‘ಬಾಗಿಲ ಮಾತು’ ಪುಸ್ತಕ ಪರಿಚಯ



ಪ್ರೊ. ರಹಮತ್ ತರೀಕೆರೆ ರಚಿತ ಪುಸ್ತಕ ‘ಬಾಗಿಲ ಮಾತು’, ಮನೆಗೆ ಬಂದವರನ್ನು ಹೊಸಿಲ ಬಳಿ ಬರಮಾಡಿಕೊಳ್ಳುವಾಗ ಆಡುವ ಮಾತಾಗಿದೆ. ಈ ಪುಸ್ತಕದ ಕುರಿತು ಸ್ವತಃ ಲೇಖಕರೇ ಏನೆನ್ನುತ್ತಾರೆ, ಮುಂದೆ ಓದಿ….

ಪುಸ್ತಕ : ಬಾಗಿಲಮಾತು
ಲೇಖಕರು : ರಹಮತ್ ತರೀಕೆರೆ

ಎರಡು ದಶಕಗಳಿಂದ ನಾನು ಬರೆದ ಮುನ್ನುಡಿ, ಪುಸ್ತಕ ವಿಮರ್ಶೆ ಹಾಗೂ ಲೇಖಕ ಚಿತ್ರಗಳ ಸಂಕಲನವಿದು. ಮುನ್ನುಡಿ ಬರೆಯುವುದು ನಿಜವಾಗಿಯೂ ಕಷ್ಟದ ಕೆಲಸ. ಕೃತಿಯನ್ನು ಓದುಗರ ಕೈಗಿಡುತ್ತಿರುವ ತಾವಿನಲ್ಲಿ ಹೆಚ್ಚು ಕಠಿಣವಾಗಿರುವಂತಿಲ್ಲ; ಬರಿಯೇ ಮೆಚ್ಚುಗೆಯಾಡಿದರೆ ಹುಸಿನುಡಿದಂತಾಗುತ್ತದೆ. `ಕಿರಿಯ’ ಲೇಖಕರಿಗೆ ಒಳಿತನ್ನು ಹಾರೈಸುವ ತಾಯ್ತನ ಮತ್ತು ಬುದ್ಧಿಹೇಳುವ ದೊಡ್ಡಸ್ತಿಕೆಗಳಿಂದ ತಪ್ಪಿಸಿಕೊಳ್ಳುವುದು ಇನ್ನೂ ಇಕ್ಕಟ್ಟಿನದು. ಈ ಬಹುಮುಖಿ ಇಕ್ಕಟ್ಟಿನ ಕೆಲಸವನ್ನು ಸಾಹಿತ್ಯ ಸಂಸ್ಕೃತಿಯನ್ನು ರೂಪಿಸುವ ಸೂಕ್ಷ್ಮ ಕೆಲಸವೆಂಬ ಜವಾಬ್ದಾರಿ ಪ್ರಜ್ಞೆಯಿಂದ ಹಿರಿಯ ಲೇಖಕರು ಉದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಆದರೆ ನನ್ನ ಪಾಲಿಗಿದು ಹೊಸ ಹೊಸ ಕೃತಿಗಳನ್ನು ಓದುವ ಹಾಗೂ ಲೇಖಕರೊಂದಿಗೆ ಸಂಬಂಧ ಬೆಳೆಸುವ ಅವಕಾಶ ಮಾತ್ರವಾಗಿದೆ.

ಮುನ್ನುಡಿಗಳನ್ನು ಹೆಚ್ಚಿನ ಸಲ ಪ್ರೀತಿಯಿಂದ, ಕೆಲವೊಮ್ಮೆ ದಾಕ್ಷಿಣ್ಯ ಮತ್ತು ಒತ್ತಡದಿಂದ ಬರೆದಿದ್ದೇನೆ. ಇದಕ್ಕೆ ಪ್ರತಿಯಾಗಿ, ಮುನ್ನುಡಿ ಕೈಬಿಡುತ್ತಿದ್ದೇನೆಂದು ಹೇಳಿ ಪುಸ್ತಕ ಪ್ರಕಟಿಸಿಕೊಂಡ ಧೀರರೂ, ಮುನ್ನುಡಿ ಕಾರಣದಿಂದ ಪುಸ್ತಕ ಪ್ರಕಟಿಸದೆ ಹೋದ ಹಿಂಜರಿಕರೂ, ನಿಷ್ಠುರ ಸಾಲುಗಳನ್ನು ಕಿತ್ತು ಮೆಚ್ಚುಗೆಯ ನುಡಿಗಳನ್ನೇ ಮುದ್ರಿಸಿಕೊಂಡ ಕುಶಲರೂ ಇದ್ದಾರೆ. ಇವುಗಳಿಂದ ನಾನು ಸಂತೋಷ ದುಗುಡ ವಿಸ್ಮಯಗಳನ್ನು ಅನುಭವಿಸಿದ್ದೇನೆ. ಇವು ವಿಭಿನ್ನ ತಲೆಮಾರಿನ ಲೇಖಕ ಸಮುದಾಯದ ಜತೆ ನನ್ನ ನಂಟನ್ನು ಬೆಸೆದ ಎಳೆಗಳು; ಪ್ರೀತಿ ವಿಶ್ವಾಸ ಭಿನ್ನಮತ ಸಿಟ್ಟುಗಳ ಸಮೇತ ಏರ್ಪಟ್ಟಿರುವ ಜಟಿಲ ಸಂಬಂಧದ ಕಟ್ಟುಗಳು.

ಇವನ್ನು `ಬಾಗಿಲ ಮಾತು’ ಎಂದಿದ್ದೇನೆ – ಮನೆಗೆ ಬಂದವರನ್ನು ಹೊಸಿಲ ಬಳಿ ಬರಮಾಡಿಕೊಳ್ಳುವಾಗ ಆಡುವ ಮಾತು ಎಂಬರ್ಥದಲ್ಲಿ; ಬಾಗಿಲು, ಮನೆಯ ಅನುಭವವನ್ನು ಕೊಡಲಾರದು; ಆದರೆ ಮನೆಗೆ ಬಗ್ಗೆ ಪೂರ್ವಗ್ರಹ ಹುಟ್ಟಿಸಬಲ್ಲದು. ಹೀಗಾಗಿ ಓದುಗರು ಹೊಸಿಲನ್ನು ತುಳಿದು ಬಾಗಿಲನ್ನು ನಿರ್ಲಕ್ಷಿಸಿ ಮನೆಯೊಳಗೆ ಹೋಗಲು ಸಾಧ್ಯವಾದರೆ ಒಳ್ಳೆಯದು. ಈ ಬಾಗಿಲ ಮಾತುಗಳು ಕೃತಿಯ ಕಸುವು ಮತ್ತು ಕೊರತೆಗಳನ್ನು ಹೇಗೆ ಕಾಣಿಸಿವೆಯೊ ಓದುಗರೇ ಹೇಳಬೇಕು. ನನ್ನ ಪಾಲಿಗೆ ಇವು ಬಾಳು, ಸಾಹಿತ್ಯ ಹಾಗೂ ಸಮಾಜವನ್ನು ಕುರಿತ ನನ್ನ ಗ್ರಹಿಕೆ, ಸ್ಪಂದನ ಇತಿಮಿತಿಗಳ ಬಿಂಬಗಳಾಗಿವೆ. ಮುನ್ನುಡಿ ಬರೆಯುವುದು ಕಲಿಯುವ ಪ್ರಕ್ರಿಯೆ ಎಂಬುದು ನನ್ನ ಅನುಭವಕ್ಕೆ ಬಂದಿದೆ.

 

ಕಸುಬಿನ ಹಿನ್ನೆಲೆಯಿಂದ ಹೇಳುವುದಾದರೆ, ಇಲ್ಲಿನ ಬಹುತೇಕ ಲೇಖಕರು ಮೇಷ್ಟ್ರರ ಕುಲಕ್ಕೆ ಸೇರಿದವರು; ಆದರೆ ಅಷ್ಟೇ ಸಂಖ್ಯೆಯಲ್ಲಿ ಗೃಹಿಣಿಯರು, ವೈದ್ಯರು, ಅಧಿಕಾರಿಗಳು, ಪತ್ರಕರ್ತರು, ರೈತರು, ವ್ಯಾಪಾರಿಗಳು, ದರ್ಜಿಗಳು, ನಟಿಯರು, ಇಂಜಿನಿಯರರು, ವಿದ್ಯಾರ್ಥಿಗಳು ಸಹ ಇದ್ದಾರೆ. ಹೆಚ್ಚಿನ ಕೃತಿಗಳು ಅಂಕಣ ಬರೆಹಗಳಾಗಿವೆ; ಉಳಿದವು ಕಾದಂಬರಿ, ವಿಮರ್ಶೆ, ಸಣ್ಣಕತೆ, ಕವನ, ಸಂಶೋಧನೆಗಳು. ಲೇಖಕರ ಮತ್ತು ಪ್ರಕಾರದ ಈ ಹಿನ್ನೆಲೆಗಳು, ಕನ್ನಡ ಸಾಹಿತ್ಯದ ವೈವಿಧ್ಯ ಮತ್ತು ವಿಶಿಷ್ಟ ಬಣ್ಣಗಾರಿಕೆಯನ್ನು ಕಾಣಿಸುತ್ತಿವೆ.



ನನ್ನಲ್ಲಿ ವಿಶ್ವಾಸವಿಟ್ಟು ಮುಮ್ಮಾತು-ಹಿಮ್ಮಾತು ಬರೆಯಿಸಿದ ಲೇಖಕರನ್ನು ಆದರದಿಂದ ನೆನೆಯುತ್ತೇನೆ. ಈ ಲೇಖಕರು ನಾನು ಬರೆಯುವಾಗಿದ್ದ ಅವಸ್ಥೆಯನ್ನು ದಾಟಿ ಎಷ್ಟೋ ಮುಂದೆ ಬಂದವರು; ಬೇರೆಬೇರೆ ಕೃತಿಗಳನ್ನು ಪ್ರಕಟಿಸಿದವರು; ಕೆಲವರು ಕಣ್ಮರೆಯಾದವರು ಎಂಬುದನ್ನು ಮರೆಯಬಾರದು. ಪುಸ್ತಕ ಪ್ರಕಟಿಸಲು ಮುಂದಾಗಿರುವ ಅಕ್ಷತಾ ಅವರಿಗೆ ಕೃತಜ್ಞತೆಗಳು; ನನ್ನನ್ನು ಯಾವತ್ತೂ ತಮ್ಮ ಪ್ರೀತಿಯ ಹಂಗಿನಲ್ಲಿಟ್ಟಿರುವ ಓದುಗರಿಗೆ ನಮಸ್ಕಾರಗಳು.


  • ಪ್ರೊ. ರಹಮತ್ ತರೀಕೆರೆ (ಲೇಖಕರು,ವಿಮರ್ಶಕರು, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ )ಚಿಕ್ಕಮಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading