವಾರಸ್ಯಕೆ
ಮಿಡಿಯುವ ಮನಸಾಗಬೇಕು
ಎಂದಿಗೂ ಕುಂದದ
ಸರಳ ವ್ಯಕ್ತಿತ್ವವೆ ನಮ್ಮದಾಗಬೇಕು ||
- ಸವಿತಾ ಮುದ್ಗಲ್ – ಬಳ್ಳಾರಿ
