ಹರ್ಷ ರಘುರಾಂ ಅವರು ಜರ್ಮನ್ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿರುವ ಛಂದ ಪ್ರಕಾಶನದ “ನನ್ನ ತಂಗಿ ಈಡಾ” ಹೊಸ ತೆರನಾದ ಕಾದಂಬರಿ. ಲೇಖಕಿ ಮತ್ತು ಕವಿಯತ್ರಿ ಕೆ.ಎನ್.ಲಾವಣ್ಯ ಪ್ರಭಾ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ನನ್ನ ತಂಗಿ ಈಡಾ
ಮೂಲ ಲೇಖಕರು : ಕಾರೋಲಿನ್ ವಾಲ್
ಕನ್ನಡಕ್ಕೆ : ಹರ್ಷ ರಘುರಾಮ್
ಬೆಲೆ : ೨೩೧
ಪ್ರಕಾರ : ಅನುವಾದ
ಅಲೆಸ್ ಇನ್ ಆರ್ಡನುಂಗ್? – ಎಲ್ಲಾ ಓಕೆ?
ಬಿಸ್ ಮೋರ್ಗನ್ – ನಾಳೆ ಸಿಗೋಣ
ಎಂಟ್ ಶುಲ್ ಡಿ ಗುಂಗ್ – ಎಕ್ಸ್ ಕ್ಯೂಸ್ ಮಿ
ಡಾಂಕೆ – ಥ್ಯಾಂಕ್ಯೂ
ಗೂಟೆ ನಾಖ್ – ಶುಭ ರಾತ್ರಿ
ಇಶ್ ಹ್ಯಾಬ್ ಡಿಶ್ ಲೀಬ್ – ನೀನು ನನಗೆ ತುಂಬಾ ಇಷ್ಟ
ಇಶ್ ಡಿಶ್ ಔಖ್ – ನೀನೂ ಸಹಾ
ಜರ್ಮನ್ ಭಾಷೆಯ ಬಳಕೆಯಲ್ಲಿರುವ ಕೆಲವು ಪದಗಳಿಗೆ ಅನುವಾದಕರು ಕನ್ನಡದ ಅರ್ಥವನ್ನೂ ಕೊಟ್ಟಿರುವುದು ಸರಾಗ ಓದಿಗೆ ಸಹಾಯವಾಯಿತು.

” ನನ್ನ ತಂಗಿ ಈಡಾ” ಕಾದಂಬರಿಯ ಓದಿನಾರಂಭದಲ್ಲಿ ಜರ್ಮನ್ ಭಾಷೆಯ ಪಾತ್ರಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಕೊಂಚ ಕಷ್ಟವೆನಿಸಿ ಕತೆಯ ಹಿಡಿತ ಅತ್ತಿತ್ತ ಹೋಗುತ್ತಿದ್ದರೂ ನಿಧಾನವಾಗಿ ಓದುತ್ತಾ ಹೋದಂತೆಲ್ಲಾ ಕತೆ ತನ್ನ ಆಳದೊಳಗೆ ನನಗೇ ಗೊತ್ತಿಲ್ಲದಂತೆ ಸೆಳೆದುಕೊಂಡ ರೀತಿಗೆ ಅನುವಾದದ ಸೊಗಸು ಕಾರಣವೆನಿಸಿತು.
ಈ ಕಾದಂಬರಿಯಲ್ಲಿ ನಾಯಕಿ ಟಿಲ್ಡಾ ಶ್ಮಿಟ್ ಎನಿಸಿದರೂ ಕಾದಂಬರಿಯ ಕೊನೆಯಲ್ಲಿ ಅವಳ ತಂಗಿ ಈಡಾ ನಾಯಕಿಯಷ್ಟೆ ಪ್ರಾಧಾನ್ಯತೆ ಪಡೆದುಬಿಡುವ ಹಾಗೆ ಪಾತ್ರ ಪರಿಕಲ್ಪನೆಯನ್ನು ತಂದಿರುವ ಮೂಲ ಲೇಖಕಿ ಕರೋಲಿನಾ ವಾಲ್ ಅವರ ಕಲೆಗಾರಿಕೆಗೆ ಸೋತೆ.
ಸಮಕಾಲೀನ ಜರ್ಮನಿಯ ಈ ಕಾದಂಬರಿಯಲ್ಲಿ ಅವರ ಜೀವನಶೈಲಿ , ಹದಿಹರೆಯದ ಸಂಕಷ್ಟಗಳು , ಕೌನ್ಸೆಲಿಂಗ್ , ಪೋಷಕರಿದ್ದೂ ಅನುಭವಿಸುವ ಅನಾಥ ಪ್ರಜ್ಞೆ , ರೇವ್ ಪಾರ್ಟಿಗಳು ಮತ್ತು ಅವುಗಳಲ್ಲಿ ನಡೆಯುವ ಡ್ರಗ್ಸ್ ಅಫೀಮು ಮಾದಕವಸ್ತುಗಳ ಸೇವನೆ , ಸ್ವಚ್ಛಂದ ಕಾಮ , ಗರ್ಭನಿರೋಧಕ ಮಾತ್ರೆಗಳ ಸೇವನೆ….ಇವೆಲ್ಲವೂ ನಮ್ಮ ದೇಶದಲ್ಲೂ ಇತ್ತೀಚೆಗೆ ಕಾಣುತ್ತಿರುವುದು ದುರ್ದೈವದ ಸಂಗತಿ.ಆದರೆ ದೇಶ ಭಾಷೆ ಜಾತಿ ಧರ್ಮ ಬಣ್ಣ ಯಾವುದೇ ಆದರೂ ಮನುಷ್ಯ ಜೀವಿ ಅನುಭವಿಸುವ ನೋವು ನಲಿವುಗಳಂತಹ ಮೊದಲಾದ ಭಾವನೆಗಳು ಒಂದೇ. ಹಾಗಾಗಿ ಅಲ್ಲಿನ ಎಲ್ಲಾ ಪಾತ್ರಗಳ ಭಾವ ಸಂವೇದನೆಗಳು ನಮ್ಮ ನೆಲದವೂ ಆಗಿ ಆಪ್ತವಾಗುತ್ತವೆ.
ತನ್ನ ವಯಸ್ಸಿನವರು ನಡೆಸುತ್ತಿದ್ದ ಸ್ವತಂತ್ರ ಜೀವನವಾಗಲೀ ಅಪಾರ ಹಣವಾಗಲೀ ತನ್ನ ಬಳಿಯಿರದೆ ತಂದೆಯೂ ಇಲ್ಲದ ” ಟಿಲ್ಡಾ ಶ್ಮಿಟ್” ತನ್ನ ಕುಡುಕಿ ತಾಯಿ ” ಮಾಮಾ” ಳನ್ನು ಮತ್ತು ಪುಟ್ಟ ತಂಗಿ “ಈಡಾ” ಳನ್ನು ಸಲಹುತ್ತಲೇ ತಂಗಿಯ ಶಿಕ್ಷಣದ ಜವಾಬ್ದಾರಿ ಜೊತೆ ಸಂಸಾರದ ಭಾರವನ್ನೂ ಹೊತ್ತುಕೊಂಡೇ ಹೊರಗೆ ಕೆಲಸ ಮಾಡುತ್ತಾ ಕಾಲೇಜಿನಲ್ಲಿ ಓದುತ್ತಿದ್ದ ಅವಳ ಪರಿಶ್ರಮ ಮತ್ತು ಶ್ರದ್ಧೆಗೆ ಬರ್ಲಿನ್ ನ ಹುಮ್ ಬೋಲ್ಟ್ ವಿ ವಿ ಯಲ್ಲಿ ಡಾಕ್ಟರೇಟ್ ಪಡೆವ ಅವಕಾಶ ಪಡೆದದ್ದು ಟಿಲ್ಡಾಳ ಬಗ್ಗೆ ಹೆಮ್ಮೆ ಮೂಡಿಸುತ್ತದೆ.
ಹಾಗೆ ಓದಲು ಹೋಗುವಾಗ ಕುಡುಕಿ ತಾಯಿಯ ದೌರ್ಜನ್ಯಕ್ಕೆ ತಂಗಿ ಈಡಾ ಬಲಿಯಾಗದಂತೆ ಅವಳಿಗೆ ಸಾಹಸಮಯ ಕತೆಗಳನ್ನು ಹೇಳುತ್ತಾ ಅಂತಹದೇ ಮೂವಿಗಳನ್ನು ತೋರಿಸುತ್ತಾ ಸ್ವಿಮಿಂಗ್ ಸ್ಪರ್ಧೆಗೆ ತಯಾರಿ ಮಾಡುತ್ತಾ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ತಂಗಿಯನ್ನು ಮಾನಸಿಕವಾಗಿ ದೈಹಿಕವಾಗಿ ಸಬಲಳನ್ನಾಗಿಸಿ ಕುಡುಕಿ ತಾಯಿಯನ್ನು ಎದುರಿಸಲು ಸಾಧ್ಯವಾಗುವಂತೆ ಬಲಿಷ್ಠಳನ್ನಾಗಿಸುವುದು ಅಕ್ಕ ಟಿಲ್ಡಾ ತನ್ನ ಸಂಸಾರ ಮತ್ತು ಓದು ಇವೆರಡನ್ನೂ ನಿಭಾಯಿಸುವ ಅವಳ ಸಾಮರ್ಥ್ಯವನ್ನು ಬಿಂಬಿಸುತ್ತದೆ.
ಈ ಕಾದಂಬರಿಯಲ್ಲಿ ಕೆಲವು ಸಂಗತಿಗಳು ಅತ್ಯಂತ ರೋಚಕವೆನಿಸಿ ಮನಸ್ಸನ್ನಾವರಿಸಿದವು.

ತನ್ನದೇ ಹದಿವಯಸ್ಸಿನವರ ಸಹವಾಸದಲ್ಲಿದ್ದೂ ಪಾರ್ಟಿಗಳಲ್ಲಿ ಬಿಯರ್ ಕುಡಿಯುತ್ತಾ ಡ್ರಗ್ಸ್ ಸೇವಿಸುತ್ತಾ ಯುವತಿಯರಲ್ಲೊಬ್ಬಳಾಗಿದ್ದ ಟಿಲ್ಡಾ ಕೆಲಸ ಸಮಯಗಳಲ್ಲೇ ಎಚ್ಚೆತ್ತು ತನ್ನ ಸಂಸಾರದ ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಾ ಓದನ್ನು ಮುಂದುವರಿಸಿದ್ದು ಮತ್ತು ಈವಾನ್ , ಮಾರ್ಲೇನಾ ಮೊದಲಾದ ಯುವಕರೊಂದಿಗೆ ಉಂಟಾಗುವ ವಯೋಸಹಜ ಪ್ರೇಮವನ್ನೂ ಸಹಾ ಆಕೆ ವಾಸ್ತವ ಪರಿಸ್ಥಿತಿಯಲ್ಲಿ ನಿಂತು ಯೋಚಿಸುತ್ತಲೇ ತನ್ನ ಹೆಜ್ಜೆ ಮುಂದಿಡದಂತೆ ನಿಯಂತ್ರಿಸಿಕೊಂಡು ತನ್ನ ಮಿತಿಗಳನ್ನು ಅರಿತು ತನ್ನ ಆಸೆಗಳನ್ನು ಮೊಟಕುಗೊಳಿಸುತ್ತಾ ಕಣ್ಣಂಚಿನಲ್ಲೇ ಕಂಬನಿ ತುಳುಕಿಸುವ ಟಿಲ್ಡಾಳ ಪ್ರಬುದ್ಧ ನಡವಳಿಕೆಗಳು ಮನಸ್ಸನ್ನು ಆವರಿಸಿ ಟಿಲ್ಡಾಳ ಪಾತ್ರ ನಮ್ಮೊಳಗೆ ಇಳಿಯುತ್ತದೆ.
ಟಿಲ್ಡಾ ತಂಗಿ ಈಡಾಳಿಗೆ ಹೇಳುವ ಕತೆಗಳು ಮತ್ತು ಅಕ್ಕ ಹೇಳುವ ಕತೆಗಳನ್ನು ಈಡಾ ತನ್ನದೇ ಕಲ್ಪನೆಯಲ್ಲಿ ಹೊಸೆಯುತ್ತಾ ಮುಂದುವರಿಸುವಾಗ ಅಕ್ಕ ತಂಗಿಯರಿಬ್ಬರೂ ಬಳಸುವ ರೂಪಕಗಳ ಕಲ್ಪನೆಗೆ ಸೋತೆ. ಒಂದು ಕತೆಯಲ್ಲಿ ಮೊದಲು ಮೊಲವಾಗಿ ಆನಂತರ ರಾಜಕುಮಾರಿಯಾಗುವ ಕತೆಯ ಅಂತ್ಯ ನಮ್ಮೆಲ್ಲಾ ಜಾನಪದ ಕತೆಯಂತೆ ನಾಯಕ ನಾಯಕಿಯರಿಬ್ಬರೂ ಮದುವೆಯಾಗಿ ಹತ್ತಾರು ಮಕ್ಕಳನ್ನು ಹೆತ್ತು ನೂರ್ಕಾಲ ಸುಖವಾಗಿ ಬಾಳಿದರು ಎಂಬ ಶುಭ ಮುಕ್ತಾಯವೇ ನಮ್ಮ ದೇಶದ ಪರಂಪರೆಯದ್ದೂ ಹೌದು.
ಇನ್ನೂ ಹತ್ತು ಹಲವಾರು ರೂಪಕಗಳಿಂದ ಕತೆಯನ್ನು ಪರಿಣಾಮಕಾರಿಯಾಗಿಸುವ ಮೂಲ ಲೇಖಕಿ ಕರೊಲಿನಾ ವಾಲ್ ರ ಅದ್ಭುತ ಕಲ್ಪನಾಶಕ್ತಿ ಮತ್ತು ಕವಿತ್ವದ ಪ್ರತಿಭೆ ನಮ್ಮಂತಹ ಕವಿಗಳನ್ನು ಬೇರೆಯದೇ ಲೋಕಕ್ಕೆ ಒಯ್ಯತ್ತದೆ. ತಮ್ಮ ಮೊದಲ ಈ ಕಾದಂಬರಿಯಲ್ಲೇ ಕರೊಲಿನಾ ವಾಲ್ ರು ಗೆದ್ದಿದ್ದಾರೆ.
Pause – ಸುಂದರ ಕ್ಷಣವನ್ನು ನೆನಪಿನಲ್ಲಿರಿಸಿಕೊಳ್ಳುವ ಸಲುವಾಗಿ ಸಮಯವನ್ನು ನಿಲ್ಲಿಸುವ ತಂತ್ರವೂ ಇಲ್ಲಿ ಮನಮೋಹಕ. ಅನೇಕ ಸಂದರ್ಭಗಳಲ್ಲಿ ಇಲ್ಲಿ ಬರುವ pause ಮೋಹಕತೆ ನಮ್ಮ ಜೀವನದಲ್ಲೂ ತರಬೇಕೆನಿಸಿದ್ದಂತೂ ಸತ್ಯ.
ವಿಕ್ಟೋರ್ ನ ಪ್ರೇಮದ ಸೆಳೆತಕ್ಕೆ ಸಿಕ್ಕ ಟಿಲ್ಡಾಳ ಹೊಟ್ಟೆಯಲ್ಲಿ ಏರೋಪ್ಲೇನ್ ಚಿಟ್ಟೆಗಳು ಕಚಗುಳಿಯಿಟ್ಟ ಸಂದರ್ಭದಲ್ಲಿ ಆಕೆ ವಿಕ್ಟೋರ್ ಗೆ ಏರೋಪ್ಲೇನ್ ಚಿಟ್ಟೆಗಳ ಇಡೀ ಜೀವನದ ವಿವರಗಳನ್ನೇ ಸಂಗ್ರಹಿಸಿ ಹೇಳುವಾಗ ವಿಕ್ಟೋರ್ ಮಾಡುವ ಕೀಟಲೆಗಳ ಮಾತುಕತೆಗಳು ನಗುವನ್ನು ಉಕ್ಕಿಸಿತು.
ಅತ್ಯಂತ ಕಷ್ಟದ ಸಮಯದಲ್ಲಿ ಟಿಲ್ಡಾ ಅಸಹಾಯಕತೆಯಿಂದ ಅಳುವುದನ್ನು ಕಂಡ ತಂಗಿ ಈಡಾ ಅಕ್ಕನೆಡೆಗೆ ನೋಡುತ್ತಾ ” ನಾನೂ ಅಳುತ್ತಿಲ್ಲ” ಎಂಬ ಸನ್ನಿವೇಶವಂತೂ ಹೃದಯಸ್ಪರ್ಶಿಯಾಗಿದೆ. ಒಬ್ಬರ ಸಂಕಟಕ್ಕೆ ಮತ್ತೊಬ್ಬರು ಸ್ಪಂದಿಸುವ ಈ ರೀತಿಯ ದೃಶ್ಯಗಳು ಕಾದಂಬರಿಯಲ್ಲಿ ಅನೇಕ ಸಾರಿ ನಮ್ಮ ಕಣ್ಮುಂದೆ ಬರುತ್ತವೆ.
ಟಿಲ್ಡಾ ಮತ್ತು ವಿಕ್ಟೋರ್ ನಡುವೆ ಪ್ರೇಮವಿದ್ದರೂ ಅದನ್ನು ಅವರಿಬ್ಬರ ಮನಸ್ಸಿಗೆ ಖಚಿತಪಡಿಸಿ ಜೊತೆಯಾಗಿ ಒಟ್ಟಿಗಿರಬೇಕಾದ ದೃಢ ನಿಶ್ಚಯವನ್ನು ಅವರು ತೆಗೆದುಕೊಳ್ಳುವಂತೆ ಮಾಡಿದ ತಂಗಿ ಚಿತ್ರಗಾರ್ತಿ ಈಡಾಳ ಸೂಕ್ಷ್ಮ ಸಂವೇದನಾಶೀಲ ಮನಸ್ಸು ಕಾರಣವಾಗುತ್ತದೆ. ತಾನು ರಚಿಸಿದ ಕಲಾಕೃತಿಯ ಮೂಲಕ ಅವರಿಬ್ಬರಲ್ಲಿದ್ದ ಪರಸ್ಪರ ಪ್ರೇಮದ ಬಗೆಗಿನ ಗೊಂದಲ ನಿವಾರಿಸಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.
ಅಕ್ಕನ ಜೊತೆ ಆಗಾಗ ಕತೆಗಳನ್ನು ಹೇಳುತ್ತಾ ಶುಭ ಮುಕ್ತಾಯವನ್ನೇ ಕಲ್ಪಿಸುತ್ತಿದ್ದ ತಂಗಿ ಈಡಾ ಕಾದಂಬರಿಯ ಅಂತ್ಯದಲ್ಲೂ ಸಹಾ ಅಕ್ಕ ಜೀವನದಲ್ಲಿ ಸೆಟಲ್ ಆಗುವಂತೆ ಆ ಮೂಲಕ ಶುಭ ಮುಕ್ತಾಯವನ್ನೇ ಮಾಡುವ ಸನ್ನಿವೇಶ ಓದುಗರ ಮನಸ್ಸನ್ನು ಗೆಲ್ಲುತ್ತದೆ.
ಕಾದಂಬರಿಯಲ್ಲಿ ನಾಯಕಿ ಟಿಲ್ಡಾ ಶ್ಮಿಟ್ ಎನಿಸಿದರೂ ಕಾದಂಬರಿಯ ಅಂತ್ಯದಲ್ಲಿ ಸಂಸಾರದ ಸಾಗರದ ಕಷ್ಟಗಳ ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದ್ದ ಹಡಗಿನಂತಹ ಟಿಲ್ಡಾಳ ಬದುಕನ್ನು ವಿಕ್ಟೋರ್ ನ ಪ್ರೇಮದ ದಡಕ್ಕೆ ಒಯ್ದು ದೃಢವಾಗಿಸಿದ ಶ್ರೇಯಸ್ಸು ತಂಗಿ ಈಡಾಳದು. ತನ್ನಕ್ಕ ತನಗಾಗಿ ಮಾಡಿದ್ದ ಅನೇಕ ತ್ಯಾಗಗಳ ಫಲದ ಋಣವನ್ನು ಇಲ್ಲಿ ತೀರಿಸಿರುವ ಬಗೆಯೇನೋ ಎನಿಸಿತು. ಪುಟ್ಟ ಈಡಾ ಟಿಲ್ಡಾಳ ಬದುಕಿನ ಅದೃಷ್ಟ ದೇವತೆಯಾಗಿ ಬಂದಂತೆ ಟಿಲ್ಡಾಳ ಬದುಕನ್ನು ನಿಶ್ಚಯಿಸುವ ನಾಯಕಿಯೂ ಆಗುವುದು ಇಲ್ಲಿ ಗಮನಾರ್ಹ ಸಂಗತಿ.
ಹಾಗಾಗಿ ಈ ಕಾದಂಬರಿಯಲ್ಲಿ ಟಿಲ್ಡಾ ಮತ್ತು ಈಡಾ ಇಬ್ಬರೂ ನಾಯಕಿಯರೇ ಎನಿಸುವ ಮಟ್ಟಿಗೆ ಕಾಣಿಸುತ್ತಾರೆ.
- ಕೆ.ಎನ್.ಲಾವಣ್ಯ ಪ್ರಭಾ – ಮೈಸೂರು
