‘ಉಜ್ಜಯನಿ’ ಪ್ರವಾಸ ಕಥನ (ಭಾಗ-೨)

ನೂತನ ದೋಶೆಟ್ಟಿ ಅವರು ಭಸ್ಮಾರತಿ ದರ್ಶನಕ್ಕೆ ಹೋದಾಗ ಮೊದಲು ಹೆಣ್ಣುಮಕ್ಕಳೆಲ್ಲ ಕಣ್ಣು ಮುಚ್ಚಿಕೊಳ್ಳಲು ಹೇಳುತ್ತಾರೆ. ಇದರ ಬಗ್ಗೆ ನೂತನ ಅವರು ಕಂಡದ್ದು ಎರಡು ಕಾರಣಗಳು. ಒಂದು ಶಿವ ತನ್ನ ದೇಹಕ್ಕೆಲ್ಲ ಭಸ್ಮವನ್ನು ಬಳಿದುಕೊಳ್ಳುವಾಗ ಅದನ್ನು ಹೆಣ್ಣುಗಳು ನೋಡದಿರಲಿ ಎಂಬ ಅವನ ಇಚ್ಛೆ ಇರಬಹುದು. ಇನ್ನೊಂದು, ಭಸ್ಮವನ್ನು ಸ್ಮಶಾನದಿಂದ ತಂದು ಆರತಿ ಮಾಡುವುದರಿಂದ ಹಾಗೆ ಕಣ್ಣುಮುಚ್ಚಲು ಹೇಳತ್ತಾರೆ, ನೂತನ ದೋಶೆಟ್ಟಿ ಅವರ ಪ್ರವಾಸ ಕಥನದ ಅನುಭವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ.

ಬೆಳಗಿನ ಭಸ್ಮಾರತಿಗೆ ಟೋಕನ್ ತೆಗೆದುಕೊಳ್ಳುವಾಗ ಅಲ್ಲಿದ್ದ ಮಹಿಳೆ, ” ರಾತ್ರಿ 12.30-1 ರ ಹೊತ್ತಿಗೆ ಕ್ಯೂನಲ್ಲಿ ಸೇರಿರಿ” ಎಂದಳು. ರೂಮಿಗೆ ಬಂದಾಗಲೇ 11.30. ಆಗ ಮಲಗಿದರೆ ನಿದ್ದೆ ಹತ್ತಿ ಆರತಿ ಮಿಸ್ ಆದರೆ ಎಂದು ಹೆದರಿ ಸ್ನಾನ ಮಾಡಿ, ತಯಾರಾಗಿ ರಾತ್ರಿ 1 ಗಂಟೆಗೆ ಹೊರಟೆ. ಈ ಊರಲ್ಲಿ ರಾತ್ರಿ – ಹಗಲಿನ ವ್ಯತ್ಯಾಸವೇ ಇರದಷ್ಟು ಜನಜಂಗುಳಿ. ಅದಾಗಲೇ ದೇವಾಲಯದ ಹಾದಿ ಹಿಡಿದು ಲಗುಬಗೆಯಿಂದ ಜನ ಓಡುತ್ತಿದ್ದರು. ಕಾವಲು ಪೊಲೀಸನಿಗೆ ಚೀಟಿ ತೋರಿಸಿ ಅವನು ತೋರಿಸಿದ ದಾರಿಯಲ್ಲಿ ಕೊಂಚ ದೂರ ನಡೆದು ಹೋದರೆ ಅಲ್ಲಾಗಲೇ 20-30 ಮಂದಿ ಕ್ಯೂನಲ್ಲಿ ನಿಂತಿದ್ದರು!

ಸೆಕ್ಯೂರಿಟಿ ಚೆಕಿಂಗ್ ನಲ್ಲಿ ಮುಂಗೈಗೊಂದು ಬ್ಯಾಂಡ್ ಕಟ್ಟಿ ಒಳ ಕಳಿಸಿದಾಗ ಆಗಲೇ ಬೆಳಗಿನ ಎರಡು ಗಂಟೆ. ಇನ್ನು ಎರಡು ತಾಸು ಒಳಾಂಗಣದ ಸರದಿಯಲ್ಲಿ ಕಾಯಬೇಕು. ಪುಣ್ಯವಶಾತ್ ಎಲ್ಲರನ್ನೂ ಕೂರಿಸುವುದರಿಂದ ಕುಳಿತು ಆರಾಮ್ ಮಾಡಲು ಅನುಕೂಲವಾಯಿತು. ಬಹುತೇಕರು ತೂಕಡಿಸುತ್ತಿದ್ದರು.

ಬೆಳಗಿನ ನಾಲ್ಕು ಗಂಟೆಗೆ ಗರ್ಭಗೃಹದ ಎದುರಿನ ಜಾಗಕ್ಕೆ ಹೋಗಲು ಗೇಟ್ ತೆರೆಯಲಾಯಿತು. ಅಲ್ಲಿ ಗರ್ಭಗೃಹಕ್ಕೆ ತೀರಾ ಹತ್ತಿರವಾಗಿ ನಂದಿ ಮಂಟಪ, ಅದಕ್ಕಿಂತ ಕೊಂಚ ದೂರ ಹಾಗೂ ಕೊಂಚ ಎತ್ತರದ ಗ್ಯಾಲರಿ ಕಾರ್ತಿಕೇಯ, ಅದಕ್ಕಿಂತ ಕೊಂಚ ಎತ್ತರದ ಗ್ಯಾಲರಿ ಗಣೇಶ ಗ್ಯಾಲರಿಗಳಿವೆ. ಎಲ್ಲರಿಗೂ ಗರ್ಭಗೃಹದ ಎದುರಿನ ಗ್ಯಾಲರಿಯೇ ಬೇಕು ಎಲ್ಲವನ್ನೂ ಸರಿಯಾಗಿ ನೋಡಲು. ಆ ಕಾರಣದಿಂದಾಗಿ ಸಣ್ಣ ಪುಟ್ಟ ಮಾತುಕತೆಗಳು, ಇರುಸು ಮುರುಸು ಅಲ್ಲಲ್ಲಿ ನಡೆಯುತ್ತಿರುತ್ತದೆ. ಈ ಮೋಜನ್ನೆಲ್ಲ ಕಿವಿ, ಕಣ್ಣು ತೆರೆದು ಆನಂದಿಸುತ್ತಿರಬೇಕು. ನಾವು ಒಳಹೋದಾಗ ಪೂಜೆಯ ಸಿದ್ಧತೆಗಳು ನಡೆಯುತ್ತಿದ್ದವು.

ಬೆಳಗಿನ ನಾಲ್ಕು ಗಂಟೆ ದಾಟುವ ಹೊತ್ತಿಗೆ ಎಲ್ಲ ಮೂರು ಗ್ಯಾಲರಿಗಳೂ ತುಂಬಿ ತುಳುಕುತ್ತಿದ್ದವು. ಆಗ ಗರ್ಭಗೃಹದಲ್ಲಿ ಸಂಚಲನ ಆರಂಭವಾಯಿತು. ಅಭಿಷೇಕದ ನಂತರ ಅಲಂಕಾರ ಆರಂಭವಾಯಿತು. ಅದನ್ನು ಮಾಡುವವರು ಲಿಂಗರೂಪಿಯನ್ನು ಶಿವನಾಗಿ ರೂಪಾಂತರಿಸುವ ಸೊಬಗನ್ನು ನೋಡಿಯೇ ಅನುಭವಿಸಬೇಕು. ಆ ಶಿವಲಿಂಗವಾದರೋ ಅವನ ಕೈಯ ಚಮತ್ಕಾರಕ್ಕೆ ತನ್ನನ್ನು ಒಪ್ಪಿಸಿ ಕುಳಿತುಕೊಳ್ಳುತ್ತದೆ. ಅವನು ಅಂದಿನ ಅಲಂಕಾರದಂತೆ ಮೊದಲು ಹಣೆಯಲ್ಲಿ ದಪ್ಪ ಪಟ್ಟಿಯ ವಿಭೂತಿಯನ್ನು ಬರೆದು ಅದನ್ನು ತಿದ್ದಿ ತೀಡಿ ಅಚ್ಚುಕಟ್ಟಾಗಿಸಿದ. ನಂತರ ಹುಬ್ಬುಗಳು, ಮೂಗು, ಕಣ್ಣುಗಳು, ಕಿವಿಗಳು, ತುಟಿ, ಗಲ್ಲ, ಗದ್ದ, ತ್ರಿನೇತ್ರ, ಒಂದೊಂದಕ್ಕೆ ಜೀವ ತುಂಬಿದಂತೆ ಶಿವ ಅವತರಿಸುತ್ತ ಹೋದ. ಒಂದೊಂದು ಭಾಗ ಮುಗಿದಾಗಲೂ ಜನ ಹರ್ಷೋದ್ಗಾರ ಮಾಡಿತು.

ಶಿವ ಪೂರ್ಣವಾಗಿ ಒಡಮೂಡಿದ ಮೇಲೆ ಶಿವಲಿಂಗದ ಸುತ್ತ ಬಿಳಿ ಬಟ್ಟೆಯನ್ನು ಸುತ್ತಲಾಯಿತು. ಅದಾಗಲೇ ಬಟ್ಟೆಯ ಗಂಟಿನಲ್ಲಿ ಭಸ್ಮ ಅಲ್ಲಿ ಬಂದಿತ್ತು. ಭಸ್ಮಾರತಿ ಆರಂಭವಾಗುವ ಮೊದಲು ಹೆಣ್ಣುಮಕ್ಕಳೆಲ್ಲ ಕಣ್ಣು ಮುಚ್ಚಿಕೊಳ್ಳಿ ಎಂದು ಹೇಳಲಾಗುತ್ತದೆ. ಇದಕ್ಕೆ ನನಗೆ ಕಂಡದ್ದು ಎರಡು ಕಾರಣಗಳು. ಒಂದು ಶಿವ ತನ್ನ ದೇಹಕ್ಕೆಲ್ಲ ಭಸ್ಮವನ್ನು ಬಳಿದುಕೊಳ್ಳುವಾಗ ಅದನ್ನು ಹೆಣ್ಣುಗಳು ನೋಡದಿರಲಿ ಎಂಬ ಅವನ ಇಚ್ಛೆ ಇರಬಹುದು. ಇನ್ನೊಂದು, ಭಸ್ಮವನ್ನು ಸ್ಮಶಾನದಿಂದ ತಂದು ಆರತಿ ಮಾಡುವುದರಿಂದ.. ಇರಬಹುದು. (ಯಾರಿಗಾದರೂ ತಿಳಿದಿದ್ದರೆ ದಯಮಾಡಿ ತಿಳಿಸಿ) ಭಸ್ಮಾರತಿ ಮುಗಿದಾಗ ಶಿವಾಲಿಂಗವೆಲ್ಲ ಬೂದಿ ಬಳಿದುಕೊಂಡು ಬೆಳ್ಳಗಾಗಿರುತ್ತದೆ. ಆಗ ಸುತ್ತಿದ್ದ ಬಟ್ಟೆಯನ್ನು ಬಿಚ್ಚಿ ಅಂದಗಾಣಿಸಿ, ಪೀಠದ ಸುತ್ತ ಹರಡಿದ್ದ ಬೂದಿಯನ್ನು ಸ್ವಚ್ಛಗೊಳಿಸಿ ಹೂವಿನ ಅಲಂಕಾರ ಮಾಡಿ ಭೋಗಗಳನ್ನು ಅರ್ಪಿಸಿ, ಆರತಿ ಮಾಡಲಾಗುತ್ತದೆ. ಆಗ ಒಳಗಿನ ವಿದ್ಯುದ್ದೀಪವನ್ನು ಆರಿಸುತ್ತಾರೆ. ಆ ಕತ್ತಲು ಬೆಳಕಿನ ಸಂಗಮದಲ್ಲಿ ಅಲಂಕೃತ ಶಿವನ ಸೊಬಗು ಕಂಡು ಜನ ಉಘೇ ಎನ್ನುತ್ತದೆ. ಆರತಿ ಮುಗಿದರೂ ಜನ ನಿಂತಲ್ಲಿಂದ ಕದಲುವುದಿಲ್ಲ. ಅಲ್ಲಿ ಸೃಷ್ಟಿಯಾದ ಶಕ್ತಿ ಸಂಚಾರ ಹಾಗಿರುತ್ತದೆ. ಕೇದಾರನಾಥದಲ್ಲಿ ಅತ್ಯಂತ ಶಾಂತ ಹಾಗೂ ಪಾವಿತ್ರ್ಯತೆಯ ಅನುಭವವಾಗಿದ್ದ ನನಗೆ ಇಲ್ಲಿ ಶಕ್ತಿಯ ಪ್ರವಹಿಸುವಿಕೆಯ ಅನುಭವವಾಯಿತು. ಮುಂದಿನ ಅರ್ಧ ಗಂಟೆಯ ಕಾಲ ಜನ ಇನ್ನಷ್ಟು ಹತ್ತಿರದಿಂದ ಅವನನ್ನು ನೋಡುವ ಹಂಬಲದಿಂದ ಹತ್ತಿರ ಹತ್ತಿರ ಹೋಗುತ್ತಿರುತ್ತದೆ. ಅದಾಗಲೇ ಬೆಳಗಿನ ಆರು ಗಂಟೆಯಾಗುತ್ತಿರುತ್ತದೆ. ಅದು ದೇವಾಲಯದ ಬಾಗಿಲು ಹಾಕುವ ಸಮಯ. ಹಾಗಾಗಿ ಹೊರಡುವುದು ಅನಿವಾರ್ಯ ಎಂದು ಭಕ್ತಿಭಾವವನ್ನು ತನು ಮನಗಳಲ್ಲಿ ತುಂಬಿಕೊಂಡು ಅವರ್ಣನೀಯ ಸಂತೃಪ್ತಿಯಿಂದ ಜನ ಮೆಲ್ಲಗೆ ಹೊರಬರುತ್ತಾರೆ.

ಹಿಂದಿನ ಸಂಚಿಕೆ : 


  • ನೂತನ ದೋಶೆಟ್ಟಿ – ಆಕಾಶವಾಣಿ ಸಹಾಯಕ ನಿರ್ದೇಶಕಿ, ಕರು, ಲೇಖಕಿ, ನಿರೂಪಕಿ, ಬೆಂಗಳೂರು 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW