ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಮೋಹನ ರಾಗ ( ಪ್ರೇಮ ಕಾವ್ಯ) ಕವನ ಸಂಕಲನ ಕೃತಿಯಲ್ಲಿ ಸುಮಾರು ಅರವತ್ತೇರಡು ಕವಿತೆಗಳಿವೆ, ಈ ಕೃತಿಯ ಕುರಿತು ಆಶಾ ಶಿವುಗೌಡ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಲೇಖಕ ಕವಿ ಶ್ರೀಯುತ ಮಲ್ಲಿಕಾರ್ಜುನ ಎಸ್ ಆಲಮೇಲ ಇವರು ಬಾಲ್ಯದಲ್ಲಿಯೇ ಸಂಗೀತದ ಆಸಕ್ತಿ ಬೆಳೆಸಿಕೊಂಡಿದ್ದರು. ಸಂಗೀತದ ವಿದ್ವಾಂಸರಾದ ಶ್ರೀ ವೇದಮೂರ್ತಿ ಭದ್ರಯ್ಯ ಪುರಾಣಿಕ್ ಸ್ವಾಮಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಹಾಡನ್ನು ಮುಂದುವರೆಸು ಎಂದು ಹೇಳಿ ಇವರ ತಂದೆಯವರಿಗೆ ತಮ್ಮ ಮಗನನ್ನು ಸಂಗೀತ ಶಾಲೆಗೆ ಸೇರಿಸಿ ಎಂದು ಹೇಳಿದರು. ಮಲ್ಲಿಕಾರ್ಜುನವರ ಹುಟ್ಟೂರಿಗೆ ಹತ್ತಿರದ ಸಂಗೀತ ಶಾಲೆ ಇರಲಿಲ್ಲ ಇವರ ತಾಯಿಗೆ ಇವರು ಒಬ್ಬನೇ ಮಗ ಆಗಿರುವುದರಿಂದ ಸಂಗೀತ ಕಲಿಯಲು ಯಾವುದೋ ದೂರದ ಊರಿಗೆ ಕಳಿಸಲು ಇಷ್ಟವಿಲ್ಲದ ಕಾರಣ ಸಂಗೀತ ಕಲಿಯಲು ಆಗಲಿಲ್ಲ. ಮುಂದೆ ಜೀವನದ ಏರು ಪೇರುಗಳ ಸಂಕಷ್ಟಗಳಿಂದ ಹೊರ ಬರುವಷ್ಟರಲ್ಲಿ ಇವರ ಸಂಗೀತದ ಕುಸುಮ ಬಾಡಿ ಹೋಗಿತ್ತು ಎಂದು ಈ ಕೃತಿಯಲ್ಲಿನ ತಮ್ಮ ಮನದಾಳದ ಮಾತುಗಳಲ್ಲಿ ಬಹಳ ನೋವಿನಿಂದ ಹಂಚಿಕೊಂಡಿದ್ದಾರೆ. ನಂತರ ಬದುಕಿನ ಅನುಭವಗಳನ್ನು ಒಳಗೊಂಡಂತೆ ಇವರ ಅಂತರಾಳದಲ್ಲಿ ಸಾಹಿತ್ಯದ ಹೂವು ಅರಳತೊಡಗಿತು. ಖ್ಯಾತ ನಾಟಕಕಾರರು ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತರಾದ ದಿ. ಶ್ರಿ ಎಲ್ ಬಿ ಕೆ ಆಲ್ದಾಳ ಇವರು ಮಲ್ಲಿಕಾರ್ಜುನ ಎಸ್ ಆಲಮೇಲರವರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ತಂದೆಯ ಸಹಕಾರದಿಂದ 2002 ರಲ್ಲಿ ಇವರು ತಮ್ಮ ಚೊಚ್ಚಲ ಕೃತಿ “ಜೀವನ ಒಂದು ಗಾಳಿಪಟ” ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿದರು ನಂತರದಲ್ಲಿ ಇವರು ಬರೆದು ಬಿಡುಗಡೆಗೊಳಿಸಿದ ಕೃತಿಗಳು “ಧರ್ಮರಕ್ಷಕ, ಧರ್ಮಸಿಂಧು, ಧರ್ಮಜ್ಯೋತಿ, ಸದ್ಧರ್ಮ ಸಿಂಹಾಸನ, ಎಂಬ ಸಾಮಾಜಿಕ ನಾಟಕಗಳನ್ನು ಬರೆದರು, ಈ ನಾಲ್ಕು ನಾಟಕಗಳು ರಂಗಭೂಮಿಯ ಪರದೆಯ ಮೇಲೆ ಪ್ರದರ್ಶನವಾಗಿವೆ. ಜೀವನ ಒಂದು ಗಾಳಿಪಟ ಎಂಬ ಸಿನಿನಾಟಕವನ್ನು ಬರೆದಿರುವ ಮಲ್ಲಿಕಾರ್ಜುನ ಎಸ್ ಆಲಮೇಲರವರು ಚಿತ್ರಕಥೆಗಳನ್ನು ಕೂಡ ಬರೆದಿದ್ದಾರೆ”ಗಾಂಧಾರಿ” “ಲಯಕರ್ತ” “ಸಿಂಹಗಡ ರಹಸ್ಯ” “ಪತಿತ ಪಾವನೆ” ಮುಂತಾದವು.

ಇತ್ತೀಚೆಗೆ ಇವರು ಲೋಕಾರ್ಪಣೆ ಮಾಡಿದ ಕೃತಿಯು ಮೋಹನ ರಾಗ ( ಪ್ರೇಮ ಕಾವ್ಯ) ಕವನ ಸಂಕಲನ. ಸುಮಾರು ಅರವತ್ತೇರಡು ಕವಿತೆಗಳಿರುವ ಈ ಕೃತಿಗೆ ಕೆ ರಾಮೇಶ್ವರ ಕಲ್ಬುರ್ಗಿ ಇವರು ಚಂದದ ಮುನ್ನುಡಿ ಬರೆದಿದ್ದಾರೆ. ಇವರ ಈ ಕವಿತೆಗಳು ಪ್ರೇಮ ಗೀತೆಗಳು ಮೋಹನ ರಾಗದಲ್ಲಿ ಸಮಾಪ್ತಿಯಾಗಿ ಓದುಗರ ಮನ ಸೆಳೆಯುತ್ತವೆ. ಎಂದಿದ್ದಾರೆ. ಬೆನ್ನುಡಿಯನ್ನು ಬರೆದಿರುವ ಹಿರಿಯ ಕವಿಗಳಾದ ಡಿ ಪದ್ಮನಾಭ ಇವರು ಈ ಕೃತಿಯಲ್ಲಿನ ಸಾಲುಗಳು ಅರ್ಥಪೂರ್ಣವಾಗಿವೆ ಮತ್ತು ಓದುಗರ ಮನಕ್ಕೆ ಮುದ ನೀಡುತ್ತದೆ. ಪ್ರಾಸಬದ್ಧವಾದ ಸರಳತೆಯ ಸಾಲುಗಳು ಬಹುತೇಕ ಕವನಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ ಎಂದಿದ್ದಾರೆ.
ಸಾಹಿತ್ಯ ಎಂದರೆ ಮನುಷ್ಯನ ಅನುಭವದ ಕಥನ ಅಂತಹ ಅನುಭವದ ಆಸಕ್ತಿಗಳನ್ನು ಮೈಗೂಡಿಸಿಕೊಂಡ ಹಲವಾರು ಕವಿಗಳು ಕವಯತ್ರಿಯರು ತಮ್ಮ ಕವಿತೆಗಳ ಮೂಲಕ ಮನದ ಭಾವನೆಗಳನ್ನು ಹೊರ ಹಾಕಿದ್ದಾರೆ. ಕವಿ ಮಲ್ಲಿಕಾರ್ಜುನ ಎಸ್ ಅಲಮೇಲರವರು ಕೂಡ ಹಲವಾರು ಕವಿತೆ ಕಥೆ ನಾಟಕಗಳನ್ನು ಬರೆಯುತ್ತ ಪ್ರೇಮಿಯ ಮನದೊಳಗಿನ ಮಿಡಿತದ ಜೊತೆಗೆ ತನ್ನೊಳಗೆ ಅಡಗಿರುವ ಸುಪ್ತ ಪ್ರತಿಭೆಯಾಗಿ ಮೋಹನ ರಾಗವಾಗಿ ಹೊರಹೊಮ್ಮಿದೆ. “ಮೋಹನ ರಾಗ” ಕವನ ಸಂಕಲನದಲ್ಲಿ ಎಲ್ಲ ಕವಿತೆಗಳು ಕೂಡ ಓದುಗರ ಮನ ತಣಿಸಿ ಎಂದೆಂದಿಗೂ ಮನದಲ್ಲಿ ಹಸಿರಾಗಿರುತ್ತವೆಂದು ಹೇಳಬಹುದು. ಮಲ್ಲಿಕಾರ್ಜುನ ಎಸ್ ಆಲಮೇಲ ಇವರು ರಚಿಸಿರುವ ಪ್ರತಿ ಕವಿತೆಯು ಶೀರ್ಷಿಕೆಗೆ ಅನುಗುಣವಾಗಿ ಪ್ರೀತಿ, ವಿಶ್ವಾಸ ಸಂಬಂಧಗಳ ಬೆಸುಗೆಯೊಂದಿಗೆ, ನೀತಿ ನಿಯಮಗಳನ್ನು ಸಾರುವಂತದ್ದಾಗಿದೆ. ಪದಪುಂಜಗಳಿಂದ ಅತ್ಯಂತ ಸುಂದರವಾಗಿ ಪೋಣಿಸಿದ್ದಾರೆ. ಹಾಡಲೂಬಹುದು ಎಲ್ಲ ಕವಿತೆಗಳು ಲಯ ಪ್ರಾಸಬದ್ದವಾಗಿ ಮೂಡಿ ಬಂದಿವೆ.

ಮಾಳಿಗೆ ಮನೆ ಮುಂದೆ ಮುತ್ತು ಕೇರುವ ಹೆಣ್ಣು ಕವಿತೆಯ ಸಾಲುಗಳಲ್ಲಿ ಹೆಣ್ಣು ಸಂಸಾರದ ಕಣ್ಣು ನಿಜ. ಗಂಡನ ಮನೆಯ ಸಿರಿ ತನಕ್ಕೆ ಮನಸೋತು ಹೆತ್ತು ಹೊತ್ತು ಬಡತನದಲ್ಲಿ ಸಲುಹಿ ಸಿರಿವಂತ ಮನೆಗೆ ಧಾರೆಯೆರೆದವರನ್ನು ಮರೆಯಬೇಡ ಎಂಬ ನೀತಿಯನ್ನು ಹೇಳುವ ಸಾಲುಗಳಾಗಿವೆ ಉತ್ತರ ಕರ್ನಾಟಕದ ಶೈಲಿಯಲ್ಲಿಯೇ ಈ ಕವಿತೆಯನ್ನು ರಚಿಸಿದ್ದಾರೆ
ಮರಿಬೇಡ ನವಮಾಸ ಒಡಲೊಳು ಹೊತ್ತವಳನ್ನ
ನೆನಪುಹಾರ ಬ್ಯಾಡವ್ವ ಮಗಳೇ
ಒಡಹುಟ್ಟಿದವರನ್ನ
ನೆನೆಸಿಕೊಳ್ಳವ್ವ ಅರೆಹೊಟ್ಟೆ ಉಂಡು ಬೆಳೆಸಿದ
ಅಪ್ಪನ್ನ ಅವ್ರರ ಕಷ್ಟದಲ್ಲೇ ಸಿರಿವಂತ ಮನಿಗೆ ಧಾರೆಯೆರೆದವರನ್ನ||
ಆಹಾ ಎಂತಹ ಸಾಲುಗಳು ಈ ಕವಿತೆ ಓದಿದಾಗ ನನಗೆ ಅನ್ನಿಸಿದ್ದು ಹಳ್ಳಿಗಳಲ್ಲಿ ಹೊಲ ಗದ್ದೆಗಳಲ್ಲಿ ಜಾನಪದರು ಈ ಕವಿತೆಯನ್ನು ಹಾಡಿದರೆ ಎಷ್ಟು ಸೊಗಸು ಅನ್ನಿಸಿತು.
ಅವಳೇನಾ ಇವಳು, ಇವಳೇನಾ ಅವಳು ?
ಕೆನ್ನೆಯ ಸವರಿ ಚಿತ್ತವ ಕೆಡಿಸಿದವಳು
ಮುತ್ತು ಕೊಟ್ಟು ಮತ್ತೇರಿದವಳು
ದೃವತಾರೆಗಿಂತ ಅಧಿಕ ಹೊಳೆವ ಕಂಗಳಿವಳು||
ಸ್ವಪ್ನ ಸುಂದರಿ ಈ ಕವಿತೆಯ ಸಾಲುಗಳು ಕನಸಲ್ಲಿ ಕಂಡ ಚೆಲುವೆಯನ್ನು ಪ್ರೇಮ ವಿರಹದಲ್ಲಿ ತೇಲಿಸುವಂತಿದೆ. ಹಳ್ಳಿಯ ಸೊಬಗು ಕವಿತೆಯ ಸಾಲುಗಳಂತೂ ಅಮೋಘ ಮೊದಲ ಚರಣ ಓದುತಿದ್ದಂತೆ ತಿಂಗಾಳು ಮುಳುಗಿದವೋ ಹಾಡು ನೆನಪಾಯಿತು. ಮುಂದೆ ಓದುತ್ತ ಹೋದಂತೆ ಹಳ್ಳಿಯ ಸೊಬಗನ್ನು ಜಾನಪದ ಪದಗಳಲ್ಲಿ ಬಣ್ಣಿಸಿ ಹಾಡಿನ ರೂಪ ಕೊಟ್ಟಿದ್ದಾರೆ. ಕವಿ ಮಲ್ಲಿಕಾರ್ಜುನ ಎಸ್ ಆಲಮೇಲು ಮನದಲ್ಲಿ ಜಾನಪದ ಸೊಗಡು ಹೆಚ್ಚಾಗಿದೆ ಎನ್ನಬಹುದು.
ಮುಂಗೋಳಿ ಕೂಗ್ಯಾವೋ ಬೆಳ್ಳಕ್ಕಿ ಹಾರ್ಯಾವೋ
ಮೂಡಣದಿ ಸೂರ್ಯಾನ ಕಿರಣ ಹೊಮ್ಯಾವೋ
ಗೆಜ್ಜೆಯ ಸಪ್ಪಳ ಮಾಡುತ್ತ ಎತ್ತುಗಳು ಹೊಂಟಾವೊ
ಊರ ದ್ಯಾವರ ಗುಡ್ಯಾಗ್ ಘಂಟೆ ಸದ್ದು ಮಾಡ್ಯಾವೋ||
ಬಾಳ ಸಂಗಮದಲ್ಲಿ ಬಾಳಿನ ಪರಿಮಳ ಕವಿತೆಯಲ್ಲಿ ಬಹಳ ಸುಂದರವಾಗಿ ಮೂಡಿ ಬಂದಿದೆ ಸಂಸಾರಕ್ಕೆ ಮಡದಿ ಎಷ್ಟು ಮುಖ್ಯ ಎನ್ನುವುದನ್ನು ಸರಳ ಪದಗಳಲ್ಲಿ ವರ್ಣಿಸಿದ್ದಾರೆ.
ಹಸಿದು ಬಂದವರಿಗೆ ಶ್ರೀ ಅನ್ನಪೂರ್ಣೆಯಾದೆ
ಸಕಲ ಕಷ್ಟ ಕಾರ್ಪಣ್ಯವನ್ನು ನನಗಾಗಿ ಸಹಿಸಿದೆ
ಪತಿಯೇ ಪರದೈವವೆಂದು ಲೋಕಕೆಲ್ಲ ಸಾರಿದೆ
ಸದ್ಗುಣವಂತೆ ಸತಿಯಾಗಿ ಪಡೆದು ಪುನೀತನಾದೆ||
ಎನ ಚೆಂದ ಕಾಣ್ತಿಯವ್ವ ಈ ಕವಿತೆ ಹಾಸ್ಯಮಯವಾಗಿದೆ
ತುರುಬು ಕಟ್ಟಿರೋ ಮದನಾರಿ
ಕಾಸಿನ ಸರ ಹಾಕಿರೋ ವೈಯಾರಿ
ಕಣ್ಣಿನ್ಯಾಗೆ ಹಾಕ್ತಿಯ ನೀ ಚೂರಿ
ಒಂದ್ಸಲಾ ಪೂರಾ ತೋರ್ಸು ನಿನ್ನ ಮಾರಿ ||
ಅರಳುವ ಮೊಗ್ಗು ಕವಿತೆ ಬಹಳ ಅರ್ಥಗರ್ಭಿತವಾಗಿ ಮೂಡಿ ಬಂದಿದೆ. ಹೆಣ್ಣು ಅಂದಿನಿಂದ ಇಂದಿನ ಆಧುನಿಕ ಯುಗದವರೆಗೂ ಹೆಣ್ಣು ಮಕ್ಕಳು ಬದುಕಿಗೆ ಹೊರೆ ಎಂದು ಭಾವಿಸಿ ಹೆಣ್ಣು ಮಗು ಎಂದು ಗೊತ್ತಾದ ತಕ್ಷಣವೇ ಆ ಜೀವವನ್ನು ತೆಗೆಯುತ್ತಾರೆ ಇದು ನಮಗೆ ತರವಲ್ಲ ನಮಗೆ ಜನಿಸುವ ಮಗು ಹೆಣ್ಣಾಗಲಿ ಗಂಡಾಗಲಿ ಅದನ್ನು ಬದುಕಲು ಬಿಡೋಣ, ಮೊಗ್ಗಾಗಿ ಅರಳುತ್ತಿರುವ ಜೀವವನ್ನು ಉಳಿಸಬೇಕಾಗಿದೆ. ಆ ಜೀವಕ್ಕೆ ಪ್ರೀತಿ ಮಮತೆಯ ಅಮೃತ ಧಾರೆಯನ್ನು ಸುರಿಸಿ, ಈ ಸಮಾಜದಲ್ಲಿ ಒಳ್ಳೆಯ ಬುದ್ಧಿಯಿಂದ ಇತರರೊಂದಿಗೆ ಸಾಮರಸ್ಯವಾಗಿ ಬದುಕುವುದನ್ನು ಕಲಿಸೋಣ, ಅವನು ಬುದ್ಧಿ ಕಲಿಯಲು ನೀತಿವಂತ, ವಿನಯವಂತಿಕೆ ಬೆಳೆಯಲು ವಿದ್ಯೆಯನ್ನು ಕಲಿಸಿ ಸಮೃದ್ಧ ಭಾರತವನ್ನು ಕಟ್ಟುವ ಕಡೆಗೆ ಹೆಜ್ಜೆ ಹಾಕೋಣ ಎನ್ನುವ ಸಾಲುಗಳು ಅರ್ಥಪೂರ್ಣವಾಗಿದೆ. ಈ ಕೃತಿಯಲ್ಲಿರುವ ಕವಿತೆಗಳು ಪ್ರೀತಿ ಪ್ರೇಮಕ್ಕೆ ಸೀಮಿತ ಆಗದೆ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಒಳಗೊಂಡ ಕೃತಿ ಇದಾಗಿದೆ.
ಇನ್ನೂ ಮುಂತಾದ ಕವಿತೆಗಳು ಒಂದಕ್ಕಿಂತ ಒಂದು ಉತ್ತಮವಾಗಿರುವುದರ ಜೊತೆಗೆ, ಮತ್ತೆ ಮತ್ತೆ ಓದಬೇಕೆನ್ನಿಸುತ್ತದೆ. ಓದುಗರು ಈ ಕೃತಿಯನ್ನು ಕೊಂಡು ಓದಿ ಲೇಖಕ ಮಲ್ಲಿಕಾರ್ಜುನ ಎಸ್ ಆಲಮೇಲ ಇವರನ್ನು ಪ್ರೋತ್ಸಾಹಿಸಿರಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಈ ಕೃತಿಯು ಕವಿ ಮಲ್ಲಿಕಾರ್ಜುನ ಎಸ್ ಆಲಮೇಲರವರಿಗೆ ಹೆಸರನ್ನು ತಂದು ಕೊಟ್ಟು ಗೌರವಗಳು ಲಭಿಸಲಿ. ಇವರ ಲೇಖನಿಯಿಂದ ಮತ್ತಷ್ಟು ಸಮಾಜಕ್ಕೆ ಸಂದೇಶ ನೀಡುವಂತ ಬರಹಗಳು ಮೂಡಿ ಬರಲಿ. ಇನ್ನೂ ಹತ್ತಾರು ಕೃತಿಗಳು ಲೋಕಾರ್ಪಣೆಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಅಪಾರವಾದ ಕೊಡುಗೆ ನೀಡಲೆಂದು ಶುಭಹಾರೈಸುತ್ತೇನೆ.
- ಆಶಾ ಶಿವುಗೌಡ –ಸಾಹಿತಿಗಳು ಸಮಾಜ ಸೇವಕರು ಬೆಂಗಳೂರು.
