ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಕಥಾಸಂಕಲನದಲ್ಲಿ ಬರುವ “ಯೂಟರ್ನ್” ಎನ್ನುವ ಕಥೆಯು ಕೆಲಸದವಳನ್ನು ಮದುವೆಯಾಗುವ ಇಳಿವಯಸ್ಸಿನಲ್ಲಿ ಕಾಡುವ ಮನದ ಒಂಟಿತನ, ಮನದ ಬೇಸರ ಹಾಗು ತಲ್ಲಣಗಳನ್ನು ತೆರೆದಿಡುತ್ತದೆ. ಹೆಂಡತಿಯನ್ನು ತಾತ್ಸಾರದಿಂದ ಕಾಣುವ ಗಂಡನೊಬ್ಬ ಹೆಂಡತಿಯ ಮನೋರೋಗಕ್ಕೆ ಕಾರಣವಾಗುವ ಕಥೆ “ತಲ್ಲಣಿಸದಿರು ಮನವೇ”. ಈ ಕೃತಿಯ ಕುರಿತು ಲೇಖಕಿ ಆಶ್ರಿತ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಪಾಂಚಾಲಿಯಾಗಲಾರೆ
ಲೇಖಕರು : ಗೀತಾ ಕುಂದಾಪುರ Geetha Kundapura
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಶನ್
ಪುಟಗಳ ಸಂಖ್ಯೆ : 120
ಪುಸ್ತಕದ ಬೆಲೆ : 160/-
ಲೇಖಕರ ಪರಿಚಯ :
ಎಂ.ಕಾಂ ಪದವಿ ಪಡೆದು, ವಿದೇಶಗಳಲ್ಲಿ ಪ್ಲಾನರ್ ಮತ್ತು ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಕೆಲಸ ಮಾಡಿರುವ ಶ್ರೀಮತಿ ಗೀತಾ ಕುಂದಾಪುರ ಅವರ ಲೇಖನ ಹಾಗು ಕಥೆಗಳು ವಿವಿಧ ನಿಯತಕಾಲಿಕಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. “ಪಾಂಚಾಲಿಯಾಗಲಾರೆ” ಇವರ 7 ನೇ ಕೃತಿಯಾಗಿದ್ದು 4 ನೇ ಕಥಾಸಂಕಲನ ಇದಾಗಿದೆ.

ಪುಸ್ತಕ ಪರಿಚಯ :
ಪುಸ್ತಕದ ಮುಖಪುಟ ಹಾಗು ಶೀರ್ಷಿಕೆ ಕಥಾಸಂಕಲನದ ಬಗ್ಗೆ ಕುತೂಹಲ ಮೂಡಿಸುತ್ತದೆ. ಸಾಮಾನ್ಯವಾಗಿ ಕಥಾಸಂಕಲನ ಓದುವ ಮುನ್ನ ಯಾವ ರೀತಿಯ ಕಥೆಗಳು ಇಲ್ಲಿರಬಹುದು ಎನ್ನುವ ಪ್ರಶ್ನೆ ಮೂಡುವುದು ಸಹಜ. ಲೇಖಕಿ ಗೀತಾ ಕುಂದಾಪುರ ಅವರ “ಪಾಂಚಾಲಿಯಾಗಲಾರೆ” ಪುಸ್ತಕವು ಇದರಿಂದ ಹೊರತಾಗಿಲ್ಲ.
ಶೀರ್ಷಿಕೆ ಓದುವಾಗ ಮಹಾಭಾರತದ ದ್ರೌಪದಿ ನೆನಪಾಗುತ್ತಾಳೆ. ಅವಳ ಬದುಕನ್ನು ಹೋಲುವ ಕಥೆ ಇರಬಹುದು ಎಂದು ಊಹಿಸಬಹುದು. “ಪಾಂಚಾಲಿಯಾಗಲಾರೆ” ಎನ್ನುವ ಕಥೆಯ ನಾಯಕಿ ಜಾನಕಿ. ವಿಧಿಯಾಟಕ್ಕೆ ಶರಣಾಗಿ ಬದುಕಿನ ದಾರಿಯನ್ನು ಬಂದಂತೆ ಸ್ವೀಕರಿಸಿ ನೋವನ್ನು ನುಂಗಿಕೊಂಡು ಬದುಕಿದವಳ ಕಥೆ ಇದು. ಸಾವಿನ ದವಡೆಯಲ್ಲಿರುವ ತಂದೆ ಸತ್ತ ನಂತರ ಜವಾಬ್ದಾರಿ ಕಳೆದುಕೊಳ್ಳಲು ಅಮ್ಮನಿಗೆ ಮದುವೆ ಮಾಡುವ ಯೋಚನೆ ಮಕ್ಕಳ ತಲೆಯಲ್ಲಿದೆ ಎನ್ನುವುದು ತಿಳಿದು ಕುಸಿಯುವ ಜಾನಕಿಗೆ ಇದರ ಹಿಂದೆ ಮಕ್ಕಳಿಗಿದ್ದ ಆಲೋಚನೆ ತಿಳಿದಾಗ ಅವಳ ಹೃದಯ ನಲುಗುತ್ತದೆ.
ಪಾಂಚಾಲಿಯಾಗಲಾರೆ ಎನ್ನುವ ಹೆಸರೇ ಹೇಳುವಂತೆ ಜಾನಕಿಗೆ ಮತ್ತೆ ಮತ್ತೆ ಮದುವೆಯಾಗುವ ಮನಸ್ಸಿರುವುದಿಲ್ಲ. ಆದರೆ ಪರಿಸ್ಥಿತಿ ಅವಳನ್ನು ವಿವಾಹವಾಗುವಂತೆ ಮಾಡುತ್ತದೆ. ಪಾಂಚಾಲಿಯಾಗಲಾರೆ ಎಂದರೆ ನಾಲ್ಕು ಮದುವೆ ಆಗಿದ್ದಾಳೆಯೇ? ಯಾಕೆ ? ಐದನೆ ಮದುವೆ ಏಕೆ ಮುರಿದು ಬಿತ್ತು? ಐದನೇ ಮದುವೆಯಾಗಲು ಒಪ್ಪದ ಅವಳ ಮನ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಓದಿ ತಿಳಿದರೆ ಚೆಂದ. ಶೀರ್ಷಿಕೆ ಮಹಾಭಾರತದ ನಾಯಕಿಯದು..ಇಲ್ಲಿನ ಕಥೆಯ ನಾಯಕಿಯ ಹೆಸರು ರಾಮಾಯಣದ ನಾಯಕಿಯದು.
ಇಲ್ಲಿನ ಪ್ರತಿಯೊಂದು ಕಥೆಯ ಪಾತ್ರಗಳಿಗೆ ಹೆಸರಿಡುವಾಗ ವಿಶೇಷ ಆಸಕ್ತಿ ವಹಿಸಿದ್ದಾರೆ ಎನ್ನುವುದನ್ನು ಕಾಣಬಹುದು. ವಾತಾವರಣಕ್ಕೆ ಅನುಗುಣವಾಗಿ ಹೆಸರುಗಳನ್ನು ಕಥೆಯ ಪಾತ್ರಗಳಿಗೆ ಹೊಂದಿಸಿರುವುದನ್ನು ಇಲ್ಲಿ ಗಮನಿಸಬಹುದು.
ಸಂಪ್ರದಾಯವನ್ನು ತಿಳಿಸುವ ವಿಭಿನ್ನವಾದ ಕಥೆ “ಆಟಿ ಕಾಲದ ಸ್ವಾಮಿ”. ಇಲ್ಲಿ ಸ್ವಾಮಿಯ ವೇಷವನ್ನು ಧರಿಸಿಕೊಂಡು ಆಟಿ ತಿಂಗಳಲ್ಲಿ ಮನೆ ಮನೆ ತಿರುಗುವ ವೇಷದಾರಿಯ ಬದುಕನ್ನು ಬಹಳಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ದಕ್ಷಿಣ ಕನ್ನಡದ ಹೆಮ್ಮೆ ಯಕ್ಷಗಾನವನ್ನು ” ರಂಗಸ್ಥಳ” ಎನ್ನುವ ಕಥೆಯಲ್ಲಿ ಬಹಳಾ ಸೊಗಸಾಗಿ ಕಥೆಯಲ್ಲಿ ಹೆಣೆದಿದ್ದಾರೆ. ಪೌರಾಣಿಕ ಪ್ರಸಂಗದಲ್ಲಿ ಅರ್ಜುನನ ಪಾತ್ರದಲ್ಲಿ ಹೆಸರು ಮಾಡಿದ ಪ್ರಶಸ್ತಿ ವಿಜೇತ ಕಲಾವಿದನಿಗೆ ತನ್ನ ಮಗನು ನನ್ನಂತೆ ಹೆಸರು ಮಾಡಬೇಕು ಎನ್ನುವ ಕನಸಿರುತ್ತದೆ. ಅದಕ್ಕೆ ಬೇಕಾದ ತಯಾರಿಯನ್ನು ಹೇಗೆ ಮಾಡುತ್ತಾನೆ ? ಮಗ ಅಪ್ಪನಂತೆ ಹೆಸರು ಮಾಡುತ್ತಾನೆಯೇ? ತನ್ನನ್ನು ಮೀರಿಸುವ ಏಕಲವ್ಯನಂತ ಶಿಷ್ಯನನ್ನು ಭೇಟಿ ಮಾಡಿದ ಮೇಲೆ ಮಗನಿಗಾಗಿ ದ್ರೋಣರಂತೆ ಗುರುದಕ್ಷಿಣೆ ಪಡೆಯುವ ಯೋಚನೆ ಮೂಡುತ್ತದೆ. ಅದು
ಸಫಲವಾಗುತ್ತದೆಯೇ ? ಹೆಚ್ಚು ಹೇಳಿ ಓದುವ ಆಸಕ್ತಿ ಹಾಳು ಮಾಡಲಾರೆ. ಕಥೆಯ ಪಾತ್ರಗಳನ್ನು ಬಹಳಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಮಗಳು ನರ್ಸ್ ಆಗುವುದು ಇಷ್ಟವಿಲ್ಲದೆ ಧಿಕ್ಕರಿಸುವ ತಂದೆಯ ಕಥೆ “ನೆರೆ”. ಈ ಕಥೆಯಲ್ಲಿ ಮಳೆಯಿಂದ ಉಂಟಾಗುವ ನೆರೆಯ ಪ್ರದೇಶದಲ್ಲಿನ ಜನರು ಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ . “ರಂಗಸ್ಥಳ” ಹಾಗು “ನೆರೆ” ಈ ಎರಡು ಕಥೆಗಳಲ್ಲಿ ಕುಂದಗನ್ನಡದ ಸೊಬಗನ್ನು ಕಾಣಬಹುದು. ಸರಳವಾಗಿ ಎಲ್ಲರೂ ಓದಿಕೊಂಡು ಹೋಗುವಂತೆ ಬರೆದಿದ್ದಾರೆ.
ಢೋಂಗಿ ಜ್ಯೋತಿಷಿಯೊಬ್ಬನ ಶಾಸ್ತ್ರವನ್ನು ಅತಿಯಾಗಿ ನಂಬಿ ಬದುಕಿನ ಸವಿಯನ್ನು ಹಾಳಾಗಿಸಿಕೊಂಡವನ ಕಥೆ “ಬೆಕ್ಕಿನ ಕಣ್ಣು”. ಕೈ ಹಿಡಿದವಳು ತಮ್ಮ ಮನೆಗಾಗಿ, ತಮ್ಮ ಬದುಕಿನ ಒಳಿತಿಗಾಗಿ ದುಡಿದಿರುವುದು ತಿಳಿದಿದ್ದರೂ ಢೋಂಗಿ ಜ್ಯೋತಿಷಿ ಹೇಳಿದಂತೆ ತನ್ನ ಪಾಲಿನ ಅದೃಷ್ಟ ದೇವತೆಯನ್ನು ದುರಾದೃಷ್ಟವೆಂದು ನಂಬಿ ಅವಳಿಂದ ದೂರ ಉಳಿಯುವ ಕಥೆ ಇದು. ಪ್ರಭಾಕರ ಮಡದಿಯ ಬಗ್ಗೆ ಅರಿಯುತ್ತಾನ ? ಮಡದಿ ವಿದ್ಯಾ ಕ್ಷಮಿಸುತ್ತಾಳ ? ಈ ಕಥೆ ಓದಿದಾಗ ಇಂತಹ ಘಟನೆಗಳು ಇನ್ನು ನಡೆಯುತ್ತಿರುವುದನ್ನು ಕೇಳಿದ ನೆನಪಾಗುತ್ತದೆ. ಇಂತಹ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಈಗಲೂ ಇದ್ದಾರೆ ಎನ್ನುವುದು ಬಹಳಾ ಬೇಸರದ ವಿಚಾರ.
ನಮ್ಮ ಸುತ್ತ ಮುತ್ತ ನಡೆಯುವ ವಿಷಯಗಳನ್ನು ಆರಿಸಿಕೊಂಡು ಅದನ್ನು ಮನಮುಟ್ಟುವ ರೀತಿಯಲ್ಲಿ ಕಥೆಯನ್ನು ಹೆಣೆದಿರುವ ಪರಿ ತುಂಬಾ ಸೊಗಸಾಗಿ ಈ ಪುಸ್ತಕದಲ್ಲಿ ಮೂಡಿಬಂದಿದೆ. “ನೆರಳಿನೊಳಗಿನ ಬೆಳಕಿನಾಟ” ಕಥೆಯಲ್ಲಿ ಅತಿ ಸ್ವಾರ್ಥಿಯಾದ ತಂದೆಯೊಬ್ಬ ತನ್ನ ಮಗನ ಜೀವ ಉಳಿಸಲು ಕಾರ್ ಡ್ರೈವರ್ ಮಗನ ಅಂಗವನ್ನು ಬಳಿಸಿಕೊಳ್ಳುವ ಕಥೆಯನ್ನು ತೆರೆದಿಡುತ್ತದೆ. ಈ ಕಥೆ ಓದುವಾಗ ರಕ್ತ ಕುದಿಯುತ್ತದೆ. ಅದೆಷ್ಟು ಜನ ಇಂತಹ ಸಂದರ್ಭ ಎದುರಿಸಿರಬಹುದು ಎನ್ನುವ ಯೋಚನೆ ಮೂಡುತ್ತದೆ.
ಕಣ್ಣ ರೆಪ್ಪೆಯಂತೆ ಕಾಯುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ತಮ್ಮ ಜೀವನವನ್ನು ನೋಡಿಕೊಳ್ಳುವ ಮಕ್ಕಳು ಇಂದು ಹೆಚ್ಚಾಗಿದ್ದಾರೆ. ಮಕ್ಕಳಿಗಾಗಿ ದುಡಿಯುವ ತಾಯಿಯೊಬ್ಬಳು ಬದುಕಿರುವಾಗಲೇ ಅವಳ ಆಸ್ತಿಯನ್ನು ಮಾರಿ ಅವಳು ಸತ್ತಿದ್ದಾಳೆ ಎಂದು ಫೋಟೋ ಹಾಕಿರುವುದು ಕಂಡು ಬೆರಗಾಗಿ ನೊಂದುಕೊಳ್ಳುವ ಸಿರಿಯಜ್ಜಿಯ ಕಥೆಯೇ “ಹೆದ್ದಾರಿಯಲ್ಲಿ ನಿಂತ ಬದುಕು”. ದೊಡ್ಡ ದೊಡ್ಡ ಕಟ್ಟಡಗಳಲ್ಲಿ ತಂದೆ ತಾಯಿಯ ಫೋಟೋ ಗೆ ಹಾರ ಹಾಕಿರುವುದು ಕಣ್ಣಿಗೆ ಬಿದ್ದರೆ ಯೋಚಿಸುವಂತೆ ಮಾಡುವ ಕಥಾಹಂದರ ಇದಾಗಿದೆ.
“ಯೂಟರ್ನ್” ಎನ್ನುವ ಕಥೆಯು ಕೆಲಸದವಳನ್ನು ಮದುವೆಯಾಗುವ ಇಳಿವಯಸ್ಸಿನಲ್ಲಿ ಕಾಡುವ ಮನದ ಒಂಟಿತನ, ಮನದ ಬೇಸರ ಹಾಗು ತಲ್ಲಣಗಳನ್ನು ತೆರೆದಿಡುತ್ತದೆ. ಹೆಂಡತಿಯನ್ನು ತಾತ್ಸಾರದಿಂದ ಕಾಣುವ ಗಂಡನೊಬ್ಬ ಹೆಂಡತಿಯ ಮನೋರೋಗಕ್ಕೆ ಕಾರಣವಾಗುವ ಕಥೆ “ತಲ್ಲಣಿಸದಿರು ಮನವೇ” . ಇಂತಹ ಮನಸ್ಥಿತಿ ಹೊಂದಿದವರೊಂದಿಗೆ ಬದುಕುವುದು ನರಕವೇ ಸರಿ ಎನ್ನುವ ಅನುಭವ ಮೂಡುವಷ್ಟು ನೈಜ್ಯವಾಗಿ ಕಥೆಯನ್ನು ಹೆಣೆದಿದ್ದಾರೆ.
ಎಲ್ಲಾ ಕಥೆಗಳನ್ನು ಪರಿಚಯಿಸಲು ಹೋಗಲಾರೆ. ಒಂದಿಷ್ಟು ಬಿಟ್ಟಿರುವೆ. ಒಟ್ಟು 18 ಕಥೆಗಳಿವೆ. ಕಡೆಯ ನಾಲ್ಕು ಕಥೆಗಳು ಒಂದು ಪುಟದ ಕತೆಗಳಾಗಿವೆ. ಆದರೆ ಈ ಕಥೆಗಳ ಆಳ ಬಹಳಾ ವಿಸ್ತಾರವಾಗಿದ್ದು ಯೋಚಿಸುವಂತೆ ಮಾಡುತ್ತದೆ.

ಮುಖ್ಯ ಅಂಶಗಳು :
- ನಿರೂಪಣೆ ಶೈಲಿ ಸೊಗಸಾಗಿದೆ.
- ಭಾಷೆಯ ಬಳಕೆ ಸರಳವಾಗಿ ಓದಿಸಿಕೊಂಡು ಹೋಗುತ್ತದೆ.
- ಕಥೆಗಳು ವಿಭಿನ್ನವಾಗಿ ವಿಶೇಷವಾದ ಭಾವನೆ ಮೂಡುತ್ತದೆ .
- ಕಥೆಗಳು ಆಳವಾದ ವಿಚಾರವನ್ನು ತೆರೆದಿಟ್ಟು ಯೋಚಿಸುವಂತೆ ಮಾಡುತ್ತದೆ.
ಅನುಭವ :
ಈ ಪುಸ್ತಕದ ಮುಖಪುಟ ಅನಾವರಣದಲ್ಲಿ ನಾನು ಪಾಲ್ಗೊಂಡಿದ್ದೆ.. ಪುಸ್ತಕವನ್ನು ಓದುವ ಇಚ್ಛೆ ಅಂದೇ ಇತ್ತು. ಕೊನೆಗೂ ಪೂರ್ಣ ಗೊಂಡಿತು. ಓದುವ ಆಸೆಗೆ ಪುಸ್ತಕ ಮೋಸ ಮಾಡಲಿಲ್ಲ. ಕುಂದಾಪುರ ಕನ್ನಡವನ್ನು ಇಲ್ಲಿ ಓದಿದಾಗ ಊರಿಗೆ ಹೋಗಿ ಬಂದಷ್ಟೇ ಖುಷಿಯನ್ನು ಕಥೆಗಳು ನೀಡಿದ್ದು ಸುಳ್ಳಲ್ಲ
ಕಥಾವಸ್ತುವಿನ ಆಯ್ಕೆ ಹಾಗು ಅದನ್ನು ಪ್ರಸ್ತುತ ಪಡಿಸಿರುವ ರೀತಿ ಮನಸ್ಸಿಗೆ ಮುದ ನೀಡಿತು. ಕೆಲವು ಕತೆಗಳು ಮನಸ್ಸಿನ ಭಾವನೆಗಳನ್ನು ಕೆರಳುವಂತೆ ಮಾಡಿತು. ಸಮಾಜದ ಮನಸ್ಥಿತಿಯ ಬಗ್ಗೆ ಕನ್ನಡಿ ಹಿಡಿಯುವಂತಹ ಕಥೆಗಳು ಇಲ್ಲಿವೆ. ಒಟ್ಟಾರೆಯಾಗಿ ಯೋಚಿಸುವ ವಿಷಯಗಳನ್ನು ಒಳಗೊಂಡಿರುವ ಕಥೆಗಳನ್ನು ಹೊಂದಿರುವ ಒಂದು ಒಳ್ಳೆಯ ಪುಸ್ತಕವಿದು.
- ಆಶ್ರಿತ ಕಿರಣ್
