‘ದೂರ ಹೋಗದಿರು ಮನಸೇ’ ಕವನ

ಯಾರಿಗಿಲ್ಲ ಕೇಳೆ ಸಖಿ ಓರೆ ಕೋರೆ; ಬಾಣದಂತ ನೋಟ ಎದೆ ಬಗೆದು ಸುಡುತ್ತಿದೆ! …ಕವಿ ಟಿ.ಪಿ.ಉಮೇಶ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ದೂರ ಹೋಗದಿರು ಮುದ್ದು ಮನಸೇ;
ಒಲಿದು ಬಲವ ನೀಡಿ ಒಲವ ಬೆಳೆಸಿದ ಕನಸೇ!
ಮರೆಯಾಗಿ ಹೋದರೆ ನನ್ನ ಮನಸೇ;
ಒಲವ ಅರ್ಥವೆ ಅಳಿಸುವುದು ನನ್ನ ಸೊಗಸೇ!

ಮಾತು ಮಾತು ಬೆಳೆದು ಆಯಿತೇನು;
ತುಸು ನಿಂತು ನೋಡು ಒಲವ ಧಾರೆಯ ಕಣ್ಣು!
ಮೌನ ಮುನಿಸು ತಾನು ತಂದಿತೇನು;
ಕಾಡಿ ಕುದಿದ ಹೃದಯ ಉರಿವ ಬೆಂಕಿ ಮಣ್ಣು!

ಎದುರು ಕಂಡಾಗ ಬಿಗಿತದ ಮೋರೆ:
ಹೂವಿನಂತ ಹಾಡು ಎದೆಯೊಡೆದು ಬಿಕ್ಕುತ್ತಿದೆ!
ಯಾರಿಗಿಲ್ಲ ಕೇಳೆ ಸಖಿ ಓರೆ ಕೋರೆ;
ಬಾಣದಂತ ನೋಟ ಎದೆ ಬಗೆದು ಸುಡುತ್ತಿದೆ!

ಮನಸ್ಸಿನಿಂದ ಮನಸ್ಸು ಬೆರೆತ ಪರಿ;
ಒಣ ಟೊಂಗೆಯಂತೆ ಒಲವ ಮುರಿಯಬಹುದೆ!
ಕನವರಿಕೆಯಲ್ಲು ಅಗಲಿಕೆಯ ಉರಿ;
ಕಾರಣವಿಲ್ಲದೆ ಪ್ರೇಮ ಭಾಷೆ ಹರಿಯಬಹುದೆ!

ಅರಿಯದೆ ಹಬ್ಬಿ ತಬ್ಬಿದ ಆಕರ್ಷಣೆ;
ಉಳಿಸಬೇಕು ಸಹನೆಯಲ್ಲಿ ಕೂತು ಮಾತನಾಡಿ!
ಒಲವಿದೊಂದೆ ಬಾಳ ಉತ್ಕರ್ಷಣೆ;
ಸ್ವಾರ್ಥವರಿಯೆ ಪ್ರಿಯ ಸಖಿ ನೀನೆನ್ನ ಜೀವನಾಡಿ!


  • ಟಿ.ಪಿ.ಉಮೇಶ್ – ಸಾಹಿತಿಗಳು, ಹೊಳಲ್ಕೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading