ಡಾ. ಗುರುಪ್ರಸಾದ ಕಾಗಿನೆಲೆ ಅವರ ‘ಸತ್ಕುಲ ಪ್ರಸೂತರು’ ಕಾದಂಬರಿಯು ಫ್ಯಾಮಿಲಿ ಟ್ರೀ ಜೊತೆ ಶುರುವಾಗುತ್ತದೆ, ಲೇಖಕಿ ಶಾಂತಲಾ ಭಂಡಿ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಕಾದಂಬರಿ: ಸತ್ಕುಲ ಪ್ರಸೂತರು
ಲೇಖಕರು: ಡಾ. ಗುರುಪ್ರಸಾದ ಕಾಗಿನೆಲೆ
ಪುಟಗಳು: 256
ಬೆಲೆ: 295 /-
ಪ್ರಕಾಶಕರು: ಅಂಕಿತ ಪ್ರಕಾಶನ
ಎಲ್ಲಿಯೇ ನೆಲೆಸಿದ್ದರೂ ನಾವು ಬೆಳೆದು ಬಂದ ಸಮುದಾಯದ ಆಚಾರ ವಿಚಾರಗಳನ್ನು ಅಪ್ರಜ್ಞಾಪೂರ್ವಕ ಪಾಲಿಸುತ್ತಿರುತ್ತೇವೆ, ಈ ಸಂಪ್ರದಾಯ, ಆಚರಣೆಯ ಮನೋಭಾವ ಪುಟ್ಟ ಪ್ರಮಾಣದಲ್ಲಿ ಮುಂದಿನ ಪೀಳಿಗೆಗೆ ಕೂಡ ವರ್ಗಾವಣೆ ಆಗುತ್ತಿರುತ್ತದೆ. ಎರಡು ವಿಭಿನ್ನ ಧರ್ಮಗಳ ನಡುವಿನ ವಿವಾಹ ವಿಚಾರಗಳ ಅನಾವರಣ ಈ ಕಾದಂಬರಿ.

‘ಸತ್ಕುಲ ಪ್ರಸೂತರು’, ಫ್ಯಾಮಿಲಿ ಟ್ರೀ ಜೊತೆ ಕಾದಂಬರಿ ಶುರುವಾಗುತ್ತದೆ. ಮಾಧ್ವ ಕುಟುಂಬವೊಂದರ ಎರಡು ತಲೆಮಾರಿನ ಇತಿಹಾಸವನ್ನು ಮತ್ತು ಮೂಲ ತೊರೆದು ಬಂದು ಅಮೇರಿಕಾದಲ್ಲಿ ನೆಲೆಯಾಗಿರುವ ಪ್ರಸ್ತುತ ತಲೆಮಾರಿನ ಕುಟುಂಬವೊಂದು ಎದುರಿಸುವ ಸವಾಲುಗಳನ್ನು ಕಾದಂಬರಿಕಾರ ನಮ್ಮೆದುರು ಕುಳಿತು ಎಳೆಎಳೆಯಾಗಿ ವಿವರಿಸುತ್ತಿರುವಂತೆ ಭಾಸವಾಗುತ್ತದೆ.
ಧರ್ಮಗ್ರಂಥ, ಆತ್ಮದ ಪುನರುತ್ಥಾನ, ಮೋಕ್ಷ, ಮುಕ್ತಿಯಲ್ಲೂ ಇರುವ ತಾರತಮ್ಯದ ಕುರಿತಾದ ವಿವರಗಳು ಇಲ್ಲಿವೆ. ನಿತ್ಯನಾರಕಿ, ನಿತ್ಯಸಂಸಾರಿ ಮತ್ತು ಮುಕ್ತಿಯೋಗ ಕುರಿತಾದ ವಿಶ್ಲೇಷಣೆಯಿದೆ. ಮಾರ್ಮನ್ ಸಂಪ್ರದಾಯಗಳು, ಬಹುಪತ್ನಿತ್ವ, ಮಾರ್ಮನ್ ಮಡಿ ಆಚರಣೆಗಳು, ಚರ್ಚ್ ಮದುವೆ, ಟೆಂಪಲ್ ಮದುವೆ, ಸೀಲಿಂಗ್, ಈ ಎಲ್ಲ ಸಂಗತಿಗಳನ್ನು ನಿರೂಪಿಸಿ ಕಾದಂಬರಿಯಾಗಿಸಿದ ರೀತಿ ಹಿಡಿದಿಡುತ್ತದೆ. ಮಾರ್ಮನ್ ಮತ್ತು ಮಾಧ್ವ ಸಂಪ್ರದಾಯಗಳು, ಆಚರಣೆಗಳು ಕೆಲವೆಡೆ ಸಾಂದ್ರವಾಗಿ, ಕೆಲವೆಡೆ ಸರಳವಾಗಿ ಸಾಗುತ್ತ ಗಟ್ಟಿ ಪಾತ್ರಗಳ ಮುಖೇನ ಕಾದಂಬರಿಯ ರೂಪ ತಳೆದಿವೆ.

ಅಮೇರಿಕಾದಲ್ಲಿ ನೆಲೆಸಿರುವ ಮಾಧ್ವ ಕುಟುಂಬವೊಂದರ ನವಪೀಳಿಗೆಯ ಹುಡುಗಿ ಮತ್ತು ಅಪ್ಪಟ ಮಾರ್ಮನ್ ಕುಟುಂಬದ ಹುಡುಗ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದಾಗ ಮಾಧ್ವ ತಂದೆತಾಯಿಗಳು ಮತ್ತು ಮಾರ್ಮನ್ ತಂದೆತಾಯಿಗಳು ಎದುರಿಸುವ ಪಡಿಪಾಟಲುಗಳನ್ನು ದಟ್ಟವಾಗಿ, ಮನದಲ್ಲಿ ನಿಲ್ಲುವಂತೆ ಚಿತ್ರಿಸಲಾದ ಕಾದಂಬರಿಯಿದು. ವೈಚಾರಿಕತೆಯ ನಡುವೆಯೂ ಅಲ್ಲಲ್ಲಿ ಹದವಾಗಿ ಬೆರೆತ ಹಾಸ್ಯಲೇಪನವಿದೆ. ಕಾದಂಬರಿ ಸರಳವಾಗಿ ಓದಿಸಿಕೊಳ್ಳುತ್ತದೆ. ಕನ್ನಡಕ್ಕೆ ಒಳ್ಳೆಯದೊಂದು ಕಾದಂಬರಿ ಕೊಟ್ಟ ಡಾ. ಗುರುಪ್ರಸಾದ ಕಾಗಿನೆಲೆಯವರಿಗೆ ಅಭಿನಂದನೆಗಳು ಮತ್ತು ವಂದನೆಗಳು.
- ಶಾಂತಲಾ ಭಂಡಿ
