ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’ ಪುಸ್ತಕ ಪರಿಚಯ ಕುರಿತು ಶಾಂತಲಾ ಭಂಡಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಾದಂಬರಿ: ‘ಅಗಮ್ಯ’
ಲೇಖಕರು: ಪೂರ್ಣಿಮಾ ಮಾಳಗಿಮನಿ
ಪುಟಗಳು: 129
ಬೆಲೆ: 140/
ಮುಸ್ಸಂಜೆಯ ಬೆಳಕಿಗೆ ಬಣ್ಣ ತುಂಬುವ ಕನಸುಗಳ ಮತ್ತು ಅವಸರದ ಬದುಕಿಗೆ ಮನಸ್ಸೊಂದಿದೆ ಎನ್ನುವುದನ್ನೇ ಮರೆತ ಮನಗಳ ನಡುವಿನ ತಾಕಲಾಟಗಳ ವಾಸ್ತವವೇ ‘ಅಗಮ್ಯ’.
ವಯಸ್ಸು ಇಳಿಯುತ್ತಿರುವ ತಂದೆ ತಾಯಿಗಳು ಮತ್ತು ಪ್ರೀತಿಸಲು ಪುರುಸೊತ್ತಿಲ್ಲದೆ ದುಡಿಯುವ ಮಕ್ಕಳು, ಇವರುಗಳ ನಡುವಿನ ಅಂತರದಿಂದಾಗಿ ಉದ್ಭವಿಸುವ ಅಸಮತೋಲನಕ್ಕೆ, ಸಮಸ್ಯೆಗಳಿಗೆ ಪರಿಹಾರದ ಹಾದಿ ಹುಡುಕುವ ಕತೆ ಪೂರ್ಣಿಮಾ ಮಾಳಗಿಮನೆ ಅವರು ಬರೆದ ‘ಅಗಮ್ಯ’ ಕಾದಂಬರಿ.

ಕಾದಂಬರಿಯಲ್ಲಿ ಸಿಗುವವರು ನಮ್ಮ ಹಾಗೆಯೇ ಸಾಮಾನ್ಯವಾಗಿ ಬದುಕುತ್ತಿರುವವರು, ಆ ಕಾರಣಕ್ಕಾಗಿಯೇ ಪಾತ್ರಗಳು ಆಪ್ತವೆನ್ನಿಸುತ್ತವೆ. ಜನಾರ್ದನ್ ಮತ್ತು ಬೃಂದಾ ಇಬ್ಬರೂ ಪಾಳಿಯ ಪ್ರಕಾರ ನಮಗೆ ತಮ್ಮ ಕತೆ ಹೇಳುತ್ತಾ ಸಾಗುತ್ತಾರೆ. ಸಾಗುತ್ತಲಿದ್ದರೆ ಹಾದಿ ಮುಗಿಯುವುದೆಲ್ಲಿಗೆ? ಸೇರಬೇಕಾದ ತಾಣವನ್ನು ತಲುಪಲಾದೀತೆ? ಈ ಎಲ್ಲವನ್ನು ಕಾದಂಬರಿ ಓದಿಯೇ ತಿಳಿಯಬೇಕು.
ಪೂರ್ಣಿಮಾ ವಿಶಿಷ್ಟ ಶೈಲಿ ಮತ್ತು ತಂತ್ರಗಾರಿಕೆಯಿಂದ ಕಾದಂಬರಿಯನ್ನು ಹೆಣೆದಿದ್ದಾರೆ. ಪ್ರತಿಯೊಂದು ಪಾತ್ರದ ಅಂತರಾಳವನ್ನು ನೈಜವಾಗಿ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಕುತೂಹಲಕಾರಿಯಾಗಿ ಓದಿಸಿಕೊಳ್ಳುವ ಈ ಕಾದಂಬರಿ ಮನಸ್ಪರ್ಶಿಯಾಗಿದೆ.
ಪೂರ್ಣಿಮಾ, ನೀವು ಹೀಗೆಯೇ ಹೊಸ ವಿಷಯಗಳನ್ನು ಹೊತ್ತ ಕತೆ ಕಾದಂಬರಿಗಳನ್ನು ಬರೆಯುತ್ತಲಿರಿ, ಓದುವ ಸುಖ ನಮ್ಮದಾಗಲಿ. ನಿಮಗೆ ನನ್ನ ಕಡೆಯಿಂದ ಮತ್ತೊಮ್ಮೆ ಶುಭ ಹಾರೈಕೆಗಳು.
- ಶಾಂತಲಾ ಭಂಡಿ
