ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕಾದಂಬರಿ ಕಾಡು- ನಾಡು; ಧರ್ಮ- ವ್ಯಾಪಾರ; ಹೆಣ್ಣು- ಗಂಡು; ಪ್ರಜೆ- ಪ್ರಭುಗಳ ಮುಖಾಮುಖಿಯ ರೇಷ್ಮೆ ಕಾರಿಡಾರಿನ ಕಥನವೇ ‘ರೇಷ್ಮೆಬಟ್ಟೆ’. ಈ ಕಾದಂಬರಿಯ ಕುರಿತು ಅಜಿತ್ ಹರೀಶಿ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ರೇಷ್ಮೆ ಬಟ್ಟೆ
ಲೇಖಕರು : ವಸುಧೇಂದ್ರ
ಪ್ರಕಾರ : ಕಾದಂಬರಿ
ಪ್ರಕಾಶನ : ಛಂದ ಪುಸ್ತಕ,
ಬೆಲೆ : 405.00
ಈಗಾಗಲೇ ಹಲವು ಕಥಾಸಂಕಲನಗಳು ಮತ್ತು ತೇಜೋ ತುಂಗಭದ್ರಾ ಕಾದಂಬರಿಗಳ ಮೂಲಕ ಕನ್ನಡದ ಜನಪ್ರಿಯ ಲೇಖಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ವಸುಧೇಂದ್ರ ಅವರು ರೇಷ್ಮೆ ಬಟ್ಟೆ ಎಂಬ ಕಾದಂಬರಿಯನ್ನು ಓದುಗರ ಮುಂದಿರಿಸಿದ್ದಾರೆ. ಈ ಹೊಸ ಕಾದಂಬರಿಯಲ್ಲಿ ಸಮೃದ್ಧವಾದ ವಿವರಗಳು ಮತ್ತು ವೈಚಾರಿಕತೆಯ ಹೊಸ ಸಾಧ್ಯತೆಗಳು ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು. ಹಾಗಂತ ಕಾದಂಬರಿಯಲ್ಲಿರಬೇಕಾದ ಘಟನೆಗಳ ಸರಣಿ ಮತ್ತು ಕಥನದ ಕ್ರಮಕ್ಕೆ ಯಾವುದೇ ಕುಂದುಂಟಾಗಿಲ್ಲ. ಕಾಡು- ನಾಡು; ಧರ್ಮ- ವ್ಯಾಪಾರ; ಹೆಣ್ಣು- ಗಂಡು; ಪ್ರಜೆ- ಪ್ರಭುಗಳ ಮುಖಾಮುಖಿಯ ರೇಷ್ಮೆ ಕಾರಿಡಾರಿನ ಕಥನವೇ ‘ರೇಷ್ಮೆಬಟ್ಟೆ.’

ಎರಡನೇ ಶತಮಾನದಲ್ಲಿ ಜರುಗಿದ ಘಟನೆಗಳ ಐತಿಹಾಸಿಕ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕೃತಿಯು ಹಲವು ಬೆರಗುಗಳನ್ನು ಮೂಡಿಸುತ್ತದೆ. ಯವನರು, ಪಾರ್ಥಿಯನ್ನರು ಮತ್ತು ಹೂಣರ ನೆಲದಿಂದ ಆರಂಭವಾಗುವ ಕಾದಂಬರಿಯು, ತುಷಾರ ಎಂಬ ಕಾಡಿನ ಜನಾಂಗದ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿ ಬೆಳೆಯುತ್ತದೆ. ಚೀನಿಯರು ತಯಾರಿಸಿದ ರೇಷ್ಮೆ ಬಟ್ಟೆ ಮತ್ತು ಕಾಪಾಡಿಕೊಂಡ ತಯಾರಿಕೆಯ ರಹಸ್ಯವು ಒಂದು ಹೊಸ ದಾರಿಗೆ ಕಾರಣವಾಗುತ್ತದೆ. ಈ ಹೊಸ ದಾರಿ ಕಾಡಿನಲ್ಲಿ ಬದುಕುವ ಜನರ ಬದುಕನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ಈ ವ್ಯಾಪಾರದ ಮಾರ್ಗಕ್ಕೆ ಧರ್ಮವು ಬೆಸೆದುಕೊಂಡು, ತನ್ನ ಬೋಧನೆಯನ್ನು ವಿಸ್ತರಿಸಲು ಹೊರಟಾಗ, ಇಕ್ಕಟ್ಟಿಗೆ ಸಿಲುಕುವ ಪರಿಯನ್ನು ವಿವರವಾಗಿ ಈ ಕಾದಂಬರಿಯು ಚರ್ಚಿಸುತ್ತದೆ. ಗಂಡು ಮತ್ತು ಹೆಣ್ಣಿನ ವಿಷಯದಲ್ಲಿ ಧರ್ಮದ ನಿಲುವುಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ವಸುಧೇಂದ್ರ ಕಥೆಯ ಮೂಲಕವೇ ಕನ್ನಡಿಯಾಗಿಸುತ್ತಾರೆ.
ಪ್ರಭುತ್ವ ಮತ್ತು ಧರ್ಮದ ಸಂಬಂಧಗಳ ಅನಿವಾರ್ಯತೆ, ಬದಲಾವಣೆಯ ಬವಣೆಯ ಕೂಪದಲ್ಲಿ ಮುಳುಗೇಳುವ ಜನಾಂಗಗಳು, ಸಗನೇಮಿ, ಮಧುಮಾಯಾ, ಲೀಹ್ವಾ ಎಂಬ ಹೆಣ್ಣುಮಕ್ಕಳ ಸಂಕಟಗಳು; ವ್ಯವಸಾಯ, ಕೂಲಿ, ಕಾಡಿನ ಜೀವನಗಳ ಎದುರು ಆಕರ್ಷಕವಾಗಿ ಕಾಣುವ ವ್ಯಾಪಾರ- ಇವುಗಳ ಆಯ್ಕೆಯಲ್ಲಿ ತೊಳಲಾಡುವ ಗಂಡು ಜೀವ. ಹೀಗೆ ಎಲ್ಲವನ್ನೂ ಒಳಗೊಳ್ಳುವ ಕಾದಂಬರಿ ಒಂದು ದೊಡ್ಡ ಕ್ಯಾನ್ವಾಸಿನ ಮೇಲೆ ಬೆಳೆಯುತ್ತದೆ.
ಜ್ಞಾನಸೇನ ಮತ್ತು ಬುದ್ಧಮಿತ್ರರಿಗೆ ತಥಾಗತನ ಸಂದೇಶಗಳನ್ನು ಸಾರುವ ಹಾದಿಯಲ್ಲಿ ಎದುರಾಗುವ ಸವಾಲು ಮತ್ತು ಆಂತರಿಕ ತೊಳಲಾಟಗಳನ್ನು ಇಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಚೀನಿಯರ ಬದುಕು, ಶ್ರೇಣಿಕೃತ ವ್ಯವಸ್ಥೆ, ಅಧಿಕಾರಶಾಹಿಯನ್ನು ಕನ್ನಡದ ಕಾದಂಬರಿಯೊಂದು ಇಷ್ಟು ಕೂಲಂಕಷವಾಗಿ ವಿವರಿಸಿದ್ದು ಬಹುಶಃ ಇದೇ ಮೊದಲಿರಬೇಕು.
ಎಲ್ಲಾ ಕಾಲದಲ್ಲಿಯೂ ನಡೆದಿರಬಹುದಾದ ಜಾಗತೀಕರಣ ಮತ್ತು ತಲ್ಲಣಗಳನ್ನು ನಾವು ಎರಡನೇ ಶತಮಾನದ ಈ ಕಾದಂಬರಿಯೊಂದಿಗೆ ಸಮೀಕರಿಸಬಹುದಾಗಿದೆ ಮತ್ತು ಇವತ್ತಿಗೂ ಪ್ರಸ್ತುತವಾಗಿರುವುದು ವಿಶೇಷ.

450 ಪುಟಗಳ ಈ ಬೃಹತ್ ಕಾದಂಬರಿಯ ಓದಿನ ಮಾರ್ಗದಲ್ಲಿ ಅಲ್ಲಲ್ಲಿ ಮನಸೆಳೆಯುವ ರೂಪಕಗಳು ಮತ್ತು ಕಾವ್ಯಾತ್ಮಕ ಸಾಲುಗಳು ಸಿಗುತ್ತವೆ. ಇವು ವಸುಧೇಂದ್ರ ಅವರ ಎಂದಿನ ಶೈಲಿಯ ಹೊರತಾದ ಬರವಣಿಗೆ ಎಂಬುದು ಅವರ ಖಾಯಂ ಓದುಗರಿಗೆ ಹೊಳೆಯುತ್ತದೆ. ಅಲ್ಲದೇ ಕತೆಯ ಸಂಗಡ ಕಥನಕ್ಕೆ ಈ ಬಾರಿ ಅವರು ಹೆಚ್ಚು ಒತ್ತು ಕೊಟ್ಟಿದ್ದಾರೆ. ತಂತ್ರದ ದೃಷ್ಟಿಯಿಂದ ತೇಜೋ ತುಂಗಭದ್ರಾ ಕೃತಿಯು ಹೋಲಿಕೆಯಾಗುತ್ತದೆಯೇ ವಿನಃ ಉಳಿದಂತೆ ಕಾದಂಬರಿಯು ವಿಶಿಷ್ಟವಾಗಿದೆ.
ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಬರೆದ, ವಸುಧೇಂದ್ರ ಅವರ ಈ ಮಹತ್ವಾಕಾಂಕ್ಷಿಯ ಕೃತಿಯು ಪ್ರಮುಖವಾಗಿ ಬೌದ್ಧ ಧರ್ಮವನ್ನು ರಂಗದ ಬೆಳಕಿನಲ್ಲಿ ನಿಲ್ಲಿಸುವುದರ ಜೊತೆಗೆ ಪಾರಸಿಕ, ಹಿಂದೂ ಧರ್ಮ, ಬುಡಕಟ್ಟುಗಳ ಆಚರಣೆಗಳ ಚಿತ್ರಣವನ್ನು ನೀಡುತ್ತದೆ.
ಒನಪಿನ ಬಟ್ಟೆಯಾದ ರೇಷ್ಮೆಯ ಒರಟು ದಾರಿಯು ಕಾಡು, ಮರುಭೂಮಿ; ನಗರ, ಹಳ್ಳಿ; ವಿವಿಧ ರಾಷ್ಟ್ರಗಳನ್ನು ಹಾದು ಹೋಗುತ್ತದೆ. ಕೆಲವರ ಎದೆಯ ಮೇಲೆ ಕಾಲಿಟ್ಟು ನಡೆಯುತ್ತದೆ. ಹವಿನೇಮ, ಸಗನೇಮಿ, ಮಧುಮಾಯಾ, ಮಿತ್ರವಂದಕ, ಜ್ಞಾನಸೇನ, ಬುದ್ಧಮಿತ್ರ, ಕಾಂಗ್ ಕುಟುಂಬ ಸೇರಿದಂತೆ ಹಲವು ಪಾತ್ರಗಳ ಸೊಗಸಾದ ಚಿತ್ರಣವಿಲ್ಲಿದೆ. ಒಂದು ಹೊಸ ದಾರಿಯು ಇವರುಗಳನ್ನು ಪಲ್ಲಟಗೊಳಿಸಿ, ಎತ್ತೆತ್ತಿ ಒಗೆಯುವ ರೀತಿಯು ಕಾಡುತ್ತದೆ. ಬುದ್ಧನ ಮೂರ್ತಿ ಮತ್ತು ರೇಷ್ಮೆಯ ರಹಸ್ಯದ ಅನೂಹ್ಯ ಸಂಗಮ ಕತೆಯನ್ನು ಅದರ ಶೃಂಗಕ್ಕೆ ಒಯ್ಯುತ್ತದೆ. ಒಟ್ಟಿನಲ್ಲಿ ವಸುಧೇಂದ್ರರ ಶ್ರಮ ಮತ್ತು ಸೃಜನಶೀಲತೆಯಿಂದ ಒಡಮೂಡಿದ ಈ ಕೃತಿಯು ಶ್ಲಾಘನಾರ್ಹವಾಗಿದೆ.
- ಅಜಿತ್ ಹರೀಶಿ
