‘ಇರುಳ ಬಾಗಿಲಿಗೆ ಕಣ್ಣ ದೀಪ’ ಕೃತಿ ಪರಿಚಯ

ಡಾ.ಸದಾಶಿವ ದೊಡಮನಿ ಅವರ ‘ಇರುಳ ಬಾಗಿಲಿಗೆ ಕಣ್ಣ ದೀಪ’ದಲ್ಲಿನ ಕವನಗಳನ್ನು ಓದುತ್ತಾ ಹೋದಂತೆ ನಾವು ಬೇರೊಂದು ಲೋಕ ಪ್ರವೇಶ ಮಾಡುತ್ತೇವೆ. ಪ್ರತಿಯೊಂದು ಕವನವನ್ನು ಓದಿದಾಗಲೂ ಮುಖಪುಟದ ಕಣ್ಣು ಆ ಕವನದ ದೃಷ್ಟಿಕೋನವನ್ನೇ ಹೊಂದಿದೆ ಅನಿಸಿದರೆ ಆಶ್ಚರ್ಯವಿಲ್ಲ. ಪುಸ್ತಕದ ಕುರಿತು ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಇರುಳ ಬಾಗಿಲಿಗೆ ಕಣ್ಣ ದೀಪ
ಪ್ರಕಾರ : ಕವನ ಸಂಗ್ರಹ
ಸಾಹಿತಿ: ಡಾ.ಸದಾಶಿವ ದೊಡಮನಿ
ಪ್ರಕಾಶಕರು: ವೀರಲೋಕ
ಬಿಡುಗಡೆ: ೪.೮.೨೪
(ವೀರಲೋಕ ಪ್ರಕಾಶನ ನಡೆಸಿದ ‘ಉತ್ತರ ಪರ್ವ’ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಪುಸ್ತಕ.)

ಪುಸ್ತಕದ ಅಂಗಡಿಯಲ್ಲಿ ದೂರದಿಂದಲೇ ಸೆಳೆಯುವುದು ಈ ಪುಸ್ತಕದ ಮುಖಪುಟದಲ್ಲಿ ಇರುವ ಒಂದು ಮಗುವಿನ ಕಣ್ಣು. ಆ ಕಣ್ಣಿನಲ್ಲಿ ಎನು ಭಾವನೆಗಳಿವೆ ಎಂದು ಹೇಳುವುದು ಕಷ್ಟಸಾಧ್ಯ. ಮಗುವಿನ ಹಿಂದೆ ಕತ್ತಲಿದೆ. ಮಗು ಬೆಳಕನ್ನು ನೋಡುತ್ತಿದೆ. ಅದರ ಜೊತೆಗೆ ‘ಇರುಳ ಬಾಗಿಲಿಗೆ ಕಣ್ಣ ದೀಪ’ ಶೀರ್ಷಿಕೆ ಆ ಮಗು ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವುದರ ಸೂಚನೆ ಇರಬಹುದೇ ಎಂದುಕೊಂಡಾಗ, ಕಣ್ಣಿನಲ್ಲಿ ಆ ಸೂಚನೆ ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಾಗಿ ಇನ್ನೇನೋ ಇರಬಹುದು ಅನಿಸಿತು. ಹಾಗಾಗಿ ಕುತೂಹಲ ಹೆಚ್ಚಾಗಿ ಪುಸ್ತಕ ತೆಗೆದುಕೊಂಡೆ.

ಕವನಗಳನ್ನು ಓದುತ್ತಾ ಹೋದಂತೆ ನಾವು ಬೇರೊಂದು ಲೋಕ ಪ್ರವೇಶ ಮಾಡುತ್ತೇವೆ. ಪ್ರತಿಯೊಂದು ಕವನವನ್ನು ಓದಿದಾಗಲೂ ಮುಖಪುಟದ ಕಣ್ಣು ಆ ಕವನದ ದೃಷ್ಟಿಕೋನವನ್ನೇ ಹೊಂದಿದೆ ಅನಿಸಿದರೆ ಆಶ್ಚರ್ಯವಿಲ್ಲ. ಕವಿ ತನ್ನ ಕೆಲವು ಕವನಗಳಲ್ಲಿ ಸಮಾಜದ ವ್ಯವಸ್ಥೆ, ಮಾನವೀಯತೆಯನ್ನು ಆಳದಿಂದ ಅರ್ಥೈಸಲು ಮಾಡಿದ ಪ್ರಯತ್ನದ ಪ್ರತೀಕವಾಗಿ ಆ ಮುಖ ಪುಟದಲ್ಲಿರುವ ಕಣ್ಣು, ಇಡೀ ಜಗತ್ತನ್ನು ತೀಕ್ಷ್ಣತೆಯಿಂದ ಪರಿಶೀಲಿಸುವ, ಪರಿಶೋಧಿಸುವ ಭಾವ ಕಾಣುತ್ತದೆ.

ಕೆಲವು ಕವನಗಳು ಕತ್ತಲ ನಡುವೆ ಬೆಳಕಿನ ಕಡೆಗೆ ಅಥವಾ ಭವಿಷ್ಯದ ಕಡೆಗೆ ಆಶಾಭಾವದಿಂದ ನೋಡುತ್ತವೆ. ಆ ಕಣ್ಣಿನಲ್ಲಿ ಒಂದು ಕಡೆ ಅನಿಶ್ಚಿತತೆಯ ಕತ್ತಲಿದ್ದರೆ ಇನ್ನೊಂದೆಡೆ ಆಕಾಂಕ್ಷೆಯ ಬೆಳಕಿದೆ.

ಕೆಲವು ಕವನಗಳು ವ್ಯಕ್ತಿಯ ಆಂತರಿಕ ನೋವು, ಕಷ್ಟ, ಮತ್ತು ಆದರ್ಶಗಳನ್ನು ಹೇಳುತ್ತವೆ. ಕಣ್ಣುಗಳು ಮನಸ್ಸಿನ ಕಿಟಕಿಯಾಗುವುದಾದರೆ, ಆ ಮುಖಪುಟದಲ್ಲಿರುವ ಕಣ್ಣು ಕವಿಯ ಆಳವಾದ ಭಾವನೆಗಳು, ಉದ್ವಿಗ್ನತೆಗಳು, ಮತ್ತು ನಿರೀಕ್ಷೆಗಳನ್ನು ಸೂಚಿಸುತ್ತಿದೆ. ಆ ಕಣ್ಣಿನ ನೋಟದಲ್ಲಿರುವ ಗಾಢತೆ ಕಷ್ಟಕರ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಲು ಸಿದ್ಧವಾಗಿರುವಂತಿದೆ.

ಆ ಕಣ್ಣಿನಲ್ಲಿ ಕಾಣುವ ಒಂದು ವಿಶೇಷವಾದ ಭಾವನೆ, ಆಳವಾದ ಆಲೋಚನೆ, ಪರಿಶೀಲನೆ, ಮತ್ತು ಭವಿಷ್ಯದ ಕಡೆಗೆ ಒಂದು ಉತ್ಕಂಠೆಯನ್ನೊಳಗೊಂಡು, “ಇರುಳ ಬಾಗಿಲಿಗೆ ಕಣ್ಣ ದೀಪ” ಕೃತಿಯ ಕವನಗಳ ಗಂಭೀರ ಮತ್ತು ತೀವ್ರ ಸ್ವರೂಪವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ.

ಡಾ.ಸದಾಶಿವ ದೊಡಮನಿಯವರು ತಮ್ಮ ಜೀವನದಲ್ಲಿ ಮತ್ತು ಸುತ್ತಲಿನ ಸಮಾಜದಲ್ಲಿ ಕಂಡ ಹಸಿವು, ಅಸಮಾನತೆ, ಅಸ್ಪೃಶ್ಯತೆ, ಹೆಣ್ಣಿನ ಶೋಷಣೆಯ ವಿಷಯಗಳು ಕವನಗಳ ರೂಪದಲ್ಲಿ ಶೋಷಿತರ ಧ್ವನಿಯಾಗಿ ಮೂಡಿಬಂದಿವೆ. ಕವನಗಳು ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ಸ್ವಾತಂತ್ರ್ಯ, ಸಮಾನತೆ, ಬಹುತ್ವವನ್ನು ಪ್ರತಿಪಾದಿಸುತ್ತಾ ಓದುಗರನ್ನು ಆವರಿಸಿಕೊಳ್ಳುತ್ತದೆ. ಡಾ.ಮೂಡ್ನಕೂಡು ಚಿನ್ನಸ್ವಾಮಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ಕವಿ ಕಾವ್ಯದ ಒಳಸುಳಿಗಳನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಕವನಗಳು ಓದುಗನನ್ನು ಕಾಡುತ್ತವೆ ಮತ್ತು ಚಿಂತನೆಗೆ ಹಚ್ಚುತ್ತದೆ.

‘ಖಾಲಿ ಜೋಳಿಗೆ’ ಕವನದಲ್ಲಿ
‘ಅಗಸೆ ಬಾಗಿಲಲ್ಲಿ
ಆನೆ ಹಾದು ಹೋದರೂ
ಇರುವೆ ಹೊರುವಷ್ಟೇ
ಅನ್ನದಗಳಿಗೆ ಇಲ್ಲಿ
ನಿತ್ಯ ಹೋರಾಟ, ಕಸರತ್ತು
ಕಸುವಿಲ್ಲದ ಹಸಿದ ಕರುಳ ಪಾಡು!’ ಎಂದು ಹೇಳುತ್ತಾ ಹಸಿವೆಯ ಮುಖಗಳ ಅನಾವರಣ ಮಾಡಿದ್ದಾರೆ.

‘ಆದಿಮರೋ’ ಕವನದಲ್ಲಿ
‘ಹೆಸರು ಹೇಳಿಕೊಳ್ಳಲೂ ಅಳುಕುವರು
ಕತ್ತಲಲ್ಲಿ ಕತ್ತಾಲಾಗಿ ಇದ್ದವರು..’ ಎಂದು ಹೇಳುತ್ತಾ ಅಸಮಾನತೆಯ ವಿವಿಧ ಮುಖಗಳನ್ನು ತೋರಿದ್ದಾರೆ.

‘ತಪ್ಪಿತಸ್ಥಳು’ ಕವನದಲ್ಲಿ
‘ಎಲ್ಲವೂ ಮುಗಿದೋದ ಮೇಲೆ
ಕಲ್ಲು ಬಂಡೆಗಳ ನಡುವೆ
ಅವಳು ಹೃದಯ ಕಳೆದುಕೊಂಡಿದ್ದಳು..’ ಎಂದು ಹೇಳುತ್ತಾ ಹೆಣ್ಣಿನ ಶೋಷಣೆಯ ಬಗ್ಗೆ ಹೇಳುತ್ತಾರೆ.

‘ಜಗವು ಕೇಳುವಂತೆ’ ಕವನದಲ್ಲಿ
‘ಕನಸುಗಳಿದ್ದರೆ ಹೇಳಿಬಿಡು
ನಾನು ದೀಪವಾಗುತ್ತೇನೆ..’ ಎಂದು ಹೇಳುತ್ತಾ ಬಾವಗಳಿಗೆ ಜೀವ ತುಂಬಲು ಪ್ರಯತ್ನ ನಡೆಸುತ್ತಾರೆ.

“ಮರಳಿ ಬರುವೆ” ಕವನದಲ್ಲಿ
‘ಎಲೆ-ಕಾಂಡ’, ಹೂ-ಕಾಯಿ, ಕಲ್ಲು-ಸಕ್ಕರೆ,
ಎದೆಯ ಜೋಳಿಗೆಯಲ್ಲಿ ಸಮ ಬೆರಸಿರುವೆ
ಕ್ರೂರತೆಯ ಮುಳ್ಳು-ಕಂಟಿ ಎದೆಯಲ್ಲಿ
ಪ್ರೇಮದ ಹೂವಾಗಿಯರಳಿ
ಮತ್ತೆ ಮರಳಿ ಬರುವೆ
ನೋವಿನ ಹಾಡು ಹಾಡದಿರೆ; ಒಲವೆ’


ಎನ್ನುವ ಸಾಲುಗಳು ಓದುಗರ ಹೃದಯ ಮುಟ್ಟುತ್ತದೆ. ಕವಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಒಲವಿನ ಹಾದಿ ಆಯ್ಕೆ ಮಾಡಿಕೊಂಡಿದ್ದಾರೆ. ನೋವು, ನಲಿವುಗಳ ಜೊತೆಗೆ ಒಲವಿನ ಧಾರೆ ಹರಿಸಿದ ಕವನಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗಾಗಿ ಓದುಗರು ತಮ್ಮ ಮನದಾಳದ ಮೆಚ್ಚುಗೆಯನ್ನು ತಮ್ಮ ಎದೆಯ ಮೇಲೆ ಹರವಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.

ಡಾ.ಸದಾಶಿವ ದೊಡಮನಿಯವರ ಮೂರನೇಯ ಕವನ ಸಂಕಲನ ‘ಇರುಳ ಬಾಗಿಲಿನ ಕಣ್ಣ ದೀಪ’ ಈಗ ವೀರಲೋಕ ಪ್ರಕಾಶನದಿಂದ ಪ್ರಕಟವಾಗಿದೆ. ಶ್ರೀಯುತರು ಇಳಕಲ್ಲಿನ ಶ್ರೀವಿಜಯಾ ಮಾಹಾಂತೇಶ ಮಹಾ ವಿದ್ಯಾಲಯದಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಕವನ ಸಂಗ್ರಹ ‘ಇರುವುದು ಒಂದೇ ರೊಟ್ಟಿ’ ಅನೇಕ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಇವರಿಗೆ “ರೊಟ್ಟಿ ಕವಿ” ಎಂಬ ಹೆಸರನ್ನು ತಂದುಕೊಟ್ಟಿದೆ. ಇವರ ಸಾಹಿತ್ಯ ಸೇವೆ ಮುಂದುವರೆಯಲಿ ಮತ್ತು ಅದರಿಂದ ಕನ್ನಡ ಸಾಹಿತ್ಯ ಮತ್ತಷ್ಟು ಸಂಪದ್ಭರಿತವಾಗಲಿ ಎಂದು ಆಶಿಸುತ್ತೇನೆ.

ಉತ್ತರ ಕರ್ನಾಟಕದ ಲೇಖಕಿ/ಲೇಖಕರನ್ನು ಗುರುತಿಸಿ, ‘ಉತ್ತರ ಪರ್ವ’ ಕಾರ್ಯಕ್ರಮದಲ್ಲಿ ಆ ಭಾಗದ ಹತ್ತು ಲೇಖಕಿ/ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಿರುವ ‘ವೀರಲೋಕ’ ಪ್ರಕಾಶನದವರ ಕಾರ್ಯ ಸ್ತುತ್ಯಾರ್ಹ.


  •  ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading