ಗುರುಪ್ರಸಾದ್ ಅವರಿಗೆ ಅಂತಿಮ ನಮನಗಳು…

“ಪ್ರಭಾ ನಾನು ಡೈರೆಕ್ಟರ್ ಆಗ್ತೀನಿ ನೀವು ಗೀತೆಯೊಂದನ್ನು ಬರೆದುಕೊಡ್ತಿರಾ?” ಅಂತ ಚಿಕ್ಕಂದಿನಿಂದ ಕನಸು ಕಾಣುತ್ತಿದ್ದವ ಅದನ್ನು ನನಸಾಗಿಸಿಕೊಂಡರೂ ಸಹಾ ನೆನಪಾಗಿ ಉಳಿದುಹೋದ. ಕವಿಯತ್ರಿ ಲಾವಣ್ಯ ಪ್ರಭಾ ಅವರ ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ….

ನಿರ್ದೇಶಕ ಗುರುಪ್ರಸಾದ್ ಅವರೊಂದಿಗಿನ ಈ ಚಿತ್ರದಲ್ಲಿರುವ ಕಂದ… ಚಿಕ್ಕಪ್ಪನ ಮಮತೆಯ ಮಗಳು ನನ್ನ ಕಿರಿಯ ಮಗಳು “ಚಿನ್ಮಯಿ”. ನಿಜ….ತಮ್ಮ ಜೀವನ ಕೊನೆಗಾಣಿಸಿಕೊಂಡ ಪ್ರಸಿದ್ಧ ನಿರ್ದೇಶಕ ಗುರು ಪ್ರಸಾದ್ , ನನ್ನ ಭಾಮೈದ , ಅವರ ಮೊದಲ ಹೆಂಡತಿ ನನ್ನ ತಂಗಿ , ಅಷ್ಟೇ ಅಲ್ಲ…ನಾನೂ ಮತ್ತು ಗುರು ಪ್ರಸಾದ್ ಕಾಲೇಜ್ ಮೇಟ್ಸ್ , ಫ್ರೆಂಡ್ . ಆತನ ಅಣ್ಣ ನಾನೂ ಕ್ಲಾಸ್ ಮೇಟ್ಸ್. ಕನಕಪುರದ ರೂರಲ್ ಕಾಲೇಜಿನಲ್ಲಿ ಓದುವಾಗ ಅವನು ನನಗಿಂತ ಒಂದು ವರ್ಷ ಚಿಕ್ಕವನು ಮತ್ತು ನಮ್ಮಿಬ್ಬರ ಹುಟ್ಟಿದ ದಿನಾಂಕ ಒಂದೇ…

ನಮ್ಮ ಕಾಲೇಜಿನ ಯುವ ಕವಿಗಳು ನಾವಾಗಿದ್ದೆವು , ಜೊತೆಜೊತೆಗೆ ಅಂತರ ಕಾಲೇಜು ಕವನ ವಾಚನ ಸ್ಪರ್ಧೆಗಳಿಗೆ ಹೋಗಿ ಕಾಲೇಜಿಗೆ ಪ್ರತಿವರ್ಷ ಪಾರಿತೋಷಕ ತಂದುಕೊಟ್ಟು ಕಾಲೇಜಿನ ಪ್ರಿನ್ಸಿಪಾಲರ ಗೌರವಾದರಕ್ಕೆ ಪಾತ್ರರೂ ಆಗಿದ್ದೆವು.

ಈಗ….ನೀವೇನು ಸೋಷಿಯಲ್ ಮಿಡಿಯಾದಲ್ಲಿ ಅವರ ಬಗ್ಗೆ ತಿಳಿದುಕೊಳ್ಳುತ್ತಿರುವಿರೋ ಅದಕ್ಕಿಂತ ಭಿನ್ನವಾದ ಸಭ್ಯ ಸುಸಂಸ್ಕೃತ ಮನೆತನದಿಂದ ಬಂದ ಸಂಸ್ಕಾರವಂತ ಗುರು ಪ್ರಸಾದ್ ಬುದ್ಧಿವಂತ , ತಾಯಿಯ ಅಂತಃಕರಣ ಹೊಂದಿದ , ಹಾಸ್ಯದ ಹೊನಲೆಬ್ಬಿಸುವ ಲವಲವಿಕೆಯ ಇಪ್ಪತ್ತರ ತರುಣ ಕವಿಮಿತ್ರ ನಮ್ಮ ಕುಟುಂಬಕ್ಕೂ ಕ್ರಮೇಣ ಆಪ್ತನಾಗಿ ಹೋದದ್ದು , ನನ್ನ ತಂಗಿಯನ್ನು ವರಿಸಿದ್ದು ಈಗ ಇತಿಹಾಸ. ಅವರಿಬ್ಬರು ಮತ್ತು ಅವರ ಪ್ರೀತಿಯ ಕೂಸಿನ ಜೊತೆಯಲ್ಲಿ ಅನೇಕ ವರ್ಷಗಳ ಗಾಢ ಅನುಬಂಧವಿದೆ ನಮ್ಮ ಕುಟುಂಬಕ್ಕೆ. ಇಲ್ಲಿರುವ ಫೋಟೋದಲ್ಲಿ ಅವನಿಗೆ ತುಂಬಾ ಪ್ರಿಯಳಾದ ನನ್ನ ಕಿರಿಯ ಮಗಳಿದ್ದಾಳೆ. ಹದಿನೇಳದಿನೆಂಟು ವರ್ಷಗಳ ಹಿಂದಿನ ಈ ಫೋಟೋ ಅಲ್ಲದೆ….ನಮ್ಮೊಡನಿರುವ ಅನೇಕ ಚಿತ್ರಗಳಲ್ಲಷ್ಟೇ ಅಲ್ಲ ನಮ್ಮ ಮನದಲ್ಲೂ ಉಳಿದುಬಿಟ್ಟಿದ್ದಾನೀಗ ಬರೀ ನೆನಪಾಗಿ.

ತುಂಬಾ ವರ್ಷಗಳ ಹಿಂದೆ ನನ್ನ ತಂಗಿಗೆ ಡಿವೋರ್ಸ್ ಕೊಟ್ಟ ನಂತರ ಅವನೊಡನೆ ನಮ್ಮ ಕುಟುಂಬದ ಸಂಬಂಧ ಮುಕ್ತಾಯವಾಗಿಬಿಟ್ಟಿತ್ತು. ಆನಂತರದ ಗುರು ಪ್ರಸಾದ ಅವರನ್ನು ನಾವು ನೋಡಿಲ್ಲ….ಆದರೆ ಸಂಬಂಧಗಳು ಸ್ನೇಹಗಳು ಮುರಿಯಲು ಅಸಾದ್ಯ.

ಫೋಟೋ ಕೃಪೆ :google

ಇಪ್ಪತ್ತರ ಚಿಗುರುಮೀಸೆಯ ತರುಣ ಗುರುವನ್ನು ನಾನು ಯಾವಾಗಲೂ ಏಕವಚನದಲ್ಲೇ ಕರೆದರೆ ಆತ ಮಾತ್ರ ನನ್ನನ್ನು ನೀವು ಎಂದೇ ಸಂಬೋಧಿಸುತ್ತಿದ್ದ. ನೀವು ನನ್ನ ಅತ್ತಿಗೆ , ಆದರೆ ನಾನು ಅತ್ತಿಗೆ ಎಂದು ಕರೆಯಲಾರೆ ಮೊದಲಿನಂತೆ ” ಪ್ರಭಾ” ಅಂತೇನೆ ಎನ್ನುತ್ತಿದ್ದವ ಮತ್ತು ನನ್ನ ಜೀವನದ ಅಷ್ಟೂ ವರ್ಷಗಳಲ್ಲಿ ಲಾವಣ್ಯ ಅಂತ ಒಮ್ಮೆಯೂ ಕರೆಯದೆ ಯಾವಾಗಲೂ ” ಪ್ರಭಾ” ಕರೆಯುತ್ತಿದ್ದ ಏಕೈಕ ಸ್ನೇಹಿತ ಅವನೊಬ್ಬನೇ.

ಅವನ ಮೊದಲ ಚಿತ್ರದ ಮುಹೂರ್ತದಲ್ಲೇ ಜಯಂತ್ ಕಾಯ್ಕಿಣಿ , ಅಪರ್ಣಾ ಮೊದಲಾದವರ ಪರಿಚಯವಾದರೆ ಅವನ ಮನೆಗೆ ಬರುತ್ತಿದ್ದ ಸುನಿಲ್ ಕುಮಾರ್ ದೇಸಾಯಿ , ತಬಲಾ ನಾಣಿ, ರಘು ಸಮರ್ಥ ಇಂತಹ ಅನೇಕ ನಿರ್ದೇಶಕರು ನಟರ ಪರಿಚಯವಾದದ್ದು. ಮಕ್ಕಳ ಶಾಲಾ ಬೇಸಿಗೆ ರಜೆಯಲ್ಲಿ ನಾನೂ ಮಕ್ಕಳು ತಿಂಗಳಾನುಗಟ್ಟಳೆ ಅವರ ಮನೆಯಲ್ಲಿದ್ದರೂ ಹಿಂತಿರುಗುವಾಗ ಇನ್ನೊಂದೆರಡು ದಿನ ಇರಿ ಅಂತಲೇ ಅವನ ಪ್ರೀತಿಯ ಒತ್ತಾಯ. ಪತಿ ಪತ್ನಿಯರ ಪ್ರೀತಿ ಕಾಳಜಿ ನಮ್ಮನ್ನು ಆವರಿಸಿತ್ತು.

ವಿದ್ಯೆ ಬುದ್ಧಿ ಸಂಸ್ಕಾರಕ್ಕನುಗುಣವಾಗಿ ಕೀರ್ತಿ ಸನ್ಮಾನಗಳು ಬಂದಾಗ ಹಿಗ್ಗದೆ ಕುಗ್ಗದೆ ಶಿಸ್ತಿನಿಂದ ಸಂಯಮದಿಂದ ಇರಲಿಕ್ಕೆ ” ಉಚಿತಾನುಚಿತ ವಿವೇಕ” ಅವಶ್ಯಕವಾಗಿ ಬೇಕು. ನಮ್ಮ ಕುಟುಂಬ ನಮ್ಮ ಬೆನ್ನೆಲುಬು ಅದನ್ನು ಕಳೆದುಕೊಂಡಾಗ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಕದಡಿಹೋಗುತ್ತದೆ. ನಮ್ಮೆಲ್ಲರ ಇವತ್ತಿನ ಪರಿಸ್ಥಿತಿಗೆ ನಾವೇ ಹೊಣೆಯೇ ಹೊರತು ಬೇರಾರು ಅಲ್ಲ ಅಲ್ಲವೇ?

ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟೆಲ್ಲಾ ವಿವಾದಾಸ್ಪದ ವ್ಯಕ್ತಿಯಾದರೂ …..ಗುರು ವೈಯಕ್ತಿಕವಾಗಿ ನನಗೊಬ್ಬ ಒಳ್ಳೆಯ ಗೆಳೆಯ ಮತ್ತು ನಮ್ಮ ಕುಟುಂಬದ ಸದಸ್ಯ. ನಮ್ಮನೆ ಹುಡುಗ. ಅವನ ಮತ್ತು ಅವನ ಮೊದಲ ಪತ್ನಿ ನನ್ನ ತಂಗಿಯೊಡನಿದ್ದ ಒಡನಾಟದ ಎಲ್ಲಾ ಮಧುರ ಕ್ಷಣಗಳು ನೆನ್ನೆಯಿಂದ ಕಣ್ಮುಂದೆ ಪುಟ ತೆರೆದುಕೊಂಡಿವೆ.

ನೊಂದುಬಿಟ್ಟಿರುವೆ…ಅವನಿಗಾಗಿ ಹೀಗೆ ಕಣ್ಣೀರು ಹಾಕುವ ಪ್ರಸಂಗ ಬಂದಿದ್ದಕ್ಕೆ ಅದೂ ನಮ್ಮಿಬ್ಬರ ಹುಟ್ಟಿದ ಹಬ್ಬದ ಮರುದಿನವೇ ಹೀಗಾದುದ್ದಕ್ಕೆ ಮನಸ್ಸು ಸ್ತಬ್ಧವಾಗಿದೆ.
ಹೇಳಬೇಕಾದ ಸಂಗತಿಗಳನ್ನು ಹೇಳಲಾಗುತ್ತಿಲ್ಲ…” ಪ್ರಭಾ ನಾನು ಡೈರೆಕ್ಟರ್ ಆಗ್ತೀನಿ ನೀವು ಗೀತೆಯೊಂದನ್ನು ಬರೆದುಕೊಡ್ತಿರಾ?” ಅಂತ ಚಿಕ್ಕಂದಿನಿಂದ ಕನಸು ಕಾಣುತ್ತಿದ್ದವ ಅದನ್ನು ನನಸಾಗಿಸಿಕೊಂಡೂ ಸಹಾ ನೆನಪಾಗಿ ಉಳಿದುಹೋದ.

ಹೇಳಬೇಕಾದ ಅದೆಷ್ಟೋ ಮಧುರ ಸವಿ ಘಳಿಗೆಗಳ ನೆನಪುಗಳ ಬುತ್ತಿಯೇ ಇದೆ….ಆದರೆ ಏನನ್ನೂ ಬರೆಯಲಾಗದ ಹೇಳಲಾಗದ ಮೂಕಸ್ಥಿತಿಯಲ್ಲಿರುವೆ. ಮತ್ತೊಮ್ಮೆ ಎಂದಾದರೂ ಬರೆಯುವೆ.

ಫೋಟೋ ಕೃಪೆ :google

ತುಂಬಾ ಜನ ಸ್ನೇಹಿತರು ವಾಟ್ಸಪ್ ನಲ್ಲಿ , ಫೋನ್ ಕಾಲ್ ಮಾಡಿ ಕೇಳ್ತಾ ಇದ್ದಾರೆ ” ಲಾವಣ್ಯ… ಗುರು ಪ್ರಸಾದ್ ಹೋಗಿಬಿಟ್ರಂತೆ?! ತುಂಬಾ ನೋವಾಯ್ತು , ಶಾಕ್ ಆಯ್ತು ” ಅಂತ.
ಅದಕ್ಕೇ ಬರೆಯಬೇಕೋ ಬೇಡವೋ ತಿಳಿಯದ ಸ್ಥಿತಿಯಲ್ಲಿ ಸ್ನೇಹಿತರಿಗೆಲ್ಲಾ ಈ ಲೇಖನದ ಮೂಲಕ ಸ್ಪಷ್ಟ ಪಡಿಸುತ್ತಿರುವೆ.

ಮಾಧ್ಯಮಗಳಲ್ಲಿ ಮಾತಾಡುತ್ತಿರುವವರಲ್ಲಿ ನನ್ನದೊಂದು ವಿನಂತಿ : ದಯವಿಟ್ಟು ಅವನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದೇ ಮಾತಾಡ್ತಾ ಕೂರಬೇಡಿ. ಸಾವಾದ ವ್ಯಕ್ತಿಯ ಬಗ್ಗೆ ಹಗುರವಾಗಿ ಎಂದೂ ಮಾತಾಡಬಾರದು. ಇಷ್ಟರಲ್ಲಾಗಲೇ ಆತ ಮತ್ತಾವುದೋ ತಾಯಿಯ ಒಡಲಲ್ಲೋ ಮಡಿಲಲ್ಲೋ ಮಗುವಾಗಿರಬಹುದು.

ಒಂದು ವಿಷಯ ನೆನಪಾಗ್ತಿದೆ ಜಯಂತ್ ಕಾಯ್ಕಿಣಿ ಕುವೆಂಪು ಅವರ ಮಗ ತೇಜಸ್ವಿ ಅವರೊಂದಿಗೆ ಸಂದರ್ಶನ ಮಾಡುವಾಗ ತೇಜಸ್ವಿ ಹೇಳಿದರಂತೆ ಕುವೆಂಪು ಸಾಹಿತ್ಯದ ಬಗ್ಗೆಯೇ ಪದೆಪದೆ ಪ್ರಶ್ನಿಸುವುದು ಬಿಟ್ಟು ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅವರ ತವರು ಬಾಲ್ಯ ಯೌವ್ವನ ಅವರ ಇತರ ಆಸಕ್ತಿಗಳು ಅವರಿಷ್ಟದ ಊಟ ತಿಂಡಿ ಹಾಡು ಸ್ಥಳ ಉಡುಗೆ ಅವರಿಷ್ಟಾನಿಷ್ಟಗಳು ಸ್ನೇಹಿತರು….ಹೀಗೆ ಅವರ ಜೀವನದ ಇನ್ನೊಂದು ಮಗ್ಗಲನ್ನು ಪರಿಚಯಿಸಿದರೆ ಕುವೆಂಪು ಸಮಗ್ರ ಚಿತ್ರಣ ಸಾಧ್ಯ ಅಂತ.

ಸೋಷಿಯಲ್ ಮಿಡಿಯಾಗಳೆ.. ನೀವೂ ಸಹಾ ಗುರು ಪ್ರಸಾದ್ ಅವರ ತವರು, ಬಾಲ್ಯ ಮತ್ತು ಬಾಲ್ಯ ಸ್ನೇಹಿತರು , ಕಾಲೇಜು ಮತ್ತು ಕಾಲೇಜಿನ ಅಧ್ಯಾಪಕರನ್ನು ಭೇಟಿ ಮಾಡಿ ಪ್ರತಿಭಾವಂತ ನಿರ್ದೇಶಕನೊಬ್ಬ ನಡೆದು ಬಂದ ದಾರಿಯಲ್ಲಿನ ಅನೇಕ ವಿಷಯಗಳನ್ನು ಸಂಗ್ರಹಿಸಿ ಜನರಿಗೆ ಕೊಡಿ. ಯಾವುದೇ ಪ್ರಸಿದ್ಧ ವ್ಯಕ್ತಿಗಳ ಸಾವಿನ ಸಮಯದಲ್ಲಿ ನೀವು ಮಾಡಬೇಕಾದ ಮುಖ್ಯ ಕರ್ತವ್ಯ ಇದೇ ಎಂದು ನಾನು ಭಾವಿಸುತ್ತೇನೆ.

ನಿನ್ನಾತ್ಮ ಶಾಂತಿಯಲ್ಲಿ ವಿರಮಿಸಲಿ. ಓಂ ಶಾಂತಿ.
ಗುರು ಪ್ರಸಾದ್….ಗುರೂ…ಹೋಗಿ ಬಾ.
ನೆನಪಿರುವೆ ನಮ್ಮ ಮನೆ ಮತ್ತು ಮನಸ್ಸುಗಳಲ್ಲಿ ಸದಾ…
ಅತ್ತೆ ಕಣೋ…ಈಗಲೂ ಅಳುತ್ತಿರುವೆ.


  • ಲಾವಣ್ಯ ಪ್ರಭಾ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW