ಪಾಷಾಣಕ್ಕೆ ಮನುಷತ್ವ ಇರುವುದಿಲ್ಲ

ನನ್ನ ಗುರುಗಳನ್ನು ಕರೆದುಕೊಂಡು ತಹಶೀಲ್ದಾರ್ ರ ಮನೆಗೆ ಹೋದಾಗ ಲಂಚಕ್ಕಾಗಿ ಅವರು ನಡೆದುಕೊಂಡ ರೀತಿ ಮನಸ್ಸಿಗೆ ನೋವಾಗಿದ್ದಷ್ಟೇ ಅಲ್ಲ. ಕೊಂದು ಬಿಡುವಷ್ಟು ಸಿಟ್ಟು ಬಂದಿತ್ತು. ಕೆಲವು ನೀಚ ರೆವೆನ್ಯೂ ಅಧಿಕಾರಿಗಳು ಮನುಷ್ಯರೇ ಅಲ್ಲ ಎನ್ನಿಸಿ ಹೋಯಿತು. ಲೇಖಕರಾದ ವಿರೂಪಾಕ್ಷಪ್ಪ ಕೋರಗಲ್ ಅವರ ಅನುಭವದ ಒಂದು ಕಹಿ ಘಟನೆಯನ್ನು ತಪ್ಪದೆ ಮುಂದೆ ಓದಿ…

ಒಂದು ಅಕಸ್ಮಿಕ ಭೇಟಿ. ಅಂದು ಜಿಟಿ ಜಿಟಿ ಮಳೆ ಬರುತ್ತಿತ್ತು. ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯ್ಯಲ್ಲಿ ಪುಸ್ತಕ ಹಿಡಿದು ಕಾಲೇಜಿನಿಂದ ಮನೆಯ ಕಡೆಗೆ ಹೊರಟಿದ್ದೆ. ಎದುರಿಗೊಬ್ಬರು ನನ್ನ ಹಾಗೆಯೇ ಕೊಡೆಯನ್ನು ಎರಡೂ ಕೈಯಿಂದ ಅಲೇ ಹಬ್ಬದ ನಿಂದ್ರಿಕಿ ದೇವರನ್ನು ಅವುಚಿ ಹಿಡಿದ ಫಕೀರನಂತೆ ಹಿಡಕೊಂಡು ಬಂದರು. ಎಲ್ಲೋ ನೋಡಿದಂತೆ ಅನಿಸಿತು. ನೆನಪಿಗೆ ಬರಲಿಲ್ಲ. ಅವರನ್ನು ದಾಟಿ ಮುಂದಕ್ಕೆ ಹೋಗಿ ಹೊರಳಿ ನೋಡಿದೆ. ನಾನು ಹಿಂದಕ್ಕೆ ನೋಡುತ್ತಿರುವಂತೆಯೇ ಅವರೂ ತಿರುಗಿ ನೋಡಿ, “ನಿಮ್ಮನ್ನ ಎಲ್ಲೋ ನೊಡಿದಾಂಗ ಅನಸ್ತಾ ಐತೆ ಅಲ್ರಿ” ಎಂದು ಹೇಳುತ್ತಾ ಎರಡು ಹೆಜ್ಜೆ ಮುಂದಕ್ಕೆ ಬಂದರು. “ನಾನು ಮುಂದಿನ ಬೆಂಚಿನ ಮ್ಯಾಲೆ ಕುಂತಾಗ ನೀವು ಪೈತಾಗೋರಸನ್ನ ಕಲಿಸುವಾಗ ಡಸ್ಟರ್ ತಗೊಂಡು ತೆಲಿಗೆ ಬಡಿತಿದ್ದೀರಲ್ಲ ಅಲ್ಲಿ ನೋಡೀರಿ” ಅಂದೆ. ಅವರಿಗೆ ಅತ್ಯಂತ ಖುಷಿ ಆತು. ನಮಗೆ ಗಣಿತಾ ಕಲಿಸುತ್ತಿದ್ದ ಅಂಗಡಿ ಮಾಸ್ತರು! ೫೦-೬೦ ರ ದಶಕದ ಗವಿಸಿದ್ದೇಶ್ವರ ಹೈಸ್ಕೂಲಿನ ಪಿಳ್ಯಾಗಳಿಗೆ ಅಂಗಡಿ ಮಾಸ್ತರರು ಗೊತ್ತು. ಅವರು ನಕ್ಕರು. ನನಗೆ ದೇವರನ್ನೇ ನೋಡಿದಷ್ಟು ಖುಷಿ ಆತು. ಹೆಸರು ನೆನಪಾಗಲ್ದು ಅಂದರು. “ಸರ್ ನಾನು ಕೊರಗಲ್ಲ ಅಂತಾ ನಿಮ್ಮ ಸ್ಟುಡೆಂಟು ಅಂದೆ. “ಇರ್ಪಾಕ್ಷಿ” ಎನ್ನುತ್ತಾ ಇಪ್ಪತ್ತು ವರ್ಷದ ಹಿಂದಿನ ಕೆರೆದಂಡೆಯ ಕ್ಲಾಸರೂಮಿಗೆ ಹೋದರು. ಇಲ್ಲಿ ಕೆ ಎಲ್ ಇ  ಕಾಲೇಜದೊಳಗ ನೀವು ಕಲಿಸಿದ ವಿಷಯದ ಲೆಕ್ಚರರ ಆಗೀನಿ” ಎಂದು ಪರಿಚಯಿಸಿದೆ. ಮನೆಗೆ ಕರಕೊಂಡು ಬಂದೆ. ಏನ ಸರ್ ಇಲ್ಲಿ ಅಂದೆ.

“ಇಲ್ಲಿ ಶಿಗ್ಗಾಂವಿಯೊಳಗ ನಂದು ೮ ಎಕರೆ ಹೊಲಾ ಐತೆ. ಟೆನೆನ್ಸಿಯೊಳಗ ರೈತರ ಪಾಲಾದದ್ದು ಈಗ ೪ ಎಕರೆ ನನಗ ಬಿಟ್ಟು ಕೊಡಬೆಕೆಂತಾ ಕೋರ್ಟ್ ಆದೇಶ ಆಗೇತಿ. ಅದಕ್ಕ ತಿಂಗಳಿಗೆ ಒಮ್ಮೆ, ಹದಿನೈದು ದಿನಕ್ಕೊಮ್ಮೆ ಇಲ್ಲಿಗೆ ಬಂದು ಹೋಗಾಕ ಹತ್ತಿ ಸಾಕಾಗೇತಿ ಕೆಲ್ಸಾ ಆಗವಲ್ದು. ಮೋಜಣಿ ಮಾಡಾವರ ಕಾಡಲಿಕ್ಕ ಹತ್ತ್ಯಾರ. ನಿಮ್ಮ ಮನಿಪಕ್ಕದೊಳಗ ಮೋಜಣಿ ಆಫೀಸ ಐತಿ. ನೀವು ಒಂಚೂರು ಸಹಾಯ ಮಾಡಬೇಕು.” ಅಂದರು. ಅವರನ್ನು ಕರಕೊಂಡು ಮೋಜಣಿ ಆಫೀಸಿಗೆ ಹೋದೆ. ಆಗ ೫೭ ರೂಪಾಯಿ ಮೋಜಣಿ ಫೀ ಇತ್ತು. ೫೭ ರೂ ತೆಗದು ಮ್ಯಾನೇಜರ ಕಮ್ಮಾರವರ ಕೈಯಾಗ ಕೊಟ್ಟು ಒಂದು ವಾರದಲ್ಲಿ ಇವರ ಹೊಲದ ಅಳ್ತೆ ಮಾಡಿ ರಿಕಾರ್ಡ್ ಕೊಡಬೇಕು ಅಂದೆ.ಆ ಹೊಲದ ಕಬ್ಜ ಕೊಡಸೂರು ಶಿಗ್ಗಾವಿಯ ತಹಶೀಲದಾರರು. ಸರ್ ಮುಂದಿನ ಸರ್ತಿ ಬಂದಾಗ ಅಲ್ಲಿ ತಹಶೀಲದಾರರ ಹೆಸರು ತಗೊಂಡು ಬಂದರು. ಅವರ ಮನೆ ಹಾವೇರಿಯಲ್ಲಿಯೇ ಇತ್ತು.”ಸರ್, ನಿಮ್ಮ ಕೆಲಸ ಸರಳ ಆಗತ್ತ ಬಿಡ್ರಿ” ಅಂದೆ. ಕಾರಣ ಅವರ ಇಬ್ಬರು ಮಕ್ಕಳು ಪಿಸಿಎಂದಲ್ಲಿ ಇದ್ದು, ನನ್ನ ವಿದ್ಯಾರ್ಥಿನಿಯರು. ಅವರ ಹಿರಿಯ ಮಗಳು ಸುಮಾ ಬಿಎಸ್ಸಿ  ಫೈನಲ್ಲೂ, ಸವಿತಾ ಫಸ್ಟ ಬಿಎಸ್ಸಿ.

ಅಂಗಡಿ ಸರ್ ನ್ನು ಕರೆದುಕೊಂಡು ತಹಶೀಲ್ದಾರ್ ರ ಮನೆಗೆ ಹೋದೆ. ನಮ್ಮ ಬೆಲ್ಲಿಗೆ ಸ್ಫಂದಿಸಿ ತಹಸೀಲದಾರ ಸಾಹೇಬರೇ ಹೊರಗೆ ಬಂದರು. ಅವರಿಗೆ ನನ್ನ ಗುರುತು ಇತ್ತು. ಆದರೂ ಗುರುತಿಸಲಿಲ್ಲ. ಆತ ಸಿಟ್ಟುಗೋಂಡತಿದ್ದ. ಆತನ ಮಕ್ಕಳಿಗೆ ಕಲಿಸುತ್ತಿದ್ದ ಈ ಶಿಕ್ಷಕನಿಗೆ ಒಂದು ಪೈಸೆಯಷ್ಟೂ ಗೌರವವನ್ನು ಆ ಮನುಷ್ಯ ಕೊಡಲಿಲ್ಲ. ನಾನು ಆತನ ಶಿಕ್ಷಕನಾಗದಿದ್ದುದೇ ನನ್ನ ಪುಣ್ಯ. ಬಾಗಿಲ ಮುಂದಿನ ಮೆಟ್ಟಿಲ ಮೇಲೆ ನಿಂತುಕೊ0ಡು ಉರಿಮುಖದ ಮುಸುಕು ತೊಟ್ಟು ಮಾತಾಡಿದರು. ಆತನ ಹಿಂದೆ ನಿಂತಿದ್ದ ಇಬ್ಬರು ಮಕ್ಕಳು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದ ಎರಡು ಕುರ್ಚಿಗಳು ಹಳ ಹಳಿಸಿದವು. ಆ ಮಕ್ಕಳ ಕಣ್ಣಲ್ಲಿ ಅಸಹಾಯಕ ಹನಿ ತೊಟ್ಟಿಕ್ಕುತ್ತಿತ್ತು. “ಮನಿಗೆ ಯಾಕ ಬಂದ್ರಿ ಆಫೀಸಿಗೆ ಬರ್ರಿ ನಾಳೆ ” ಅಂದ ಆ ಗರೀಬ ಆದ್ಮಿ. ಶಿಗ್ಗಾಂವಿಗೆ ಹೋದ ಅಂಗಡಿ ಸಾರು ಏನಾಯಿತು ಅಂತಾ ಬಂದು ಹೇಳಲಿಲ್ಲ. ಕಾರಣ ಅವರಿಗೆ ನಿರಾಶೆ ಆಗಿರಬೇಕು. ತಿಂಗಳ ನಂತರ ಬಂದರು. “ಆ ತಹಸೀಲದಾರ ಲಂಚಾ ನೋಡತಾನ, ಒಂದಿಷ್ಟು ಕೊಟ್ಟು ಬಿಡ್ರಿ” ಅಂದೆ. “ಅದನ್ನೂ ಕೇಳಿದೆ ಹೊಲಾ ಖರೀದಿ ಮಾಡಬಹುದಾದಷ್ಟು ಹಣಾ ಕೇಳ್ತಾನ ಅಂವಾ” ಅಂದ್ರು.ರೈತ ಸ್ಟೇ ಆರ್ಡರ್ ತಂದದ್ದರಿಂದ ಕೇಸು ಮತ್ತೆ ಟ್ರಿಬ್ಯುನಲ್ಲಿಗೆ ಹೋಯಿತು. ನಮ್ಮ ಸಂವಿಧಾನ ಇಂಥವರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ನಾವು ಅಸಹಾಯಕರು.

ಇಂತಹ ನೀಚ ರೆವೆನ್ಯೂ ಅಧಿಕಾರಿಗಳು ಮನುಷ್ಯರೇ ಅಲ್ಲ. ಎಲ್ಲರೂ ನೀಚರಲ್ಲ. ಅಸಹಾಯಕ ಸಂಗೀತಗಾರರೊಬ್ಬರಿಗೆ ಸಹಾಯ ಮಾಡಿ ಹೈಸ್ಕೂಲು ಮಾಸ್ತರರನ್ನು ಮಾಡಿದ್ದ ನನ್ನ ಗೆಳೆಯ ಯೋಗಪ್ಪನವರಂಥವರು ಇರುತ್ತಾರೆ. ಆ ತಹಶೀಲದಾರನನ್ನು ಕೊಂದು ಬಿಡುವಷ್ಟು ಸಿಟ್ಟು ಬಂದಿತ್ತು. ಕೊಲ್ಲಲಿಲ್ಲ. ಏಕೆಂದರೆ ಆ ಅಯೋಗ್ಯನ ಹಿಂದೆ ಎರಡು ಕುರ್ಚಿ ಹಿಡಕೊಂಡು ನಿಂತಿದ್ದ ಮಕ್ಕಳ ಕಣ್ಣೀರು ನನ್ನ ಹೃದಯದಲ್ಲಿ ಇಳಿದು ನನ್ನನ್ನು ತಣ್ಣಗಾಗಿಸಿತ್ತು.


  • ವಿರೂಪಾಕ್ಷಪ್ಪ ಕೋರಗಲ್, ಹಾವೇರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading