‘ಉಜ್ಜಯನಿ’ ಪ್ರವಾಸ ಕಥನ (ಭಾಗ-೩)

ಉಜ್ಜಯನಿಯಿಂದ ಮುಂದೆ ಓಂಕಾರೇಶ್ವರ ಹೋಗುವ ದಾರಿಯ ಅನುಭವ ಹೇಗಿತ್ತು ನೂತನ ದೋಶೆಟ್ಟಿ ಅವರ ಪ್ರವಾಸ ಕಥನವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಮಹಾಕಾಲ ದೇವಾಲಯದಿಂದ ಬರುವಾಗ ಮಾರ್ಗದಲ್ಲಿದ್ದ ಪುಟ್ಟ ಹೊಟೆಲ್ಲಿನಲ್ಲಿ ಬಿಸಿ ಬಿಸಿ ಟೀ ಕುಡಿದು ರೂಮು ಸೇರುವಾಗ ಗಂಟೆ ಬೆಳಗಿನ 7 ಸಮೀಪಿಸುತ್ತಿತ್ತು. ಉಜ್ಜಯನಿಯಿಂದ ಮುಂದೆ ಓಂಕಾರೇಶ್ವರಕ್ಕೆ ಹೋಗುವುದು ನಿರ್ಧಾರಿತವಾದ್ದರಿಂದ ಮುಂದಿನ ಅರ್ಧ ಗಂಟೆಯಲ್ಲಿ ಸಿದ್ಧವಾಗಿ ಬಂದು ಹೊರಟೆ. ಈ ಮಾರ್ಗದಲ್ಲಿ ಟ್ರ್ಯಾಫಿಕ್ ಜಾಮ್ ಆಗುವುದು ಹೆಚ್ಚು ಹಾಗೂ ರಸ್ತೆಯೂ ಅಷ್ಟು ಚೆನ್ನಾಗಿಲ್ಲ. ಹಾಗಾಗಿ 144 ಕೀ ಮೀ. ಹಾದಿ 5-6 ತಾಸು ಕೂಡಾ ಆಗಬಹುದು. ಅಲ್ಲಿಂದ ಹೊರಟಿದ್ದು ಒಳ್ಳೆಯ ವಾಹನವಾದರು ದುಡ್ಡಿನಾಸೆಗೆ ಹೆಚ್ಚು ಜನರನ್ನು ತುಂಬುವದರಿಂದ ಪ್ರಯಾಣ ಸುಖಕರವಾಗುವುದಿಲ್ಲ. ಎರಡು ದಿನಗಳಿಂದ ಸರಿಯಾಗಿ ನಿದ್ದೆ ಮಾಡಿರದ ನಾನು ಈ ಐದು ತಾಸುಗಳ ಪ್ರಯಾಣದಲ್ಲಿ ಕಣ್ತುಂಬ ನಿದ್ದೆ ಮಾಡುವ ಕನಸು ಕೈಗೂಡಲಿಲ್ಲ. ನಾಸಿಕ್ ದಿಂದ ಬಂದಿದ್ದ ಕಿರಿಯ ವಯಸ್ಸಿನ ಸ್ನೇಹಿತರಿಂದಾಗಿ ದಾರಿ ತಕ್ಕ ಮಟ್ಟಿಗೆ ಹಗುರಾಯಿತು.

ಮಧ್ಯಾನ್ಹದ ಸುಡು ಬಿಸಿಲಲ್ಲಿ ಓಂಕಾರೇಶ್ವರದ ನನ್ನ ಕಾಯ್ದಿರಿಸಿದ್ದ ವಾಸದ ಹೋಟೆಲ್ಲಿನ ಎದುರು ವಾಹನ ನಿಂತಾಗ ನಿಜಕ್ಕೂ ಸಮಾಧಾನ. ಸಂಜೆ 6 ರವರೆಗೆ ಸಕತ್ತಾಗಿ ನಿದ್ದೆ ಮಾಡಿ ಹೊರಟಿದ್ದು ಮಮಲೇಶ್ವರಕ್ಕೆ. ಅಲ್ಲಿಂದ ಕೇವಲ ಅರ್ಧ ಕಿ. ಮೀ ದೂರದಲ್ಲಿದ್ದರೂ ರಸ್ತೆ ಅಷ್ಟು ಸ್ವಚ್ಚವಾಗಿರದ ಕಾರಣ ಆಟೋದಲ್ಲಿ ಹೋದೆ. ಅದು ಬಹಳ ಹಳೆಯ ದೇವಾಲಯ. 10 ನೆಯ ಶತಮಾನದಲ್ಲಿ ನಿರ್ಮಿತವಾದದ್ದೆಂದು ಹೇಳಲಾಗುತ್ತದೆ. ಇದನ್ನು ಆದಿ ಶಂಕರರು ಸ್ಥಾಪಿಸಿದ್ದರು. ಓಂಕಾರೇಶ್ವರ ದೇವಾಲಯ ನರ್ಮದಾ ನದಿಯ ತೀರದಲ್ಲಿರುವುದರಿಂದ ಮಳೆಗಾಲದಲ್ಲಿ ಅಲ್ಲಿಗೆ ಹೋಗಲು ಸಾಧ್ಯವಾಗದೆ ನಾಲ್ಕೈದು ತಿಂಗಳುಗಳ ಕಾಲ ಓಂಕಾರೇಶ್ವರನಿಗೆ ಪೂಜೆ ಸಲ್ಲಿಸಲು ಆಗುತ್ತಿರಲಿಲ್ಲವಾದ್ದರಿಂದ ಶ್ರೀ ಶಂಕರರು ನದಿಯ ಇನ್ನೊಂದು ದಡದಲ್ಲಿ ಮಮಲೇಶ್ವರನನ್ನು ಪೂಜೆಗಾಗಿ ಸ್ಥಾಪಿಸಿದ್ದರು. ಈ ದೇವಾಲಯದ ಕೆತ್ತನೆ ಬಹಳ ಸುಂದರವಾಗಿದೆ. ಅದರ ಪ್ರಾಕಾರದಲ್ಲಿ ಅನೇಕ ಚಿಕ್ಕ ಚಿಕ್ಕ ಗುಡಿಗಳಿವೆ. ಅವ್ಯಾವುದಕ್ಕೂ ಮಹತ್ವವಿಲ್ಲ. ಮಾತ್ರವಲ್ಲ ಅವುಗಳನ್ನು ನೋಡಲೂ ಜನ ಹೋಗುವುದಿಲ್ಲ. ಮಮಲೇಶ್ವರನ ದರ್ಶನದ ಕ್ಯೂನಿಂದ ಹೊರಬಂದು ಕತ್ತಲಲ್ಲಿ ಕರಗಿ ಬಿಡುತ್ತಾರೆ.

ಈಗ ಎಲ್ಲ ದೇವಾಲಯಗಳು ಇತಿಹಾಸವನ್ನು ಮರೆತು ಕೂತಿವೆ. ಅಲ್ಲಿ ನಡೆಯುವುದು ಪೂಜೆ ಮಾತ್ರ. ಅಲ್ಲಿಂದಲೇ ತೂಗು ಸೇತುವೆಯನ್ನು ದಾಟಿ ನದಿಯ ಇನ್ನೊಂದು ದಡದಲ್ಲಿರುವ ಓಂಕಾರೇಶ್ವರ ದೇವಾಲಯದತ್ತ ಹೊರಟೆ. ನದಿಯು ಓಂ ಆಕಾರವನ್ನು ನಿರ್ಮಿಸಿ ಹರಿಯುವುದರಿಂದ ಇದಕ್ಕೆ ಆ ಹೆಸರು ಬಂದಿದೆ ಎನ್ನಲಾಗುತ್ತಿದೆ. ಈ ಪ್ರದೇಶದ ಹೆಸರು ಮಾಂಧಾತಾ ಆಗಿರುವುದರಿಂದ ದೇವಾಲಯ ಇರುವ ಬೆಟ್ಟ, ಸುತ್ತಲಿನ ಪ್ರದೇಶಕ್ಕೆ ಮಾಂಧಾತಾ ಪರ್ವತ ಎಂತಲೂ ಕರೆಯಲಾಗುತ್ತದೆ.

ಅದಾಗಲೇ ಸರದಿ ಉದ್ದವಾಗಿತ್ತು. ಸುಮಾರು ಒಂದೂವರೆ ಗಂಟೆಯಲ್ಲಿ ದೇವರ ದರ್ಶನವಾಯಿತು. ಇಲ್ಲಿಯೂ ಕೂಡ ದೇವಾಲಯದ ಕೆತ್ತನೆಯಾಗಲೀ, ಅಲ್ಲಿರುವ ಇತರ ಗುಡಿಗಗಳ ಬಗೆಗಾಗಲೀ ಯಾವ ಮಾಹಿತಿಯೂ ಸಿಗುವುದಿಲ್ಲ. ಅವುಗಳನ್ನು ನಿಂತು ನೋಡಲೂ ಆಗುವುದಿಲ್ಲ. ಐದು ಮಹಡಿಗಳನ್ನು ಹೊಂದಿರುವ ಇಲ್ಲಿ ಮೆಟ್ಟಿಲುಗಳನ್ನು ಏರುತ್ತಾ ಸರದಿಯಲ್ಲಿ ಸಾಗಬೇಕು. ಗರ್ಭಗೃಹದ ಹೊರಗಿನ ಭಾಗ 14 ಅಡಿ ಎತ್ತರವಿದ್ದು ದೇವಾಲಯ 60 ಕಂಬಗಳನ್ನು ಹೊಂದಿದೆ. ಎಲ್ಲ ಕಂಬಗಳು ವಿಶೇಷ ಕೆತ್ತನೆಯನ್ನು ಹೊಂದಿವೆ. ಮೇಲ್ಛಾವಣಿಯ ಕೆತ್ತನೆಯೂ ಬಹಳ ಸುಂದರವಾಗಿದೆ. ಅವುಗಳತ್ತ ಯಾರ ಗಮನವೂ ಹೋಗುವುದಿಲ್ಲ. ಅಷ್ಟು ಗೌಜಿ, ಗದ್ದಲ. ಗರ್ಭಗೃಹದಲ್ಲಿ ಕೇದಾರನಾಥದ ಲಿಂಗವನ್ನು ಹೋಲುವ ತ್ರಿಕೋನಾಕಾರದ ಲಿಂಗವಿದೆ. ಅದರ ಸುತ್ತ ಗಾಜಿನ ಆವಾರವಿದ್ದರು ಜನ ಮೇಲಿನಿಂದ ನೀರನ್ನು ಹಾಕಿ ಅಭಿಷೇಕ ಮಾಡಲು ಪ್ರಯತ್ನಿಸುತ್ತಾರೆ. ಗರ್ಭಗೃಹದ ಬಹಳ ಕಿರಿದಾಗಿದೆ. ಹೊರಬಂದು ಅಲ್ಲಿಂದ ಇನ್ನೊಂದು ಪಕ್ಕದ ತೂಗು ಸೇತುವೆಯ ಮೇಲೆ ನಡೆದು ಅದು ಅದುರುವಾಗ ಹೆದರುತ್ತ ಕತ್ತಲಲ್ಲಿ ನದಿಯ ದಂಡೆಯ ಮೇಲೆ ವಿಶೇಷವಾಗಿ ಕಾಣುವ ದೇವಾಲಯವನ್ನು ನೋಡುತ್ತ ಹೋಟೆಲಿಗೆ ಹಿಂದಿರುಗಿದೆ.

ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಮಾರನೇ ದಿನ ನಸುಕಿನ ಆರಕ್ಕೆ ಮತ್ತೆ ಓಂಕಾರೇಶ್ವರ ದೇವಾಲಯದಲ್ಲಿದ್ದೆ. ಈಗ ಹಿಂದಿನ ರಾತ್ರಿ ನಡೆದು ಹೋದ ಸೇತುವೆಯ ದಾರಿಯಿಂದ ಬಂದು ಜನರಿರದ ಕಾರಣ ಕೇವಲ ಅರ್ಧ ಗಂಟೆಯಲ್ಲಿ ದರ್ಶನ ಮಾಡಿಕೊಂಡು 6.45 ಕ್ಕೆಲ್ಲ ಬೆಟ್ಟದ ಮೇಲಿರುವ ಶಂಕರಾಚಾರ್ಯರ ಮೂರ್ತಿಯನ್ನು ನೋಡಲು ಹೊರಟೆ. ದಾರಿಯಲ್ಲಿ ನರ್ಮದಾ ನದಿ ಹರಿಯುತ್ತಿದ್ದು ಅದಕ್ಕೆ ಬೆಳಗ್ಗೆ ಆಣೆಕಟ್ಟಿನಿಂದ ನೀರು ಹರಿಸುವುದರಿಂದ ನೀರ ಹರಿವು ಜೋರಾಗಿದ್ದು ಮಾರ್ಗವನ್ನು ಬಂದ್ ಮಾಡಲಾಗಿತ್ತು. ಅದನ್ನು ನೋಡಲು 11 ಗಂಟೆಯವರೆಗೂ ಕಾಯಬೇಕಿತ್ತು. ಅಷ್ಟು ಸಮಯವಿರದ ಕಾರಣ ಅಲ್ಲಿಗೆ ಸಮೀಪದಲ್ಲಿ ಮಾರ್ಕಾಂಡೇಯ ಮಹರ್ಷಿಗಳ ವಾಸದ ಗುಹೆ, ನದಿಯಲ್ಲಿ ಧ್ಯಾನಕ್ಕೆ ಕುಳಿತ ಬಂಡೆ, ನರ್ಮದಾ ನದಿಯ ಸ್ನಾನ ಘಟ್ಟ ಇತ್ಯಾದಿಗಳನ್ನು ನೋಡಿ ಅಲ್ಲಿಂದ ನೇರವಾಗಿ ಹೊರಟಿದ್ದು ಮಹೇಶ್ವರಕ್ಕೆ. ಇಲ್ಲಿ ನಮ್ಮ ಕರುನಾಡ ಕಾವೇರಿ ನರ್ಮದೆಯಲ್ಲಿ ಸಂಗಮವಾಗುವ ಜಾಗ ಶಂಕರಾಚಾರ್ಯರ ಮೂರ್ತಿಯಿರುವ ಜಾಗದಿಂದ ಕಾಣುವುದರಿಂದ ಅಲ್ಲಿಗೆ ಹೋಗಲಾಗದೆ ಕಾವೇರಿಯನ್ನು ಇಲ್ಲಿ ನರ್ಮದೆಯೊಟ್ಟಿಗೆ ಕಣ್ತುಂಬಿಕೊಳ್ಳುವ ಭಾಗ್ಯ ತಪ್ಪಿತು.

ಹಿಂದಿನ ಸಂಚಿಕೆ : 


  • ನೂತನ ದೋಶೆಟ್ಟಿ – ಆಕಾಶವಾಣಿ ಸಹಾಯಕ ನಿರ್ದೇಶಕರು, ಲೇಖಕಿ, ನಿರೂಪಕಿ, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading