ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಂಗೋಲಿ ಕಲೆಯನ್ನು ಬೆಳೆಸುವಲ್ಲಿ ಡಾ. ಭಾರತಿ ಮರವಂತೆ ಅವರ ಪಾತ್ರ ದೊಡ್ಡದು, ರಂಗೋಲಿಯಲ್ಲಿಯೇ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎನ್ನುವ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಬೈಂದೂರು ಉತ್ಸವ – ೨೦೨೪ದಲ್ಲಿ ರಂಗೋಲಿ ಹಾಕುವಾಗ ಆದ ಅನುಭವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಳೆದ ವಾರ ನಡೆದ ಘಟನೆಯೊಂದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬೈಂದೂರು ಉತ್ಸವದಲ್ಲಿ ರಂಗೋಲಿ ರಚಿಸಲು ಕರೆ ಬಂದ ಮೇರೆಗೆ ಪ್ರಧಾನ ವೇದಿಕೆಯ ಮುಂಭಾಗದಲ್ಲಿ ಉತ್ಸವದ ಹಿಂದಿನ ದಿನ ರಂಗೋಲಿ ರಚಿಸಲು ನಮ್ಮ ತಂಡ ಸಿದ್ದರಾಗಿದ್ದೆವು.
ನೀರಿನ ತೇವಾಂಶವಿರುವ ನೆಲದಲ್ಲಿ ಅಂಟು ಅಂಟಾದ ಮಣ್ಣನ್ನು ಆಯೋಜಕರು ಸಮತಟ್ಟು ಮಾಡಿ ಕೊಟ್ಟಿದ್ದರೂ ಕೂಡಾ ರಂಗೋಲಿ ಪುಡಿಗಳನ್ನು ನೆಲದ ಮೇಲೆ ಹರಡಿದಾಗ ಬಣ್ಣದ ಜೀವಂತಿಕೆ ತಕ್ಷಣವೇ ಕಳೆದುಕೊಳ್ಳುತ್ತಿತ್ತು. ಆದರೂ ನಾಲ್ಕು ಲೇಯರ್ ಪುಡಿಗಳನ್ನು ಹರಡಲೇಬೇಕಾದ ಕಾರಣ ರಂಗೋಲಿ ಬಿಡಿಸಲು ಬೆಳಿಗ್ಗೆಯಿಂದ ಸಂಜೆಯತನಕ ಸಮಯ ತೆಗೆದುಕೊಂಡಿದ್ದೆವು.
ಒಟ್ಟಾರೆ ಕತ್ತಲಾಗುತ್ತಿದ್ದಂತೆ ರಂಗೋಲಿ ಪೂರ್ಣತೆಯ ಒಂದು ಹಂತಕ್ಕೆ ತಲುಪುತ್ತಿತ್ತು. ಉತ್ಸವದ ಪೂರ್ವತಯಾರಿ ನೋಡಲು ಬಂದಿರುವ ಹಲವಾರು ಸಹೃದಯರ ಕ್ಯಾಮರಾದಲ್ಲೂ ಈ ರಂಗೋಲಿ ಸೆರೆಯಾಗುತ್ತಿತ್ತು. ರಾತ್ರಿ 8.30 ಹೊತ್ತಿಗೆ ರಂಗೋಲಿ ಪೂರ್ಣಗೊಳ್ಳುವಿಕೆಗೆ ಇನ್ನೇನು ಶೇ.5 ರಷ್ಟು ಕೆಲಸ ಮಾತ್ರ ಬಾಕಿ ಉಳಿದಿತ್ತು. ಆಗ ನಡೆದ ಘಟನೆಯೇ ನಿಜಕ್ಕೂ ಆಘಾತ.. ಇದ್ದಕ್ಕಿದ್ದಂತೆಯೇ ಗುಡುಗು, ಸಿಡಿಲು, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮೈದಾನವಿಡೀ ನೀರು ತುಂಬಿದ್ದು ಮಾತ್ರವಲ್ಲ ಕಟ್ಟಿದ್ದ ಕಟ್ಟೆಯನ್ನೂ ಒಡೆದು ನೀರು ಒಳ ಪ್ರವೇಶಿಸಿಯಾಗಿತ್ತು. ಎಲ್ಲರ ಕಣ್ಣೆದುರೇ ಬಿಡಿಸಿದ ರಂಗೋಲಿ ಮೇಲೇ ನೀರು ಹರಿದು ಬಂತು. ಕಣ್ಣೆದುರೇ ಕ್ಷಣಮಾತ್ರದಲ್ಲಿ ರಂಗೋಲಿ ನೀರಿನೊಂದಿಗೆ ಕೊಚ್ಚಿ ” ನೀರಿಗೆ ಹಾರವಾಯ್ತು”. ಆಗ ನಮ್ಮೊಂದಿಗೆ ಉಳಿದದ್ದು ನಮ್ಮ ತಂಡದವರು ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರಗಳು ಮಾತ್ರ. ಅಲ್ಲಿದ್ದವರೆಲ್ಲರೂ ಪ್ರಕೃತಿಯ ಮುನಿಸಿಗೆ ಅಸಾಹಾಯಕರಾಗಿಬಿಟ್ಟೆವು, ಪ್ರಕೃತಿ ಮಾತೆಗೆ ಶರಣಾಗತಿಯಾದೆವು.

ನಿತ್ಯವೂ ಮನೆ ಮುಂದೆ ಅರಳಿಸುವ ಪುಡಿಗಳಿಂದ ರಚಿಸುವ ರಂಗೋಲಿ ಕಲೆಗೆ ಇರುವುದು ಕೆಲವೇ ಘಂಟೆಗಳ ಆಯುಷ್ಯ. ಆದರೆ ಉತ್ಸವ ಮುಗಿಯುತನಕ ಈ ರಂಗೋಲಿ ಉಳಿಯುತ್ತದೆನ್ನುವ ಧೃಡವಿಶ್ವಾಸ ನನಗಿತ್ತು. ಏಕೆಂದರೆ ಮರವಂತೆ, ಬೈಂದೂರು, ,ಉಡುಪಿ, ಬೆಂಗಳೂರು, ಹಾವೇರಿಯ ಕ.ಜಾ.ವಿ.ವಿಶ್ವವಿದ್ಯಾಲಯ ಮತ್ತು ಮುಂಬೈತನಕ ಇಂದಿನವರೆಗೆ ಪ್ರದರ್ಶಿಸಿದ ರಂಗೋಲಿ ಕಲೆ ಈ ರೀತಿಯಲ್ಲಿ ಹಾಳಾಗಿರಲಿಲ್ಲ. ಬೈಂದೂರಲ್ಲಿ ಇದೇ ಮೈದಾನದಲ್ಲಿ ವಿವೇಕಪರ್ವ ಸಮಾರಂಭದಲ್ಲಿ ಮತ್ತು ಇತರ ಸಮಾರಂಭಗಳಲ್ಲಿ ಬಿಡಿಸಿದ ರಂಗೋಲಯಲ್ಲಿ ಹಿಂದೆಂದೂ ಇಂತಹ ಅನುಭವವಾಗಿರಲಿಲ್ಲ. ಈ ಅನುಭವ ನನಗೆ ಜೀವನದಲ್ಲೇ ಮೊದಲು.
ಈ ಸಂದರ್ಭದಲ್ಲಿ ಆರಂಭದಿಂದ ಕೊನೆಯತನಕ ನನ್ನೊಂದಿಗೆ ನಿಂತವರು ಶ್ರೀಮತಿ ವನಿತಾ ಗಜೇಂದ್ರ ಖಾರ್ವಿ, ಶ್ರೀಮತಿ ಸುಶೀಲಾ, ಕುಮಾರಿ ಇನ್ವಿತಾ ಸತೀಶ್ ಖಾರ್ವಿ ಇವರಿಗೆ
ಪ್ರೀತಿಯ ಧನ್ಯವಾದಗಳು. ಗೌರವದಿಂದಲೇ ಆಹ್ವಾನಿಸಿದ ಉತ್ಸವದ ಆಯೋಜಕರಿಗೆ ಧನ್ಯವಾದಗಳು. ಈ ಹಿಂದೆ ಬೈಂದೂರಲ್ಲಿ ಸಾಕಷ್ಟು ವೇದಿಕೆಗಳಲ್ಲಿ ರಂಗೋಲಿ ಕಲೆ ಅರಳಿಸಲು ಕಾರಣೀಕರ್ತರಾದ ಶ್ರೀ.ಗಣಪತಿ ಹೋಬ್ಳಿದಾರ್ ಅವರ ಬಳಗದವರ ಪ್ರೋತ್ಸಾಹ ನನಗಿನ್ನೂ ನೆನಪಿದೆ.
ಬಿಡಿಸಿದ ರಂಗೋಲಿಯನ್ನು ನನ್ನ ಈ ಅನುಭವದೊಂದಿಗೆ ಹಂಚಿಕೊಂಡಿದ್ದೇನೆ.
- ಡಾ.ಭಾರತಿ ಮರವಂತೆ
