ಗಝಲ್ ಕಾರ ನಾರಾಯಣ ಸ್ವಾಮಿಯವರ “ಒಲವಿನ ಧ್ಯಾನದ ಒಳಹು” ಕೃತಿಯ ಕುರಿತು ರೂಪಾ ಹೊಸದುರ್ಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಗಝಲ್” ಒಂದು ಸಾಹಿತ್ಯ ಹೆಮ್ಮರದ ಕೊಂಬೆ. ಒಂದು ಪ್ರಾಕಾರವಾಗಿ ಬೆಳೆದು ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಸ್ನೇಹಿತರಾದ ನಾರಾಯಣ ಸ್ವಾಮಿಯವರು ಗಝಲ್ ರಚನೆಯಲ್ಲಿ ಅಗಾಧವಾದ ಆಸಕ್ತಿ ಹೊಂದಿದವರಂತೆ ಕಾಣುತ್ತಾರೆ. ಅವರ ರಚನೆಯ ಎರಡೂ ಕೃತಿಗಳು ಗಝಲ್ ಗಳೇ.
ನಾನಿ ಎಂದೇ ತಮ್ಮನ್ನು ಸಂಬೋದಿಸಿಕೊಳ್ಳುತ್ತಾ ಗಝಲ್ ಲೋಕದಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಲು ಹೊರಟಿದ್ದಾರೆ. ಈ ಹಿಂದೆ ಅವರು ಬರೆದಿದ್ದ “ಅಂತರಗದ ಧ್ಯಾನ ” ಕೃತಿಯ ಹಲವಾರು ಸಾಲುಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ಅಂತೆಯೇ ಅವರ “ಒಲವಿನ ಧ್ಯಾನ” ಕೃತಿಯೂ ವಿಶೇಷ ರೀತಿಯಲ್ಲಿ ಮೂಡಿಬಂದಿದೆ. ನಾರಾಯಣ ಸ್ವಾಮಿಯವರು ಆಲೋಚನೆಗಳು, ದೃಷ್ಟಿಕೋನಗಳು ಬಹಳ ವಿಭಿನ್ನವಾಗಿ ಇಲ್ಲಿ ಮೂಡಿ ಬಂದಿವೆ. ಅಮ್ಮನನ್ನು ಬಹಳ ವಾಗಿ ಆರಾಧಿಸಿ ಬರೆದ ಸಾಲುಗಳು ಭಾವನಾತ್ಮಕವಾದವು.

ತಮ್ಮ ಈ ಕೃತಿಯಲ್ಲಿ ಮಂತ್ರ ಮಾಂಗಲ್ಯದ ಮಹತ್ವವನ್ನು ಕುರಿತಾಗಿ ಬರೆಯುವಾಗ ಬಳಸಿದ ಪದಗಳು ಬಹಳಷ್ಟು ಹಿಡಿಸಿದವು. ವಾದ್ಯ ನಾದಗಳ ಅಬ್ಬರದಲಿ ನಿನ್ನ ಕೈ ಹಿಡಿವ ಹಂಬಲ ನನಗಿಲ್ಲ. ಏಕಾಂತದ ಮಿಲನಕೆ ಹಕ್ಕಿಗಳ ಇಂಚರ ಮೊಳಗಿಸುವ ಬಗೆ ಚೆನ್ನಾಗಿದೆ.
ತಾಯಿಯನ್ನು ಕಳೆದುಕೊಂಡ ದುಃಖ ನಾನಿಯವರಲ್ಲಿ ಬಹಳಷ್ಟಿದೆ ಎಂಬುದು ಅವರ ಗಝಲ್ ಗಳನ್ನು ಓದುವಾಗ ಅರ್ಥವಾಗುತ್ತದೆ. “ಈ ಭೂಮಿ ಋಣ ತೀರಿಸಿ ಹೋದ ನೀನು ನನ್ನ ಕರೆಗೆ ಓಗೊಟ್ಟು ನನ್ನ ಮಗಳಾಗಿ ಹುಟ್ಟಿ ಬಾ ಎಂದು ಬೇಡುವ ಪರಿ ಕಣ್ಣಲ್ಲಿ ಹನಿ ಹನಿಸುತ್ತದೆ. ಆ ಮೂಲಕ ನಿನ್ನ ಕಾಣುವ ತವಕ ನನ್ನದು ಎನ್ನುತ್ತಾರೆ ನಾನಿ.
ಬಣ್ಣವನ್ನು ಹಚ್ಚಿ ಯಾವ ಬೀದಿಯಲ್ಲಿ ಯಾವ ಪಾತ್ರವನ್ನು ಹಾಕಿ ನಾಟಕ ಮಾಡಲಿ. ಮುಖವಾಡ ಶಾಶ್ವತವಲ್ಲ. ನಾನೇ ತೆಗೆದುಬಿಡುತ್ತೇನೆಂದು ಸಮಾಜವನ್ನು ಆವರಿಸಿರುವ ಅನಿಷ್ಟ ಪದ್ಧತಿಗಳು, ಜಾತಿ, ಬಡತನಗಳಂತಹ ಪರಿಸ್ಥಿತಿಗಳ ಕುರಿತು ನಿಷ್ಟೂರವಾಗಿ ಬರೆಯುತ್ತಾರೆ. ಸಾಮಾಜಿಕ ವ್ಯವಸ್ಥೆಯ ಅನಿಷ್ಟಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ.

ನಿನ್ನೆದೆಯ ಪ್ರೇಮವನ್ನು ನಾ ಕದಿಯಲು ನಿಂತಿದ್ದಾಗ ನೀನು ಅದನ್ನು ಹರಾಜಿಗಿಟ್ಟುಬಿಟ್ಟೆ ಎಂದು ಹೇಳುವ ಮಾತಿನಲ್ಲಿ ಪ್ರೀತಿಯ ಮೋಸದ ಜಾಲವಿದೆ. ಹೃದಯದ ಪ್ರೀತಿ ಹಣ್ಣಾಗುವ ಹೊತ್ತಿಗೆ ಮಣ್ಣಾಗಿದ್ದು ಅದರ ವೇದನೆ ಎಷ್ಟಿತ್ತೆಂದೂ ನಾನಿ ತಮ್ಮ ಬರಹದಲ್ಲಿ ಅತ್ಯಂತ ಭಾವನಾತ್ಮಕವಾಗಿ ಮೂಡಿಸಿದ್ದಾರೆ.
ತಮ್ಮ ಬರಹದಿಂದ ಜಾದೂ ಮಾಡುತ್ತ ಓದುಗರನ್ನು ಸೃಷ್ಟಿಸಿಕೊಳ್ಳುವುದು ತಮಾಷೆ ವಿಚಾರವಲ್ಲ. ಹಾಗೆ ತಮ್ಮದೇ ಒಂದು ವಿಶಿಷ್ಟ ಶೈಲಿಯಿಂದ ಸಾಹಿತ್ಯಾಸಕ್ತರನ್ನು ಸಂಪಾದಿಸಿ ಸಾರಸ್ವತ ಲೋಕದಲ್ಲಿ ಮುನ್ನುಗ್ಗುತ್ತಿರುವ ಸ್ನೇಹಿತರಾದ ನಾರಾಯಣ ಸ್ವಾಮಿಯವರಿಗೆ ಹಾಗೂ ಅವರ ಒಲವಿನ ಧ್ಯಾನಕ್ಕೆ ಶುಭವಾಗಲಿ.
- ರೂಪಾ ಹೊಸದುರ್ಗ
