ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರವನ್ನು ಭಾರತ ಸರ್ಕಾರವು ಇವರಿರುವಲ್ಲಿ ಹೋಗಿ ಕೊಡ ಮಾಡುವೆ ಎಂದರೂ ‘ನನಗ್ಯಾಕೆ ಬೇಕು ನಾನೊಬ್ಬ ಸನ್ಯಾಸಿ’ ಎಂದು ನಯವಾಗಿ ತಿರಸ್ಕರಿಸಿದ ಯೋಗಿ ಇವರು. ಕರ್ನಾಟಕ ವಿಶ್ವವಿದ್ಯಾಲಯವು ಕೊಡ ಮಾಡಿದ ಗೌರವ ಡಾಕ್ಟರೇಟ್ ಅನ್ನು ಅಪ್ಪಿಕೊಳ್ಳದ ಅಪ್ರತಿಮ ಸಂತರಿವರು.ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…
- ಮಗು ಅಮ್ಮನನ್ನು ಅಮ್ಮಾ ಎಂದು ಕರೆಯುವಾಗ ಇರುವ ಒಲವು,
- ತಾಯಿ ಮಗುವನ್ನು ಮಮತೆಯಲಿ ಮುದ್ದಿಸುವಾಗ ಇರುವ ವಾತ್ಸಲ್ಯ,
- ತಂದೆ ಮಗನಿಗೆ ಜೀವನದ ಬಗ್ಗೆ ಅರುಹುವಾಗ ಇರುವ ಜವಾಬ್ದಾರಿ,
- ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ನಿಷ್ಕಲ್ಮಶವಾಗಿ ತೋರುವ ಅಕ್ಕರೆ,
- ಗುರುವು ತನ್ನ ಶಿಷ್ಯನಿಗೆ ಧಾರೆ ಎರೆಯುವ ಅಗಾಧ ಅರಿವಿನ ಜ್ಞಾನ
- ಸ್ನೇಹಿತ ತನ್ನ ಆತ್ಮೀಯ ಸ್ನೇಹಿತನಿಗೆ ಸಂತೈಸುವಾಗ ಇರುವ ಸಾಂತ್ವನ
- ಒಬ್ಬ ಋಷಿ ದೇವರನ್ನು ಕಾಣಲು ಮಾಡುವ ಏಕಾಗ್ರ ಚಿತ್ತ, ಶಾಂತ-ಮನಸ್ಸಿನ ತಪಸ್ಸು

ಫೋಟೋ ಕೃಪೆ : ಗೂಗಲ್
ಈ ಮೇಲಿನ ಎಲ್ಲಾ ಸಂಬಂಧಗಳ ಒಲವು, ವಾತ್ಸಲ್ಯ, ಜವಾಬ್ದಾರಿ, ಅಕ್ಕರೆ, ಜ್ಞಾನ, ಸಾಂತ್ವನ, ಶಾಂತ ಮನಸ್ಥಿತಿ ಈ ಎಲ್ಲ ಗುಣಗಳನ್ನು ಸಮೀಕರಿಸಿ, ಸಮ್ಮಿಳಿಸಿ ನೋಡಿದಾಗ ಜ್ಞಾನಯೋಗಿ ಶ್ರೀಶ್ರೀಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸ್ಪಷ್ಟವಾಗಿ ಕಾಣುತ್ತಾರೆ.
- ಜ್ಞಾನ ಯೋಗಾಶ್ರಮದ ಜ್ಞಾನಯೋಗಿ, ಜೇಬಿಲ್ಲದ ಅಂಗಿಯ ರಾಷ್ಟ್ರಸಂತ, ನಡೆದಾಡುವ ದೇವರು, ಎರಡನೇ ವಿವೇಕಾನಂದ, ಸರಳತೆಯ ಸಾಕಾರ ಮೂರ್ತಿ ಶ್ರೀಶ್ರೀಶ್ರೀ ಸಿದ್ದೇಶ್ವರ ಸ್ವಾಮಿಗಳು ದೈಹಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳಾಯಿತು. ದ್ವಿತೀಯ ಪುಣ್ಯ ಸ್ಮರಣೆಯ ಈ ದಿನ ಮಾತ್ರ ಅವರನ್ನು ನೆನೆಯುವುದಂತಲ್ಲ. ಪ್ರತಿಕ್ಷಣವೂ ನೆನೆಯಲೇಬೇಕಾದ ಚೇತನ ಮೂರ್ತಿಯದು.
- ಜೀವನದ ಜಂಜಾಟ ಸಂಸಾರದ ಹೋರಾಟ ಇವುಗಳಿಂದ ಬೇರ್ಪಡಿಸಿಕೊಂಡು ಬದುಕುವುದು ಮಾನವನಿಂದ ಸಾಧ್ಯವಿಲ್ಲ. ಆದರೆ ನೀರ ಮೇಲೆ ತೇಲುವ ಎಣ್ಣೆ, ನೀರ ಜೊತೆ ಸಾಗಿದರು ನೀರಿನೊಂದಿಗೆ ಎಂದೆಂದೂ ಅಂಟಿಕೊಳ್ಳದು. ಹೀಗೆ ಜೊತೆ ಇದ್ದು ಅಂಟಿಕೊಳ್ಳದೆ ಸಾಗಿ ಬರಬಹುದೆಂದು ಸಾಕ್ಷಿಯಾಗಿ ನಿಂತವರು ಶ್ರೀಶ್ರೀಶ್ರೀ ಸಿದ್ದೇಶ್ವರ ಸ್ವಾಮಿಗಳು.
- ಜೇಬಿದ್ದರೆ ಆಸೆ ಹುಟ್ಟುತ್ತದೆ ಜೇಬೇ ಇಲ್ಲದಿದ್ದರೆ ಆಸೆಯ ಮೋಹವಿರದು ಎಂದು ಬದುಕಿನುದ್ದಕ್ಕೂ ಜೇಬಿಲ್ಲದ ಅಂಗಿಯನ್ನು ತೊಟ್ಟು ‘ಅಂಗಿಯ ಹಂಗಿನಿಂದ ಹೊರ ನಡೆದವರು’ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು.
- ಏನನ್ನಾದರೂ ಯಾರಿಂದಲೋ ಬೇಡಿ ಪಡೆದರೆ ಕೊಟ್ಟವರ ಹಂಗಲ್ಲಿ ಬೀಳುತ್ತೇವೆ. ಹೀಗಾಗಿಯೇ ಇವರು ಯಾರಿಗೂ ಬೇಡಲೂ ಇಲ್ಲ ಯಾರ ಹಂಗಲ್ಲೂ ಉಳಿಯಲಿಲ್ಲ. ಯಾರಾದರೂ ಇವರು ಇರುವಲ್ಲಿಗೆ ಹೋಗಿ ಕೊಡಲು ಬಯಸಿದರೂ, ಸ್ವೀಕರಿಸದೆ ಅರಿಷಡ್ವರ್ಗಗಳ ಗೆದ್ದ ಸಂತರಿವರು.
- ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರವನ್ನು ಭಾರತ ಸರ್ಕಾರವು ಇವರಿರುವಲ್ಲಿ ಹೋಗಿ ಕೊಡ ಮಾಡುವೆ ಎಂದರೂ ‘ನನಗ್ಯಾಕೆ ಬೇಕು ನಾನೊಬ್ಬ ಸನ್ಯಾಸಿ’ ಎಂದು ನಯವಾಗಿ ತಿರಸ್ಕರಿಸಿದ ಯೋಗಿ ಇವರು. ಕರ್ನಾಟಕ ವಿಶ್ವವಿದ್ಯಾಲಯವು ಕೊಡ ಮಾಡಿದ ಗೌರವ ಡಾಕ್ಟರೇಟ್ ಅನ್ನು ಅಪ್ಪಿಕೊಳ್ಳದ ಅಪ್ರತಿಮ ಸಂತರಿವರು.
- ಮಾತುಗಳಲ್ಲಿ ನವರಸಗಳಿದ್ದರೆ ಮಾತ್ರ ಜನರನ್ನು ಆಕರ್ಷಿಸಬಹುದೆಂಬ ಸಾಮಾಜಿಕ ಸಾಮಾನ್ಯ ನಂಬಿಕೆಯನ್ನು ತಪ್ಪೆಂದು ರುಜುವಾತು ಮಾಡಿ ಸರಳತೆಯ ಧ್ಯಾನದ ಶಾಂತ ಮನಸ್ಸಿನ ಅಂತರಾಳದ ಮಾತುಗಳಿಂದ ಜನರ ಹೃದಯವನ್ನು ಗೆದ್ದು ಅಸಂಖ್ಯಾತ ಜನ ಸಮೂಹವನ್ನು ಹಿಡಿದಿಡಬಹುದೆಂದು ತಿಳಿಸಿಕೊಟ್ಟ ಆಧ್ಯಾತ್ಮ ಗುರು ಇವರು. ವಿದೇಶದ, ದೇಶದ, ರಾಜ್ಯದ ಯಾವುದೇ ಮೂಲೆಯಲ್ಲಿ ಇವರು ಹೆಜ್ಜೆ ಇಟ್ಟರೂ ಸಕ್ಕರೆಗೆ ಇರುವೆಗಳು ಮುತ್ತುವಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಇವರ ಜ್ಞಾನದ ನುಡಿಗಳನ್ನು ಆಲಿಸಲು ಸೇರುತ್ತಿದ್ದುದು ಜಗತ್ತೇ ನೋಡಿದೆ.
- ಮನಸ್ಸಿನ ಭಾರ ಎಂತಹುದೇ ಇರಲಿ ಇವರ ಮಾತುಗಳನ್ನು ಆಲಿಸಿದರೆ ಸಾಕು ಹಗುರವಾಗಿ ಬಿಡುತ್ತೇವೆ. ಅಂತಃಸಂವಹನದ, ಆತ್ಮ ವಿಮರ್ಶೆಯ ಮಾತುಗಳು ಇವರದ್ದು. ಬಹಿರಂಗದಿಂದ ಪಡೆದ ಅನುಭವ ಹಾಗೂ ಅನುಭಾವವನ್ನು ಅಂತರಂಗದ ಅರಿವಿಗೆ ಹೋಲಿಸಿ ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗುವ ಮಾರ್ಗವನ್ನು ಸೂಚಿಸುವ ನುಡಿಮುತ್ತುಗಳು ಇವರದ್ದು. ಇವರು ನುಡಿದರೆ ಮುತ್ತಿನ ಹಾರದಂತೆ, ಇವರು ನುಡಿದರೆ ಸ್ಪಟಿಕದ ಸಲಾಕೆಯೇ ಸರಿ.
- ಅದೆಷ್ಟೋ ಸಲ ನನಗನಿಸಿದ್ದು, ಪ್ರಪಂಚದ ಕುಖ್ಯಾತ ಭಯೋತ್ಪಾದಕರನ್ನು, ಕೊಲೆಗಡುಕರನ್ನು, ಹೃದಯ ಹೀನರನ್ನು ಒಂದು ವಾರ ಇವರ ಮಾತುಗಳ ಪ್ರಭೇಯಲ್ಲಿ ಇರಿಸಿದ್ದೇ ಆದಲ್ಲಿ ಗೌತಮನ ಹಿಂದೆ ಹಿಂಬಾಲಿಸಿದ ಅಂಗುಲಿಮಾಲನಂತೆ ಹಿಂಸೆಯ ತ್ಯಜಿಸಿ ಅಹಿಂಸೆಯ ಬೆನ್ನು ಹತ್ತಿ ಇವರೆಲ್ಲ ಪರಿವರ್ತನೆಯಾಗುವುದರಲ್ಲಿ ಯಾವ ಸಂಶಯವೇ ಇಲ್ಲ. ಇವರ ಆಧ್ಯಾತ್ಮ ಚಿಂತನೆಯನು ಆಲಿಸುವಂತೆ ಮಾಡಿದರೆ ಭ್ರಷ್ಟಾತಿ ಭ್ರಷ್ಟರು ಕೂಡ ಸರಳತೆಗೆ ಶರಣಾಗುವರು.
- ದೇಹಾಂತವಾದ ನಂತರ ಮಲಗಲು ನನಗಾಗಿ ಮೂರಡಿ ಆರಡಿ ಜಾಗವಾದರೂ ಬೇಕೆಂದು ಸಣ್ಣ ಆಸೆಗೆ ಅಂಟಿಕೊಳ್ಳುವ ನಮಗೆ ತನ್ನ ದೇಹಾಂತದ ನಂತರ ಮೂರಡಿ ಆರಡಿ ಜಾಗವು ಬೇಡ, ಅಗ್ನಿ ಸ್ಪರ್ಶವ ಮಾಡಿ ದೇಹ ಬೂದಿಯಾದ ನಂತರ ವಾಯು, ಜಲ, ಅಗ್ನಿ, ಭೂಮಿ, ಆಕಾಶಗಳೆಂಬ ಪಂಚ ಮಹಾಭೂತಗಳಿಂದ ಮಾಡಲ್ಪಟ್ಟ ಈ ದೇಹ ಪಂಚ ಮಹಾಭೂತಗಳಲ್ಲಿ ಲೀನವಾಗುವಂತೆ ಮಾಡಿಬಿಡಿ ಎಂದು ಜೀವಂತವಾಗಿರುವಾಗಲೇ ತಿಳಿಸಿ, “ಶರಣರಿಗೆ ಮರಣವು ಮಹಾನವಮಿ” ಎನ್ನುವಂತೆ ತಮ್ಮ ನಂತರ ತಮ್ಮ ಸಮಾಧಿಯ ಅಸ್ತಿತ್ವವನ್ನು ಕೂಡ ಅಲ್ಲಗಳೆದ ಮಹಾ ಸಂತರಿವರು.
- ಈ ಜ್ಞಾನ ಯೋಗಿಯ ದ್ವಿತೀಯ ಪುಣ್ಯ ಸ್ಮರಣೆ ಎನ್ನುವುದಕ್ಕಿಂತ ಪ್ರತಿದಿನದ ಸ್ಮರಣೆ ಎಂದರೆ ಸೂಕ್ತವೇನೋ.
- ಸೂರ್ಯ ಉರಿಯುವವರೆಗೆ ಮನ ಮನೆಗಳಲಿ ಇವರು ಹೊತ್ತಿಸಿದ ಜ್ಞಾನದ ಜ್ಯೋತಿ ಬೆಳಗುತ್ತಲಿದೆ, ಬೆಳಗುತ್ತಲೇ ಇರುತ್ತದೆ.
ಜ್ಞಾನ ಯೋಗಿಗೆ ನನ್ನ ಈ ಕೆಳಗಿನ ಸ್ವರಚಿತ ಕವನದ ಮೂಲಕ ನನ್ನ ನುಡಿನಮನ

ಫೋಟೋ ಕೃಪೆ : ಗೂಗಲ್
ನಾ ಅರಿಯಲಿಲ್ಲವೇಕೆ !
ಒಣ ಎಲೆಗಳು ಉದುರಿ
ಹೊಸ ಎಲೆಗಳು ಚಿಗುರಿ
ನಿಲ್ಲುವವವರೆಗೆ ಮರವೇ ನೀ
ಶೋಕವಾಚರಿಸಲಾರೆ ಏಕೆ!
ಮರದ ಈ ಗಟ್ಟಿತನದಂತೆ
ನನ್ನವರ ಸಾವಿನ ನಂತರ
ನನಗೆ ನಾನೇ ಸಾಂತ್ವನವೆಂದು
ನಾ ಉಚ್ಚರಿಸಲಾರೆನೇಕೇ !
ಆಸ್ತಿ ಅಂತಸ್ತಿನ ಆಸೆ, ಅಸ್ತಿಯ
ನಂತರ ಬೇಕೇ! ಮೂರಡಿ-ಆರಡಿ
ಮಲಗಲು ಬೇಕೆಂಬ ಹುಚ್ಚನ್ನು
ನಾ ಹಿಡಿಸಿಕೊಂಡೆನೇಕೇ !
ಮರಣದಿ ನೆಲದ ಹಂಗ್ಯಾಕೆ,
ಈ ‘ಕಾಯ’ವನು ಕಿಚ್ಚಲಿ ಕರಗಿಸಿ
ಭಸ್ಮವ ವಾಯು-ಜಲದಲಿ ಬೆರೆಸೆಂದ
ಸಿದ್ದೇಶ್ವರನ ನಾ ಅರಿಯಲಿಲ್ಲವೇಕೇ !

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ‘ರಾಮರಾಜ್ಯ’ ವೆಂದರೆ…!
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ವಚನಕ್ಕೊಂದು ಕಥೆ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಭಾವನಾ ದ್ರವ್ಯ
- ಜೀವನದಲ್ಲಿ ಯಾರು ತೃಪ್ತರು
- ಕಣ್ಣೊಳಗಿನ ಮೊದಲ ದೃಷ್ಟಿಕೋನ
- ಸೋಲಿಲ್ಲದ ಸರದಾರ
- ನಾನೊಬ್ಬ ಮಾಡದಿರೆ ಏನಾದೀತು!!!
- ‘ತಾಳಿದವನು ಬೆಳೆದಾನು’
- ಮೂರೂವರೆ ನಿಮಿಷದ ಭಾಷಣ-ಎಲ್ಲೆಡೆ ತಲ್ಲಣ
- ಭೂ ತಾಯಿ
- ಅವನಂತಾಗೋಣ
- ಶಕ್ತಿಗೆ ಮಾತ್ರ ದೇಹ ದಾರ್ಡ್ಯತೆ, ಯುಕ್ತಿಗಲ್ಲ..
- ಒಳ್ಳೆಯದು ಒಳ್ಳೆಯವರನ್ನು ಸೆಳೆಯುತ್ತೆ
- ಊರಿಗೆ ಬಾ ಎಂದ ಗೆಳೆಯನ ಮೃತದೇಹ ಹೊತ್ತು ಹೋದೆ
- ವಿಚಾರ ಬದಲಾಗಲಿ… ಬದುಕೇ ಬದಲಾಗುತ್ತೆ
- ಭಾಗ್.. ಮಿಲ್ಖಾ ಭಾಗ್ (ಓಡು.. ಮಿಲ್ಖಾ ಓಡು)
- “ಜವಾಬ್ದಾರಿ” (ನೈಜ ಘಟನೆ)
- ಆದದ್ದೆಲ್ಲ ಒಳಿತೇ ಆಯಿತು
- ಹನುಮನಿಗೂ ಆತ್ಮಹತ್ಯೆಯ ಆಲೋಚನೆ
- ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ
- ಆ ನಗರವನ್ನು ಕಾಪಾಡಿದ ಆ ಹನಿಮೂನ್
- ಡಾ. ರಾಜಶೇಖರ ನಾಗೂರ
