ಬೆಂಗಳೂರಿನಿಂದ ಹೊಸಕೋಟೆ- ಕೋಲಾರ – ಮುಳಬಾಗಿಲು ಮಾರ್ಗವಾಗಿ (NH-75) ಸುಮಾರು 87 ಕಿಲೋಮೀಟರ್ ಪ್ರಯಾಣಿಸಿ, ಮುಳುಬಾಗಿಲು ಹತ್ತಿರವಾಗುತ್ತಿದ್ದಂತೆ ಬಲಕ್ಕೆ 7 ಕಿಲೋಮೀಟರ್ ಪ್ರಯಾಣಿಸಿದರೆ ಅವನಿ ಕ್ಷೇತ್ರ ಸಿಗುತ್ತದೆ. ಈ ಕ್ಷೇತ್ರದ ಕುರಿತು ದೇವರಾಜ ಚಾರ್ ಅವರು ಪ್ರವಾಸ ಕಥನದಲ್ಲಿ ತಿಳಿಸಿದ್ದಾರೆ, ತಪ್ಪದೆ ಮುಂದೆ ಓದಿ…
ಕೋಲಾರದ ಬಂಗಾರಪೇಟೆಗೆ ಸಂಬಂಧಿಕರ ಮದುವೆಗೆ ಹೋಗಿದ್ದೆವು. 10ರ ರಾತ್ರಿ ಅಲ್ಲೇ ಉಳಿದು 11ನೇ ತಾರೀಕ ಬೆಳಗಿನ ಮದುವೆ ಮುಹೂರ್ತಕ್ಕೆ ಹೋಗಿ ವಧು – ವರರನ್ನು ಹಾರೈಸಿ ತಿಂಡಿ ತಿಂದು ಅಲ್ಲಿಂದ ಹೊರಟೆವು. ಕೋಲಾರದ ಕಡೆ ಮದುವೆ ಮುಹೂರ್ತ ಸಾಮಾನ್ಯವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಇರುತ್ತದೆಯಂತೆ.
ಹತ್ತಿರದಲ್ಲಿರುವ ಅವನಿ ಕ್ಷೇತ್ರಕ್ಕೆ ಹೋಗಬೇಕೆಂದು ತೀರ್ಮಾನಿಸಿದೆವು. ಬೆಂಗಳೂರಿನಿಂದ ಹೋಗುವ ಪ್ರವಾಸಿಗರಿಗಾಗಿ ಮಾಹಿತಿ ಬೆಂಗಳೂರಿನಿಂದ ಹೊಸಕೋಟೆ- ಕೋಲಾರ – ಮುಳಬಾಗಿಲು ಮಾರ್ಗವಾಗಿ (NH-75) ಸುಮಾರು 87 ಕಿಲೋಮೀಟರ್ ಪ್ರಯಾಣಿಸಿ, ಮುಳುಬಾಗಿಲು ಹತ್ತಿರವಾಗುತ್ತಿದ್ದಂತೆ ಬಲಕ್ಕೆ 7 ಕಿಲೋಮೀಟರ್ ಪ್ರಯಾಣಿಸಿದರೆ ಅವನಿ ಕ್ಷೇತ್ರ ಸಿಗುತ್ತದೆ.

ಸುಮಾರು ಎರಡುವರೆ ಗಂಟೆ ಪ್ರಯಾಣ.ನಮ್ಮ ದೇಶದ ಪುರಾತತ್ವ ಇಲಾಖೆ (ಎ.ಎಸ್.ಐ) ಈ ಕ್ಷೇತ್ರವನ್ನು ಅಂದರೆ ಬೆಟ್ಟದ ಕೆಳಗಿರುವ ದೇವಾಲಯಗಳ ಶಂಕೀರ್ಣವನ್ನು ಸ್ಮಾರಕ (monument) ವೆಂದು ಗುರುತಿಸಿದೆ. ದೇವಾಲಯದಲ್ಲಿ ಪುರಾತತ್ವ ಇಲಾಖೆಯ ಒಂದು ಕಚೇರಿಯು ಸಹ ಇದೆ. ಈಗಲೂ ಸಹ ದೇವಸ್ಥಾನದ ಸುತ್ತಮುತ್ತ ಇಲಾಖೆ ಶೋಧನೆ ಮಾಡುತ್ತಿದೆಯಂತೆ.
ಈ ದೇವಸ್ಥಾನಗಳು ದ್ರಾವಿಡ ಶೈಲಿಯದಂತೆ.ಈ ದೇವಸ್ಥಾನದ ಸಂಕೀರ್ಣವನ್ನು ನಮ್ಮ ರಾಜ್ಯ ಸರ್ಕಾರದ ದತ್ತಿ ಇಲಾಖೆ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಯಿತು. (ಎ.ಎಸ್.ಐ) ಪ್ರಕಾರ ಈ ಕ್ಷೇತ್ರವು 10ನೇ ಶತಮಾನದಂತೆ. ನೊಳಂಬರ ಕಾಲದಲ್ಲಿ ದೇವಸ್ಥಾನಗಳು ನಿರ್ಮಿಸಿದ್ದು ಎಂದು ಅಲ್ಲಿನ ಬರಹ ತಿಳಿಸುತ್ತದೆ. ನಂತರದಲ್ಲಿ ಚೋಳರ ಕಾಲದಲ್ಲಿ ದೇವಸ್ಥಾನಗಳನ್ನು ನಿರ್ವಹಣೆ ಮಾಡುತ್ತಿದ್ದರಂತೆ.

ಬೆಟ್ಟದ ಮೇಲೆ ಸೀತ ದೇವಿಯ ದೇವಸ್ಥಾನವಿದೆ.ಅದು ಸಹ ಪುರಾತನವಾದದ್ದು ಎಂದು ತಿಳಿಯಿತು. ಇಲ್ಲಿ ರಾಮಾಯಣ ಬರೆದ ಕವಿ ವಾಲ್ಮೀಕಿ ಆಶ್ರಮ ಇತ್ತು ಅಂತ ಪ್ರತೀತಿ. ಅವನಿಯ ಅರ್ಥ ರಾಮಾಯಣದ ಕರ್ತೃ ವಾಲ್ಮೀಕಿ ಅಂತೆ. ಅವನಿ ಎಂದರೆ ಭೂಮಿ ಅಂತಲೂ ಅರ್ಥವಂತೆ. ಆದ್ದರಿಂದ ಭೂಮಿಯ ರೂಪವೇ ಸೀತಾ ಮಾತೆ. ಶ್ರೀರಾಮನು ಲಂಕಾದಿಂದ ಅಯೋಧ್ಯೆಗೆ ಪ್ರಯಾಣ ಮಾಡುವಾಗ, ಅವನಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದನು ಎಂದು ಪ್ರತೀತಿ. ರಾಮಾಯಣದ ಪ್ರಕಾರ ಶ್ರೀರಾಮ ಲಕ್ಷ್ಮಣ ಮತ್ತು ಸೀತೆಯರು 14 ವರ್ಷ ವನವಾಸದಲ್ಲಿದ್ದಾಗ, ಸೀತೆಯನ್ನು ರಾವಣ ಅಪಹರಣ ಮಾಡಿ ಲಂಕೆಯಲ್ಲಿ ಇರಿಸಿಕೊಂಡಿದ್ದು ಸರಿಯಷ್ಟೇ. ಕಾಲಾನಂತರದಲ್ಲಿ ರಾಮ ಲಕ್ಷ್ಮಣರು ಆಂಜನೇಯನ ಜೊತೆಗೂಡಿ ರಾವಣನ ಜೊತೆ ಯುದ್ಧ ಮಾಡಿ ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಹೋದರು ಅಂತ ಕಥೆ.

ಅಯೋಧ್ಯೆಗೆ ಹೋಗುವ ಮೊದಲು ರಾಮನು ಸೀತೆಯ ಮೇಲೆ ಅನುಮಾನ ಪಟ್ಟನೆಂದು ಪ್ರತಿತಿ. ರಾಮನ ಅನುಮಾನ ಪರಿಹಾರಕ್ಕಾಗಿ ಸೀತೆಯು ಅಗ್ನಿ ಪ್ರವೇಶ ಮಾಡಿದಳೆಂದು ಹೇಳುತ್ತಾರೆ. ಇದೇ ಅಗ್ನಿ ಪ್ರವೇಶದಲ್ಲಿ ಗೆದ್ದು ತಾನು ಪವಿತ್ರಳಂದು ಸಾಬೀತುಪಡಿಸುತ್ತಾಳೆ. ಹಲವು ದಿನಗಳ ನಂತರ ಅಯೋಧ್ಯಯ ಪ್ರಜೆ ಒಬ್ಬ ಸೀತೆಯು ಕಳಂಕಿತಳಲ್ಲ ವೆಂದು ಹೇಗೆ ಹೇಳುವುದು ಎಂದು ತನ್ನ ಶoಖ್ಯೆಯನ್ನು ಬೇರೆಯವರಲ್ಲಿ ವ್ಯಕ್ತಪಡಿಸಿ ದನಂತೆ. ಶ್ರೀರಾಮನು ಈ ವಿಷಯ ತಿಳಿದು ಗರ್ಭಿಣಿ ಸೀತೆಯನ್ನು ಲಕ್ಷ್ಮಣನ ಜೊತೆ ಕಳಿಸಿ ಎಲ್ಲಾದರೂ ದೂರ ಬಿಟ್ಟು ಬರಬೇಕೆಂದು ಹೇಳುತ್ತಾನೆ. ಅಣ್ಣನ ಆದೇಶದಂತೆ ತನಗೆ ಮನಸ್ಸಿಲ್ಲದಿದ್ದರೂ ಗರ್ಭಿಣಿ ಸೀತೆಯನ್ನು ಒಂದು ಆಶ್ರಮದಲ್ಲಿ ಬಿಟ್ಟು ಬರುತ್ತಾನೆ.ಅದೇ ವಾಲ್ಮೀಕಿ ಆಶ್ರಮವಾಗಿರುತ್ತದೆ.
ಈ ಆಶ್ರಮದಲ್ಲಿ ಲವಕುಶರು ಜನಿಸಿದ್ದರಂತೆ ಹೀಗಾಗಿ ತೊಟ್ಟಿಲು ಬಂಡೆ ಇದೆ ಅಂತ ಪ್ರತೀತಿ. ಲವ ಕುಶರು ಆಟ ಆಡಿದ ಕುರುಹು ಬೆಟ್ಟದ ಮೇಲಿದೆ ಯ0ತೆ. ರಾಮನ ಅಶ್ವಮೇಧವನ್ನು ಲವಕುಶರು ಕಟ್ಟಿಹಾಕಿ ರಾಮ ಲಕ್ಷ್ಮಣರ ವಿರುದ್ಧ ಯುದ್ಧಕ್ಕೆ ನಿಂತು ಗೆಲ್ಲುತ್ತಾರ0ತೆ.ಈ ಸ್ಥಳವನ್ನು ಲವಕುಶರ ಬಂಡೆ ಎಂದು ಕರೆಯುತ್ತಾರೆ. ಹೀಗೆ ರಾಮಾಯಣದ ಎಲ್ಲಾ ಕುರುಹುಗಳನ್ನು ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗಿನ ದೇವಸ್ಥಾನದ ಸಂಕೀರ್ಣವನ್ನು ನೋಡಿದಾಗ ರಾಮಾಯಣದಲ್ಲಿ ಬರುವ ರಾಮ ಲಕ್ಷ್ಮಣ ಭರತ ಶತ್ರುಘ್ನ ದೇವಸ್ಥಾನದಲ್ಲಿ ಲಿಂಗ ಸ್ಥಾಪನೆ ಮಾಡಿದ್ದಾರೆ ಎಂದು ಪ್ರತೀತಿ.ಈ ದೇವಾಲಯಗಳ ಸಂಕೀರ್ಣದಲ್ಲಿ ರಾಮಲಿಂಗೇಶ್ವರ ದೇವಾಲಯವು ಮುಖ್ಯವಾದದ್ದು.ಇಲ್ಲಿ ಪ್ರತಿದಿನ ಪೂಜೆ ನಡೆಸಲಾಗುತ್ತೆ. ಈ ದೇವಾಲಯವು ತಳ ವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಹಾಗೂ ಮಾನಸ್ತಂಬಗಳನ್ನು ಹೋಲುವ ಅಲಂಕೃತ ಸ್ತಂಭಗಳ ನವರಂಗವನ್ನು ಹೊಂದಿದೆ. ಈ ಸಂಕೀರ್ಣದಲ್ಲಿ ಕಾಮಾಕ್ಷಿ,ಸುಬ್ರಹ್ಮಣ್ಯ,ವಾಲಿ,ಸುಗ್ರೀವ ಆಂಜನೇಯ ಮುಂತಾದವರು ಸಹ ದೇವಸ್ಥಾನಗಳಲ್ಲಿ ಲಿಂಗಗಳನ್ನ ಸ್ಥಾಪಿಸಿದ್ದಾರಂತೆ.
(ಎ.ಎಸ್. ಐ) ಪ್ರಕಾರ ಇಲ್ಲಿರುವ ದೇವಸ್ಥಾನಗಳು ದ್ರಾವಿಡ ಶೈಲಿಯದಂತೆ.ಪ್ರತಿಯೊಂದು ಸ್ತಂಭಗಳಲ್ಲಿ ಕೆತ್ತನೆ ವಿಗ್ರಹಗಳನ್ನು ನೋಡಬಹುದು.ಹಾಗೆ ಗೋಡೆಯ ಮೇಲು ಸಹ ಕೆತ್ತನೆ ಇದೆ. ಗರ್ಭಗುಡಿಯ ಮೇಲ್ಚಾವಣಿಯಲ್ಲಿ ಅಷ್ಟದಿಕ್ಪಾಲಕರ ವಿಗ್ರಹದ ಕೆತ್ತನೆ ಇದೆ. ಮಾಮೂಲಿನಂತೆ ಲಿಂಗದ ಗರ್ಭಗುಡಿಯ ಮುಂದೆ ನಂದಿ ವಿಗ್ರಹವಿದೆ.

“ದತ್ತಿ ಇಲಾಖೆಯ ಗಮನಕ್ಕೆ”
ಈ ಸಂಕೀರ್ಣದಲ್ಲಿ ಒಂದು ದೇವಸ್ಥಾನವು ಶಿಥಿಲಗೊಂಡಿದೆ. ಕಂಬಗಳನ್ನು ಆಧಾರವಾಗಿ ನಿಲ್ಲಿಸಿದ್ದಾರೆ. ಇನ್ನೊಂದು ದೇವಸ್ಥಾನದ ತಳಹದಿ ಕೆಳಕ್ಕೆ ಇಳಿದಿದೆ. ಇದರಿಂದಾಗಿ ದೇವಸ್ಥಾನದಲ್ಲಿ ಬಿರುಕು ಕಾಣಿಸಿಕೊಂಡಿದೆ.ದೇವಸ್ಥಾನದ ತಳೆಹದಿಯಿಂದ ಸುಮಾರು ಆರು ಏಳು ಅಡಿ ಕಲ್ಲಿನ ಕಟ್ಟಡವಿದೆ. ಚಾವಣಿ ಹತ್ತಿರ ಇಟ್ಟಿಗೆ ಗಾರೆಯಿಂದ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಫೋಟೋದಲ್ಲಿ ಗುರುತಿಸಬಹುದು. ಸಾಧ್ಯವಾದಷ್ಟು ಬೇಗ ಈ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕು.

ದೇವಸ್ಥಾನದ ಪ್ರಾಂಗಣದಿಂದ ಹೊರಗಡೆ ಬಂದು ದೇವಸ್ಥಾನದ ಎಡಭಾಗದಲ್ಲಿ ನೋಡಿದರೆ ಅಲ್ಲೊಂದು ಕೊಳವಿದೆ. ಅಲ್ಲಿಂದ ಬೆಟ್ಟದ ಮೇಲ್ಭಾಗ ನೋಡಿದರೆ ಒಂದು ದೇವಸ್ಥಾನ ನೋಡುತ್ತೇವೆ.ಅದು ಪಂಚಲಿಂಗೇಶ್ವರ ದೇವಾಲಯ. ಅದರ ನಿರ್ಮಾಣ ಇತ್ತೀಚಿನದು ಅಂತ ಕಾಣಿಸುತ್ತದೆ.
ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಶಿವರಾತ್ರಿ ಯ0ದು ಜಾತ್ರಾ ಮಹೋತ್ಸವ ನಡೆಯುತ್ತದೆ. ರಥೋತ್ಸವವು ಸಹ ನಡೆಯುತ್ತದೆ.
- ದೇವರಾಜ ಚಾರ್ , ಮೈಸೂರು
