ಕೊಪ್ಪಳಕ್ಕೆ ಹೋದಾಗಲೆಲ್ಲ ನಾನು ಆ ಮಲೆಯ ಮಲ್ಲನ ತಾಣಕ್ಕೆ ಹೋಗದಿರುವುದಿಲ್ಲ. ನಮಗಿಬ್ಬರಿಗೂ ಆ ಬೆಟ್ಟದ ದೈವ ಆಕರ್ಷಣೆ. ಹುಡುಗರಿದ್ದಾಗ ನೂರಾರು ಸಲ ಆ ಬೆಟ್ಟವನ್ನೇರಿ ಕೇಕೆ ಹಾಕಿದ್ದೇವೆ. ಆದರೆ ಈಗ ಬೆಟ್ಟವೇರಿದ ನೆನಪು ಮಾತ್ರ, ಈಗ ಮೆಟ್ಟಲೇರುವುದೂ ಕಷ್ಟ. ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್ ಅವರ ಅನುಭವದ ಕಥನವನ್ನು ತಪ್ಪದೆ ಮುಂದೆ ಓದಿ…
ಈಗ್ಗೆ ೫೦ ವರ್ಷಗಳ ಹಿಂದೆ ನಮ್ಮ ಹಾವೇರಿಯ ಗೆಳೆಯ ಲಿಂಬನಗೌಡ ಪಾಟೀಲರನ್ನು ಕರೆದುಕೊಂಡು ನಮ್ಮ ಮೊಘಲಾಯಿ ಪ್ರಾಂತಕ್ಕೆ ಒಂದು ಸಲ ಟೂರು ಹೋಗಿದ್ದೆ. ನಮ್ಮ ಕೊಪ್ಪಳ, ಹೊಸಪೇಟೆಯ ಡ್ಯಾಮು, ಹಂಪಿ, ಸೊಂಡೂರಿನ ಬೆಟ್ಟದ ಮೇಲಿರುವ ಷಣ್ಮುಖಸ್ವಾಮಿ ಮುಂತಾದ ಕಡೆ ಎರಡು ಮೂರು ದಿವಸ ತಿರುಗಾಟ ಮಾಡಿ ಬಂದೆವು. ತುಂಗಭದ್ರೆಯನ್ನು ಬಂಧಿಸುವುದಕ್ಕಾಗಿ ಹೊಸಪೇಟೆಯ ಹತ್ತಿರ ಅಣೆಕಟ್ಟು ಕಟ್ಟಿರುವ ಗುಡ್ಡಕ್ಕೆ ರಾಮಮಲೆ ಎನ್ನುತ್ತಾರೆ. ಅದು ಔಷಧಿಯ ಸಸ್ಯಗಳುಳ್ಳ ಮಣ್ಣಿನ ಬೆಟ್ಟವಾಗಿತ್ತು. ಅದು ಮಣ್ಣಿನ ಬೆಟ್ಟವಾಗಿದ್ದರಿಂದಲೋ ಏನೋ ಅದನ್ನು ಹೆಗ್ಗಣ ಬರುವಂತೆ ಗೆಬರಿ ಹಾಳು ಮಾಡಿ ಬಿಟ್ಟರು. ಅಂದರೆ ಆ ರಾಮಾ ಮಲೆಯ ಚರ್ಮ ಸುಲಿದ ಗಣಿಗಾರಿಕೆಯವರು ಔಷಧಿಯ ಸಸ್ಯಗಳನ್ನೆಲ್ಲಾ ನಿರ್ನಾಮ ಮಾಡಿ ಬಿಟ್ಟಿದ್ದಾರೆ. ನಾವು ಹೋದ ಸಂದರ್ಭದಲ್ಲಿ ೧೯೭೨-೭೩ ದಟ್ಟ ಕಾನನದಲ್ಲಿದ್ದ ಷಣ್ಮುಖಸ್ವಾಮಿಯ ಈಗ ಬಟ್ಟ ಬಯಲಲ್ಲಿ ನಿಂತಿದ್ದಾನೆ. ನಮ್ಮ ಕೊಪ್ಪಳ ಗುಡ್ಡ, ಹಂಪೆ ಪರಿಸರ, ಆನೆಗುಂದಿ, ಅಲ್ಲಿಂದ ಬೆಣಕಲ್ಲಿನ ವರೆಗಿನ ಗುಡ್ಡಗಳೆಲ್ಲಾ ಕಲ್ಲು ಬಂಡೆಗಳುಳ್ಳ ಬೆಟ್ಟಗಳು. ಈ ಬೆಟ್ಟಗಳಲ್ಲೆಲ್ಲ ಅಲ್ಲಲ್ಲಿ ಅನೇಕ ದೇವರುಗಳು ಬಂದು ಮೆಟ್ಟು ಮಾಡಿಕೊಂಡು ಕುಂತು ಬಿಟ್ಟಿವೆ. ಬೆಣಕಲ್ಲಿನಲ್ಲಿ ಬೆಟ್ಟದಜ್ಜ-ಲಿಂಗಜ್ಜ, ಆನೆಗುಂದಿ ಅಂಜಲಿ ದೇವಿಯ ತವರು ಮನೆಯಾಗಿರಬೇಕು, ಅದಕ್ಕೆ ಆಕೆಯ ಹೆರಿಗೆ ಆನೆಗುಂದಿಯಲ್ಲಿ ಆಗಿ ಅಲ್ಲಿ ಹನುಮಂತನಿಗೆ ಜನ್ಮ ನೀಡಿದ್ದಾಳೆ. ಹಂಪಿ ತುಂಗಭದ್ರೆಯ ದಡದಲ್ಲಿ ವಿರೂಪಾಕ್ಷ-ಹ೦ಪವ್ವನಿದ್ದರೆ, ಹೊಸಪೇಟೆಯ ಹತ್ತಿರ ಜಂಬುನಾಥನಿದ್ದಾನೆ. ಈ ಪರಿಸರವನ್ನು ನಮ್ಮ ಭಾಗದ ಎಷ್ಟು ಜನ ನೋಡಿದ್ದಾರೋ ಏನೋ.

ಎಂಥದೋ ಒಂದು ದೇವಾಲಯವಿದ್ದರೆ ಆಯಿತು, ಈ ಪುರೋಹಿತಶಾಹಿಗಳು ಅಲ್ಲಿಗೆ ಬಂದು ಅಲ್ಲಿ ವಸಾಹತು ಸ್ಥಾಪಿಸಿಕೊಂಡು ಅದನ್ನು ಹಿಡಕೊಂಡು ಕುಂತು ಬಿಡುತ್ತಾರೆ. ಹಂಪೆಯ ವಿರೂಪಾಕ್ಷನ ಸುತ್ತು ಮುತ್ತು ಇಂಥ ಗುಡಿ-ಗುಂಡಾರ ಹುಡುಕುವವರು ಬಂದು ಮನೆ ಕಟ್ಟಿಕೊಂಡಿದ್ದರು,ಹೋಟ್ಲು ನಿರ್ಮಿಸಿಕೊಂಡಿದ್ದರು,ಅಂಗಡಿಗಳನ್ನು ಮಾಡಿಕೊಂಡು ಕುಂತಿದ್ದರು. ರಥ ಬೀದಿಯ ಪಕ್ಕದಲ್ಲಿರುವ ಮಂಟಪಗಳನ್ನು ರೈತರು ವ್ಯಾಪಾರಿಗಳು ಹಿಡಿದುಕೊಂಡಿದ್ದರು. ಅವರು ಈ ಮಂಟಪಗಳಲ್ಲಿ ಹಣ್ಣುಗಳನ್ನು ಅಡಿಗೆ ಹಾಕುತ್ತಿದ್ದರು. ಹಂಪಿಗೆ ಜಾಗತಿಕ ಪರಂಪರೆ ಸಿಕ್ಕ ಮೇಲೆ ಅವರನ್ನೆಲ್ಲ ಎತ್ತಿ ಒಗೆದು ತುಂಗಭದ್ರೆ ಗಹ ಗಹಿಸಿ ನಗುವಂತೆ ಮಾಡಿ ಬಿಟ್ಟಿದ್ದಾರೆ.ಅಂಥ ಒಂದು ಮಂಟಪವನ್ನು ಕನ್ನಡ ವಿಶ್ವವಿದ್ಯಾಲಯದವರು ಹಿಡಿದುಕೊಂಡಿದ್ದರು. ಎದುರು ಬಸವಣ್ಣನ ಎದುರಿಗೆಯೇ ನಮ್ಮ ಕನ್ನಡ ವಿಶ್ವವಿದ್ಯಾಲಯ ಮೊಟ್ಟ ಮೊದಲು ಝಂಡಾ ಊರಿದ್ದು. ಆಗ ಬಸವಣ್ಣನ ಎದುರಿನ ಹಾಳು ಬಿದ್ದ ಮಂಟಪಗಳನ್ನು ಹಿಡಕೊಂಡು ತಾತ್ಪೂರ್ತಿಕವಾಗಿ ಅಡ್ಡ-ಪಡ್ಡ ಗೋಡೆಗಳನ್ನು ಕಟ್ಟಿ ಚಂದ್ರಶೇಖರ ಕಂಬಾರ ಕುರ್ಚಿ ಮೇಜು ತಂದು ಹಾಕಿಕೊಂಡು ಕುಂತು ಬಿಟ್ಟ ಮಾರಾಯ. ಆಗ ನಾನು ಮುದೆನೂರ ಸಂಗಣ್ಣ ಮತ್ತು ಎಸ್.ಎಸ. ಹಿರೇಮಠ ಅವರ ಜೊತೆಗೆ ಹೋಗಿದ್ದೆ. ಆ ಕಂಬಾರ ಬಿಟ್ಟು ಹೋದ ಮೇಲೆ ಈಗ ಆ ಹಾಳು ಮಂಟಪಗಳನ್ನು (ಈಗ ಹಂಪೆಯ ಪೋಲೀಸ ಸ್ಟೇಶನ್ ಆಗಿದೆ.) ಪೋಲೀಸರು ಹಿಡಕೊಂಡು ಕುಂತು ಬಿಟ್ಟಿದ್ದಾರೆ.
ನಮ್ಮ ಕೋಪಣಾಚಲಕ್ಕೆ ಬಂದರೆ, “ನೆಗಳ್ದ ಕೋಪಣಾಚಲದಂತೆ ಪವಿತ್ರಮತ್ತಿಮಬ್ಬೆಯ ಚರಿತಂ”ಎಂದು ಈ ಕೋಪಣಾಚಲವನ್ನು ಅತ್ತಿಮಬ್ಬೆಯ ಚರಿತ್ರೆಗೆ ಹೋಲಿಸಿದ್ದಾನೆ ಕವಿ. ಈ ನಮ್ಮ ಬೆಟ್ಟ ಭಾರಿಯಾಗಿರುವುದರಿಂದಲೇ ನೃಪತುಂಗ ಅದನ್ನು ‘ಕೋಪಣಾಚಲ’ ಎಂದು ಕರೆದಿದ್ದಾನೆ. ನಮ್ಮ ಕೊಪ್ಪಳದ ಕಲ್ಲು ಬೆಟ್ಟ ಎದೆ ಸೆಟೆಸಿ ನಿಂತಿದೆ. “ಮಲೆಯ ಮಗಳನು ಮದುವೆಯಾದನು ನಮ್ಮ ಶಿವ”ಎನ್ನುವ ಒಂದು ಜಾನಪದ ಹಾಡು ಇದೆ. ಹೌದು ಮಾವನ ಮನೆಗೆ ಬಂದ ಶಿವ ಮಲೆಯ ಮಲ್ಲಪ್ಪನ ರೂಪದಲ್ಲಿ ಇಲ್ಲಿಯೆ ಉಳಿದು ಬಿಟ್ಟಿದ್ದಾನೆ. ನಾವು ಹುಡುಗರಿದ್ದಾಗ ಹುಲಿಕೆರೆಯ ಹತ್ತಿರ ಗುಡ್ಡ ಹತ್ತಿ ಗುಡ್ಡದ ಮೇಲೆಯೆ ನಡೆದು ಹೋಗಿ ಮಳೆಮಲ್ಲಪ್ಪನ ದರ್ಶನ ಪಡೆದು ಬರುತ್ತಿದ್ದೆವು. ಅದು ಹುಚ್ಚು ಹುಮ್ಮಸ್ಸಿನ ಚಾರಣ. ಈಗ ಮಲೆಯ ಮಲ್ಲಪ್ಪನ ವರೆಗೆ ಕಾರು ಹೋಗುತ್ತದೆ. ಕೊಪ್ಪಳಕ್ಕೆ ಹೋದಾಗಲೆಲ್ಲ ನಾನು ಆ ಮಲೆಯ ಮಲ್ಲನ ತಾಣಕ್ಕೆ ಹೋಗದಿರುವುದಿಲ್ಲ. ನಮಗಿಬ್ಬರಿಗೂ ಆ ಬೆಟ್ಟದ ದೈವ ಆಕರ್ಷಣೆ. ಏಕೆಂದರೆ ನಮ್ಮ ಮದುವೆ ಆದದ್ದು ಅಲ್ಲಿಯೇ. ಹುಡುಗರಿದ್ದಾಗ ನೂರಾರು ಸಲ ಆ ಬೆಟ್ಟವನ್ನೇರಿ ಕೇಕೆ ಹಾಕಿದ್ದೇವೆ. ದಾದಾಫೀರ,ಮೈನಳ್ಳಿ ಗಿಡ್ಡ,ಮಲ್ಲಾರಡ್ಡಿ, ಕಲ್ಲಾಪುರ ಮರದಾನಿ ಅವರೆಲ್ಲ ನನ್ನ ಹಾಗೆಯೇ ಈ ಕಲ್ಲು ಗುಡ್ಡವನ್ನು ನೆನಪು ಮಾಡಿಕೊಳ್ಳುತ್ತಿರಬೇಕು. ನಮ್ಮದು ಗೈಡೆಡ್ ಚಾರಣವಲ್ಲ. ಜವಾರಿ ಚಾರಣ. ಅಲ್ಲಿ ಸಿಕ್ಕುತ್ತಿದ್ದ ಸೀತಾಫಲ ಹರಿದು ಅಲ್ಲಿಯೆ ಹಣ್ಣಿಗಿಟ್ಟು ಬರುತ್ತಿದ್ದೆವು. ಹತ್ತಿ ಇಳಿಯಬೇಕಾದರೆ ಹನ್ನೊಂದು ಜನ್ಮ ಕಳೆದಂತೆ ಭಾಸವಾಗುತಿದ್ದರೂ ಮತ್ತೆ ಮತ್ತೆ ಹತ್ತುತ್ತಿದ್ದೆವು. ಅಂತಹ ಬೆಟ್ಟದ ಮೇಲಿನ ಪಾಲ್ಕಿ ಗುಂಡು ನಮ್ಮ ಸಾಮ್ರಾಟ ಅಶೋಕನ ಕಣ್ಣಿಗೆ ಬಿದ್ದಿದೆ ನೋಡ್ರಿ. ಅದರ ಬುಡಕ ಅಂವಾ ಅಕ್ಷರಾ ಬರೆದು ಹೋಗಿದ್ದಾನೆ.
ಬೆಟ್ಟವೇರಿದ ನೆನಪ ಹೊತ್ತವನಿಗೆ ಮೆಟ್ಟಲೇರುವುದೂ ಕಷ್ಟ. ಈಗ ಕೊಪ್ಪಳಕ್ಕೆ ಹೋದಾಗಲೆಲ್ಲ ಆ ಬೆಟ್ಟದ ಮುಂದೆ ನಿಂತು ಒಂದು ನಗೆ ಚೆಲ್ಲುತ್ತೇನೆ. ಈಗ ಅದನ್ನು ಏರಲಾರದ ನನ್ನನ್ನು ನೋಡಿ “ ಈಗ ಹತ್ತು ಬಾರ ಗೆಳೆಯ ” ಎಂದು ಹೇಳಿ ಅದೂ ಸಹ ನಗೆ ಚೆಲ್ಲುತ್ತದೆ.
- ವಿರೂಪಾಕ್ಷಪ್ಪ ಕೋರಗಲ್ – ಹಾವೇರಿ
