ಒಳ್ಳೆ ಸಿನಿಮಾಗಳು ಬಂದ್ರೆ ಪ್ರೇಕ್ಷಕರು ಯಾರು ಕೂಡಾ ಬಿಡೋಲ್ಲ, ಖಂಡಿತಾ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಾರೆ. ಆದರೆ ಕಥಾವಸ್ತುವೇ ಇಲ್ಲದೆ ಸಿನಿಮಾ ನೋಡಿಯೆಂದರೆ ಹೇಗೆ ? ಕಥಾವಸ್ತು ಇದ್ದರೇ ಖಂಡಿತಾ ಸಿನಿಮಾ ಗೆಲ್ಲುತ್ತೆ, ಸರಳ ಮತ್ತು ಕಥಾವಸ್ತುವುಳ್ಳ ‘ಸೂಕ್ಷ್ಮದರ್ಶಿನಿ’ ಎಂಬ ಸಿನಿಮಾ ಕುರಿತು ಧಾರಿಣಿ ಮಾಯಾ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾಮಾನ್ಯವಾಗಿ ಒಳ್ಳೆಯ ರಿವ್ಯೂಸ್ ಇರುವ ಸಿನಿಮಾವನ್ನೇ ನೋಡುವ ನಾನು, ಇತ್ತೀಚೆಗೆ ಕೆಲವು ಕನ್ನಡ ಸಿನಿಮಾಗಳನ್ನು ಹೆಚ್ಚು ತಲೆಕೆಡಿಸಿಕೊಳ್ಳದೆ ನೋಡಲು ಹೋದೆ.
‘ಪೌಡರ್’ ಎಂಬ ಸಿನಿಮಾ ಪೂರ್ತಿ ಹಾಸ್ಯ ಸಿನಿಮಾವಿರುವ ಬುಕ್ ಮೈ ಶೋ ನಲ್ಲಿ review ನೋಡಿ, ಯಾಮಾರಿದೆ. ಸಿನಿಮಾ interval ನಲ್ಲೇ ಎದ್ದು ಹೊರಗೆ ಬಂದೆ. ಈ ಕಾಮಿಡಿ ಎಂಬ ಅರ್ಥ ಏನು ಎಂಬುದೇ ಅರ್ಥವಾಗ್ತಿಲ್ಲ. ಅಷ್ಟು ಕೆಳಮಟ್ಟಕ್ಕೆ ಇಳಿದುಹೋಯ್ತಾ ಎಂದು ಬೇಸರವಾಗುತ್ತದೆ.
ಹಾಗೇ ‘out of syllabus’ ಸಿನಿಮಾ ಕೂಡ. ಏನೂ ಹೊಸತನವಿಲ್ಲ. ಅದರಲ್ಲೂ ನಟನಟಿಯರು ಸಿನಿಮಾ ಮುಗಿದ ಕೂಡಲೇ ಧುತ್ ಅಂತ ಪ್ರತ್ಯಕ್ಷ ಆಗಿ, ‘ನಿಮಗೆಲ್ಲಾ ಸಿನಿಮಾ ಹೇಗನಿಸಿತು..’ ಇಷ್ಟ ಆಯ್ತಾ ಎಂದು ಪ್ರಶ್ನಿಸಿದಾಗ, ಅಲ್ಲಿರುವ ಮೂರು ಮತ್ತೊಂದು ಮಂದಿ ಹೂ/ಊಹೂ ಎನ್ನಲಾಗದೆ ಇಕ್ಕಟ್ಟಿಗೆ ಸಿಲುಕುತ್ತಾರೆ. ಕೆಲವರು ಕಾಟಾಚಾರಕ್ಕೆ ಹೂ.. ಎಂದು ಕಿಸಿದು ಅಲ್ಲಿಂದ ಕಳಚಿಕೊಳ್ಳುತ್ತಾರೆ. ನಾನು ಏನೂ ಮಾತಾಡದೆ ಸುಮ್ಮನಿದ್ದುದ್ದನ್ನು ಗಮನಿಸಿದ ಹತ್ತಿರದಲ್ಲೇ ನಿಂತಿದ್ದ ನಟ, ಅಲ್ಲಿದ್ದವರಿಗೆ ‘ನಿಮಗೆಲ್ಲಾ ಸಿನಿಮಾ ಇಷ್ಟವಾದಲ್ಲಿ ಪ್ರಚಾರ ಮಾಡಿ’ ಎಂದು ಮಾತಿನ ವರಸೆ ಬದಲಾಯಿಸಿದ.

ಹೊಸಬರು ಕನಸು ಹೊತ್ತು ದುಡ್ಡು ಸುರಿದು ಸಿನಿಮಾ ಮಾಡ್ತಾರೆ, ನಂತರ ಕೈ ಸುಟ್ಟು ಅಲ್ಲಿಗೇ ತಿಲಾಂಜಲಿ ಹಾಡುತ್ತಾರೆ. ಈ ಮಧ್ಯೆ ಅದೆಲ್ಲೋ ಒಂದು ಕಡೆ ಮಾತ್ರ ಹೊಸಬರ ಸಿನಿಮಾ ಗೆಲ್ಲಬಹುದು, ಅದೂ ಆಮೆ ವೇಗದಲ್ಲಿ. ಹೊಸಬರು, ಕನ್ನಡ ಸಿನಿಮಾ ಬೆಂಬಲ ಕೊಡಿ ಎಂದು ಹೇಳ್ತಾರೆ. ಇಂಥ ಸಿನಿಮಾಗಳನ್ನು ಕೊಟ್ಟರೆ ಯಾರ್ ತಾನೇ ನೋಡ್ತಾರೆ.
ಹಾಗೆ ನೋಡಿದರೆ ಮಲೆಯಾಳಂ ನಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಒಳ್ಳೊಳ್ಳೆ ಕತೆಯುಳ್ಳ ಸಿನಿಮಾ ಕೊಡುತ್ತಾರೆ. ‘ಸೂಕ್ಷ್ಮದರ್ಶಿನಿ’ ಎಂಬ ಸಿನಿಮಾವನ್ನು Disney hot star ನಲ್ಲಿ ನೋಡಿದೆ. Subtitles ಓದ್ಕೊಂಡು ಸಿನಿಮಾ ನೋಡೋದ್ರಲ್ಲಿ ಸಿನಿಮಾ ನೋಡಿದ ಹಾಗೇ ಅನಿಸೋಲ್ಲ. ಹಾಗಾಗಿ ಮೂಲ ಭಾಷೆಯ ಫ್ಲೇವರ್ ಬಿಟ್ಟು ಕನ್ನಡದಲ್ಲೇ ನೋಡಿದೆ.
ಸೂಕ್ಷ್ಮದರ್ಶಿನಿ :
ಮೊದಲಿಗೆ ಇದೊಂದು ಕೌಟುಂಬಿಕ ಆಧಾರಿತ ಚಿತ್ರವಾಗಿದ್ದು, ನಿಧಾನಕ್ಕೆ ಥ್ರಿಲ್ಲರ್ ಆಗಿ ಸಾಗುತ್ತದೆ. ಕೆಲವು ಬಾರಿ ನಿಧಾನ ಅನ್ನಿಸಿದರೂ, ಎಲ್ಲೂ ಬೇಸರವಾಗುವುದಿಲ್ಲ. ಒಬ್ಬಳು ಸಾಧಾರಣ ಗೃಹಿಣಿ ಹೇಗೆ ಸೂಕ್ಷ್ಮ ಜಾಡನ್ನು ಹಿಡಿದು ಕೊಲೆಯ ಹಿಂದಿನ ಕೈಯನ್ನು ಬಯಲಿಗೆಳೆಯುತ್ತಾಳೆ ಎಂಬುದು ಇದರ ಕಥಾವಸ್ತು. ಕಥಾನಾಯಕಿಯ ಜೊತೆಗೆ ಸಾಗುತ್ತಲೇ, ನಾವೂ ಈ ಕಥೆಯ ಮರ್ಮವನ್ನು ಊಹಿಸಬಹುದು ಎಂದುಕೊಂಡರೆ, ನೋ ವೇ.. ನಾವು ಅಂದುಕೊಳ್ಳಲು ಸಾಧ್ಯವಾಗದೇ ಇರುವಂಥ ತಿರುವು ಕೊನೆಯಲ್ಲಿ ತೆರೆದುಕೊಂಡಾಗ, ಅಬ್ಬಾ.. ಎನಿಸುತ್ತದೆ. ಕುರ್ಚಿ ತುದಿಯಲ್ಲಿ ಕೂರುವಂತೆ ಮಾಡಿ, ನಿಜಕ್ಕೂ ಥ್ರಿಲ್ ಕೊಡುತ್ತದೆ. ನೋಡಿ, ನಿಮಗೆ ಇಷ್ಟವಾಗಬಹುದು.
- ಧಾರಿಣಿ ಮಾಯಾ
