ಬರಹಗಾರ ಜನಾರ್ದನ ತುಂಗ ಅವರ ಎರಡನೇ ಕೃತಿ “ಸ್ತಂಭದೀಪಿಕೆ”. ಈ ಕೃತಿಯಲ್ಲಿ ೧೬ ನೆಯ ಶತಮಾನದಿಂದ ೨೧ ನೆಯ ಶತಮಾನದವರೆಗೆ ಆದರ್ಶಗಳ ಬೆಂಬತ್ತಿ ದೇದೀಪ್ಯಮಾನವಾಗಿರುವ ೩೮ ವ್ಯಕ್ತಿಗಳ ಬದುಕಿನ ಚಿತ್ರಣವಿಲ್ಲಿದ್ದು ಈ ಕೃತಿಯ ಕುರಿತು ಕವಿಗಳಾದ ಬೆಂಶ್ರೀ ರವೀಂದ್ರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸ್ತಂಭದೀಪಿಕೆ ” ಸ್ಮರಣೀಯ ವ್ಯಕ್ತಿಚಿತ್ರಗಳು
ಲೇಖಕರು : ಜನಾರ್ದನ ತುಂಗ
ಪ್ರಕಾಶಕರು : ಭಾರತೀ ಪ್ರಕಾಶನ, ಮೈಸೂರು.
ಸಂಪರ್ಕ : ೯೪೪೮೪೧೩೧೮೮.
ಪುಟಗಳು : ೧೯೬.
ಬೆಲೆ : ₹೨೫೦/-
ಹಿರಿಯ ಕಾರ್ಮಿಕ ನಾಯಕರೂ, ರಾಷ್ಟ್ರೀಯವಾದಿಗಳೂ, ಆಧ್ಯಾತ್ಮಿಕ ಜಿಜ್ಞಾಸುವೂ ಆದ ತೆರೆದ ಮನಸ್ಸಿನ ಸೂಕ್ಷ್ಮಗ್ರಾಹಿ ಬರಹಗಾರ ಜನಾರ್ದನ ತುಂಗ ಅವರ ಎರಡನೇ ಕೃತಿ “ಸ್ತಂಭದೀಪಿಕೆ”. ಉಬ್ಬರದ ಕಡಲಿನಲ್ಲಿ, ದಿಕ್ಕು ಕಾಣದ ರಾತ್ರಿಯಲ್ಲಿ, ಜಹಜಿಗೆ ಬಂದರಿನ ಹಾದಿಯನ್ನು ತೋರುವ ಲೈಟ್ ಹೌಸ್‌ನಂತೆಯೇ ಬದುಕಿನ ಸವಾಲಿನ ಕ್ಷಣಗಳಲ್ಲಿ ದಾರಿದೀಪವಾಗುವ ನಮ್ಮ ಹಿರಿಯರು ಬದುಕಿದ ರೀತಿ ಮತ್ತು ಅವರು ಅನುಸರಿಸಿದ ತತ್ವ ಆದರ್ಶಗಳು. ಸ್ಮರಣೀಯ ವ್ಯಕ್ತಿಚಿತ್ರಗಳನ್ನು ಬಿಡಿಸಿರುವ ಲೇಖಕರು ಪುಸ್ತಕಕ್ಕೆ ಅನ್ವರ್ಥವಾಗಿ ‘ಸ್ತಂಭದೀಪಿಕೆ’ ಎಂದು ಕರೆದಿದ್ದಾರೆ. ಹಾಗೆಯೇ ನಿಶಾ ತುಂಗ ಅವರ ಮುಖಪುಟವು ಸಮರ್ಥವಾಗಿ ಪುಸ್ತಕದ ಆಶಯವನ್ನು ವ್ಯಕ್ತಪಡಿಸುತ್ತದೆ.
೧೬ ನೆಯ ಶತಮಾನದಿಂದ ೨೧ ನೆಯ ಶತಮಾನದವರೆಗೆ ಆದರ್ಶಗಳ ಬೆಂಬತ್ತಿ ದೇದೀಪ್ಯಮಾನವಾಗಿರುವ ೩೮ ವ್ಯಕ್ತಿಗಳ ಬದುಕಿನ ಚಿತ್ರಣವಿಲ್ಲಿದೆ. ಆರು ಅವಧಿಗಳಿಗೆ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ದಿವಗಂತ ಶ್ರೀ ಅನಂತಕುಮಾರ್ ಅವರ ಆದರ್ಶಗಳ ಮೂಸೆಯಲ್ಲಿ ಉತ್ತಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವ “ಅದಮ್ಯ ಚೇತನ ಫೌಂಡೇಶನ್” ನ್ನಿನ ಮಾಸಪತ್ರಿಕೆ “ಅನಂತ ಪಥ” ದಲ್ಲಿ ಜನಾರ್ದನ ತುಂಗರು ಮೂಡಿಸಿದ ವ್ಯಕ್ತಿಚಿತ್ರಗಳಿವು.

ಅಂಕಣ ಬರಹಗಳು ತಮ್ಮದೇ ಆದ ಮಿತಿಗಳನ್ನು ಸವಾಲುಗಳನ್ನು ಉಳ್ಳದ್ದಾಗಿದೆ. ಕ್ಯಾಮರಾ ಕಣ್ಣಿನಲ್ಲಿ ಅಗಾಧ ಪ್ರಕೃತಿಯ ಚಿತ್ರವನ್ನು ಸೆರೆಹಿಡಿದು ನೋಟಕರ/ಓದುಗರ ಚಕ್ಷು/ಅಂತಃಚಕ್ಷುಗಳಿಗೆ ರಸಧಾರೆಯನ್ನು ಎರೆಯುವ ರೀತಿಯಲ್ಲಿ ಅಂಕಣ ಬರಹಗಳು ವಿಜೃಂಭಿಸಬೇಕು. ತುಂಗರ ಅಂಕಣದ ವ್ಯಕ್ತಿಚಿತ್ರಗಳು ಅಂತಹ ಕ್ಯಾಮರಾ ಯಶವನ್ನು ಸಾಧಿಸಿವೆ. ಕನ್ನಡದಲ್ಲಿ ವ್ಯಕ್ತಿಚಿತ್ರಗಳನ್ನು ಅಕ್ಷರಗಳಲ್ಲಿ ಬಿಡಿಸುವಲ್ಲಿ ವಿಶಿಷ್ಟವಾದ ಶೈಲಿಯನ್ನು ರೂಪಿಸಿದ ಡಾ ಎಚ್ಚೆಸ್ಕೆ ಅವರ ಪ್ರಭಾವವನ್ನು ತುಂಗಾ ಅವರ ಅಂಕಣ ಬರೆಹದಲ್ಲಿ ಕಾಣಬಹುದಾಗಿದೆ.
ಇತ್ತೀಚಿನ ಕೆಲವು ವ್ಯಕ್ತಿ ಚಿತ್ರಕಾರರು, ತಮ್ಮ ಬರೆಹಕ್ಕಾಗಿ ಗೂಗಲ್ ಮೊರೆಹೋಗುವ ಪ್ರವೃತ್ತಿ ಕಂಡುಬರುತ್ತಿದೆ. ಅಂತಹ ಬರಹಗಳು ರಸಹೀನವಾಗುವುದು ನಿಸ್ಸಂಶಯ. ಆದರೆ ಪ್ರಸ್ತುತ ಲೇಖಕರು ಹಲವಾರು ಗ್ರಂಥಗಳನ್ನು ಪರಾಮರ್ಶಿಸಿ, ಸಂಗ್ರಹಿಸಿ, ವಿಶ್ಲೇಷಿಸಿ ಅಂಕಣಕ್ಕೆ ಸೂಕ್ತವಾದಷ್ಟು ಓದುಗರ ರುಚಿಗನುಗುಣವಾಗಿ ವಿಷಯಗಳನ್ನು ಉಣಬಡಿಸಿದ್ದಾರೆ. ಮುಖ್ಯ ಅಂಶಗಳನ್ನು ಬಿಡದಿರುವುದು ಹೆಚ್ಚುಗಾರಿಕೆ.
ವೀರ ರಾಣಿಯರಾದ ಅಬ್ಬಕ್ಕ, ಚೆನ್ನಭೈರಾದೇವಿ, ಅಹಲ್ಯಾ ಬಾಯಿ ಹೊಳ್ಕರ್, ಮಾದರಿ ಮೈಸೂರಿನ ನಿರ್ಮಾತೃ ನಾಲ್ಮಡಿ ಕೃಷ್ಷರಾಜರು, ಆಧ್ಯಾತ್ಮದ ಧ್ರುವ ತಾರೆಗಳಾದ ನಾರಾಯಣ ಗುರುಗಳು, ಶ್ರದ್ಧಾನಂದ ಸರಸ್ವತಿ, ಅಂಬಾಬಾಯಿ, ಸಿದ್ಧೇಶ್ವರ ಸ್ವಾಮಿಗಳು, ರಾಮಾನಂದಾಚಾರ್ಯ ಮತ್ತು ಶ್ರೀ ಶ್ರೀ ರವಿಶಂಕರ್ ಅವರುಗಳ ಚಿತ್ರಣದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರು, ಸರ್ದಾರ್ ವಲ್ಲಭ ಭಾಯಿ ಪಟೇಲ್, ಸಾವರ್ಕರ್, ಶಾಮಪ್ರಸಾದ್ ಮುಖರ್ಜಿ, ಜಗನ್ನಾಥ ರಾವ್ ಜೋಷಿ, ಜಾರ್ಜಫರ್ನಾಂಡಿಸ್, ಮತ್ತು ಎಲ್ ಕೆ ಅದ್ವಾನಿ.
ಮೊದಲಾದ ರಾಷ್ಟ್ರೀಯ ನಾಯಕರು ಇಲ್ಲಿನ ಪುಟಗಳ ಮೂಸೆಯಲ್ಲಿ ಪುಟಿದ್ದೆದ್ದಿದ್ದಾರೆ. ಕಾರ್ಮಿಕ ಮುಖಂಡರಾದ ದತ್ತೋಪಂತರು, ವಿವೇಕಾನಂದ ಶಿಲಾಸ್ಮಾರಕದ ರೂವಾರಿ ಏಕನಾಥ ರಾನಡೆಯವರು, ಆಲೂರು ವೆಂಕಟರಾಯರಂತಹ ಕನ್ನಡ ಹೋರಾಟಗಾರರೂ , ಸಾಮಾಜಿಕ ಕಾರ್ಯಕರ್ತರು, ಸಮಾಜಸೇವೆಯಲ್ಲಿ ತಮ್ಮ ಬದುಕನ್ನು ಅರ್ಪಿಸಿಕೊಂಡ ಮಹನೀಯರು ಸ್ತಂಭದೀಪಿಕೆಗಳಾಗಿ ಬೆಳಗಿದ್ದಾರೆ. ಹರಿದಾಸ ಕವಯತ್ರಿ ಅಂಬಾಬಾಯಿ, ಬಿರ್ಸಾಮುಂಡಾ, ರಾಮಚಂದ್ರ ದತ್ತಾತ್ರೇಯ ರಾನಡೆ, ಕೆಎಂ ಚಿಣ್ಣಪ್ಪ ಅವರುಗಳ ವ್ಯಕ್ತಿಚಿತ್ರಗಳು ಗಮನ ಸೆಳೆಯುತ್ತದೆ. ಕ್ಲೀಷೆಗಳಿಲ್ಲದ ಬರಹದ ಸರಳ ಶೈಲಿ ಮೆಚ್ಚುಗೆಯಾಗುತ್ತದೆ.

“ಸ್ತಂಭದೀಪಿಕೆ”ಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಎಲ್ಲಾ ೩೮ ವ್ಯಕ್ತಿಗಳ ರೇಖಾಚಿತ್ರಗಳು. ಚಿತ್ರಕಾರ ಶ್ರೀ ಕೆಎಸ್ ಕೃಷ್ಣಮೂರ್ತಿ ಅವರು ಅಭಿನಂದನೀಯರು.
“ಅನಂತ ಪಥ” ಪತ್ರಿಕೆಯು ಒಂದು ಸಿದ್ದಾಂತಕ್ಕೆ ಬದ್ದವಾದ ಪತ್ರಿಕೆ. ಲೇಖಕರು ಸಿದ್ದಾಂತಗಳ ಎಲ್ಲೆಯನ್ನು ದಾಟಿ ಪ್ರಮುಖ ವ್ಯಕ್ತಿಗಳನ್ನು ಗುರುತಿಸಲು ಯತ್ನಿಸಿದ್ದಾರೆ. ಆದರೂ ಆ ಚೌಕಟ್ಟು ಬರಹದ, ವಿಚಾರಗಳ ವ್ಯಾಪ್ತಿಯನ್ನು ಮಿತಿಗೊಳಿಸಿದೆ.
ಶ್ರೀ ಜನಾರ್ದನ ತುಂಗರಿಗೆ ಅಭಿನಂದನೆಗಳು. ಎಲ್ಲರೂ ಓದಬೇಕಾದ ಪುಸ್ತಕವನ್ನು ರಚಿಸಿದ್ದಾರೆ. ಅವರಿಂದ ಹೆಚ್ಚಿನ ನಿರೀಕ್ಷೆಗಳು ನಮಗಿವೆ.
- ಬೆಂಶ್ರೀ ರವೀಂದ್ರ – ಕವಿಗಳು, ಸಂಘಟನಾಕಾರರು, ಬೆಂಗಳೂರು
