ಎಲ್ಲ ಪುಸ್ತಕಗಳನ್ನು ಪೂರ್ತಿ ಓದಬೇಕೇ?

ಒಂದು ಪುಸ್ತಕವನ್ನು ಯಾವಾಗ ಓದಬೇಕು, ಹೇಗೆ ಓದಬೇಕು ಎಂಬುದಕ್ಕೆ ಯಾವುದೇ ನಿಯಮ, ಸೂತ್ರಗಳು ಇಲ್ಲದಿರುವಂತೆ ಎಷ್ಟು ಓದಬೇಕು, ಮೊದಲಿನಿಂದ ಕೊನೆಯ ತನಕವೂ ಓದಬೇಕೆ ಬೇಡವೆ ಎಂಬುದನ್ನು ನಾನಾ ಪ್ರಶ್ನೆಗಳಿಗೆ ಉತ್ತರವನ್ನು ಕಥೆಗಾರರಾದ ಕೆ ಸತ್ಯನಾರಾಯಣ ಅವರು ‘ಓದುವವರೆಲ್ಲ ಓದುಗರಲ್ಲ ಹಾಗಾದರೆ?’ ಕೃತಿಯಲ್ಲಿ ವಿವರಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಓದುವವರೆಲ್ಲ ಓದುಗರಲ್ಲ ಹಾಗಾದರೆ?
ಲೇಖಕರು : ಕೆ ಸತ್ಯನಾರಾಯಣ
ಪ್ರಕಾಶಕರು : ಅಮೂಲ್ಯ ಪುಸ್ತಕ ಪ್ರಕಾಶನ

ಸೃಷ್ಟಿಯಲ್ಲಿ, ಬದುಕಿನಲ್ಲಿ ನಮ್ಮ ಕತೆ, ಪಾತ್ರ, ಕೆಲಸ ಮುಗಿದುಹೋದ ಮೇಲೂ ನಾವು ನಮಗೆ ಆಯಸ್ಸಿನ ಭಾಗ್ಯವಿದೆಯೆಂಬ ಕಾರಣಕ್ಕೇ ಬದುಕುತ್ತಾ ಹೋಗುತ್ತೇವೆ. ಹಾಗೆ ಕತೆಗಳು, ವಿದ್ಯಮಾನ, ಒಳನೋಟಗಳೆಲ್ಲ ಮುಗಿದುಹೊದ ಮೇಲೂ ಲೇಖಕರು ಪುಸ್ತಕದ ವ್ಯಾಪ್ತಿಯನ್ನು ಹಿಗ್ಗಿಸುತ್ತಲೇ ಇರುತ್ತಾರೆ. ನಾವೆಲ್ಲ ಅನಗತ್ಯವಾಗಿ ಈ ಭೂಮಿಯ ಮೇಲೆ ಬದುಕಿರುವತನಕವೂ ಒಂದು ಪುಸ್ತಕವನ್ನು ಪೂರ್ತಿಯಾಗಿ ಓದಬೇಕು, ಓದಲೇಬೇಕು ಎಂಬ ಮೂಢನಂಬಿಕೆಗನುಗುಣವಾಗಿಯೇ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು.
*
ಒಂದು ಪುಸ್ತಕವನ್ನು ಯಾವಾಗ ಓದಬೇಕು, ಹೇಗೆ ಓದಬೇಕು ಎಂಬುದಕ್ಕೆ ಯಾವುದೇ ನಿಯಮ, ಸೂತ್ರಗಳು ಇಲ್ಲದಿರುವಂತೆ ಎಷ್ಟು ಓದಬೇಕು, ಮೊದಲಿನಿಂದ ಕೊನೆಯ ತನಕವೂ ಓದಬೇಕೆ ಬೇಡವೆ ಎಂಬುದನ್ನು ಕುರಿತು ಕೂಡ ನಿಯಮಗಳು ಇಲ್ಲ, ಇರಬಾರದು. ಆದರೆ ನಿಯಮ ಇದೆ, ಸಂಪ್ರದಾಯ ಇದೆ ಎಂದು ಲೇಖಕರು, ಪ್ರಕಾಶಕರು, ಸಾಹಿತ್ಯ ಚಿಂತಕರು ಹೇಳುತ್ತಲೇ ಇರುತ್ತಾರೆ.

ಓದು ನಮ್ಮ ಜೀವನದ ಒಂದು ಭಾಗ. ನಾಗರಿಕರಾಗಿ, ಕುಟುಂಬಸ್ಥರಾಗಿ, ವೃತ್ತಿಪರರಾಗಿ ನಮಗೆ ಹಲವು ಜವಾಬ್ದಾರಿಗಳಿರುತ್ತವೆ, ಆಸಕ್ತಿಗಳಿರುತ್ತವೆ. ಎಲ್ಲದಕ್ಕೂ ನಾವು ನ್ಯಾಯ ಒದಗಿಸಿದರೆ, ನಮಗೆ ಸಂತೋಷವಾಗುವುದು, ನಮ್ಮ ವ್ಯಕ್ತಿತ್ವ ಅರಳುವುದು. ಹಾಗಾಗಿ ಓದುವುದಕ್ಕೆ ಒಂದಿಷ್ಟು ಸಮಯವನ್ನು ಮೀಸಲಿಡಬಹುದೇ ಹೊರತು ನಮ್ಮ ದಿನದ, ಬದುಕಿನ ಇಡೀ ಭಾಗವನ್ನಲ್ಲ.

ಹೀಗೆ ಓದಿಗೆ ಮೀಸಲಿಟ್ಟ ಸಮಯದಲ್ಲಿ ಎಲ್ಲ ಪುಸ್ತಕಗಳನ್ನು ಮೊದಲಿನಿಂದ ಕೊನೆಯ ತನಕ ಓದುತ್ತಾ ಕುಳಿತುಕೊಳ್ಳಬೇಕೆ? ಇನ್ನೂ ನೇರವಾಗಿ ಕೇಳಬೇಕೆಂದರೆ ಒಂದು ಪುಸ್ತಕದ ಸಾರಸತ್ವವನ್ನೆಲ್ಲ ಓದಬೇಕಾದರೆ ಇಡೀ ಪುಸ್ತಕವನ್ನು ಓದಬೇಕೆ ಎಂಬುದು – ಒಂದು ಪುಸ್ತಕ ಚೆನ್ನಾಗಿರಬಹುದು, ಆದರೆ ಇಡಿಯಾಗಿ ಚೆನ್ನಾಗಿಲ್ಲದೆ ಇರಬಹುದು. ಪುಸ್ತಕದ ಸಾರಸತ್ವ, ಮೌಲಿಕ ಭಾಗ ಮಧ್ಯಕ್ಕೆ ಮುಗಿದುಹೋಗಿಬಿಡಬಹುದು. ಅದು ಓದುಗನಿಗೆ ಗೊತ್ತಾದ ಮೇಲೆ ಮುಂದಿನ ಪುಟಗಳಿಗೆ ಏಕೆ ಹೋಗಬೇಕು? ಅದೇ ಸಮಯವನ್ನು ಇನ್ನೊಂದು ಪುಸ್ತಕ ಓದಲು ಬಳಸಬಹುದಲ್ಲವೇ? ಆದರೆ ಓದುಗರಾಗಿ ನಾವು ಹಾಗೆ ಮಾಡಿದ್ದೇವೆಂದು ಲೇಖಕರಿಗೆ ಹೇಳಲು ಹೋಗಬಾರದು. ಹಾಗೆಯೇ ಒಂದು ಪುಸ್ತಕದ ಎಲ್ಲ ಭಾಗಗಳನ್ನು ಸಮಾನ ಏಕಾಗ್ರತೆಯಿಂದ ಓದುವ ಅಗತ್ಯವಿರುವುದಿಲ್ಲ.

ಆದರೆ ಒಂದು ಪುಸ್ತಕದ ಹೃದಯ ಭಾಗ ಯಾವುದು, ಯಾವಾಗ ಮುಗಿದು ಹೋಗುತ್ತದೆ ಎಂಬುದನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಓದುಗರಾಗಿ ನಮಗೆ ಅಹಂಕಾರವಿರಬಾರದು, ಪೂರ್ವಾಗ್ರಹವಿರಬಾರದು. ನಾವು ನಮ್ಮ ಸಮಯಾಭಾವದ ದೃಷ್ಟಿಯಿಂದ ಒಂದು ಪುಸ್ತಕವನ್ನು ಇಡಿಯಾಗಿ ಓದುತ್ತಿಲ್ಲ ಎಂಬುದು ಗೊತ್ತಿರಬೇಕು. ಹೀಗೆ ತೆಗೆದುಕೊಳ್ಳುವ ತೀರ್ಮಾನ ಎಲ್ಲ ಸಂದರ್ಭದಲ್ಲೂ ಸರಿಯಲ್ಲದಿರಬಹುದು. ನೈತಿಕವಾಗಿ ಕೂಡ ಈ ಆಯ್ಕೆ ಅಷ್ಟು ಸಮರ್ಥನೀಯವಲ್ಲದಿರಬಹುದು. ನಂತರ ಯಾರಾದರೂ ವಿಮರ್ಶಕರೋ, ಓದುಗರೋ ನಾವು ಸಮಯವಿಲ್ಲವೆಂದು ಓದದೆ ಬಿಟ್ಟ ಭಾಗವೇ ನಿಜವಾಗಿಯೂ ಮೌಲಿಕವಾದ ಭಾಗವೆಂದು ತೋರಿಸಿಕೊಟ್ಟರೆ ಮತ್ತೆ ಆ ಭಾಗವನ್ನು ಓದಲು ಕೂಡ ನಾವು ಸಿದ್ಧರಿರಬೇಕು.

ಒಂದು ಪುಸ್ತಕವನ್ನು ಇಡಿಯಾಗಿ ಓದುವುದರಿಂದ ಸಮಯ ಮಾತ್ರ ಪೊಲಾಗುವುದಿಲ್ಲ, ಪುಸ್ತಕಕ್ಕೂ ಕೂಡ ಅನ್ಯಾಯವಾಗಬಹುದು. ಪುಸ್ತಕವನ್ನು ಇಡಿಯಾಗಿ ಓದಿದರೆ, ನಮಗೆ ತಿಳಿಯುವುದು ಅದರ ಸಾರಾಂಶ ಮಾತ್ರ. ಮುಖ್ಯ ಭಾಗಕ್ಕೆ ನಾವು ಸಾಕಷ್ಟು ಗಮನ ಕೊಡದೆ ಹೋಗಬಹುದು. ಇದರಿಂದ ನಮಗೂ ನಷ್ಟ, ಲೇಖಕರಿಗೂ ನಷ್ಟ. ನಾನು ಸಾಹಿತ್ಯ ಕೃತಿಗಳ ಬಗ್ಗೆ ಮಾತ್ರ ಹೇಳುತ್ತಿಲ್ಲ, ನನ್ನ ವೃತ್ತಿಯ ಅನುಭವದಲ್ಲೂ ಹೀಗಾಗಿದೆ. ಮೇಲಧಿಕಾರಿಗಳಿಗೆ, ಮಂತ್ರಿಗಳಿಗೆ ಒಂದು ವಿದ್ಯಮಾನದ ಬಗ್ಗೆ ವರದಿ ನೀಡುವಾಗ, ಆ ವಿದ್ಯಮಾನವನ್ನು ಕುರಿತಂತೆ ಸಮಗ್ರವಾಗಿ ಎಲ್ಲವನ್ನೂ ಓದಿ, ವರದಿ ಮಂಡಿಸುವ ಎಷ್ಟೋ ಸಂದರ್ಭಗಳಲ್ಲಿ ವರದಿ ಪಡೆಯುತ್ತಿರುವವರು ತಮ್ಮ ಹಿರಿತನದ ಅನುಭವದಿಂದ ಕೇಳುವ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರವೇ ಇರುತ್ತಿರಲಿಲ್ಲ. ಇಡಿಯಾಗಿ, ಸಮಗ್ರವಾಗಿ, ಸಂಪೂರ್ಣವಾಗಿ ಓದುವ ಪ್ರಾಮಾಣಿಕತೆಯಲ್ಲಿ. ನಾನು ಸೂಕ್ಷ್ಮ ಭಾಗಗಳಿಗೇ ಅಷ್ಟು ಗಮನ ಕೊಡುತ್ತಿರಲಿಲ್ಲ.

ನ್ಯಾಯಾಧೀಶರಿಗೆ ಪ್ರತಿ ಪ್ರಕರಣದ ವಿಚಾರಣೆ ನಡೆಸುವಾಗಲೂ ಸಾವಿರಾರು ಪುಟಗಳು, ಹತ್ತಾರು ಸಂಪುಟಗಳನ್ನು ನೀಡಲಾಗುತ್ತದೆ. ಎಲ್ಲವನ್ನೂ ಅವರು ಓದುತ್ತಾ ಕುಳಿತುಕೊಂಡರೆ ಸುಮ್ಮನೆ ಓದುತ್ತಾ ಕುಳಿತಿರಬೇಕೆ ಹೊರತು ತೀರ್ಪನ್ನು ನೀಡಲು ಸಮಯವೇ ಇರುವುದಿಲ್ಲ. ವಿಜ್ಞಾನಿಗಳು ಕೂಡ ಹೀಗೇ ಮಾಡುತ್ತಾರೆ. ಹಿಂದಿನ ಸಂಶೋಧನೆಯ ಫಲಿತಗಳನ್ನು ಮಾತ್ರ ತಿಳಿದುಕೊಳ್ಳುತ್ತಾರೆಯೇ ಹೊರತು ಅದರ ಬಗ್ಗೆ ಇರುವ ಸಕಲ ಇತಿಹಾಸವನ್ನು ಓದಲು ಹೋಗುವುದಿಲ್ಲ. ತೀರಾ ಅಗತ್ಯ ಬಿದ್ದಾಗ ಸಂಶೋಧಕ ಸಹಾಯಕರು ಅಂತಹ ಸಾಹಿತ್ಯ, ಇತಿಹಾಸವನ್ನೆಲ್ಲ ಓದಿ ಸಾರಾಂಶವನ್ನು ತಿಳಿಸಿಕೊಡುತ್ತಾರೆ. ಓಪನ್‍ಹೈಮರ್ ಭಗವದ್ಗೀತೆಯನ್ನು ಹತ್ತಾರು ಸಲ ಓದಿದ, ಇಡಿಯಾಗಿ ಓದಿದನೇ, ಎಲ್ಲ ಭಾಗಗಳಿಗೂ ಸಮಾನವಾದ ಗಮನ ನೀಡಿದನೇ ಗೊತ್ತಿಲ್ಲ. ಪ್ರಳಯ, ಸರ್ವನಾಶ, ಯುಗಾಂತ್ಯದ ಭಾಗಗಳನ್ನೇ ಅವನು ಮತ್ತೆ ಮತ್ತೆ ಓದಿದಂತಿದೆ. ಇದು ಸರಿಯಾದ ಓದುವ ಕ್ರಮವಲ್ಲದಿರಬಹುದು. ಆದರೆ ನಮಗೆ ಒಳನೋಟಗಳನ್ನು ಪಡೆಯಲು ಈ ರೀತಿಯ ತಿರುಚು ಓದು, ಅಸಮಗ್ರ ಓದು, misreading ಗಳು ಅಗತ್ಯವೆಂಬ ಸಾಹಿತ್ಯ ಸಿದ್ಧಾಂತವೂ ಇದೆ. ಸಾವಿರಾರು ಪುಟಗಳನ್ನು, ಸಮಗ್ರ ಸಂಪುಟಗಳನ್ನು ಬರೆದು ಪ್ರಕಟಿಸಿ ಓದುಗರಾದ ನಮ್ಮ ಪ್ರಾಣವನ್ನು ತೆಗೆಯುವ ಲೇಖಕರೇ ಓದುಗರಾಗಿ ತಮ್ಮ ಹಿಂದಿನವರ, ಸಮಕಾಲೀನರ ಕೃತಿಗಳನ್ನು ಸರಿಯಾಗಿ ಓದಿರುವುದಿಲ್ಲ. ಆತಂಕದಲ್ಲಿ, ಭಯದಲ್ಲಿ, ಪ್ರಭಾವದಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬೇಕಾದಷ್ಟನ್ನು ಮಾತ್ರ ಓದುತ್ತಾರೆ.

(Anxiety of Influence – Harold Bloom).

ಇದನ್ನು ತಪ್ಪಲ್ಲವೆಂದು ಕೂಡ ಬ್ಲೂಮ್ ಹೇಳುವುದಿಲ್ಲ. ಹೀಗೆಲ್ಲಾ ಅಸಮಗ್ರವಾಗಿ, ಆತಂಕಭರಿತವಾಗಿ ಓದದೇ ಹೋದರೆ ಲೇಖಕರಿಗೆ ತಮ್ಮ ಕೃತಿಗಳನ್ನು ಬರೆಯಲು ಕೂಡ ಸಾಧ್ಯವಾಗದಿರಬಹುದು ಎಂದು ಹೇಳುತ್ತಾನೆ.

ಒಂದು ಪುಸ್ತಕವನ್ನು ಪೂರ್ತಿಯಾಗಿ ಓದುವುದು, ಒಬ್ಬ ಲೇಖಕನನ್ನು ಸಮಗ್ರವಾಗಿ ಓದುವುದು, ಒಂದು ಒಳ್ಳೆಯ ಅಭ್ಯಾಸವೆಂದು ಬಾಲ್ಯದಿಂದ ನಮ್ಮ ಮನಸ್ಸನ್ನು ರೂಪಿಸಲಾಗುತ್ತದೆ. ಶಾಲೆಗಳಲ್ಲಿ ಮೇಷ್ಟರುಗಳು, ಮನೆಯಲ್ಲಿ ಹಿರಿಯರು, ಮಠಗಳಲ್ಲಿ ಗುರುಗಳು, ಸಮಗ್ರ ಸಂಪುಟಗಳನ್ನು ಪ್ರಕಟಿಸಿ ಓದುಗರಿಗಾಗಿ ಕಾಯುತ್ತಿರುವ ಪ್ರಕಾಶಕರು, ಎಲ್ಲರೂ ನಮಗೆ ಹೇಳಿಕೊಡುವುದು ಇದನ್ನೇ, ನಮ್ಮಿಂದ ನಿರೀಕ್ಷಿಸುವುದು ಕೂಡ ಇದನ್ನೇ.

ಅಲ್ಲದೆ ಒಂದು ಪುಸ್ತಕವನ್ನು ಪೂರ್ತಿಯಾಗಿ ಮುಗಿಸಿ ಎಂದು ಓದುಗರಾಗಿ ನಾವೇನೂ ಲೇಖಕರಿಗೆ ಹೇಳುವುದಿಲ್ಲ. ಅಷ್ಟೇ ಅಲ್ಲ, ಒಂದು ಪುಸ್ತಕವನ್ನು ಯಾವ ಹಂತದಲ್ಲಿ ಮುಕ್ತಾಯಗೊಳಿಸಬೇಕು, ಅಥವಾ ತಮ್ಮ ಬರವಣಿಗೆಯನ್ನು ಯಾವ ಶುಭ ಮುಹೂರ್ತದಲ್ಲಿ ಮುಗಿಸಿ, ಓದುಗರಿಗೆ ನೀಡಿ, ತಾವೂ ಕೂಡ ಹಾಯಾಗಿರಬೇಕೆಂದು ಲೇಖಕರಿಗೂ ಗೊತ್ತಿರುವುದಿಲ್ಲ. ರಾಮಾಯಣದ ಕಥೆ ಶ್ರೀರಾಮನ ಪಟ್ಟಾಭಿಷೇಕಕ್ಕೆ ಮುಗಿಯಬೇಕಾಗಿತ್ತಲ್ಲವೇ? ರಾವಣನ ವಧೆಯಾಯಿತು, ರಾಕ್ಷಸರ ಸಂಹಾರವಾಯಿತು, ಧರ್ಮ ಸಂಸ್ಥಾಪನೆಯಾಯಿತು. ಅವನ ಮುಂದಿನ ಸಂಸಾರದ ರಗಳೆಯನ್ನು ಕಟ್ಟಿಕೊಂಡು ನಾವೇನು ಮಾಡಬೇಕು, ನಮ್ಮ ಸಂಸಾರಗಳಲ್ಲೇ ರಾಮನ ಸಂಸಾರಕ್ಕಿಂತ ಹೆಚ್ಚು ರಗಳೆಗಳಿರುವಾಗ? ಇದು ಕೆಲವು ಸಾಹಿತ್ಯ ಚಿಂತಕರಿಗಾದರೂ ಗೊತ್ತಿತ್ತು ಅನ್ನುವುದು ಸಮಾಧಾನದ ಸಂಗತಿ. ಉತ್ತರಕಾಂಡವು ರಾಮಾಯಣದ ಭಾಗವಲ್ಲ, ಅದನ್ನು ಓದುವುದು ಪುಣ್ಯದ ಕೆಲಸವಲ್ಲ ಎಂದೇ ಕೆಲವರು ಸಕಾರಣವಾಗಿ ವಾದಿಸಿದರು. ಧರ್ಮರಾಯ ಮತ್ತೆ ಚಕ್ರವರ್ತಿಯಾದ ಮೇಲೆ ಸರಿಯಾಗಿ ರಾಜ್ಯಭಾರ ಮಾಡಿಕೊಂಡು ಹೋಗುವುದು ಅವನ ಕೆಲಸ. ಆ ಜವಾಬ್ದಾರಿಯನ್ನು ಅವನಿಗೆ ಬಿಟ್ಟು ಕತೆಯನ್ನು ಅಲ್ಲಿಗೇ ಮುಗಿಸಬಹುದಿತ್ತು. ಲೇಖಕರ ಹತ್ತಿರ ಸಿಕ್ಕಿಹಾಕಿಕೊಂಡರೆ ಬರೆಯುವ ಚಪಲಕ್ಕಾಗಿ ಕತೆ ಬೆಳೆಸಿ ಬೆಳೆಸಿ ತಮ್ಮನ್ನು ಕತೆಯಲ್ಲೂ, ಕೆಲವು ಪಾತ್ರಗಳನ್ನು ಈ ಭೂಲೋಕದಲ್ಲೂ ಸಿಕ್ಕಿಹಾಕಿಸಿಬಿಡುತ್ತಾರೆ ಎನ್ನುವ ಭಯದಲ್ಲಿ ಪಾಂಡವರು ಬೇಗ ಬೇಗ ಸ್ವರ್ಗಕ್ಕೆ ಹೊರಟುಹೋದರು. ಇದನ್ನು ತಿಳಿಯದ ಗೌತಮ ಬುದ್ಧನು ತನ್ನ ಬೋಧನೆಯ ಬಗ್ಗೆ ಮತ್ತೆ ಮತ್ತೆ ಕಥೆ ಹೇಳುತ್ತಾ ಸ್ಪಷ್ಟೀಕರಣ ನೀಡುತ್ತಾ ಗಣರಾಜ್ಯದಿಂದ ಗಣರಾಜ್ಯಕ್ಕೆ ಸುತ್ತುತ್ತಿದ್ದ. ಅದಕ್ಕೇ ಹೇಳುವುದು, ಕೆಲವು ಪಾತ್ರಗಳಿಗೆ ಮಾತ್ರ ಲೇಖಕರಿಂದ ಹೇಗೆ, ಯಾವಾಗ ತಪ್ಪಿಸಿಕೊಳ್ಳಬೇಕು ಎಂದು ಸರಿಯಾದ ಸಮಯದಲ್ಲಿ ಗೊತ್ತಾಗುತ್ತದಂತೆ. ಇಷ್ಟು ಹೇಳುವಾಗಲೂ, ವಾಲ್ಮೀಕಿ-ವ್ಯಾಸರ ಪರವಾಗಿ ಹೇಳಬೇಕಾದ ಒಂದು ಮಾತೂ ಇದೆ. ಕತೆಯ ಬೇರೆ ಬೇರೆ ಹಂತದಲ್ಲಿ ಅಡಕವಾಗಿರುವ ಉಪಕತೆಗಳೇ, ಸಂಪೂರ್ಣ ರಾಮಾಯಣ, ಸಮಗ್ರ ಮಹಾಭಾರತಕ್ಕಿಂತ ಬೋಧಪ್ರದವಾಗಿವೆ. ಜಾಣರಾದ ಓದುಗರು ಅಷ್ಟನ್ನೇ ಓದುತ್ತಾರೆ, ಅಲ್ಲಿಗೇ ನಿಲ್ಲಿಸುತ್ತಾರೆ ಎಂಬ ನಿರೀಕ್ಷೆ ಅವರಿಗಿತ್ತು. ಓದುಗರು ಪೆದ್ದರಾದರೆ ಮಹಾಕವಿಗಳು ಏನು ಮಾಡುತ್ತಾರೆ?

ಎಲ್ಲ ಲೇಖಕರೂ ವಾಲ್ಮೀಕಿ-ವ್ಯಾಸರಷ್ಟು ದೊಡ್ಡವರಲ್ಲ. ಒಂದು ಕೃತಿಗೆ ಆದಿ, ಮಧ್ಯ, ಅಂತ್ಯಗಳಿರಲೇಬೇಕೆಂದು ನಂಬುತ್ತಾರೆ, ಓದುಗರನ್ನು ನಂಬಿಸಲು ಹೆಣಗಾಡುತ್ತಾರೆ. ಟಾಲ್‍ಸ್ಟಾಯ್ ಮಹಾನ್, ಬೃಹತ್ ಕಾದಂಬರಿಕಾರ ಎಂಬುದು ನಿಜ. ಆದರೆ, ಅವನ ಎರಡು ಮಹಾಕಾದಂಬರಿಗಳಲ್ಲೂ ಅನಗತ್ಯವಾದ ಭಾಗಗಳು ಎಷ್ಟಿವೆ, ಅದನ್ನೆಲ್ಲ ಬರೆಯುವುದು ಕತೆಗೆ ಅಗತ್ಯವಾಗಿತ್ತೇ, ಇಲ್ಲ ಕಾದಂಬರಿಕಾರನಿಗೆ ಅಗತ್ಯವಾಗಿತ್ತೇ ಎಂಬ ಚರ್ಚೆ ಇನ್ನೂ ನಡೆಯುತ್ತಿದೆ. ಈ ದೃಷ್ಟಿಯಿಂದ ಕಾಫ್ಕಾ ನಮಗೆ ಗೌರವಾರ್ಹ, ಅನುಕರಣೀಯ. ಕೆಲವು ಕೃತಿಗಳನ್ನಾದರೂ ಉದ್ದೇಶಪೂರ್ವಕವಾಗಿ ಪೂರ್ಣಗೊಳಿಸಲಿಲ್ಲ. ಇದಕ್ಕೂ ನಾವು ಅವನಿಗೆ ಕೃತಜ್ಞರಾಗಿರಬೇಕು. ಓದುಗರ ಬಗ್ಗೆ ಹೆಚ್ಚು ಅನುಕಂಪ, ಔದಾರ್ಯವಿರುವ ಲೇಖಕರು ಅದಕ್ಕೇ eಠಿisoಜiಛಿ ಮಾದರಿಯಲ್ಲಿ, ಟಿoಟಿ-ಟiಟಿeಚಿಡಿ ಮಾದರಿಯಲ್ಲಿ ಕಥನಗಳನ್ನು ಬರೆದುಬಿಡುತ್ತಾರೆ. ಆದರೆ ಎಂತಹವರೂ ಮುಕ್ತಾಯಕ್ಕೆ, ಹಂತಕ್ಕೆ ಬಂದಾಗ ಶುಭಮಂಗಳದ ಸಂದೇಶವನ್ನು ನೀಡುವ ಒತ್ತಾಯಕ್ಕೆ ಕಟ್ಟುಬಿದ್ದು, ಮುಂದೆ ಎಲ್ಲವೂ ಸುಖವಾಗಿತ್ತು ಎಂದು ಹೇಳುವ ಚಪಲಕ್ಕೆ ಸಿಕ್ಕಿಹಾಕಿಕೊಂಡುಬಿಡುತ್ತಾರೆ.

ಈ ದೃಷ್ಟಿಯಿಂದ ಸಣ್ಣ ಕತೆಗಳನ್ನು ಬರೆಯುವ ಲೇಖಕರಿಗೆ ಓದುಗರನ್ನು ಕುರಿತು ಹೆಚ್ಚು ಪ್ರೀತಿಯಿರುವಂತಿದೆ. ಕತೆಗಳನ್ನು ಬೇಗ ಬೇಗ ಬೆಳಸುತ್ತಾರೆ, ನಡೆಸುತ್ತಾರೆ. ಅನುಭವಕ್ಕೆ, ವಿದ್ಯಮಾನಕ್ಕೆ ಒಂದು ಪರಿಹಾರ ನೀಡಿ, ಮುಕ್ತಾಯವನ್ನು ತಾವೂ ಕಂಡು ಓದುಗರಿಗೂ ತೋರಿಸಿ ಮತ್ತೊಂದು ಹೊಸ ಕತೆ ಬರೆಯುತ್ತಾರೆ. ಆದರೆ ಸಾಹಿತ್ಯ ಚಿಂತಕರು ಇವರನ್ನು ತಮ್ಮ ಅಗ್ನಿಪರೀಕ್ಷೆಯಲ್ಲಿ ಪಾಸು ಮಾಡುವುದಿಲ್ಲ. ಸಣ್ಣ ಕತೆಗಾರರಿಗೆ ಬದುಕಿನ ಸಮಗ್ರ ಚಿತ್ರಣವನ್ನು ನೀಡಲು ಸಾಧ್ಯವಿಲ್ಲ, ಅವೆಲ್ಲ ಬಿಡಿ ಬಿಡಿ ಚಿತ್ರಗಳು ಮಾತ್ರ, ಇದುವರೆಗೆ ಯಾವ ಸಣ್ಣ ಕತೆಗಾರನೂ ಇಡೀ ಇತಿಹಾಸದಲ್ಲಿ ಹೋಮರ್, ಟಾಲ್‍ಸ್ಟಾಯ್ ಮಟ್ಟವನ್ನು ಮುಟ್ಟಿಲ್ಲ ಎಂದು ಕ್ಯಾತೆ ತೆಗೆಯುತ್ತಾರೆ. ಹಾಗಾಗಿ, ಸಣ್ಣ ಕತೆಗಳನ್ನು ಬರೆಯುವ ಕತೆಗಾರರು ರಾಶಿರಾಶಿ ಕತೆಗಳನ್ನು ಬರೆದು ಹಾಕಬೇಕಾಗುತ್ತದೆ.

ಲೇಖಕನಾಗಿ ನನಗೆ ಪ್ರಕಾಶಕ ಮಿತ್ರರಿಂದ, ಪುಸ್ತಕಗಳ ಮಾರಾಟಗಾರರು, ವಿತರಕರಿಂದ ಕಾದಂಬರಿಗಳನ್ನು ಬರೆಯುವಂತೆ ಸೂಚನೆ, ಪೆÇ್ರೀತ್ಸಾಹಗಳು ಸಿಗುತ್ತಲೇ ಇರುತ್ತದೆ. ಎಲ್ಲರೂ ಬೃಹತ್ ಕಾದಂಬರಿಗಳನ್ನು ನಿರೀಕ್ಷಿಸುತ್ತಾರೆ. ಕಾದಂಬರಿಯ ಹೆಸರಿನಲ್ಲಿ ಜೀವನ ಚರಿತ್ರೆ, ಕೌಟುಂಬಿಕ ಇತಿಹಾಸಗಳನ್ನು ಬರೆಯಿರಿ. ಬೇರೆಯವರೂ ಬರೆಯುತ್ತಿಲ್ಲವೇ ಎಂದು ಕೆಣಕುತ್ತಾರೆ. ಎಲ್ಲ ಪ್ರಕಾಶಕರು, ಮಾರಾಟಗಾರರು, ಹೀಗೇ ಎಂದು ನಾನು ಹೇಳುವುದಿಲ್ಲ. ದಸ್ತೊವಸ್ಕಿಯ ಎಲ್ಲ ಕೃತಿಗಳನ್ನು ಒಟ್ಟಾಗಿ ಕೊಳ್ಳಬೇಕೆಂದು ನಾನು ಒಂದು ಪುಸ್ತಕದಂಗಡಿಗೆ ಹೋಗಿದ್ದೆ. ಮಾಲೀಕರೇ ಸದಭಿರುಚಿಯ ಹಿರಿಯ ಓದುಗರು. ಏಕೆ ಎಲ್ಲ ಕೃತಿಗಳನ್ನು ಕೊಳ್ಳುತ್ತೀರಿ. ಕೊಂಡರೆ ನನಗೆ ಲಾಭ ನಿಜ! ಆದರೆ, ಓದುಗನಾಗಿ ಎಲ್ಲವನ್ನೂ ಮೊದಲಿನಿಂದ ಕೊನೆಯತನಕ ಓದುವ ಅಗತ್ಯವಾದರೂ ಏನಿದೆ.  ನಲ್ಲಿ ಅವನ ದರ್ಶನ, ಚಿಂತನೆ, ಕಥನ ಪ್ರತಿಭೆಯೆಲ್ಲ ಹರಳುಗಟ್ಟಿದೆಯಲ್ಲವೇ ಎಂದರು. ಮುಂದುವರಿದು ಆ ಕೃತಿಯ ಹಂತವನ್ನು ತಲುಪಲು ಅವನಿಗೆ ಉಳಿದ ಕೃತಿಗಳನ್ನು ಬರೆಯುವ ಅಗತ್ಯವಿತ್ತು ಎಂಬುದನ್ನು ಗೌರವಿಸಿ, ನಮಸ್ಕರಿಸೋಣ. ಆದರೆ, ಓದುಗರಾಗಿ ನೀವೇ ಏಕೆ ಅವನ ಕೃತಿಯ ರಾಶಿಯಲ್ಲಿ, ಬರವಣಿಗೆಯ ಜಂಜಾಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ.

ನಾನು ಅರ್ಥಶಾಸ್ತ್ರದ ವಿದ್ಯಾರ್ಥಿಯೂ ಆಗಿರುವುದರಿಂದ, ಓದುಗರು ಎಲ್ಲ ಪುಸ್ತಕಗಳನ್ನೂ ಪೂರ್ತಿಯಾಗಿ ಓದಲೇಬೇಕೆಂಬ ಮೂಢನಂಬಿಕೆಯನ್ನು ಸ್ವಾಗತಿಸುತ್ತೇನೆ. ಜಗತ್ತಿನ ನಿಯಮವೆಂದರೆ, ಕಾಲದಿಂದ ಕಾಲಕ್ಕೆ ನಂಬಿಕೆಗಳು, ಮೌಲ್ಯಗಳು ಬದಲಾಗುತ್ತೆ. ಆದರೆ ಒಂದೇ ಒಂದು ಮೂಢನಂಬಿಕೆಯೂ ಬದಲಾಗುವುದಿಲ್ಲ. ಬೇರೆ ಬೇರೆ ರೂಪದಲ್ಲಿ ಹೊಸ ಅವತಾರ ತಳೆಯುತ್ತದೆ. ಹಾಗಾಗಿ ಸಂಪೂರ್ಣ ಓದಿನ ಮೂಢನಂಬಿಕೆಯೂ ಹಾಗೇ ಉಳಿದಿದೆ. ಪಾರಾಯಣ ಸಪ್ತಾಹಗಳ ಮೂಲಕ, ಅಧ್ಯಯನ ಪೀಠಗಳ ಮೂಲಕ, ಸಮಗ್ರ ಸಾಹಿತ್ಯ ಮೂಟೆಗಳ ಮೂಲಕ, ಮರುಪ್ರಕಟಣೆಗಳ ಮೂಲಕ, ಇದರಿಂದೆಲ್ಲ ಎಷ್ಟೊಂದು ಲೇಖಕರಿಗೆ, ಮುದ್ರಕರಿಗೆ, ಪ್ರಕಾಶಕರುಗಳಿಗೆ, ಗ್ರಂಥಾಲಯದವರಿಗೆ, ಉದ್ಯೋಗ ಸೃಷ್ಟಿ, ಆದಾಯ ವೃದ್ಧಿ ಎಂದು ಯೋಚಿಸಿ. ಇದೊಂದು ಕಾರಣಕ್ಕಾದರೂ ಎಲ್ಲ ಕೃತಿಗಳನ್ನು ಪೂರ್ತಿಯಾಗಿ ಮೊದಲಿನಿಂದ ಕೊನೆತನಕ ಓದಲೇಬೇಕೆಂಬ ಮೂಢನಂಬಿಕೆ ಮುಂದುವರಿಯಲೇಬೇಕು ಎಂದು ಆಶಿಸುತ್ತೇನೆ.

ಈ ಮೂಢನಂಬಿಕೆಯು ಮುಂದುವರೆಯಲು ಇನ್ನೊಂದು ಆಳವಾದ ಕಾರಣವೂ ಇದೆ. ಸೃಷ್ಟಿಯಲ್ಲಿ, ಬದುಕಿನಲ್ಲಿ ನಮ್ಮ ಕತೆ, ಪಾತ್ರ, ಕೆಲಸ ಮುಗಿದುಹೋದ ಮೇಲೂ ನಾವು ನಮಗೆ ಆಯಸ್ಸಿನ ಭಾಗ್ಯವಿದೆಯೆಂಬ ಕಾರಣಕ್ಕೇ ಬದುಕುತ್ತಾ ಹೋಗುತ್ತೇವೆ. ಹಾಗೆ ಕತೆಗಳು, ವಿದ್ಯಮಾನ, ಒಳನೋಟಗಳೆಲ್ಲ ಮುಗಿದುಹೋದ ಮೇಲೂ ಲೇಖಕರು ಪುಸ್ತಕದ ವ್ಯಾಪ್ತಿಯನ್ನು ಹಿಗ್ಗಿಸುತ್ತಲೇ ಇರುತ್ತಾರೆ. ನಾವೆಲ್ಲ ಅನಗತ್ಯವಾಗಿ ಈ ಭೂಮಿಯ ಮೇಲೆ ಬದುಕಿರುವತನಕವೂ ಒಂದು ಪುಸ್ತಕವನ್ನು ಪೂರ್ತಿಯಾಗಿ ಓದಬೇಕು, ಓದಲೇಬೇಕು ಎಂಬ ಮೂಢನಂಬಿಕೆಗನುಗುಣವಾಗಿಯೇ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು.

ಈ ಬರಹ ನಿಮಗೆ ಇಷ್ಟವಾಗಿದ್ದರೆ, ಸದರಿ ಮೂಢನಂಬಿಕೆಯ ವ್ಯಾಪ್ತಿಯಲ್ಲಿ ನನ್ನನ್ನು ಸೇರಿಸಿಕೊಳ್ಳಿ, ನನ್ನ ಎಲ್ಲ ಕೃತಿಗಳನ್ನು ಸಂಪೂರ್ಣವಾಗಿ, ಸಮಗ್ರವಾಗಿ ಓದಬೇಕೆಂದು ಕೋರಿಕೊಳ್ಳುತ್ತೇನೆ. ಸಾಂದರ್ಭಿಕವಾಗಿ ಹೇಳುವುದಾದರೆ, ಇನ್ನು ಕೆಲವೇ ದಿನಗಳಲ್ಲಿ ನನ್ನ ಸಮಗ್ರ ಕಥೆಗಳ ಎರಡು ಸಂಪುಟಗಳು ಪ್ರಕಟವಾಗಲಿವೆ.

(ಬರೆದದ್ದು – 7-6-2024 – ಸಿಯಾಟೆಲ್).


 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW