‘ದುಡ್ಡಿನ ಮರ’ ಸಂಕಲನ ಪರಿಚಯ : ಮಲ್ಲಿಕಾರ್ಜುನ ಶೆಲ್ಲಿಕೇರಿ

‘ಮಿಠಾಯಿ ಮಾಮ’ ಶಿಶುಗೀತೆ ಸಂಕಲನದ ಮೂಲಕ ಮಕ್ಕಳ ಸಾಹಿತ್ಯ ಲೋಕಕ್ಕೆ ಅಡಿಯಿಟ್ಟ ವೀರೇಶ ವೀರೇಶ ಬ ಕುರಿ ಸೋಂಪೂರವರು ಮತ್ತೊಂದು ಮಕ್ಕಳಿಗಾಗಿಯೇ ಹೊರ ತಂದಂತಹ ಕವನ ಸಂಕಲನ ‘ದುಡ್ಡಿನ ಮರ’. ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಈ ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಹಜವಾಗಿ ತನ್ನ ಶೀರ್ಷಿಕೆಯಿಂದಲೇ ಕೇವಲ ಮಕ್ಕಳನಷ್ಟೇ ಅಲ್ಲ ದೊಡ್ಡವರನ್ನು ಸೆಳೆಯುವ ಚಂದದ ಪುಸ್ತಕ. ಈ ಕೃತಿಗೆ ಹಿರಿಯ ಮಕ್ಕಳ ಸಾಹಿತಿ ಶ್ರೀಮತಿ ಲಲಿತಾ ಹೊಸಪ್ಯಾಟಿ ಅವರ ಅನುಭವಜನ್ಯ ಅಧ್ಯಯನ ಯೋಗ್ಯ ಮುನ್ನುಡಿ ಇದ್ದರೆ ಇನ್ನೋರ್ವ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅವರ ಚಂದನೆಯ ತೂಕದ ಬೆನ್ನುಡಿ ಇದೆ.

ಶಿಷ್ಠ ಸಾಹಿತ್ಯಗಿಂತ ಮಕ್ಕಳ ಸಾಹಿತ್ಯ ಬರೆಯುವುದು ಸುಲಭವಲ್ಲ. ಮಕ್ಕಳ ಜ್ಞಾನಕ್ಕೆ ನೆಲುಕುವಂತೆ ಹಾಗೂ ಅವರಲ್ಲಿ ಆಸಕ್ತಿ ಬರುವಂತೆ ಕತೆಯಾಗಲಿ ಅಥವಾ ಗೀತೆಗಳನ್ನು ಬರೆಯುವುದು ತುಂಬಾ ಕಷ್ಟದ ಸಾಹಿತ್ಯಿಕ ಕೆಲಸವದು. ಜೊತೆಗೆ ಶಿಶು ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದಾಗ ಬಹಳಷ್ಟು ಶಿಶುಸಾಹಿತಿಗಳು ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯ ಶಿಕ್ಷಕರು ಈ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡಿರುವವರು, ಜೊತೆಗೆ ಅದರಲ್ಲಿ ಯಶಸ್ವಿಯಾದವರು. ಯಾಕೆಂದರೆ, ದಿನವೂ ಬಹಳಷ್ಟು ಸಮಯವನ್ನು ಮಕ್ಕಳೊಡನೆ ಕಳೆಯುವ ವೃತ್ತಿಯಲ್ಲಿರುವ ಶಿಕ್ಷಕರಿಗೆ ಸಹಜವಾಗಿ ಮಕ್ಕಳ ಒಡನಾಟ, ಅವರ ನಾಡಿಮಿಡಿತ ಬಲ್ಲವರಾದ್ದರಿಂದ ಶಿಶುಸಾಹಿತ್ಯ ಸ್ವಾಭಾವಿಕವಾಗಿ ಒಲಿದು ಬರುತ್ತದೆ. ಆ ಕಾರಣದಿಂದಲೇ ಇಂದು ಸಾಕಷ್ಟು ಶಿಕ್ಷಕರು ಆ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅದರಲ್ಲಿ ವೀರೇಶ ಕುರಿಯವರು ಒಬ್ಬರು.

ಪ್ರಸ್ತುತ ದುಡ್ಡಿನ ಮರ ಸಂಕಲನದಲ್ಲಿ ಐವತ್ತು ಶಿಶುಗೀತೆಗಳಿವೆ.ಪರಿಸರ,ಕನಸು,ಸ್ನೇಹ,ಅಕ್ಷರ,ಬುಗುರಿ,ಮಳೆ, ತಂದೆ,ತಾಯಿ,ಮೇಷ್ಟ್ರು,ಸಾಕುಪ್ರಾಣಿಗಳ ಕುರಿತಾದ ಪ್ರಾಸಬದ್ಧ ಕವಿತೆಗಳಿಂದ ಮಕ್ಕಳನ್ನು ಸಹಜವಾಗಿ ಸೆಳೆಯುತ್ತವೆ. ಕವಿತೆಗಳನ್ನು ಓದುತ್ತಾ ಹೋದಂತೆ ಮಕ್ಕಳಲ್ಲಿ ಮುಂದೇನು ಎಂಬ ಕುತೂಹಲ ಹುಟ್ಟಿಸುತ್ತ ಸಂಪೂರ್ಣ ಕವಿತೆಯನ್ನು ಓದುವಂತಹ ಆಸಕ್ತಿಪೂರ್ಣ ಮತ್ತು ಚಿಂತನೆಯ ಕವಿತೆಗಳಿವು. ಎಲ್ಲಿಯೂ ಭಾರವಾದ ಶಬ್ಧಗಳಿರದೆ,ವಜನು ಎನಿಸುವ ರೂಪಕಗಳಿರದೆ, ತುಂಬಾ ದೀರ್ಘವೆನಿಸದ ಕವಿತೆಗಳೊಂದಿಗೆ ಸಂಕಲನ ಮಕ್ಕಳನ್ನು ಮೊದಲ ಓದಿನಲ್ಲಿಯೇ ಹಿಡಿದಿಟ್ಡುಕೊಳ್ಳುತ್ತದೆ. ಅಲ್ಲದೆ ಅಂತ್ಯಪ್ರಾಸವಿರುವುದರಿಂದ ಮಕ್ಕಳೇ ತಮಗೆ ನಿಲುಕುವ ದಾಟಿಯಲ್ಲಿ ಇಲ್ಲಿರುವ ಕಾವ್ಯಗಳನ್ನು ಹಾಡಬಹುದು.ಅಲ್ಲಲ್ಲಿ ಆಡುನುಡಿ, ಪಡೆನುಡಿಗಳನ್ನು ಬಳಸಿರುವುದರಿಂದ ಮಕ್ಕಳಲ್ಲಿ ಅವುಗಳ ಒಳಾರ್ಥವನ್ನು ಹಿರಿಯರಿಂದ ತಿಳಿದುಕೊಳ್ಳುವ ಹಂಬಲಕ್ಕೆ ದಾರಿ ಮಾಡಿ ಕೊಡುವ ಮೂಲಕ ಪಡೆನುಡಿಗಳ ಜ್ಞಾನ ಮಕ್ಕಳಲ್ಲಿ ಉಂಟಾಗಲು ಕಾರಣವಾಗುತ್ತದೆ.

ಇಲ್ಲಿರುವ ಕೆಲವು ಗೀತೆಗಳನ್ನು ಉದಾಹರಿಸುವದಾದರೆ,

ದುಡ್ಡಿನ ಮರವು ಬೆಳೆವಂತಿದ್ದರೆ
ಎಷ್ಟೊಂದು ಚಂದಿತ್ತು
ದೊಡ್ಡವರ ಹತ್ರ ಕಾಸನು ಕೇಳುವ
ಕಷ್ಟವು ನಮಗೆ ತಪ್ತಿತ್ತು

ಕೋಟಿ ಕೋಟಿ ನೋಟಿನ ಕಂತೆ
ದಿನವೂ ಜೇಬಲಿ ಮೆರೀತಾ ಇತ್ತು
ಖಾಲಿಯಾಗಲು ತುಂಬಿದು ಜೇಬು
ಕೂಡಲೇ ಮರವು ಕರೀತಾ ಇತ್ತು

ಎಂಬ ಶೀರ್ಷಿಕೆ ಗೀತೆ ಪ್ರಾರಂಭವಾಗುವ ಮುಖೇನ ಮಕ್ಕಳಲ್ಲಿ ದುಡ್ಡಿನ ಮಹತ್ವವನ್ನು, ಜೊತೆಗೆ ಕಲ್ಪನೆಯ ಹೊಳಹುವನ್ನು ತುಂಬಲು ವೇದಿಕೆಗೆ ಹಾದಿ ಮಾಡಿ ಕೊಡುತ್ತದೆ.

ಭಾನುವಾರ ಬಂದ್ರೆ ಸಾಕು
ಮನಸಲಿ ಕಾಮನಬಿಲ್ಲು
ಬೆಟ್ಟ-ಗುಡ್ಡ ,ಬಟ್ಟಂಬಯಲು
ಎಲ್ಲೆಡೆ ಗೆಳೆಯರ ಗುಲ್ಲು

ಹಳ್ಳ- ಕೊಳ್ಳ ಸುತ್ತಿ ಸುಳಿದು
ಸಿಹಿ ಸಿಹಿ ಜೇನಿನ ಬೇಟೆ
ಕಬ್ಬು, ಕಡಲೆ ಸೂರ್ಯಪಾನ
ಬೆನ್ನಿಗೆ ಮೂಟೆ ಮೂಟೆ

ಎಂಬ ಸಾಲುಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಭಾನುವಾರದ ರಜಾದಿನ ಯಾವ ಕಳೆದು ಹೋಗುತ್ತದೆ ಎಂದು ಸೂಚಿಸಿದರೂ, ನಗರದ ಮಕ್ಕಳು ಇಂತಹ ಒಂದು ದಿವ್ಯಾನುಭೂತಿ ಕಳೆದುಕೊಳ್ಳುತ್ತಿದ್ದಾರಲ್ಲ ಎಂಬ ನಿರಾಶ ಭಾವವನ್ನು ಮೂಡುವಂತೆ ಮಾಡುತ್ತದೆ.

ಅಣ್ಣನು ತಂದ ಬಣ್ಣದ ಬಗುರಿ
ನನ್ನನು ಸೆಳೆದಿಹುದು
ಬಣ್ಣದ ಬುಗುರಿಯ ಆಡಿಸುವಾಸೆ
ಮನದಲಿ ಬೆಳೆದಿಹುದು

ಎಂಬ ಬಣ್ಣದ ಬುಗುರಿಯ ಸಾಲುಗಳು ನಮ್ಮನ್ನೂ ಶಾಲಾ ದಿನಗಳಿಗೆ ಕೊಂಡೊಯ್ಯುವ ಸಮರ್ಥನೀಯ ಸಾಲುಗಳೆ.

ಹೆಗಲ ಮೇಲೆ ಕೂಡಿಸಿಕೊಂಡು
ಜಗವನು ತೋರಿದ ನನ್ನಪ್ಪ
ಹಗಲಿರುಳೆಲ್ಲ ದುಡಿದು ದಣಿದರೂ
ನಗುವನೇ ಹಂಚುದ ನನ್ನಪ್ಪ

ಬೇಡಿದ ತಿನಿಸನು ಕೂಡಲೇ ಕೊಡಿಸಿ
ಆಡಿಸಿ, ಕುಣಿಸಿದ ನನ್ನಪ್ಪ
ಹಾಡಿ ಹರಸುತಲಿ ಮಕ್ಕಳ ಏಳ್ಗೆಗೆ
ದುಡಿದೇ ದುಡಿದನು ನನ್ನಪ್ಪ

ಎಂಬ ನನ್ನಪ್ಪ ಎಂಬ ಕವನದ ಸಾಲುಗಳನ್ನು ಓದುತ್ತಿದ್ದರೆ ಮಕ್ಕಳಲ್ಲಿ ತನ್ನ ತಂದೆಯ ಕುರಿತಾಗಿ ಹೆಮ್ಮೆ, ಗೌರವದ ಭಾವವನ್ನು ಒಮ್ಮೆಲೆ ಮೂಡುವಂತೆ ಮಾಡುತ್ತವೆ.

ರಜೆಯು ಮುಗಿದು ಶಾಲೆಗಳು
ಶುರುವಾದವು ಮತ್ತೇ ಈಗ
ಅಭಿ- ನಬಿ,ರೀಟಾ- ಜಾನು
ಹೋಗೋಣ ಬನ್ನಿರಿ ಬೇಗ

ಎಂಬಂತಹ ಸಾಲುಗಳು ಜಾತಿ, ಬಡವ-ಶ್ರೀಮಂತ, ಬೇಧ-ಭಾವ ಅರಿಯದ ಮಕ್ಕಳ ಮನಸ್ಸಿನ ಪ್ರತಿಬಿಂಬದಂತಿವೆ.

ರಾಮನು ಕರೆವನು ಲಗೋರಿ ಆಟಕೆ
ಶ್ಯಾಮನು ಕರೆವನು ಹೂವಿನ ತೋಟಕೆ
ಭೀಮನು ಕರೆವನು ಹುಗ್ಗಿಯ ಊಟಕೆ
ಹೇಳಿರಿ ನಾನು ಹೋಗಲಿ ಎಲ್ಲಿಗೆ..?

ಸಾಲುಗಳು ಮಕ್ಕಳ ಮನಸ್ಸಿನ ದ್ವಂದ್ವಕ್ಕೆ ಉತ್ತರ ಕೇಳುವ ಸಾಲುಗಳಾಗಿ ಸಹಜವಾಗಿ ಸೆಳೆಯುವದರೊಂದಿಗೆ ಬಾಲ್ಯದಲ್ಲಿ ಆಡಲು, ಹೋಗಲು ಅದೆಷ್ಟು ಆಯ್ಕೆಗಳು ಇದ್ದವಲ್ಲ ಎಂಬ ಅಚ್ಚರಿಯ ನೋಟಕ್ಕೂ ಕಾರಣವಾಗುತ್ತವೆ.

ನಮ್ಮೂರ ಹಳ್ಳ
ಎಷ್ಟೊಂದು ಚಂದ
ಮೈತುಂಬಿ ಹರಿವಾಗ
ಮನಕೆ ಆನಂದ
ಹಳ್ಳದ ದಂಡ್ಯಾಗ
ನವಿಲಿನ ಹಿಂಡು
ಗರಿ ಬಿಚ್ಚಿ ಕುಣಿತಾವ
ಉಲ್ಲಾಸಗೊಂಡು

ನಮ್ಮೂರ ಹಳ್ಳದ ಸಾಲುಗಳಾಗಿ ಎಲ್ಲ ಊರಿನ , ಎಲ್ಲ ಮಕ್ಕಳ ದೈನಂದಿನ ಹಾಡಾಗಿ ಹಳೆಯ ಬಾಲ್ಯದ ವೈಭವದ ದಿನಗಳನ್ನು ಮರು ಕಳಿಸುವಂತೆ ಮಾಡುತ್ತವೆ.

ವಿದ್ಯೆ ಕಲಿಯುವ ವಯಸ್ಸಿನಲ್ಲಿ
ಭೇದ ಬುದ್ದಿ ತರವಲ್ಲ
ಮೂಢರೊಡನೆ ಒಡನಾಟವು
ಜೀವನಕ್ಕೆ ವರವಲ್ಲ

ಎಂಬಂತಹ ನಾಲ್ಕು ಸಾಲುಗಳು ಮಕ್ಕಳು ಹೇಗೆ ಇರಬೇಕು, ಯಾರೊಡನೆ ಸ್ನೇಹ ಮಾಡಬಾರದೆಂಬ ಬುದ್ದಿವಾದ ಗೀತೆಯಾಗಿಯೂ, ಮಕ್ಕಳಲ್ಲಿ ಜೀವನಪಾಠ ಹೇಳುವಂಥ ಕವಿತೆಯಾಗಿ ಸೆಳೆಯುತ್ತದೆ.

ಈ ಸಂಕಲನದ ತುಂಬಾ ಇಂತಹ ಮನಮುಟ್ಟುವ , ನಮ್ಮನ್ನೂ ಬಾಲ್ಯಕ್ಕೆ ಕರೆದೊಯ್ಯುವ,ಎಲ್ಲರನ್ನು ವಿಚಾರಕ್ಕೆ ಹಚ್ಚುವ , ಪ್ರಾಸಬದ್ಧ ಸಾಲುಗಳಿಂದ ಕೃತಿ ಅಲಂಕೃತಗೊಂಡಿದೆ. ಪ್ರತಿ ಮಕ್ಕಳು ಓದಬಹುದಾದ, ಪ್ರತಿ ಮೇಷ್ಟ್ರು ತಮ್ಮ ಮಕ್ಕಳಿಗೆ ಇಲ್ಲಿನ ಕವಿತೆಗಳನ್ನು ಶಾಲೆಯಲ್ಲಿ ಹೇಳಿ ಕೊಡಬಹುದಾಗಿದೆ.

ಸಂಕಲನದ ಶೀರ್ಷಿಕೆಯೇ ಆಕರ್ಷಣೀಯವಾಗಿದ್ದು ಇಂತಹ ಕೃತಿಗಳು ವೀರೇಶ ಕುರಿಯವರಿಂದ ಇನ್ನಷ್ಟು ಬರಲಿ ಎಂದು ಹಾರೈಸುವೆ.
ಶುಭವಾಗಲಿ ತಮಗೆ..


  • ಮಲ್ಲಿಕಾರ್ಜುನ ಶೆಲ್ಲಿಕೇರಿ – ಬಾಗಲಕೋಟೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW