‘ನೀಲಿ ಶಾಯಿಯ ಕಡಲು’ ಕೃತಿ ಪರಿಚಯ

ಕವಿಯತ್ರಿ ಗೀತಾ ದೊಡ್ಮನೆ ಅವರ ಎರಡನೆಯ ಕವನ ಸಂಕಲನ ‘ನೀಲಿ ಶಾಯಿಯ ಕಡಲು’ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ …

ಕೃತಿ : ನೀಲಿ ಶಾಯಿಯ ಕಡಲು.
ಲೇಖಕರು: ಗೀತಾ ದೊಡ್ಮನೆ.
ವೀರಲೋಕ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೨೪.
ಪುಟಗಳು: ೯೬.
ಬೆಲೆ: ರೂ. ೧೨೦.

ಕವಯಿತ್ರಿ ಗೀತಾ ದೊಡ್ಮನೆ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇದು ಅವರ ಎರಡನೆಯ ಕವನ ಸಂಕಲನ. ಈ ಪುಸ್ತಕದ ಮುನ್ನುಡಿಯನ್ನು ಖ್ಯಾತ ಸಾಹಿತಿಗಳಾದ ಜಯಂತ ಕಾಯ್ಕಿಣಿಯವರು ಹಾಗೂ ಬೆನ್ನುಡಿಯನ್ನು ಸುಬ್ರಾಯ ಚೊಕ್ಕಾಡಿಯವರೂ ಬರೆದಿದ್ದಾರೆ. ಇಲ್ಲಿ ನಾವು ಗೀತಾ ದೊಡ್ಮನೆಯವರು ರಚಿಸಿದ ಅಪರೂಪವೆನ್ನಿಸುವ ೫೦ಕವನಗಳನ್ನು ಕಾಣಬಹುದು.

ಒಬ್ಬ ತಿಳುವಳಿಕೆಯುಳ್ಳ ಹೆಣ್ಣಿಗೆ ಜವಾಬ್ದಾರಿಯ ಬಂಧನಗಳನ್ನು ಬಿಡಿಸಿ ಕೊಳ್ಳುವುದು ಸುಲಭವಲ್ಲ. ಎಷ್ಟೋಸಲ ಎಲ್ಲವನ್ನೂ ಬಿಟ್ಟು ಓಡಿಹೋಗ ಬೇಕೆಂದು ಅನಿಸಿದರೂ, ಹಾಗೆ ಹೋಗಲು ಸಾಧ್ಯವೇ?. ಅದನ್ನು ಅವರು *ಅಂತಃಪುರ -ಗೀತೆ ಎಂಬ ಕವನದಲ್ಲಿ ಹೀಗೆ ಹೇಳಿದ್ದಾರೆ.

ನಾನು ನಿನ್ನೆಯೇ ಓಡಿ
ಹೋಗ ಬೇಕೆಂದಿದ್ದೆ
ಆದರೆ, ಅಡಿಗೆಮನೆ ಮೋರಿ,
ಬಚ್ಚಲು ಮನೆ ಕಟ್ಟೆ,
ಹಿತ್ತಲಿಗೆ ಹೋಗುವ ದಾರಿ
ಮತ್ತು- ಒಂದು ರಾಶಿ
ತೊಳೆಯುವ ಬಟ್ಟೆ-
ನನ್ನ ಹಿಡಿದಿಟ್ಟಿತ್ತು-
ಹೋಗಬೇಡ ಇವತ್ತು-
ಎಂದು….

ಇನ್ನು, ಇಂದಿನ ಸಾರು
ಮಸಿ ಹಿಡಿದ ಕಪ್ಪು- ಬಸಿ
ಧೂಳು- ಬಲೆ, ಬೂದಿ- ಒಲೆ..
ನೋಡಿದವರಾದರೂ
ಏನೆಂದುಕೊಂಡಾರು?

ನೊಂದುಕೊಂಡಾರು-
ಮನೆಯವರೂ….
ಇಂದು ಒಂದು ದಿನ
ಹೇಗಾದರೂ ಮಾಡಿ,
ನಾಳೆ ಬೆಳಗಾದಾಗ
ಪುರುಸೊತ್ತು ನೋಡಿ,
ಹೋಗಿಯೇ ಬಿಡಬೇಕು-
ಓ…ಡಿ…
ಓ….

ಇಲ್ಲಿ ಕೊನೆಯನ್ನು ಗಮನಿಸಿ.. ಓ….. ಅಲ್ಲಿಗೆ ನಿಂತಿದೆ! ಅದರರ್ಥ ಆಕೆಗೆ ಹೋಗಲು ಸಾಧ್ಯವಾಗಿಲ್ಲ ಎಂದು. ಎಷ್ಟು ಸೂಕ್ಷ್ಮವಾದ ಭಾವ ಅಲ್ಲವೇ?… ನೀಲಿ ಶಾಯಿಯ ಕಡಲು… ಕವಿತೆ ಹಾಯಿ- ದೋಣಿ..

ಇಲ್ಲಿ ಅವರು ನೀಲಿ ಶಾಯಿಯನ್ನು ಕಡಲಿಗೆ ಹೋಲಿಸಿ ಕವಿತೆಗಳನ್ನು ಹಾಯಿ ದೋಣಿಗೆ ಹೋಲಿಸಿದ ಪರಿಯೇ ಸೊಗಸು. ಇದರ ಕೆಲವು ಸಾಲು ನೋಡಿ…

ಕವಿತೆಯ ದೋಣಿಯೇ ಪುಷ್ಪಕ
ತೆರೆದ ಪುಸ್ತಕ-
ಬಾಗಿಲು, ಗೋಡೆಗಳಿಲ್ಲದೆ
ಮೇಲೆ ಆಕಾಶ, ಅಡಿಗೆ ನೀಲಿಯ ಜಲಧಿ
ಮೆಲ್ಲ ಪದವೂರುವುದು ಸದ್ದಿಲ್ಲದೆ

ಒಮ್ಮೆ ಮಮಕಾರ, ಇನ್ನೊಮ್ಮೆ
ನಿರ್ವಿಕಾರ, ನಿರಾಭರಣ
ನಿರವಯವ ಅಂತಃಕರಣ
ಅಲೆದಂತೆ ಎದೆಯಲ್ಲಿ ಓಲಾಟ
ಭರತ- ಇಳಿತಗಳ ಸಮೀಕರಣ

ಮೀರುತ್ತ ದಡ
ಕಡಲಾಗುವುದು ಕವಿತೆ; ಹಾಯಿ-
ದೋಣಿ ಯಾಗುವುದು ಕಡಲು-
ನೀಲಿ ಶಾಯಿಯ ಒಡಲು!

ಹಾಯಿ ದೋಣಿಯಲ್ಲಿ ‘ಹರಿವೇ ಅರಿವು’ ಎಂದು ಸಾರುವ ಕವಿತೆ ಇದಾಗಿದೆ.

ಕವಿತೆಯೆಂದರೆ …
ತನ್ನಷ್ಟಕ್ಕೆ ತಾನೇ ಆಡಿಕೊಂಡಿರುವ ಮಗು
ನೋಡಿ..ಖುಷಿ ಪಡಿ ಎಂಬ* ಮತ್ತೆ ನೆನಪಿರಲಿ
ಪದ್ಯವೂ ಮೆಚ್ಚುಗೆಯಾಗುತ್ತದೆ.

* ಕಾಯುತ್ತಿದೆ…. ಭುವನವ! ಈ ಕವನದಲ್ಲಿ ಹಕ್ಕಿ ಯೊಂದು ಅವರ ಕಣ್ಣಿಗೆ ಗೋಚರಿಸಿದ್ದು ಹೀಗೆ….

ಗುಡಿ ಗೋಪುರದ
ತುದಿಯ ಮೇಲೊಂದು ಹಕ್ಕಿ
ಮುಸ್ಸಂಜೆಯಲಿ ಭಾವಪೂಜೆಗೆ
ದಿನಾ ಬರುವ ಹಾಡುಗಾರ್ತಿ

ಇವಳು ಒಂಟಿ
ಯಾವಾಗಲೂ
ಜಂಟಿಯಲ್ಲ ಒಂಟಿ
ಜಗಳಗಂಟಿ
ನಿರ್ಲಿಪ್ತ ಮುಖ ನೀತಿ
ಸುಪ್ತ ಜ್ವಾಲಾಮುಖಿ

ಅಂತರ್ಮುಖಿ ಎನ್ನುವ ಈ ಕವನ ಒಂಟಿ ಹೆಣ್ಣೊಬ್ಬಳ ನೋವನ್ನು ತಿಳಿಸುತ್ತದೆ.

ಸಂಪ್ರದಾಯವಿರುವ ಮನೆಗಳಲ್ಲಿ ನಾಗರಪಂಚಮಿ ಹಬ್ಬಕ್ಕೆ ‘ಮದರಂಗಿ’ ಹಚ್ಚುವ ವಾಡಿಕೆ ಇದೆ.ಈ ಕವನದಲ್ಲಿ ಎಲ್ಲಾ ಆಚರಣೆಗಳ ಸಂಭ್ರಮದ ಜೊತೆಗೆ ಅಮ್ಮ ಮಕ್ಕಳಿಗಾಗಿ ಮದರಂಗಿ ಸೊಪ್ಪನ್ನು ಅರೆಯುವ ಕೆಲಸವನ್ನೂ ಮಾಡುತ್ತಾಳೆ. ಈ ಪ್ಯಾರಾ ನೋಡಿ…..

ಬೀಸಿಯೇ ಬೀಸುವಳು ಅಮ್ಮ-
ಒರಳು ಕಲ್ಲು
ನುಣ್ಣಗಾಗುವವರೆಗೆ
ಮಗುವಿನ ಉಗುರ ಚಂದಕೆ
ಅವಳ-
ಅಂಗೈಯೆಲ್ಲ ಕೆಂಪೋ ಕೆಂಪು!
ಆರಕ್ತೆ…. ಅನುರಕ್ತೆ…. ಮಮತಾಸಿಕ್ತೆ!!

ಅವರ ತಾಯ ಮೇಲಿನ ಪ್ರೀತಿ ಇಲ್ಲಿ ಎದ್ದು ತೋರುತ್ತದೆ. ಇದೇ ರೀತಿ ಸ್ತ್ರೀ, ನಿಲುಮೆಗಳು, ಒಂದು ಮಳೆ ಸುರಿದು ನಿಲ್ಲುವ ಹೊತ್ತು, ಕನ್ನಡಿಗೂಡು ಮತ್ತು ಅವತಾರ ಮುಂತಾದ ಅರ್ಥವತ್ತಾದ ಕವಿತೆಗಳಿವೆ.

ಕವಿಯತ್ರಿ ಗೀತಾ ದೊಡ್ಮನೆ ಅವರದು ದಟ್ಟ ಜೀವನಾನುಭವದ ಮೂಸೆಯಲ್ಲಿ ಮೂಡಿದ ಬಂದ ಸ್ವಂತಿಕೆಯನ್ನು ಬಿಂಬಿಸುವ ಕವಿತೆಗಳು. ನಾನು ಕೆಲವನ್ನು ಮಾತ್ರ ಪರಿಚಯಿಸಿರುವೆ.
ಈ ಕೃತಿಯಲ್ಲಿರುವ ಇನ್ನಷ್ಟು ಸೊಗಸಾದ ಕವಿತೆಗಳನ್ನು ಓದಿಯೇ ಸವಿಯ ಬೇಕು. ಸಹಜ ವಿಷಯವನ್ನು ಕಾವ್ಯಮಯವಾಗಿ ‘ಆಹಾ’ ಎನ್ನಿಸುವಂತೆ ಬರೆಯುವ ಕಲೆಯನ್ನು ಕರಗತ
ಮಾಡಿಕೊಂಡಿರುವ ಇವರ ಕವಿತೆಗಳಲ್ಲಿ ಹದವಿದೆ.ಒಂದು ತನ್ಮಯತೆಯಲ್ಲಿ ಬರೆದ ಕೆಲವು ಸ್ವೋಪಜ್ಞತೆಯ ಪದ್ಯವಂತೂ ಓದುವಾಗ ಮುದ ನೀಡುತ್ತಾ ಹೃದಯವನ್ನೂ ತಟ್ಟುತ್ತದೆ.

ಮುಂಬರುವ ದಿನಗಳಲ್ಲಿ ಇವರ ಇನ್ನಷ್ಟು ಕವಿತೆಗಳನ್ನು ನಾವು ಓದುವಂತಾಗಲಿ ಎಂದು ಆಶಿಸುವೆ. ಇಲ್ಲಿನ ಉತ್ತಮ ಕವಿತೆಗಳನ್ನು ನೀವೂ ಓದಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  •  ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading