ಎಂಡೋಮೆಟ್ರಿಯೋಸಿಸ್ ಎಂದರೇನು ?

ಎಂಡೋಮೆಟ್ರಿಯೋಸಿಸ್ ಎಂದರೇನು? ಇದರ ಕುರಿತು ಡಾ.ಸುವರ್ಣಿನೀ ಕೊಣಲೆ ಅವರು ಓದುಗರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಎಂಡೋಮೆಟ್ರಿಯೋಸಿಸ್ (Endometriosis) ಎನ್ನುವ ಅತ್ಯಂತ ಯಾತನಾಮಯ ಸಮಸ್ಯೆ ಜಗತ್ತಿನ 10% ಮಹಿಳೆಯರನ್ನು ಕಾಡುತ್ತಿದೆ. ಇದರ ನೋವಿನ ತೀವ್ರತೆ ಎಷ್ಟು ಎಂದರೆ, ಆ ನೋವು ಅನುಭವಿಸುವವರಿಗೆ ಸಾವಾದರೂ ಬರಬಾರದೇ ಅನಿಸುವಷ್ಟು. ತನ್ನ ಶತ್ರುವಿಗೂ ಬೇಡ ಈ ನೋವು ಅನಿಸುವಷ್ಟು.

ಎಂಡೋಮೆಟ್ರಿಯಮ್ ಎಂದರೆ ಗರ್ಭಕೋಶದ ಒಳಗಿನ ಭಾಗದಲ್ಲಿರುವ ಅಂಗಾಂಶ (tissue). ತಿಂಗಳಿಗೊಮ್ಮೆ ಮುಟ್ಟಾದಾಗ ಈ ಅಂಗಾಂಶದಿಂದಲೇ ರಕ್ತಸ್ರಾವವಾಗುವುದು. ಆದರೆ ಕೆಲವು ಸಂದರ್ಭದಲ್ಲಿ ಗರ್ಭಕೋಶದ ಹೊರಗೂ ಈ ಅಂಗಾಂಶ ಬೆಳೆದುಬಿಡುತ್ತದೆ. ಅದು ಎಂಡೋಮೆಟ್ರಿಯೋಸಿಸ್. ಮುಟ್ಟಾದಾಗಲೆಲ್ಲ, ಈ ಅಂಗಾಂಶ ಬೆಳೆದಲ್ಲೆಲ್ಲ ರಕ್ತಸ್ರಾವ, ಗರ್ಭಕೋಶದ ಹೊರಗೆ. ಇದಷ್ಟೇ ಅಲ್ಲದೆ ವಿಪರೀತ ನೋವು, ಹೊಟ್ಟೆಯುಬ್ಬರ ಇತ್ಯಾದಿ. ಮುಟ್ಟಾಗದ ಸಮಯದಲ್ಲೂ ನೋವು ಮತ್ತು ನೂರೆಂಟು ಸಮಸ್ಯೆಗಳು. ಇದನ್ನು ಪೂರ್ಣ ಗುಣಪಡಿಸುವುದು ಹೇಗೆ ಎಂದು ಆಧುನಿಕ ವೈದ್ಯಪದ್ಧತಿಯು ಹುಡುಕುತ್ತಿದೆ. ಇನ್ನೂ ಪರಿಹಾರ ಸಿಕ್ಕಿಲ್ಲ. ಸದ್ಯಕ್ಕೆ ತಾತ್ಕಾಲಿಕ ಪರಿಹಾರಗಳಷ್ಟೇ ಲಭ್ಯ. ಇದಕ್ಕೆ ಕಾರಣವೇನು ಎಂದೂ ಆಧುನಿಕ ವೈದ್ಯ ಪದ್ಧತಿಗೆ ತಿಳಿದಿಲ್ಲ. ಉತ್ತರದ ಹುಡುಕಾಟ ನಡೆದಿದೆ.

ಫೋಟೋ ಕೃಪೆ :ಅಂತರ್ಜಾಲ

ಇಂತಹ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿರುವ ಕಾಲದಲ್ಲಿ ಸಂಶೋಧನೆಯೊಂದು ನಡೆಯಿತು(2012). ಎಂಡೋಮೆಟ್ರಿಯೋಸಿಸ್ ಸಮಸ್ಯೆ ಇರುವ ಮಹಿಳೆಯರು ಎಂಡೋಮೆಟ್ರಿಯೋಸಿಸ್ ಇಲ್ಲದ ಮಹಿಳೆಯರಿಗಿಂತ ಹೆಚ್ಚು attractive ಆಗಿರುತ್ತಾರೆಯೇ? ಎನ್ನುವುದು ಕಂಡುಕೊಳ್ಳಲು! ಮುನ್ನೂರು ಮಹಿಳೆಯರನ್ನು ಒಳಗೊಂಡ ವಿವರವಾದ ಸಂಶೋಧನೆ ನಡೆಸಿದ್ದಾರೆ. ಅದರ ಸಂಶೋಧನಾ ಪ್ರಬಂಧ (research paper) ಇಂದಿಗೂ ಅಂತರ್ಜಾಲದಲ್ಲಿ ಲಭ್ಯ.

ಇವತ್ತು ಬೆಳ್ಳಂಬೆಳಗ್ಗೆ ಈ ಅಧ್ಯಯನ ನಡೆದಿರುವ ಬಗ್ಗೆ ತಿಳಿದಾಗ ಕೋಪವೂ ಬಂತು, ಜೊತೆಗೇ ಬೇಸರವೂ ಆಯಿತು. ಇಷ್ಟು ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಗತ್ತು ಹೆಣಗುತ್ತಿರುವಾಗ, ಅದನ್ನು ಅನುಭವಿಸುತ್ತಿರುವವರು ಚಿಕಿತ್ಸೆ ಇಲ್ಲದೇ ಒದ್ದಾಡುತ್ತಿರುವಾಗ ರೋಗ ಬಂದವರು ಹೆಚ್ಚು ಆಕರ್ಷಕವೋ ರೋಗವಿಲ್ಲದವರೋ ಎಂದು ಕಂಡುಹಿಡಿಯುವ ಯೋಚನೆ ಬರುತ್ತದೆ ಎಂದಾದರೆ ಆ ಮನಸ್ಥಿತಿ ಎಂಥದ್ದಿರಬಹುದು!

ಇಂದಿಗೂ ಮಹಿಳೆಯರ ಆರೋಗ್ಯ ಎನ್ನುವುದು ಮಹತ್ತ್ವದ ವಿಷಯ ಅನಿಸಿಕೊಳ್ಳುವುದೇ ಇಲ್ಲವಲ್ಲ!

“ಎಲ್ಲರಿಗೂ ಆಗೋದೇ ನಿನಗೂ ಆಗ್ತಿದೆ. ನಿಂದೇನು ವಿಶೇಷ?”
“ನಮಗೂ ಆಗಿತ್ತು. ನಿನಗೂ ಆಗ್ತಿದೆ. ಅನುಭವಿಸು.” ಇವು ಸಾಮಾನ್ಯ ಮಾತುಗಳು ತಾನೇ?

ಮಹಿಳೆಯ ಆರೋಗ್ಯದ ಸಮಸ್ಯೆಗಳು ‘ನಾರ್ಮಲ್’ ವಿಷಯ, ಅಥವಾ ಹಾಸ್ಯದ ವಸ್ತು.

ಉದಾಹರಣೆಗೆ ಮುಟ್ಟಿನ ನೋವು, ಮಾನಸಿಕ ಕಿರಿಕಿರಿ, ಪಿ.ಎಮ್.ಎಸ್. ಗಳು ಸಹಜ ಎಂದು ಬಿಂಬಿಸಲ್ಪಡುತ್ತವೆ. ಅವು ಈಗಿನ ಕಾಲದಲ್ಲಿ common, ಆದರೆ ಅದು normal ಅಲ್ಲ.
No cramps, no mood swings, and no PMS – is normal.

ಫೋಟೋ ಕೃಪೆ :ಅಂತರ್ಜಾಲ

ಮಹಿಳೆಯರ ಪ್ರಕೃತಿ ಸಹಜ ಕ್ರಿಯೆಗಳೆಲ್ಲವೂ ಇಂದು ಅನಾರೋಗ್ಯಗಳಾಗಿ ಬದಲಾಗುತ್ತಿವೆ. ಮುಟ್ಟು ನಿಲ್ಲುವ ಹೊತ್ತು ಮೆನೋಪಾಸ್. ಮೆನೋಪಾಸ್ ಒಂದು ರೋಗವಲ್ಲ. ಸಹಜ ಪ್ರಕ್ರಿಯೆ. ಆದರೆ ಅದನ್ನು ರೋಗವೆಂಬಂತೆ ಬಿಂಬಿಸಲಾಗುತ್ತಿದೆ. ಮೆನೋಪಾಸ್ ಹೊತ್ತಿನಲ್ಲಿ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿದ್ದರೆ ಅದಕ್ಕೆ ನಮ್ಮ ಅನಾರೋಗ್ಯಕರ ಜೀವನದಶೈಲಿ ಕಾರಣವೇ ಹೊರತು ಮೆನೋಪಾಸ್ ಎನ್ನುವುದೇ ರೋಗವಲ್ಲ.

ಸಹಜವಾಗಿ, ಸಮಸ್ಯೆಗಳೇ ಇಲ್ಲದೆ ನಡೆಯಬೇಕಾದ ಮುಟ್ಟು ಮೆನೋಪಾಸ್ ಗಳು ಇಂದು ದೊಡ್ಡ ಸಮಸ್ಯೆಗಳಾಗಿ ನಮ್ಮನ್ನು ಕಾಡುತ್ತಿರುವಾಗಲೂ ಕೂಡ ಆಧುನಿಕತೆಯ ಹೆಸರಿನಲ್ಲಿ, ಸ್ತ್ರೀವಾದದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ ನಾವು ಎಲ್ಲೋ ಎಡವಿರುವುದು ಕಾಣಿಸುತ್ತಿಲ್ಲ ಎನ್ನುವುದೇ ಅಚ್ಚರಿ!

ಪಿಂಕ್ ಟ್ಯಾಕ್ಸ್ ಕುರಿತು ಮಾತನಾಡುವ ಯಾರೂ ಈ ಕುರಿತು ಮಾತನಾಡುವುದಿಲ್ಲ. ಮಹಿಳೆಯರ ಸುಖದ ಕುರಿತು ಮಾತನಾಡುವ ಯಾರೂ ಈ ಕುರಿತು ಮಾತನಾಡುವುದಿಲ್ಲ. ಮಹಿಳೆಯರ ಮೇಲೆ ನಡೆಯುವ ಎಲ್ಲ ರೀತಿಯ ದೌರ್ಜನ್ಯದ ಕುರಿತು ಮಾತನಾಡುವ ಯಾರೂ ಈ ಕುರಿತು ಮಾತನಾಡುವುದಿಲ್ಲ.

ನಾವೂ ಕೂಡ ಇದು ಹೆಣ್ಣಿಗೆ ಸಹಜ ಎಂದುಕೊಂಡೇ ಆಯುಸ್ಸು ಕಳೆದುಬಿಡುತ್ತೇವೆ. ಮಹಿಳೆಯ menstrual health/ಮುಟ್ಟಿನ ಆರೋಗ್ಯ ಅವಳ ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥ್ಯದ ಮೂಲ ಎನ್ನುವುದನ್ನು ಅರಿತುಕೊಳ್ಳಲು ಯಾವ ಶತಮಾನದ ವರೆಗೆ ಕಾಯಬೇಕು?

ಎಂಡೋಮೆಟ್ರಿಯೋಸಿಸ್ ನಂತಹ ಸಮಸ್ಯೆಗಳು ಎಷ್ಟೋ ಮಹಿಳೆಯರ ಜೀವನವನ್ನು ನರಕವಾಗಿಸಿವೆ. ಅದರ ಕಡೆಗೆ ನಮ್ಮ ಗಮನ ಹರಿಯಬೇಕಿದೆ…

ಇದಕ್ಕೆಲ್ಲ ಪರಿಹಾರ ಇಲ್ಲವೇ? ಎಂದರೆ ಖಂಡಿತವಾಗಿಯೂ ಇದೆ. ಆದರೆ ಸೂಕ್ತ ವೈದ್ಯರನ್ನು ನೀವು ಕಾಣಬೇಕಷ್ಟೇ. ಏಕೆಂದರೆ ಇವೆಲ್ಲಕ್ಕೂ ಔಷಧಿಯೊಂದೇ ಪರಿಹಾರವಲ್ಲ. ನಮ್ಮ ಆಹಾರ, ನಿದ್ದೆ, ಚಿಂತನೆ, ಚಿಂತೆ.. ಎಲ್ಲವೂ ಇದರ ಮೇಲೆ ಪರಿಣಾಮ ಬೀರುತ್ತದೆ.
ಈ ಕುರಿತು ಒಂದಷ್ಟು ಚರ್ಚೆಗಳಾಗಬೇಕಿವೆ…

NOTE: ಎಂಡೋಮೆಟ್ರಿಯೋಸಿಸ್ ಗೆ ಚಿಕಿತ್ಸೆ ಇದೆ. ಆದರೆ ಈ‌ ಕುರಿತು ತಿಳಿದವರು ಕಡಿಮೆ.


  • ಡಾ. ಸುವರ್ಣಿನೀ ಕೊಣಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW