ಹಲಸಿನ ಹಣ್ಣಿನ ಸ್ವಾಡೆ ಬಾಲ್ಯದ ನೆನಪು…

ಇಂಗ್ಲೆಂಡ್ ನಲ್ಲಿ ಹಲಸಿನ ಹಣ್ಣಿನ ಸ್ವಾಡೆ ಸುಮಾರು 500 ಗ್ರಾಂ ತೂಕದ 8 ಪೌಂಡ್ ಗಳು. ಇಲ್ಲಿ ಸುಮಾರು10 ಕೆಜಿ ತೂಕದ ಒಂದು ಹಲಸಿನ ಹಣ್ಣಿಗೆ 160 ಪೌಂಡ್ ಗಳು, ಅಂದ್ರೆ ಬರೋಬ್ಬರಿ 17100 ರೂಪಾಯಿಗಳು. ಲೇಖಕರಾದ ರವೀಂದ್ರ ಕೆ. ಆರ್ ಅವರು ಇಂಗ್ಲೆಂಡ್ ನಲ್ಲಿ ಹಲಸಿನ ಹಣ್ಣಿನ ಸ್ವಾಡೆ ನೋಡಿ ಬಾಲ್ಯದ ನೆನಪನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇಂಗ್ಲೆಂಡ್ ನಲ್ಲಿ ನಮ್ಮ ದೇಶದ ಹಲಸಿನ ಹಣ್ಣಿನ ಸ್ವಾಡೆ ಕುಯ್ದು ತೊಳೆ ಬಿಡಿಸುತ್ತಾ. ಹಲಸಿನ ಹಣ್ಣು ಎಲ್ಲೇ ಕಂಡರೂ ಒಂದು ಕ್ಷಣ, ಮಲೆನಾಡಿನ ಹಳ್ಳಿಯ ನಮ್ಮ ಬಾಲ್ಯದ ಅನೇಕ ನೆನಪಿನ ಚಿತ್ರಗಳು ಮನದಲ್ಲಿ ಮೂಡುತ್ತವೆ.

* ಸಾಮಾನ್ಯವಾಗಿ ಎಲ್ಲರ ಮನೆಯ ಹಿಂದಿನ ತೋಟ (ಹಿತ್ಲು) ಗಳಲ್ಲೂ ಬೆಳೆಯುತ್ತಿದ್ದ, ಹುಲುಸಾಗಿ ಕಾಯಿ – ಹಣ್ಣು ಬಿಡುತ್ತಿದ್ದ, ತರಾವರಿ ಜಾತಿಯ ಹಲಸಿನ ಮರಗಳು. ಅದರಲ್ಲೂ ಕೆಲವರ ಹಿತ್ಲುಗಳಲ್ಲಿ ಮಾತ್ರಾ ಬೆಳೆಸಿದ್ದು, ಅವರಿಗೆ ಹೆಮ್ಮೆಯ ಸಂಗತಿಯಾಗಿದ್ದ, ಎಲ್ಲರೂ ಸಕ್ರೆ ಪಟ್ಣ ಎಂದೇ ಕರೆಯುತ್ತಿದ್ದ, ಸಖರಾಯ ಪಟ್ಟಣದ ರಸಭರಿತ ಹಣ್ಣಿನ ಹಲಸಿನ ಮರಗಳು.

* ಹಲಸಿನ ಎಳೇ ಕಾಯಿ (ಕಡಿಗೆ) ಗಳನ್ನು ಕಿತ್ತು ತಂದು ಕೊಚ್ಚಿ, ಹೆಚ್ಚಿ, ರುಬ್ಬಿ, ಅಮ್ಮ ಮಾಡುತ್ತಿದ್ದ ರುಚಿ ರುಚಿಯಾದ ಪಲ್ಯ, ಹುಳಿ (ಸಾಂಬಾರ್), ಚಟ್ಣಿಗಳು. ಅದರಲ್ಲೂ, ಅಕ್ಕಿ ಹಿಟ್ಟಿನ ಎಣ್ಣೆ ರೊಟ್ಟಿಗೆ ಅಮೋಘವಾಗಿ ಜೊತೆಯಾಗುತ್ತಿದ್ದ ಹಲಸಿನ ಕಾಯಿ ಚಟ್ನಿ.

* ಹಲಸಿನ ದೋರಗಾಯಿಗಳನ್ನು ಹಾಕಿ ರುಬ್ಬಿ ಹಿಟ್ಟು ತಯಾರಿಸಿ ಹಲಸಿನ ಕಾಯಿ ಹಪ್ಪಳ ಮಾಡಿ ಅಮ್ಮ ಬಿಸಿಲಿಗೆ ಒಣ ಹಾಕಿದಾಗ, ಕಾಗೆಗಳು ಹೊತ್ತೊಯ್ಯದoತೆ ಹಾಗೂ ನಾಯಿಗಳು ಬಾಯಿ ಹಾಕದಂತೆ ಲಕ್ಕಿ ಕೋಲು ಹಿಡಿದು ಕಾಯುತ್ತಿದ್ದ ನಮ್ಮ ಕಾವಲುಗಾರಿಕೆಯ ಗತ್ತು ಗಮ್ಮತ್ತು.

* ಬಲಿತ ದೋರಗಾಯಿಯ ತೊಳೆಗಳನ್ನು ಜೇನು ಅಥವಾ ಹಸೀ ಮೆಣಸಿನಕಾಯಿ, ಉಪ್ಪು, ನಿಂಬೆಹುಳಿ ಹಾಕಿ ಅರೆದ ಕಾರದಲ್ಲಿ ಅದ್ದಿ ತಿನ್ನುತ್ತಿದ್ದ ಸ್ವಾದ ಸುಖ.

* ಮಳೆಯ ದಿನಗಳಲ್ಲಿ ಜಾರುವ ಹಲಸಿನ ಮರಗಳನ್ನೇರಿ, ಹಣ್ಣಾಗಿರುವವನ್ನು ಹುಡುಕಿ ತೊಟ್ಟು ತಿರುಚಿ ಕೆಳಗೆ ಕೆಡವುವ ಸರ್ಕಸ್.

* ಹಣ್ಣು ಕುಯ್ಯುವಾಗ ಕುಡುಗೊಲು – ಕೈಗಳಿಗೆ ಒಳ್ಳೆಣ್ಣೆ ಸವರಿಕೊಂಡು, ಮೇಣ ಮೆತ್ತಿಕೊಳ್ಳದಂತೆ ನಾಜೂಕಾಗಿ ಬಿಡಿಸುವ ಕಲೆ. ಎಲ್ಲರೂ ಕಲೆತು ಹಣ್ಣಿನ ತೊಳೆಗಳನ್ನು ಬಿಡಿಸಲು ಕುಳಿತರೆ, ಬಿಡಿಸುವಾಗಲೇ ಅರ್ಧ ಸ್ವಾಹಾ ಆಗುವ ಅಪಾಯದ ಕಾರಣ, ಸ್ವಾಡೆಗಳನ್ನೇ ಹಂಚಿಕೊಂಡು ‘ಸರ್ವರಿಗೂ ಸಮಪಾಲು’ ಮಾಡಿಕೊಳ್ಳುತ್ತಿದ್ದ ಪಾಲು ಪಾರೀಕತ್ತು.

* ಹೊಟ್ಟೆ ತುಂಬಾ ತಿಂದರೂ ಮಿಗುತ್ತಿದ್ದ ಹಲಸಿನ ಹಣ್ಣಿನ ತೊಳೆಗಳನ್ನು ಬಳಸಿ ಅಮ್ಮ ಮಾಡುತ್ತಿದ್ದ ಸಿಹಿ ಸಿಹಿ ಘಮಘಮ ದೋಸೆ, ಕಡುಬುಗಳು. ಹಣ್ಣು ತುಂಬಾ ಕಳಿತಿದ್ದರೆ ಸಣ್ಣಗೆ ಕತ್ತರಿಸಿ ಜೊತೆಗೆ ಬಾಳೆ ಹಣ್ಣಿನ ಚೂರು, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಮಾಡುತ್ತಿದ್ದ ರಸಾಯನ.

* ಎಡಬಿಡದೇ ಮಳೆ ಸುರಿದು ಗೃಹ ದಿಗ್ಬಂಧನ ವಿಧಿಸುತ್ತಿದ್ದ ಮಳೆಗಾಲದ ಚಳಿಯ ಸಂಜೆಗಳನ್ನು ಬೆಚ್ಚಗಾಗಿಸುತ್ತಿದ್ದ, ಸುಟ್ಟು ಎಣ್ಣೆ ಸವರಿದ ಹಲಸಿನ ಹಪ್ಪಳ ಅಥವಾ ಮುಳ್ಕ ಅಥವಾ ಹಲಸಿನ ಕಾಯಿ ಚಿಪ್ಸ್ ಜೊತೆಗೆ ದೊಡ್ಡ ಲೋಟದ ಭರ್ತಿ ತುಂಬಿದ ಬಿಸಿ ಬಿಸಿ ಕಾಪಿ ( Coffee ).

* ಬಚ್ಚಲು ಮನೆಯ ಒಲೆಯ ಬೂದಿ ಮುಚ್ಚಿದ ಕೆಂಡದಲ್ಲಿ ಸುಟ್ಟು ತಿನ್ನುತ್ತಿದ ಹಲಸಿನ ಬೀಜಗಳು.

* ಯಾವುದೇ ತರಕಾರಿಯ ಹುಳಿ ಮಾಡಿದರೂ ಅದರಲ್ಲಿ ಅಮ್ಮ ಸೇರಿಸುತ್ತಿದ್ದ, ಬೆಂದು ಮಿದುವಾಗಿರುತ್ತಿದ್ದ ಹಲಸಿನ ಬೀಜಗಳು ಹಾಗೂ ಊಟ ಮಾಡುವಾಗ ಅವುಗಳಿಗಾಗಿ ನಮ್ಮ ನಮ್ಮಲ್ಲೇ ನಡೆಯುತ್ತಿದ್ದ ಪೈಪೋಟಿ.

* ರಜಾದಿನಗಳಲ್ಲಿ ಗೆಳೆಯರೊಂದಿಗೆ ಹಣ್ಣಿನ ಬೇಟೆಗೆ ಹೋದಾಗ, ಮರ ಹತ್ತಿ ಕೆಡವಿದರೆ ಬಿದ್ದ ರಭಸಕ್ಕೆ ಬಿರಿದು ಭಗಾಲಾಗುತ್ತಿದ್ದ ಅಪರೂಪದ ಬಿಳುವನ ಹಣ್ಣನ್ನು ಬೆರಳುಗಳಲ್ಲೇ ಬಗೆದು, ಮೆತ್ತನೆಯ ಬಿಳೀ ತೊಳೆಗಳನ್ನು ಎಲ್ಲರೂ ಗುಳುಂ ಗುಳುಂ ಎಂದು ನುಂಗುತ್ತಿದ್ದ ಪರಿ.

* ತೀವ್ರ ಬಡತನದಿಂದ ಅರೆ ಹೊಟ್ಟೆಯಲ್ಲಿರುತ್ತಿದ್ದ ಕೆಲವು ಬಡ ಕುಟುಂಬಗಳಿಗೆ, ಒಂದೆರಡು ತಿಂಗಳುಗಳ ಮಟ್ಟಿಗೆ, ಈ ಹಲಸೇ ಹೊಟ್ಟೆ ಹೊರೆಯುವ ದಾರಿಯಾಗಿದ್ದುದು.

* ಯಾರದೇ ಮನೆಯಲ್ಲಿ ಹಣ್ಣುಗಳು ಜಾಸ್ತಿ ಸಿಕ್ಕರೂ, ಅಕ್ಕ ಪಕ್ಕದ ಮನೆಯವರಿಗೆ ಒಂದಷ್ಟು ಸ್ವಾಡೆಗಳನ್ನು ಕಳಿಸಿ ಹಂಚಿಕೊಳ್ಳುತ್ತಿದ್ದ ಪ್ರೀತಿ.

* ಯಾರೋ ಹಲಸಿನ ತೊಳೆ ತಿಂದು ಎಲ್ಲೋ ಬಿಸುಟಿದ ಬೀಜಗಳು ಅಲ್ಲೇ ಮೊಳೆತು, ಎಲ್ಲೆಂದರಲ್ಲಿ ಮೊಳೆತು ಸಸಿಗಳಾಗಿ ಎದ್ದು ನಿಲ್ಲುತ್ತಿದ್ದ ಸೋಜಿಗ.

ಇದೆಲ್ಲಾ ನೆನಪಾಗಿದ್ದು, ಇಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಮತ್ತೊಂದು ಇಂಡಿಯನ್ ಸ್ಟೋರ್ ನಿಂದ ನನ್ನ ಮಗಳು ನಿನ್ನೆ ಕೊಂಡು ತಂದ ಹಲಸಿನ ಹಣ್ಣಿನ ಸ್ವಾಡೆಯನ್ನು ಬಿಡಿಸುವಾಗ. ಹಣ್ಣು ಮಾತ್ರಾ ನಮ್ಮ ಸಖರಾಯಪಟ್ಟಣದ ಹಲಸಿನ ಹಣ್ಣಿನoತೆ ತುಂಬಾ ಸಿಹಿಯಾಗಿಯೂ, ರುಚಿಯಾಗಿಯೂ ಇತ್ತು.

ತಿಂದಾದ ಮೇಲೆ ಇದರ ಬೆಲೆ ತಿಳಿದಾಗ ಮಾತ್ರಾ ಸ್ವಲ್ಪ ಗಾಬರಿಯಾಯ್ತು. ಸುಮಾರು 500 ಗ್ರಾಂ ತೂಕದ ಈ ಸ್ವಾಡೆಗೆ 8 ಪೌಂಡ್ ಗಳು. ಇಲ್ಲಿ ಸುಮಾರು10 ಕೆಜಿ ತೂಕದ ಒಂದು ಹಲಸಿನ ಹಣ್ಣಿಗೆ 160 ಪೌಂಡ್ ಗಳು, ಅಂದ್ರೆ ಬರೋಬ್ಬರಿ 17100 ರೂಪಾಯಿಗಳು…!

ನಾನು ಮೂಲತಃ ಏನನ್ನಾದರೂ ಕೊಳ್ಳುವಾಗ ಚೌಕಾಸಿ ಮಾಡುವುದು ವಿರಳ. ಆದರೂ, ಈ ಬಾರಿ ಭಾರತಕ್ಕೆ ಮರಳಿ ಹೋದ ಮೇಲೆ, ಹಲಸಿನ ಹಣ್ಣಿನ ವ್ಯಾಪಾರಿಗಳೊಡನೆ ಎಂದೂ ಚೌಕಾಸಿ ಮಾಡಬಾರದು ಎಂದು ನಿರ್ಧರಿಸಿದ್ದೇನೆ.


  • ರವೀಂದ್ರ ಕೆ. ಆರ್ – ಬ್ಯಾನ್ಬರಿ ( UK )

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW