ಮುದೇನೂರ ಸಂಗಣ್ಣ ಅವರ ಒಂದು ಪ್ರಸಂಗ

ಮುದೇನೂರ ಸಂಗಣ್ಣನವರು ಬಳ್ಳಾರಿ ಜಿಲ್ಲೆಯ ಚಿಗಟೇರಿಯವರು. ದೊಡ್ಡ ಜಮೀನುದಾರರಾದರೂ ಹತ್ತು ಹಲವು ಹವ್ಯಾಸ ಹೊಂದಿದ್ದರು. ಮುದೇನೂರ ಸಂಗಣ್ಣ ಅವರ ಕುರಿತು ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೀದಿ ದಾಸರು, ಜೋಗಪ್ಪಗಳು, ಗೊಂದಲಿಗರು, ದುರುಗ ಮುರಗಿಯವರು, ವೇಷಗಾರರು, ಪರ್ವತಮಲ್ಲಯ್ಯಗಳು, ಗೊಂಬೆ ಆಟದವರು ಇಂಥ ಬೀದಿ ಅಲೆಮಾರಿಗಳ ಜೊತೆಗೆ ಅವರ ದೋಸ್ತಿ. ಅವರು ತಂಬಾಕು ವ್ಯಪಾರ ಮಾಡುತ್ತಿದ್ದುದರಿಂದ ನಾನು ನಿಪ್ಪಾಣಿಯಲ್ಲಿದ್ದಾಗ ಅವರ ಗೆಳೆತನವಾಗಿತ್ತು. ಅವರ ಮನೆಯಲ್ಲಿ, ಚೌಡಕಿ, ತಂಬೂರಿ, ಶಹನಾಯಿ,ಬುಡ ಬುಡಕಿ, ತಬಲಾ, ಮೃದಂಗ, ಘಟ, ಪು೦ಗಿ, ಹರ‍್ಮೋನಿಯಮ್ಮು ಮುಂತಾದ ಸಂಗೀತ ಪರಿಕರಗಳನ್ನು ಇಟ್ಟಿದ್ದರು. ಕಲಿತದ್ದು ಬರಿ ಪಿ.ಯು.ಸಿ ಆದರು ಅವರಿಗೆ ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯತ್ವ ಲಭಿಸಿತ್ತು. ಅವರ ಊರು ಚಿಗಟೇರಿಯಲ್ಲಿ ಜಗಳವಿಲ್ಲದಲ್ಲಿ ಜಗಳ ಹಚ್ಚುವ ಅಲೆಮಾರಿ ಸಾದು ಎಂದು ಹೆಸರಾಗಿದ್ದ ನಾರದ ಮುನಿಯ ದೇವಸ್ಥಾನವಿದೆ. ಊರಲ್ಲಿ ಆ ಮನೆತನದ್ದು ಬಹು ದೊಡ್ಡ ಹೆಸರು. ಸಂಗಣ್ಣನವರ ತಂದೆ ಕೊಟ್ರಬಸಪ್ಪನವರು ಅವರಂತೆಯೆ ಗ್ರಾಮದ ಮುಖ್ಯಸ್ಥರು.

೧೯೩೦ ರ ದಶಕದಲ್ಲಿ ಗಾಂಧಿ ಹರಪನಹಳ್ಳಿಗೆ ಬಂದಾಗಿನ ಒಂದು ಘಟನೆ ಇದು. ಕೊಟ್ರಬಸಪ್ಪನವರ ಮುಂದಾಳತ್ವದಲ್ಲಿ ಗಾಂಧಿಯನ್ನು ಸ್ವಾಗತಿಸುವುದಿತ್ತು. ಗಾಂಧಿ ಹರಪನಹಳ್ಳಿಯಿಂದ ಕೊಟ್ಟೂರಿಗೆ ಹೋಗುವುದಿತ್ತು. ಕೊಟ್ಟೂರಿಗೆ ಹೋಗುವ ರಸ್ತೆ ಚಿಗಟೇರಿ ಕ್ರಾಸ ರೋಡ ಮುಖಾಂತರವೇ ಹೋಗಬೇಕು. ಕೊಟ್ರಬಸಪ್ಪ ಮತ್ತು ಚಿಗಟೇರಿಯ ಜನವೆಲ್ಲ ಸೇರಿ ಗಾಂಧಿಯನ್ನು ತಮ್ಮ ಹಳ್ಳಿಗೆ ಸ್ವಾಗತಿಸಿ, ಹರಿಜನೋದ್ಧಾರಕ್ಕಾಗಿ ತಾವು ಸಂಗ್ರಹಿಸಿದ ೨೫ ಸಾವಿರ ಹಮ್ಮಿಣಿ ಅರ್ಪಿಸಿ ಕಳಿಸಬೇಕೆಂದು ಹಣ ಕೂಡಿಸಿದ್ದರು.ಗಾಂಧಿಯ ಜೊತೆಗೆ ಬರುವ ಸಾವಿರಾರು ಜನರಿಗೆ ಅಡುಗೆಯ ವ್ಯವಸ್ಥೆಯನ್ನೂ ಮಾಡಿಸಿದ್ದರು.ಚಿಗಟೇರಿ ಕ್ರಾಸಿನಲ್ಲಿ ದೊಡ್ಡ ಹಂದರ ಹಾಕಿಸಿ, ಆ ಊರಿನ ನೂರಾರು ಜನರು ಕ್ರಾಸ ರೋಡಿಗೆ ಹೋಗಿ ಕಾಯ್ದು ಕುಳಿತರಂತೆ.

ಗಾ೦ಧಿ ಬಂದರು. ಅವರ ಗಾಡಿಯನ್ನು ನಿಲ್ಲಿಸಿ ಮಾಲೆ ಹಾಕಿ ಸ್ವಾಗತಿಸಿದರು.ಆ ಹಳ್ಳಿಗರ ಅಪೇಕ್ಷೆಯಂತೆ ಗಾಂಧೀಜಿ ಚಿಗಟೇರಿಗೆ ಬಂದು ಹಮ್ಮಿಣಿ ಸ್ವೀಕರಿಸಬೇಕೆಂಬುದಾಗಿತ್ತು. ಆದರೆ ಗಾಂಧೀ ಪಯಣದ ವೇಳಾ ಪಟ್ಟಿಯಲ್ಲಿಲ್ಲದ ಆ ಹಳ್ಳಿಗೆ ಹೊಗಲಿಕ್ಕೆ ನಿರಾಕರಿಸಿ ಬಿಟ್ಟರಂತೆ. ಚಿಗಟೇರಿ ಹಳ್ಳಿಗೆ ಹಳ್ಳಿಯೇ ಅಲ್ಲಿ ಸೇರಿತ್ತು. ಗಾಂಧಿ ತಮ್ಮ ಊರಿಗೆ ಬರುವುದಿಲ್ಲವೆಂಬುದನ್ನು ಕೇಳಿ ಅವರಿಗೆಲ್ಲಾ ತುಂಬಾ ನಿರಾಶೆಯಾಯಿತು. ಆಗ ಕೊಟ್ರಬಸಪ್ಪನವರು “ನಿಮ್ಮ ಹರಿಜನೋದ್ಧಾರ ಫಂಡಿಗಾಗಿ ನಾವು ೨೫ ಸಾವಿರ ಹಣ ಸಂಗ್ರಹಿಸಿದ್ದೇವೆ. ದಯವಿಟ್ಟು ರ‍್ರಿ.ಬರಿ ಹತ್ತು ನಿಮಿಷದ ದಾರಿ. ನಮ್ಮ ಜನರಿಗೆಲ್ಲ ಸಂತೋಷವಾಗುತ್ತದೆ” ಎಂದು ಕೇಳಿಕೊಂಡರಂತೆ. ಆಗ ಗಾಂಧೀಜಿ “ನೀವು ಲಕ್ಷ ಕೊಟ್ಟರೂ ನಾನು ಬರುವುದಿಲ್ಲ” ಎಂದರ೦ತೆ. ಗಾಂಧೀಜಿಯ ಜೊತೆಗಿದ್ದ ಸ್ವಾತಂತ್ರ ಹೋರಾಟಗಾರರಾದ ರಂಗನಾಥ ದಿವಾಕರ, ಗಂಗಾಧರರಾವ್ ದೇಶಪಾಂಡೆ “ಐದು ನಿಮಿಷ ಹೋಗಿ ಬಂದು ಬಿಡೋಣ”ವೆಂದರೂ ಗಾಂಧೀಜಿ ಒಪ್ಪಲಿಲ್ಲವಂತೆ.

ನೀವು ಬರದಿದ್ದರೆ ನಾವು ನಿಮ್ಮನ್ನು ಮುಂದೆ ಹೋಗಲಿಕ್ಕೆ ಬಿಡುವುದಿಲ್ಲವೆಂದು ಜನರು ರಸ್ತೆಗೆ ಅಡ್ಡ ಕುಳಿತರಂತೆ. ಗಾಂಧೀಜಿಯೂ ಕಾರಿನಿಂದ ಇಳಿದು ಬಂದು ಇವರು ಹಾಕಿದ ಚಪ್ಪರದಲ್ಲಿ ಕುಳ್ಳಿರದೆ ರಸ್ತೆ ಬಿಟ್ಟು ದೂರ ಹೋಗಿ ಬಿಸಿಲಲ್ಲಿಯೇ ಕುಳಿತು ಪ್ರತಿಭಟನೆ ಮಾಡಿದರಂತೆ. ಒಂದು ತಾಸು ಬಿಸಿಲಲ್ಲಿ ಕುಳಿತರೂ ಗಾಂಧೀಜಿ ಚಿಗಟೇರಿಗೆ ಹೋಗಲಿಕ್ಕೆ ಒಪ್ಪಲಿಲ್ಲವಂತೆ. ಕೊನೆಗೆ ಹಳ್ಳಿಯ ಜನರೇ ಸೋತು ಹಿಂದೆ ಸರಿದರಂತೆ. ಆದರೆ ೨೫ ಸಾವಿರ ಹಮ್ಮಿಣಿ ಹಣ ಗಾಂಧೀಜಿಗೆ ಕೊಡಲಿಕ್ಕೆ ಒಪ್ಪದೇ ಬಿಹಾರದ ಕ್ಷಾಮನಿಧಿಗೆ ಕಳಿಸಿದರಂತೆ.ಶಿಸ್ತನ್ನು ಕಾಯ್ದುಕೊಳ್ಳುವುದಕ್ಕಾಗಿ ಹಠ ಬೇಕು.

(ನಾನು ಬರೆದ ಚಿಗಟೇರಿ ಮುದೇನೂರ ಸಂಗಣ್ಣನವರ ಕೃತಿಯಿಂದ)


  • ವಿರೂಪಾಕ್ಷಪ್ಪ ಕೋರಗಲ್ –ನಿವೃತ್ತ ಗಣಿತ ಪ್ರಾಧ್ಯಾಪಕರು, ಲೇಖಕರು, ಸಾಹಿತಿಗಳು, ಹಾವೇರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading