ವಿಷಮುಕ್ತ ಕೃಷಿಯ ಹಾದಿಯಲ್ಲಿ ನನ್ನ ಪಯಣ:

ಭೂಮಿಯಲ್ಲೇ ಬೆಳೆಯಲು ಬೇಕಾದ ಎಲ್ಲಾ ಸತ್ವಗಳು ಇವೆ.ಅದನ್ನು ಸಸ್ಯ ಮತ್ತು ಪ್ರಾಣಿಗಳ ಉಳಿಕೆಯನ್ನು ಬಳಸಿಯೇ ಸಾಗುವಳಿ ಮಾಡಲು ಸಾಧ್ಯ, ಎಂದು ತಮ್ಮ ಸತತ ಪ್ರಯೋಗಗಳ ಮೂಲಕ ಕಂಡುಕೊಂಡು ಜಾರಿಗೆ ತಂದವರು ಈ ಎಸ್.ಶಂಕರಪ್ಪ ಅಮ್ಮನಘಟ್ಟ ಅವರು. ಅವರ ಸಾವಯವ ಕೃಷಿಯ ಸಾಹಸಗಾಥೆಯನ್ನು ‘ವಿಷಮುಕ್ತ ಕೃಷಿಯ ಹಾದಿಯಲ್ಲಿ ನನ್ನ ಪಯಣ’ ಕೃತಿಯಲ್ಲಿ ನೋಂದಾಯಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ವಿಷಮುಕ್ತ ಕೃಷಿಯ ಹಾದಿಯಲ್ಲಿ ನನ್ನ ಪಯಣ
ಲೇಖಕರು : ಎಸ್.ಶಂಕರಪ್ಪ ಅಮ್ಮನಘಟ್ಟ
ಬೆಲೆ : ೧೮೦.೦೦

ಕಳೆದ ವಾರ ನಮ್ಮ ಮನೆಯ ಹತ್ತಿರ ಇರುವ ,ಕೇಶವ ರಾಷ್ಟ್ರೋತ್ಥಾನ ಅಂಗಳದಲ್ಲಿ ಸಾವಯವ ಕೃಷಿಕರು ಏರ್ಪಡಿಸಿದ್ದ ಸಂತೆಗೆ ಹೋದಾಗ, ಅಲ್ಲಿ ಸಾವಯವ ಕೃಷಿಯಿಂದ ಉತ್ಪನ್ನವಾದ ಅಕ್ಕಿ, ತರಕಾರಿ, ಹಣ್ಣು ಇತ್ಯಾದಿಗಳನ್ನು ರೈತರು ನೇರವಾಗಿ ಮಾರುತ್ತಿದ್ದರು. ಅಲ್ಲಿ ಅವುಗಳ ಜೊತೆಗೆ ಎರಡು ಪುಸ್ತಕಗಳು ಮಾರಾಟಕ್ಕಿದ್ದವು. ನನಗೆ ಆಶ್ಚರ್ಯವಾಗಿತ್ತು. ಅವು: ಮೇಲಿನ ಶೀರ್ಷಿಕೆಯ ಪುಸ್ತಕ ಮತ್ತು ಅವರದೇ ‘ನನ್ನ ಬದುಕಿನ ಹಾದಿ’ ಎನ್ನುವ ಇನ್ನೊಂದು ಪುಸ್ತಕ. ಎರಡನ್ನೂ ಬರೆದ ಲೇಖಕ ಕೃಷಿಕರು ಅಲ್ಲಿಯೇ ಇದ್ದರು. ಪುಸ್ತಕ ಪ್ರಿಯರಾದ ನಮಗೆ ಸಹಜವಾಗಿಯೇ ರೈತರು ಬೆಳೆದದ್ದನ್ನು, ನೇರವಾಗಿ ಅವರಿಂದಲೇ ಕೊಳ್ಳುವುದರ ಜೊತೆಗೆ, ಅವರು ಬರೆದ ಪುಸ್ತಕ ಕೂಡ ಅವರಿಂದ ಕೊಂಡು ಓದುವ ಭಾಗ್ಯ.ನನ್ನ ಸಂಗಾತಿಗೆ ಸಹಜವಾಗಿಯೇ ಖುಷಿಯಾಯಿತು.ಅವರ ಭಾವಚಿತ್ರವನ್ನು ಕೂಡಾ ಅವರು ತೆಗೆದುಕೊಂಡರು.

ಇಲ್ಲಿಯವರೆಗೆ ಸಾವಯವ ಕೃಷಿಯ ಕುರಿತು ಕೇಳಿದ್ದು, ಅದನ್ನು ಪ್ರಾರಂಭ ಮಾಡಿದ ಜಪಾನಿನ ಫುಕುವೋಕ ಕುರಿತು ಓದಿ , ಮಹಾರಾಷ್ಟ್ರದ ಸುಭಾಷ್ ಪಾಳೇಕರ್ ಅವರ ಹೆಸರು ಕೇಳಿದ್ದು ಬಿಟ್ಟರೆ ಹೆಚ್ಚಿನ ಮಾಹಿತಿ ಅದರ ಬಗ್ಗೆ ಇರಲಿಲ್ಲ.

ಈ ಕೃಷಿಕರು ಏರ್ಪಡಿಸಿದ್ದ ಈ ಸಂತೆಯಿಂದಾಗಿ, ನೇರವಾಗಿ ಅವರ ಪ್ರತಿನಿಧಿಯಾದ ನಮ್ಮ ರಾಜ್ಯದ ಶಂಕರಪ್ಪ ಅವರನ್ನು ಭೇಟಿಯಾಗಿದ್ದಲ್ಲದೆ, ಅವರ ಸಾವಯವ ಕೃಷಿಯ ಸಾಹಸಗಾಥೆಯನ್ನು ,ಇದನ್ನು ಓದುವ ಮೂಲಕ ತಿಳಿದುಕೊಳ್ಳಲು ಸಾಧ್ಯವಾದುದು ನನ್ನ ಭಾಗ್ಯ.

ಅವರು ಈ ಪುಸ್ತಕಕ್ಕೆ ‘ವಿಷಮುಕ್ತ ಕೃಷಿಯ ಹಾದಿಯಲ್ಲಿ ನನ್ನ ಪಯಣ’ ಎಂದು ಕರೆದಿದ್ದಾರೆ. ಏಕೆಂದರೆ ೧೯೭೦ ರಲ್ಲಿ ಪ್ರಾರಂಭವಾದ ಈ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಅವರು ವಿಷಯುಕ್ತ ಕೃಷಿ ಎಂದರೆ, ಅವರು ಅದರಿಂದ ಬಿಡುಗಡೆ ಹೊಂದಿ, ಸಾವಯವ ಕೃಷಿಗೆ ಹೊರಳಿಕೊಳ್ಳಲು ಎರಡು ದಶಕಗಳು ಬೇಕಾಯಿತು. ಅದಕ್ಕೆ ಕಾರಣವೆಂದರೆ , ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಹೆಚ್ಚು ಬೆಳೆಯಲು ಸಾಧ್ಯ ಎಂದು ಅಲ್ಲಿಯವರೆಗೆ ಇತರರಂತೆ ಅವರು ನಂಬಿದ್ದರು. ಆದರೆ ಭೂಮಿಯನ್ನು ವಿಷಮಯ ಮಾಡಿದ ಅದರ ಘೋರ ಪರಿಣಾಮಗಳು ಅವರ ಅರಿವಿಗೆ ಬಂದು, ನಂತರ ಅವರು ಈ ಸಾವಯವ ಕೃಷಿಗೆ ಹೊರಳಿದರು. ಭೂಮಿಯಲ್ಲೇ ಬೆಳೆಯಲು ಬೇಕಾದ ಎಲ್ಲಾ ಸತ್ವಗಳು ಇವೆ.ಅದನ್ನು ಸಸ್ಯ ಮತ್ತು ಪ್ರಾಣಿಗಳ ಉಳಿಕೆಯನ್ನು ಬಳಸಿಯೇ ಸಾಗುವಳಿ ಮಾಡಲು ಸಾಧ್ಯ, ಎಂದು ತಮ್ಮ ಸತತ ಪ್ರಯೋಗಗಳ ಮೂಲಕ ಕಂಡುಕೊಂಡು ಜಾರಿಗೆ ತಂದರು. ಈ ದಿಸೆಯಲ್ಲಿ ಅವರಿಗೆ ಹೊರಗಿನಿಂದ ಯಾವುದನ್ನು ಕೊಂಡು ತರಬೇಕಾಗಲಿಲ್ಲ.ಅಥವಾ ಕೂಲಿಯವರನ್ನು ಅವಲಂಬಿಸಬೇಕಾಗಲಿಲ್ಲ. ಅವರ ಪಾಲಿಗೆ ಬಂದ ಎಂಟು ಎಕರೆ ಜಮೀನನ್ನು ಅವರು ಮತ್ತು ಕುಟುಂಬದವರು ವೈವಿಧ್ಯಮಯ ಬೆಳೆಗಳನ್ನು ತೆಗೆಯುವುದರ ಮೂಲಕ ಇಂದು ಸ್ವಾವಲಂಬಿಗಳಾಗಿದ್ದಾರೆ. ಹಿತ್ತಲಿನಲ್ಲಿ ಅವರಿಗೆ ಬೇಕಾದ ತರಕಾರಿ ಬೆಳೆಯುವುದರಿಂದ, ಎರಡು ದಶಕಗಳಿಂದ ಅವರ ಮನೆಗೆ ಹೊರಗಿನಿಂದ ತಂದಿಲ್ಲ ಎಂದು ಬರೆದಿರುವುದು ಅವರ ಸ್ವಾವಲಂಬನೆಗೆ ಸಾಕ್ಷಿ. ಮಳೆ ನೀರು ಕೊಯ್ಲು ಮೂಲಕ ಕುಡಿಯುವ ನೀರು ಮತ್ತು ಮನೆಗೆ ಬೇಕಾದ ನೀರನ್ನು ಸಂಗ್ರಹಿಸಿ ಬಳಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಇವರಿಗೆ ಪ್ರೇರಣೆ ದೊರೆತದ್ದು ಎಂದು ಒಪ್ಪಿಕೊಂಡಿದ್ದಾರೆ. ಇದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಇದರ ಫಲವಾಗಿ ಇಂದು ಅವರು ಆರೋಗ್ಯ ಮತ್ತು ಹಣ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ.

ಒಂಬತ್ತನೇ ತರಗತಿಯವರೆಗೆ ಮಾತ್ರ ಓದಿದ ಇವರು ಮಾಡಿದ ಈ ಸಾವಯವ ಕೃಷಿಯ ಪ್ರಯೋಗ ಮತ್ತು ಅದರಲ್ಲಿ ಕಂಡುಕೊಂಡ ಯಶಸ್ಸು ಇತರರಿಗೆ ಮಾದರಿಯಾಗಿದೆ. ಇವರು ಮಾಡಿದ ಸಾಧನೆಯನ್ನು ಹಲವು ಪತ್ರಕರ್ತರು ಮತ್ತು ಪತ್ರಿಕಾ ಬರಹಗಳು ( ಪ್ರಜಾವಾಣಿಯು ಸೇರಿ) ಇದಕ್ಕೆ ನಿದರ್ಶನವಾಗಿದೆ. ಪರಿಶ್ರಮ ಮತ್ತು ಪ್ರಾಮಾಣಿಕ ದುಡಿಮೆಗೆ ನಾವು ನಂಬಿದ ನೆಲ ಎಂದೂ ನಮ್ಮ ಕೈ ಬಿಡುವುದಿಲ್ಲ ಎನ್ನುವ ಅವರ ಸ್ವಾನುಭವದಿಂದ ಮೂಡಿಬಂದ ಮಾತುಗಳು, ಕೃತ್ರಿಮ ಬದುಕಿನ ಬೆನ್ನು ಹತ್ತಿದ ಇಂದಿನ ಯುವ ಪೀಳಿಗೆ, ಇದನ್ನು ಓದಿ ಪ್ರೇರಣೆ ಪಡೆದರೆ ಈ ಕೃತಿಯ ರಚನೆ ಸಾರ್ಥಕವಾದಂತೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW