ಪಂಚಭೂತಗಳ ಅಧಿಪತಿ ಜಲ – ಅವಿನಾಶ ಸೆರೆಮನಿ

ಪ್ರತಿ ವರ್ಷ ಮಾರ್ಚ 22 ರಂದು ಜಗತ್ತಿನಾದ್ಯಂತ ವಿಶ್ವ ಜಲ ದಿನಾಚರಣೆ ಆಚರಿಸುತ್ತೇವೆ. ನೀರಿಲ್ಲದಿದ್ದರೆ ಬದುಕಲಾದೀತೇ? ನೀರನ್ನು ಸಂರಕ್ಷಣೆ ಮಾಡುವುದಾದರೂ ಹೇಗೆ ? ನೀರಿನ ಮೂಲಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜವೇ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾದದ್ದು ಅತಿ ಅವಶ್ಯಕ. ಲೇಖಕರಾದ ಅವಿನಾಶ ಸೆರೆಮನಿ ಅವರ ಈ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಪ್ರತಿ ಜೀವಸಂಕುಲಕ್ಕೂ ಅತಿ ಮುಖ್ಯವಾದುದ್ದೆಂದರೆ ನೀರು. ನೈಸರ್ಗಿಕ ಸಂಪನ್ಮೂಲಗಳಲ್ಲಿಯೇ ಅವಶ್ಯಕವೂ ಹೌದು. ಸರ್ವ ಕಾರ್ಯಕೂ ಮೂಲ, ನೀರಿಲ್ಲದಿರೆ ದಿನವೂ ಸಾಗುವುದಾದರೂ ಹೇಗೆ. ಒಂದೊಂದು ಹನಿ ಕೂಡ ಅತ್ಯಮೂಲ್ಯ, ಆಹಾರವಿಲ್ಲದೆ ಬದುಕಬಹುದು ಆದರೆ ನೀರಿಲ್ಲದೆ ಬದುಕಲಾಗದು. ಪಂಚಭೂತಗಳಲ್ಲಿಯೇ ಸರ್ವಶ್ರೇಷ್ಠವಾದ ಮಹತ್ವ ಹೊಂದಿದ್ದು ಅಗಾಧ ಪಾತ್ರವನ್ನು ನಿರ್ವಹಿಸುತ್ತದೆ. ಬಣ್ಣ, ಆಕಾರ ರಹಿತವಾದರೂ ಪ್ರತಿ ಜೀವಿಯ ಜೀವಕೆ ವೈದ್ಯನಾಗಿ, ಆಪತ್ಬಾಂಧವನಾಗಿ, ರಕ್ಷಕನಾಗಿ ಅಲ್ಲದೆ ವಿವಿಧ ರೂಪದಲ್ಲಿ ಕಾಪಾಡುತ ಮನುಜನ ದೇಹವು ಸದೃಢವಾಗಿರಲು ಸಹಕರಿಸುತ್ತದೆ. ಅಲ್ಲದೆ ಪ್ರಕೃತಿಯೂ ಕೂಡ ಸದಾ ಹಚ್ಚ ಹಸಿರಿನಿಂದ, ರಮ್ಯ ಮನೋಹರ ಸೌಂದರ್ಯದಿಂದ ಕಂಗೊಳಿಸಲು ಕಾರಣೀಭೂತವಾಗಿದೆ. ಭೂಮಂಡಲದಲ್ಲಿ ವಿವಿಧ ಮೂಲಗಳಲಿ ಅವಿತು ಎಲ್ಲರಿಗೂ ದೊರೆಯುತ ಸಕಲರನು ಸಲಹುವ ಗಂಗಾ ಮಾತೆಯೇ ಜಲ.

ಪ್ರತಿ ವರ್ಷ ಮಾರ್ಚ 22 ರಂದು ಜಗತ್ತಿನಾದ್ಯಂತ ವಿಶ್ವ ಜಲ ದಿನಾಚರಣೆ ಆಚರಿಸುತ್ತೇವೆ. ನೀರನ್ನು ಉಳಿಸುವ ಕುರಿತು ಗಂಟೆಗಟ್ಟಲೆ ಭಾಷಣ, ವಾಕಥಾನ್, ಮ್ಯಾರಾಥಾನ್ ಹಾಗೂ ಸಂಬಂಧಿಸಿದ ಇತರೆ ರೀತಿಯ ಚಟುವಟಿಕೆಗಳನು ಆಯೋಜಿಸುವ ಮೂಲಕ ನೀರಿನ ಅರಿವು ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಆದರೆ ನಿಜವಾಗಿಯೂ ಇದು ಫಲಪ್ರದವಾಗುತ್ತದೆಯೇ ಎಂದು ಯೋಚಿಸಿದಾಗ 1% ಆಗಬಹುದು. ಹಾಗಾಗಿ ಬರೀ ಈ ದಿನವಲ್ಲದೆ ಸ್ವಯಂ ಬುದ್ಧಿಯಿಂದ,ತಿಳುವಳಿಕೆಯಿಂದ ಜಲವನು ತಾಯಿಯಂತೆ ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ನಿತ್ಯವೂ ಜಲ ದಿನವೇ ಏಕೆಂದರೆ ಜಲವಿಲ್ಲದೆ ಒಂದು ಕ್ಷಣ ಇರಲಾರೆವು. ಹಾಗಾಗಿ ಪ್ರತಿ ಹನಿಯೂ ಕೂಡ ಇಂದಿನ ದಿನಮಾನದಲ್ಲಿ ಬಹುಮುಖ್ಯವೆ. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ರಾಶಿ ಎಂಬ ಗಾದೆ ಮಾತಿನಂತೆ ಪ್ರತಿ ನೀರಿನ ಹನಿ ಅಮೃತವಿದ್ದಂತೆ ಜೋಪಾನದಿಂದ ರಕ್ಷಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಫೋಟೋ ಕೃಪೆ : ಅಂತರ್ಜಾಲ

ಭೂತಾಯಿ ಒಡಲಲಿ ಅದೆಷ್ಟೋ ಸಂಪನ್ಮೂಲಗಳನ್ನು ಸಲಹುತ ನಮ್ಮೆಲ್ಲರ ಬದುಕಿಗೆ ದಯಪಾಲಿಸುತ್ತಿದ್ದಾಳೆ ಇವುಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಮತ್ತು ಮೂಲಗಳನ್ನು ಹೊಂದಿರುವುದು ಜಲ. ಭೂಮಿಯ ಮೇಲೆ ಒಳ್ಳೆಯ ಮತ್ತು ಆರೋಗ್ಯಯುತ ಜೀವನ ನಡೆಸಲು ನಿರಂತರವಾಗಿ ನೀರನ್ನು ಕಾಯ್ದುಕೊಳ್ಳುತ ಬದುಕು ನಡೆಸಬೇಕಾಗಿದೆ. ಇಂದು ಮಾನವನು ಕೂಡ ಆರ್ಥಿಕತೆಯ ದೃಷ್ಟಿಯಿಂದ ನೀರನ್ನು ಅತಿಯಾಗಿ ಬಳಸುತ ವಿನಾಕಾರಣ ಪೋಲು ಮಾಡುತ್ತಿದ್ದಾನೆ. ಭೂತಾಯಿ ಕರುಣಿಸಿದ ಉಚಿತ ಉಡುಗೊರೆಗಳಲ್ಲಿ ಒಂದಾಗಿದ್ದು ಇಂದು ತಾನು ಮಾಡಿದ ತಪ್ಪಿಗೆ ಹಣಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ. ಇದಕ್ಕೆಲ್ಲವೂ ಕಾರಣವೇ ಅತಿಯಾದ ಅನವಶ್ಯಕ ಬಳಕೆಯೇ ಹೊರತು ಬೇರೇನೂ ಅಲ್ಲ.

ನೀರಿಲ್ಲದಿದ್ದರೆ ಬದುಕಲಾದೀತೇ? ಯಾವುದೇ ಕ್ಷೇತ್ರವೂ ಇರಲು ಸಾಧ್ಯವೇ? ದಿನನಿತ್ಯ ನೀರು ಇರಲಾರದೆ ಇರಲಾದೀತೆ? ನೀರನ್ನು ಸಂರಕ್ಷಣೆ ಮಾಡುವುದಾದರೂ ಹೇಗೆ ? ನೀರಿನ ಮೂಲಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜವೇ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾದದ್ದು ಅತಿ ಅವಶ್ಯಕ.

ಅಲ್ಲಮ ಪ್ರಭುರವರು ತಮ್ಮಯ ವಚನದಲ್ಲಿ ನೀರಿನ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. “ಹರಿವ ನೀರಿಗೆ ಮೈಯೆಲ್ಲ ಕಾಲು”ವಚನದಲ್ಲಿನ ಒಂದೇ ಸಾಲು ಅಗಾಧ ಅರ್ಥವನ್ನು ಒಳಗೊಂಡಿದೆ.ಜಲದ ಮಹತ್ವ ಅರಿಯದವ ಇನ್ನೇನು ಅರಿತಾನು.ಇರುವಾಗ ಮಿತಿಯಿಂದ ನಾಳೆಗಳ ಬಗ್ಗೆ ಯೋಚಿಸುತ .ಎಷ್ಟು ಬೇಕೋ ಅಷ್ಟು ಮಾತ್ರ ಬಳಸಬೇಕು. ಸುಮ್ಮನೆ ಬೇಕಾಬಿಟ್ಟಿ ನೀರು ಪೋಲು ಮಾಡಿದರೆ ಹಾಹಾಕಾರದಿಂದ ತತ್ತರಿಸಬೇಕಾಗುತ್ತದೆ.ಜೀವವೂ ಹನಿ ನೀರಿಗಾಗಿ ಪರಿತಪ್ಪಿಸಿ ಪಶ್ಚಾತಾಪ ಪಡುವ ದುಸ್ಥಿತಿ ಬಂದೆರಗುವುದು. ಇದ್ದಾಗಲೇ ಹಿತ ಮಿತವಾಗಿ ಬಳಸಿ ಕಾಯ್ದುಕೊಂಡರೆ ಸಮಸ್ಯೆಗಳು ಎದುರಾಗುವುದಿಲ್ಲ.

ಪ್ರಸ್ತುತ ದಿನಮಾನಗಳಲ್ಲಿ ನೀರಿನ ಮೂಲಗಳು ಕಣ್ಮರೆಯಾಗುತ್ತಿರುವುದು ದುರ್ದೈವದ ಸಂಗತಿ. ಆಧುನಿಕರಣದ ನೆಪದಲ್ಲಿ ಲೆಕ್ಕಕೆ ಸಿಗಲಾರದಷ್ಟು ಕೆರೆ ಕಟ್ಟೆಗಳು, ನದಿಗಳನು ಮುಚ್ಚಿ ಆರ್ಥಿಕ ಚಟುವಟಿಕೆ ಕೇಂದ್ರಗಳನ್ನಾಗಿ ಪರಿವರ್ತಿಸುತ್ತಿರುವುದು ನೋಡಿದರೆ ಮುಂದಿನ ಜನಾಂಗಕ್ಕೆ ನೀರು ದೊರಕುವುದು ಇಲ್ಲವೋ ಎಂಬ ಅನುಮಾನ ಸನಿಹ ಸುಳಿಯದಿರದು. ನೀರೇ ಸರ್ವಸ್ವವೂ ನೀರಿಲ್ಲದೆ ಏನು ಇಲ್ಲ ಎಲ್ಲದಕ್ಕೂ ನೀರಿನ ಸಹಾಯ ಬೇಕೇ ಬೇಕು. ಹೀಗಿದ್ದರೂ ಆರ್ಥಿಕವಾಗಿ ಬಲಾಢ್ಯರಾಗುವ ಪೈಪೋಟಿಯಲ್ಲಿ ನೀರಿನ ಮೂಲಗಳಿಗೆ ಧಕ್ಕೆ ತಂದು ನೀರಿನ ಅಭಾವ ಸೃಷ್ಟಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ.

ಫೋಟೋ ಕೃಪೆ : ಅಂತರ್ಜಾಲ

ನಮ್ಮ ದೇಶ ಜಲವನ್ನು ಪೂಜ್ಯನೀಯ ಭಾವದಿಂದ ಕಾಣುವ ದೇಶ. ಅಮೃತಕ್ಕೆ ಸಮಾನ ಎಂದು ಹೇಳುವರು. ಪುಣ್ಯಕ್ಷೇತ್ರಗಳಲ್ಲಿ ಪ್ರತಿಶತ 85% ರಷ್ಟು ದೇವಾಲಯಗಳು ನದಿಗಳು, ಸಮುದ್ರಗಳು, ಕೆರೆಗಳ ದಂಡೆಯ ಮೇಲೆ ನೆಲೆಸಿವೆ ಅಲ್ಲದೆ ಆ ಕ್ಷೇತ್ರಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ನೆಲೆಸಿರುವ ದೇವರನ್ನು ನೆನೆಯುತ್ತ ತೀರ್ಥವೆಂದು ದೇವರ ನೆನೆಯುತ ಸ್ವೀಕರಿಸುವರು.ಅಲ್ಲದೆ ಪಾಪ, ಕರ್ಮಗಳು ತೊಲಗಲೆಂದು ದೇವರಲ್ಲಿ ಭಕ್ತಿ ಪರವಶರಾಗಿ ಸ್ನಾನ ಮಾಡುತಲೆ ನಮಸ್ಕರಿಸುತ್ತ ಬೇಡಿಕೊಳ್ಳುವರು. ಇಷ್ಟೆಲ್ಲ ಧಾರ್ಮಿಕ ಭಾವನೆಯಿದ್ದರೂ ಕೂಡ ಜನ ಅದೇ ಜಲವನ್ನು ನಾನಾ ಕಾರಣಗಳಿಂದ ಜನರು ಮಲೀನಗೊಳಿಸುತ್ತಿರುವರು. ಇದರಿಂದ ಶುದ್ಧವಾದ ನೀರು ಕಲುಷಿತಗೊಳ್ಳುತ ಊಹಿಸಲಾರದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆಗ ಅದು ಯಾವುದಕ್ಕೂ ಉಪಯೋಗಕ್ಕೆ ಬಾರದು. ಇದೆಲ್ಲವೂ ಅತಿಯಾದದ್ದರ ಪ್ರಭಾವ.

ನೀರನ್ನು ನಿರೀಕ್ಷೆಗೂ ಮೀರಿ ಬಳಸಿದ್ದರಿಂದಲೇ ಇಂದು ಎಲ್ಲಿ ನೋಡಿದರಲ್ಲಿ ಬೋರವೇಲ್ ಗಳು ತಲೆ ಎತ್ತಿ ನಿಂತಿವೆ. ಮನೆ ಕಟ್ಟಬೇಕಾದರೆ, ಕೃಷಿಗೆ, ಕೈಗಾರಿಕೆ ಹೀಗೆ ಒಂದಿಲ್ಲ ಒಂದು ನೆಪವನ್ನಿಟ್ಟುಕೊಂಡು ಬೋರ್ ಹೊಡೆಸುತ ಅಂತರ್ಜಲದ ನೀರು ಕೂಡ ಸಿಗಲಾರದ ಸಮಸ್ಯೆ ಉದ್ಭವವಾಗಿದೆ. ಎಷ್ಟು ಮೀಟರ್ ಭೂಮಿ ಕೊರೆದರೂ ನೀರು ದೊರೆಯಲಾಗದ ಸ್ಥಿತಿ ನಿರ್ಮಾಣವಾಗಿದ್ದು ಮನುಜನಿಗೆ ಪಾಠ ಕಲಿಸಿದ್ದಂತಾಗಿದೆ. ಆದರೂ ಎಚ್ಚೆತ್ತುಕೊಳ್ಳದೆ ಹಣದ ಅಮಲಿನಲ್ಲಿ ತೇಲುತ ಆಸೆಯ ಕೂಪದಲ್ಲಿ ಮೆರೆಯುತ್ತಿದ್ದಾನೆ. ಅದರಲ್ಲೂ ಶುದ್ಧ ನೀರಿನ ಪ್ರಮಾಣವು ಕೂಡ ಅತ್ಯಲ್ಪವಾಗಿದ್ದು ಕೊಂಡುಕೊಳ್ಳುವ ಸನ್ನಿವೇಶವನ್ನು ನಿತ್ಯವೂ ಕಾಣುತ್ತಿದ್ದೇವೆ.ಹೀಗಿದ್ದರೂ ಮನುಜನಿಗೆ ಬುದ್ದಿ ಬಂದಿಲ್ಲ. ಇರುವ ನೀರನ್ನು ಬಳಸುವ ವ್ಯವಧಾನ ಇಲ್ಲವೇ ಇಲ್ಲ. ಹೀಗಾದರೆ ಒಂದಿಲ್ಲ ಒಂದು ದಿನ ನೀರಿಗಾಗಿಯೇ ಯುದ್ಧ ನಡೆಯುವುದರಲ್ಲಿ ಸಂದೇಹವಿಲ್ಲ.

ಫೋಟೋ ಕೃಪೆ : ಅಂತರ್ಜಾಲ

ಈಗಾಗಲೇ ರಾಜ್ಯ ರಾಜ್ಯಗಳ ನಡುವೆ ದೇಶ ದೇಶಗಳ ನಡುವೆ ಜಲ ವಿವಾದಗಳು ಇದ್ದದ್ದು ನಮಗೆ ನಿಮಗೆಲ್ಲ ಗೊತ್ತಿರುವ ವಿಷಯವೇ.ನ್ಯಾಯಾಲದಲ್ಲಿ ಅದೆಷ್ಟೋ ವರ್ಷಗಳಿಂದ ಪ್ರಕರಣಗಳಿದ್ದು ಇನ್ನು ಕೂಡ ಬಗೆಹರಿಯದೆ ಆಗಾಗ ಸಂಘರ್ಷಗಳು ಆಗುತ್ತಲೇ ಇರುತ್ತವೆ.ಇದೆಲ್ಲವೂ ನೀರಿನ ಅಭಾವದ ಪರಿಣಾಮವೇ ಹೊರತು ಬೇರೇನೂ ಇಲ್ಲ.

ಯಾವುದೇ ನಾಗರೀಕತೆಗಳು ಕೂಡ ಬೆಳೆದು ಬಂದಿದ್ದು ಕೂಡ ನದಿಗಳ ದಡದಲ್ಲೇ ಆದರೆ ಇಂದೂ ಅದೇ ನದಿಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿವೆ. ಇದೆಲ್ಲಕ್ಕೆ ಮೂಲ ಕಾರಣವೇ ಜನಸಂಖ್ಯೆ ಬೆಳವಣಿಗೆ,ಆಧುನೀಕರಣದ,ಉದ್ಯಮಗಳ ಸ್ಥಾಪನೆ,ರಸ್ತೆಗಳ ಅಗಲೀಕರಣ, ಜಾಗತಿಕ ಪೈಪೋಟಿ.ಹೀಗಾದರೆ ನೀರಿಗಾಗಿ ಹಪ ಹಪಿಸುವ ಸಮಯ ದೂರಿಲ್ಲ. ಹಾಗಾಗಿ ಇರುವ ನೀರನ್ನು ಅನಾವಶ್ಯಕವಾಗಿ ಬಳಸದೆ ಅವಶ್ಯವಿದ್ದಷ್ಟೇ ಬಳಸೋಣ.

ನೀರೂ ಕೂಡ ನೀರಡಿಸುವ ಮುಂಚೆಯೇ ವಿವಿಧ ವಿಧಾನಗಳ ಮೂಲಕ ಸಂರಕ್ಷಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ವ್ಯರ್ಥ ಮಾಡದೆ ಬಳಸುತ, ಮಳೆ ನೀರನ್ನು ಸಂಗ್ರಹಿಸಿ ಇತರ ಕಾರ್ಯಗಳಿಗೆ ಉಪಯೋಗಿಸುವುದು.ನೀರನ್ನು ಪುನರ್ ಬಳಕೆ ಮಾಡುವುದು.ಒಟ್ಟಿನಲ್ಲಿ ಭಾರತೀಯರಾದ ನಾವೆಲ್ಲ ಪುಣ್ಯವಂತರು .ಅಗಮ್ಯ ಜಲಗಳ ಮೂಲಗಳಿವೆ. ಇವುಗಳನ್ನು ಉಳಿಸಿ ಕಾಪಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಜಲವನು ಉಳಿಸುತ ಮುಂದಿನ ಜನಾಂಗಕ್ಕೆ ಮೀಸಲಿಡೋಣ.ಜಲದ ಮೂಲಗಳನ್ನು ರಕ್ಷಿಸೋಣ.ಬರುವ ಜಲ ಕಂಟಕಗಳನು ತಡೆಯೋಣ.ನೀರಿನ ಬಗ್ಗೆ ಕಾಳಜಿ ವಹಿಸೋಣ


  • ಅವಿನಾಶ ಸೆರೆಮನಿ – ಬೈಲಹೊಂಗಲ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW