ಮಾವಿನಕಾಯಿ ಸೀಸನ್ ನಲ್ಲಿ ಉಪ್ಪಿನಕಾಯಿ, ಶ್ರೀಖಂಡ, ಸೀಕರಣೆ ಹೀಗೆ ವಿವಿಧ ಪದಾರ್ಥಗಳನ್ನು ಮಾಡಿ ತಿನ್ನಬಹುದು. ಲೇಖಕಿ ಹೆಚ್ ವಿ ಮೀನಾ ಅವರು ತೊಕ್ಕು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮಾಡಿ ನೋಡಿ…
ನನ್ನ ಪಕ್ಕದ ಮನೆಯವರು ಅವರ ತೋಟದಲ್ಲಿ ಬೆಳೆದ ಮಾವಿನ ಕಾಯಿಗಳನ್ನು ನನಗೆ ತಂದುಕೊಟ್ಟರು. ತಕ್ಷಣವೇ ಮಾವಿನ ತೊಕ್ಕು ಮಾಡಿಟ್ಟೆ. ಇದು ಎಲ್ಲರಿಗೂ ಗೊತ್ತಿರುವ ರೆಸಿಪಿ. ಆದರೂ ಒಮ್ಮೆ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು :
- ಮಾವಿನಕಾಯಿ ತುರಿ : 2 ಬಟ್ಟಲು ( ಮಾವಿನಕಾಯಿಯ ಸಿಪ್ಪೆ ತೆಗೆದಿದ್ದೇನೆ )
- ದನಿಯ – 2 -3 ಟೀ ಚಮಚ
- ಜೀರಿಗೆ – 1 ಟೀ ಚಮಚ
- ಮೆಂತ್ಯ – 1 ಟೀ ಚಮಚ
- ಬ್ಯಾಡಗಿ ಮೆಣಸಿನಕಾಯಿ – 10-15
- ಕರಿಬೇವು – 10
- ಅರಿಶಿನ – 1/4 ಟೀ ಚಮಚ
- ಇಂಗು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲಿಗೆ ದನಿಯ, ಜೀರಿಗೆ, ಮೆಂತ್ಯ, ಮೆಣಸಿನಕಾಯಿ, ಕರಿಬೇವು ಒಂದೊoದಾಗಿ ಹುರಿಯಿರಿ ( ಎಣ್ಣೆ ಹಾಕದೆ ). ನಂತರ ಆರಿದ ಮೇಲೆ ನುಣ್ಣಗೆ ಪುಡಿ ಮಾಡಿ ಇಡಿ. ಒಂದು ಬಾಂಡ್ಲಿಯಲ್ಲಿ 100 ಗ್ರಾಂ ಎಣ್ಣೆ ಬಿಸಿ ಮಾಡಿ, (refined oil) ಅದಕ್ಕೆ ಸಾಸಿವೆ, ಅರಿಶಿನ,ಇಂಗು, ಕರಿಬೇವಿನ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಇದಕ್ಕೆ ಮಾವಿನಕಾಯಿಯ ತುರಿ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಹುರಿಯಿರಿ. ನಂತರ ಪುಡಿಯನ್ನು ಹಾಕಿ ಬೆರೆಸಿ ಎಲ್ಲವೂ ಚೆನ್ನಾಗಿ ಹೊಂದಿಕೊಳ್ಳುವವರೆಗೆ ಹುರಿಯಿರಿ. (ಖಾರ ಹಾಗೂ ಎಣ್ಣೆ ಹೆಚ್ಚು ಇಷ್ಟ ಪಡುವವರು ಮೆಣಸಿನಕಾಯಿ ಹಾಗೂ ಎಣ್ಣೆಯನ್ನು ಜಾಸ್ತಿ ಹಾಕಿ ).
ಅನ್ನ, ರೊಟ್ಟಿ, ದೋಸೆಗೆ ಈ ತೊಕ್ಕು ತುಂಬಾ ರುಚಿಯಾಗಿರತ್ತೆ.
- ಹೆಚ್ ವಿ ಮೀನ – ಬೆಂಗಳೂರು.
