ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಡಿ.ಸಿ.ಪಾವಟೆ ಅವರು ಬಂದು ಬಿಟ್ಟರು. ನಾವಿಬ್ಬರೂ ಎದ್ದು ನಿಂತು ಕೈ ಜೋಡಿಸಿದೆವು ಬೆಳಿಗ್ಗೆ ಅವರು ವಾಕಿಂಗಿ ಮಾಡುತ್ತಿದ್ದುದು ಒಂದು ರೀತಿಯ ವಿಶ್ವ ವಿದ್ಯಾಲಯದ ಕ್ಯಾಂಪಸ್ಸನ್ನು ತಪಾಸಣೆ ಮಾಡಿದಂತಿತ್ತು, ಡಿ.ಸಿ.ಪಾವಟೆ ಅವರ ಕುರಿತು ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ …
ನಾನು ಎಂ.ಎ ಕೊನೆಯ ವರ್ಷದಲ್ಲಿ ಓದುತ್ತಿರುವಾಗ ಕರ್ನಾಟಕ ವಿಶ್ವವಿದ್ಯಾಲಯದ ನಿಜಲಿಂಗಪ್ಪ ಹಾಸ್ಟೇಲಿನಲ್ಲಿ ಇದ್ದೆ. ಒಂದು ಸಲ ಏನೋ ಸಮಸ್ಯೆಯಾಗಿ ನಮ್ಮ ಹಾಸ್ಟೇಲಿಗೆ ಮೂರು ನಾಲ್ಕು ದಿವಸ ನೀರೇ ಬಂದಿರಲಿಲ್ಲ. ಟ್ಯಾಂಕರಿನಿಂದ ನೀರು ಹಾಕಿಸುತ್ತಿದ್ದರೂ,ಸಿಕ್ಕವರಿಗೆ ಮುಕ್ಕಣ್ಣ ಎನ್ನುವಂತೆ ಬೇಗ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಳ್ಳುವವರು ಟ್ಯಾಂಕು ಖಾಲಿ ಮಾಡಿ ಬಿಟ್ಟಿರುತ್ತಿದ್ದರು. ಒಂದು ವಾರದಿಂದ ಬಟ್ಟೆ ತೊಳೆಯದೇ ಇದ್ದುದರಿಂದ ಬಟ್ಟೆಗಳೆಲ್ಲ ಕೊಳಕಾಗಿ ಬಿಟ್ಟಿದ್ದವು. ಕೆಲವು ಜನ ಗೆಳೆಯರು ಬಾರಾಕೂಟದ ಹತ್ತಿರವಿದ್ದ ಕೆರೆಗೆ ಹೋಗಿ ಬಟ್ಟೆ ತೊಳೆದುಕೊಂಡು ಅಲ್ಲಿಯೇ ಸ್ನಾನ ಮಾಡಿ ಬರುತ್ತಿದ್ದರು.ನಮ್ಮ ಕೋಣೆಯಲ್ಲಿ ನನ್ನ ಜೊತೆಗಿದ್ದ ಹೆಬ್ಬಾರ ಅವರು ನಾವೂ ಹೊರಗಡೆ ಹೋಗಿ ಜಳಕಾ-ಪಳಕಾ ಮಾಡಿ ಬರೋಣ ರ‍್ರಿ ” ಎಂದುಹೊರಡಿಸಿಕೊಂಡು ಹೊರಟರು. ೧೯೬೬ ರಲ್ಲಿ ಧಾರವಾಡ ಗಟ್ಟಿ ಮಲೆನಾಡೇ ಆಗಿತ್ತು. ನಿತ್ಯ ಮಳೆ ಸುರಿಯುತ್ತಿತ್ತು.
ಮನ್ಸೂರಿಗೆ ಹೋಗುವ ದಾರಿಯಲ್ಲಿ,ಈಗಿನ ಗ್ರಂಥಾಲಯಕ್ಕೆ ಹೋಗುವ ದಾರಿ ಹತ್ತಿರವೂ ಒಂದು ಸಣ್ಣ ಕೆರೆ ಇತ್ತು. ನನ್ನ ಗೆಳೆಯ ಆ ಬಾರಾಕೂಟದ ಕೆರೆ ದೂರಾಗುತ್ತದೆ ಇಲ್ಲಿಯೇ ಸಮೀಪ ಒಂದು ಕೆರೆ ಇದೆ ಬಾ ಎಂದು ಆ ಕೆರೆಗೆ ಕರೆದುಕೊಂಡು ಹೋದರು. ಬಟ್ಟೆಗಳನ್ನೆಲ್ಲಾ ತೊಳೆದು ಹಾಕಿದ ಮೇಲೆ ಒಂಚೂರು ವಿಶ್ರಾಂತಿ ಪಡೆಯಲೆಂದು ರಸ್ತೆಯ ಪಕ್ಕದ ಬೆಂಚಿನ ಮೇಲೆ ಕುಳಿತಿದ್ದೆವು.

ಆಗ ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಡಿ.ಸಿ.ಪಾವಟೆ ಅವರು ಬಂದು ಬಿಟ್ಟರು. ನಾವಿಬ್ಬರೂ ಎದ್ದು ನಿಂತು ಕೈ ಜೋಡಿಸಿದೆವು ಬೆಳಿಗ್ಗೆ ಅವರು ವಾಕಿಂಗಿ ಮಾಡುತ್ತಿದ್ದುದು ಒಂದು ರೀತಿಯ ವಿಶ್ವ ವಿದ್ಯಾಲಯದ ಕ್ಯಾಂಪಸ್ಸನ್ನು ತಪಾಸಣೆ ಮಾಡಿದಂತೆ. ಗಾರ್ಡನ್ನಿನಲ್ಲಿ ಹೂವು ಕೀಳುವವರನ್ನು ಕರೆದು ಬಯ್ಯುವುದು, ಲೇನ್ ಮೇಲೆ ಅಡ್ಡಾಡುವವರನ್ನು, ಬೇಲಿ ಜೀಗಿದು ಹೋಗುವವರನ್ನು ದಬಾಯಿಸುವುದು ಅವರ ಕೆಲಸ. ನಾವು ಇಬ್ಬರೂ ಬಟ್ಟೆಗಳನ್ನು ಗಿಡಕ್ಕೆ ಹರವಿ ಬರಿ ಮೈಯಲ್ಲಿ ಕುಳಿತಿದ್ದುದನ್ನು ನೋಡಿ ಅವರ ಚಿತ್ತ ನಮ್ಮ ಕಡೆಗೆ ತಿರುಗಿ ಬಿಟ್ಟಿತ್ತು. ನಮ್ಮ ಹತ್ತಿರ ಬಂದು;
“ನೀವು ಯಾವ ಡಿಪಾರ್ಟಮೆಂಟಿನವರು.?” ಎಂದು ಕೇಳಿದರು.
” ಮೆಥೆಮೆಟಿಕ್ಸ ” ಎಂದೆವು.ಅವರ ತುಟಿಯ ಮೇಲೆ ಒಂದು ನಗೆ ಹೂವು ಅರಳಿತು. ಏಕೆಂದರೆ ಅವರು ನಮ್ಮ ಕುಲಬಾಂಧವರು. ಆತ ಲಂಡನ್ನಿಗೆ ಹೋಗಿ ಗಣಿತದಲ್ಲಿ ರ‍್ಯಾಂಗ್ಲರ್ ಆಗಿ ಬಂದಾತ.
“ಎಲ್ಲಿ ಇರುತ್ತೀರಿ.?” ಪ್ರಶ್ನೆ
“ನಿಜಲಿಂಗಪ್ಪ ಹಾಸ್ಟೆಲ್”
“ಇಲ್ಯಾಕ ಬಂದೀರಿ.?”
“ಕಳೆದ ನಾಲ್ಕು ದಿವಸದಿಂದ ಹಾಸ್ಟೇಲಿನಲ್ಲಿ ನೀರಿಲ್ಲ..” ನಮ್ಮ ಉತ್ತರ. ಅವರು ವಾಕಿಂಗ ಸ್ಟಿಕ್ ತಿರುವುತ್ತಾ ಹೋಗಿ ಬಿಟ್ಟರು. ನಾವು ಆ ವೈಶಂಪಾಯನ ಸರೋವರದಲ್ಲಿ ಜಳಕಾ ಮಾಡಿ,ನಮ್ಮ ಬಟ್ಟೆಗಳನ್ನೆಲ್ಲಾ ಗಂಟು ಕಟ್ಟಿಕೊಂಡು ಬಕೆಟ್ಟು ಹಿಡಿದು ಹಾಸ್ಟೇಲಿಗೆ ಬಂದಾಗ ಹಾಸ್ಟೇಲಿನ ಮುಂದೆ ಒಂದು ದೊಡ್ಡ ಮೀಟಿಂಗ ನಡೆದಿತ್ತು. ಪಾವಟೆ ಸಾಹೇಬರು ಕುರ್ಚಿಯ ಮೇಲೆ ಕುಳಿತಿದ್ದರು. ಅವರ ಎದುರಿಗೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿದ್ದ ಎಸ್.ಸಿ.ಬಿಕ್ಕಣ್ಣನವರು ಮತ್ತು ಹಾಸ್ಟೇಲು ವಾರ್ಡನ್ನು ಅವರು ಕೈ ಕಟ್ಟಿಕೊಂಡು ನಿಂತು ಪಾವಟೆ ಸಾಹೇಬರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು.

ನಮ್ಮ ವಿಶ್ವವಿದ್ಯಾಲಯದ ಪುಣ್ಯವೋ ಏನೋ ಅಂತಹ ಕರ್ತವ್ಯಶೀಲ ಉಪಕುಲಪತಿ ಸಿಕ್ಕಿದ್ದರು. ಅಂತಹ ಉಪಕುಲಪತಿ ಸಿಕ್ಕಿದ್ದರಿಂದ ಪ್ರಾರಂಭದಲ್ಲಿಯೇ ಅದು ಹೆಸರು ಮಾಡಿದ ವಿಶ್ವ ವಿದ್ಯಾಲಯವಾಗಿ ಹೊರಹೊಮ್ಮಿತ್ತು. ದಾದಾ.ಚಿಂತಪ್ಪ ಪಾವಟೆ ಅವರು ಮುಂದೆ ಪಂಜಾಬ ಗವರ್ನರ ಆಗಿ ನಿವೃತ್ತಿ ಹೊಂದಿದರು.ವಿಶ್ವ ವಿದ್ಯಾಲಯವನ್ನೇ ಒಂದು ಕುಟುಂಬದಂತೆ ನೋಡಿಕೊಂಡ ಬಹು ದೊಡ್ಡ ಯಜಮಾನ ಆತ.
“ನಾಲ್ಕು ದಿವಸದಿಂದ ನೀರು ಬಂದಿಲ್ಲವೆಂದರೆ,ಏನಾಗಿದೆ?” ಪ್ರಶ್ನೆ.
“ಪಂಪ ಹೌಸಿನಲ್ಲಿ ರಿಪೇರಿ ಇದೆ.” ಉತ್ತರ.
“ಏನು ಮಾಡತೀರಿ ನೀವು.ಹೀಂಗ ಆದರ ಹ್ಯಾಂಗ. ಹುಡುಗರಿಗೆ ಎಷ್ಟು ತೊಂದರೆ ಆಗುತ್ತದೆಯೆನ್ನುವುದು ನಿಮಗೆ ತಿಳಿಯುವುದಿಲ್ಲ?”
” ರಿಪೇರಿ ನಡೆದಿದೆ.”
“ಅದನ್ನು ರಿಪೇರಿ ಮಾಡಲಿಕ್ಕೆ ನಾಲ್ಕು ದಿವಸ ಬೇಕು.?”
“ಇಂಜಿನಿಯರಿಗೆ ಹೇಳಿದ್ದೇವೆ. ಈ ಹೊತ್ತು ಆಗ ಬಹುದು.”ಉತ್ತರ.
“ನನಗ ಈ ಆಗಬಹುದು-ಗೀಗಹುದು ಬೇಡ. ಇಂಜಿನೀಯರರನ್ನು ಕರಕೊಂಡು ರ‍್ರಿ.” ಇಂಜಿನೀಯರ ಸಾಹೇಬರಿಗೆ ಕರೆ ಹೋಯಿತು. ಇಂಜಿನೀಯರ ಸಾಹೇಬರಿಗೆ ಪಾವಟೆ ಸಾಹೇಬರು ಅಂದರೆ ಏನು ಅಂತಾ ಗೊತ್ತು ಅದಕ್ಕೆ ಅವರು ಮೋಟಾರು ಮ್ಯಾಕ್ಯಾನಿಕ್ಕನನ್ನು ಕರೆದುಕೊಂಡೆ ಬಂದರು. ಇಂಜಿನೀಯರ ಸಾಹೇಬರು,ಮ್ಯಾಕ್ಯಾನಿಕ್ಕನನ್ನು ಮುಂದೆ ಮಾಡಿಕೊಂಡು ನಿಂತರು.
“ರಾತ್ರಿಯೆಲ್ಲಾ ರಿಪೇರಿ ಮಾಡಿದ್ದೇವೆ ಸಾಹೇವರೆ!. ಮೋಟಾರು ತಯಾರಾಗಿದೆ. ಮೋಟಾರಿಗೆ ಜೋಡಿಸುವ ಪೈಪು ಥೋಡೆ ಖರಾಬ ಆಗಿತ್ತು. ಅದಕ್ಕೆ ಹೊಸಾ ಪೈಪು ತರಿಸಿ ಇಟ್ಟಿದ್ದೇವೆ. ಅದನ್ನು ಜೋಡಿಸಿ ಬಿಟ್ಟರಾಯಿತು. ಒಂದು ತಾಸಿನಲ್ಲಿ ನೀರು ಏರಿಸುವ ಹಾಂಗ ಮಾಡ್ತೀನಿ.” ಎಂದರು ಮೆಕೆನಿಕ್.
ಪಾವಟೆ ಸಾಹೇಬರು ಎದ್ದು ನಿಂತರು. ಹಾಸ್ಟೇಲಿನ ಅರ್ಧಕ್ಕರ್ಧ ಹುಡುಗರೆಲ್ಲ ಅಲ್ಲಿ ನಿಂತು ಆ ಅಸೆಂಬ್ಲಿಯ ಕಲಾಪವನ್ನು ನೋಡುತ್ತಿದ್ದೆವು. ಹೆಗಲ ಮೇಲೆ ಒದ್ದೆ ಬಟ್ಟೆ ಹಾಕಿಕೊಂಡು ಬಕೀಟು ಹಿಡಿದು ನಾನು ಸಹ ಆ ಪ್ರೇಕ್ಷಕರಲ್ಲಿ ಒಬ್ಬನಾಗಿ ನಿಂತಿದ್ದೆ. ಪಾವಟೆ ಸಾಹೇಬರು ಎರಡು ಹೆಜ್ಜೆ ಇಟ್ಟು ನನ್ನತ್ತ ಬಂದು ನನ್ನ ಕೈಯಲ್ಲಿದ್ದ ಬಕೆಟ್ಟನ್ನು ಇಸಿದುಕೊಂಡು ಕೆಳಗಿಟ್ಟು ನಕ್ಕರು. ನಾನು ಕೈ ಜೋಡಿಸಿದೆ. ಸುತ್ತು ನಿಂತ ಗೆಳೆಯರೆಲ್ಲ ಸುದೀರ್ಘ ಕರತಾಡನ ಮಾಡಿದರು.
- ವಿರೂಪಾಕ್ಷಪ್ಪ ಕೋರಗಲ್ -ನಿವೃತ್ತ ಗಣಿತ ಪ್ರಾಧ್ಯಾಪಕರು, ಲೇಖಕರು, ಸಾಹಿತಿಗಳು, ಹಾವೇರಿ.
