‘ದೀಪದ ಮಲ್ಲಿಯರು’ ಕೃತಿ ಪರಿಚಯ

ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಪ್ರಜಾವಾಣಿ ಪತ್ರಿಕೆಯ ಅನುಭವಿ ಪತ್ರಕರ್ತೆಯಾಗಿದ್ದ ಮಾಲತಿ ಭಟ್ ಅವರ ‘ದೀಪದ ಮಲ್ಲಿಯರು’ ಕೃತಿಯಿದು. ವಿಮರ್ಶಕಿ ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ದೀಪದ ಮಲ್ಲಿಯರು
ಲೇಖಕರು: ಮಾಲತಿ ಭಟ್
ಬೆನಕ ಬುಕ್ಸ್ ಬ್ಯಾಂಕ್ ಯಳಗಲ್ಲು, ಶಿವಮೊಗ್ಗ ಜಿಲ್ಲೆ.
ಮುದ್ರಣದ ವರ್ಷ: ೨೦೧೨.
ಪುಟಗಳು: ೧೪೦.
ಬೆಲೆ: ರೂ. ೧೩೦.

ಪ್ರಜಾವಾಣಿ ಪತ್ರಿಕೆಯ ಅನುಭವಿ ಪತ್ರಕರ್ತೆಯಾಗಿದ್ದ ಶ್ರೀಮತಿ ಮಾಲತಿ ಭಟ್ ಅವರ ಸಂದರ್ಶನವು ಒಮ್ಮೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು.ಪತ್ರಿಕೋದ್ಯಮದ ವೃತ್ತಿಯ ಕುರಿತು ಮಾತನಾಡುತ್ತಾ ಅವರು ಬರೆದ ‘ದೀಪದ ಮಲ್ಲಿಯರು’ ಕೃತಿಯ ಬಗ್ಗೆ ಹೇಳಿದಾಗ ಪ್ರಭಾವಿತಳಾದ ನನಗೆ ಅದನ್ನು ಓದುವಾಸೆಯುಂಟಾಗಿತ್ತು.

ಕಳೆದ ವಾರ ಲೇಖಕಿಯವರೇ ಈ ಪುಸ್ತಕವನ್ನು ನನಗೆ ಕಳಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಲೇಖಕಿಯವರೇ ಹೇಳಿದಂತೆ ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾದ ೧೮ ಮಹಿಳೆಯರು ಜೀವನದಲ್ಲಿ ಸಾಕಷ್ಟು ಕಹಿ ಉಂಡರೂ, ತಮ್ಮ ಸುತ್ತಲಿನವರ ಬದುಕಿಗೆ ಬೆಳಕಾದವರು. ಅಂತಹ ಧೀಶಕ್ತಿಯುಳ್ಳ ಸ್ತ್ರೀಯರನ್ನು ಇವರು ‘ಪ್ರಾಫಿಟ್ ಪ್ಲಸ್’ ಮಾಸಪತ್ರಿಕೆಯ ಅಂಕಣದಲ್ಲಿ ಪರಿಚಯಿಸಿದ್ದರು. ಆ ಎಲ್ಲಾ ಬರಹಗಳೇ ‘ದೀಪದ ಮಲ್ಲಿಯರು’ ಎನ್ನುವ ಸುಂದರ ಶೀರ್ಷಿಕೆಯ ಪುಸ್ತಕವಾಗಿ ಓದುಗರ ಮುಂದಿದೆ.

ಹಾಗಾದರೆ ಈ ಪುಸ್ತಕದ ಒಳಗೇನಿದೆ? ನೋಡೋಣವೇ?…

  • ಕೊಳಗೇರಿಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಬಡ ಹುಡುಗಿ ಕಲ್ಪನಾ ಎಂಬಾಕೆ ಈಗ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಬಗ್ಗೆಯೊಂದು ಕಥೆಯೇ ಇದೆ.
  • ಅನಾಥಾಶ್ರಮದಲ್ಲಿ ಬೆಳೆದ ಜ್ಯೋತಿ ರೆಡ್ಡಿ ಅಪಾರ ಕಷ್ಟ ಅನುಭವಿಸಿ ಅಮೆರಿಕಾದಲ್ಲಿ ಸಾಫ್ಟ್ ವೇರ್ ಕಂಪನಿಯನ್ನು ಆರಂಭಿಸಿದ್ದು ಹೇಗೆ?…
  • ರಾಷ್ಟೀಯ ವಾಲಿಬಾಲ್ ತಂಡದಲ್ಲಿದ್ದ ಅರುಣಿಮಾ ಸಿನ್ಹಾ ರೈಲಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳರ ಧಾಳಿಗೊಳಗಾಗಿ ದುರ್ವಿಧಿಯಿಂದ ಎಡಗಾಲು ಕಳೆದುಕೊಂಡರು . ಆದರೂ ಕೃತಕ ಕಾಲಿನಿಂದಲೇ ಎವರೆಸ್ಟ್ ಶಿಖರ ಏರಿ ಜಗತ್ತಿನ ಗಮನ ಸೆಳೆದ ಧೈರ್ಯಶಾಲಿ ಈಕೆ.
  • ೨೦೦೯ ರಲ್ಲಿ ಭಾರತ ಸುಂದರಿ ಆಗಿದ್ದ ಪೂಜಾ ಛೋಪ್ರಾ ಅವರ ತಾಯಿ ನೀರಾ ಛೋಪ್ರಾರದು ಒಂಟಿ ತಾಯಿಯಾಗಿ ಸವಾಲಿನ ಜೀವನವಾಗಿತ್ತು. ಆದರೂ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಹೇಗೆ ಉನ್ನತ ಮಟ್ಟಕ್ಕೆ ಬೆಳೆಸಿದರು ಎನ್ನುವುದನ್ನು ಲೇಖಕಿ ಹೃದಯ ಸ್ಪರ್ಶಿಯಾಗಿ ಬರೆದಿದ್ದಾರೆ.
  • ಬದುಕು ಹಲವರಿಗೆ ಊಹಿಸಲೂ ಅಸಾಧ್ಯವಾದ ಆಘಾತಗಳನ್ನು ನೀಡುತ್ತದೆ. ದೆಹಲಿಯ ಚೆಲುವೆ ಲಕ್ಷ್ಮಿ ಅಗರ್ವಾಲ್ ತನ್ನ ೧೬ ನೇ ವಯಸ್ಸಿನಲ್ಲಿ ಕಾಮುಕ ನೊಬ್ಬನ ದ್ವೇಷಕ್ಕೆ ಸಿಕ್ಕಿ ಆತನಿಂದ ಆಸಿಡ್ ಧಾಳಿ ಗೊಳಗಾಗಿದ್ದಳು. ಬೆಂಕಿಯಲ್ಲಿ ಬೆಂದು ನೋವು ತಿಂದು ವಿರೂಪಗೊಂಡ ಮುಖದೊಂದಿಗೆ ಬದುಕುಳಿದಳು. ಅವಳ ಹೋರಾಟದ ಬದುಕಿನ ಕಥೆಯೇ ಇಲ್ಲಿದೆ.
  • ತಮ್ಮ ೩೬ ನೆಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ೧೦೦ ಕ್ಕೂ ಹೆಚ್ಚು ಪದಕ ಪಡೆದಿರುವ ಕ್ರೀಡಾಪಟು ದೀಪಾ ಮಲಿಕ್. ದೇಹದ ಕೆಳಭಾಗ ಸಂಪೂರ್ಣ ನಿಷ್ಕ್ರಿಯವಾದರೂ, ಈಜು ಮತ್ತು ಹಿಮಾಲಯದಲ್ಲಿ ಬೈಕ್ ಓಡಿಸಿ ದಾಖಲೆ ಬರೆದ ಸಾಹಸಿ ಮಹಿಳೆಯ ಯಶೋಗಾಥೆ ಇಲ್ಲಿದೆ.
  • ಮುಂಬೈನಲ್ಲಿ ವೈದ್ಯೆಯಾಗಿದ್ದು ಸಾಕಷ್ಟು ಹಣ -ಹೆಸರು ಮಾಡುವ ಅವಕಾಶವಿದ್ದರೂ, ಬಡ ರೋಗಿಗಳ ಸೇವೆಗಾಗಿ ತಮ್ಮ ಗ್ರಾಮದಲ್ಲಿ ನೆಲೆನಿಂತ ಡಾಕ್ಟರ್ ಕುಸುಮಾ ಸೊರಬ. ಕವಿಯತ್ರಿಯೂ ಆಗಿದ್ದ ಇವರದ್ದು ಪರಿಸರ ಹೋರಾಟದಲ್ಲೂ ಅಚ್ಚಳಿಯದ ಹೆಸರು. ‘ನಾಡ ಸೇವೆಗೆ ಸ್ನೇಹ ಕುಸುಮ’ ಎನ್ನುವ ಲೇಖನದ ಮೂಲಕ ಲೇಖಕಿ ಅವರನ್ನು ನೆನೆಸಿದ್ದಾರೆ.
  • ಸಮಸ್ಯೆಗಳಿಂದ ಬಳಲುತ್ತಿರುವ ವಿಶೇಷ ಮಕ್ಕಳಿಗಾಗಿ ೩೦ ವರ್ಷಗಳಿಂದ ಬೆಂಗಳೂರಿನ ಬಸವನ ಗುಡಿಯಲ್ಲಿ ‘ಬಾಂಧವ್ಯ ಶಾಲೆ ‘ನಡೆಸುತ್ತಿರುವ ಶಿಕ್ಷಣ ತಜ್ಞೆ ಶುಭದಾ. ಬರಹಗಾರ್ತಿಯೂ ಆಗಿರುವ ಇವರ ಬಗ್ಗೆಯೊಂದು ಲೇಖನವಿದೆ.
  • ಬದುಕೆಂದರೆ ಬೇವು- ಬೆಲ್ಲ. ಎಲ್ಲರಿಗೂ ಪ್ರೀತಿ ಹಂಚುತ್ತಾ ,ನೋವು ಮೆಟ್ಟಿ ಬದುಕಿದಾಗ ಖುಶಿಯಾಗಿ ಇರಲು ಸಾಧ್ಯ ಎನ್ನುತ್ತಾ ದಶಕಗಳ ಕಾಲ ಬೆಂಗಳೂರಲ್ಲಿ ‘ಅಜ್ಜಿಮನೆ ಎಂಬ ಪುಟ್ಟ ಮಕ್ಕಳಿಗಾಗಿ ಡೇ ಕೇರ್ ಸೆಂಟರ್ ನಡೆಸಿದ ವಿಜಯಾ ಪ್ರಭು ಅವರ ಜೀವನದ ಚಿತ್ರಣವಿದೆ.
  • ಕಿದ್ವಾಯಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದು ಕುಡಿತದ ವ್ಯಸನಿಗಳನ್ನು ಸರಿದಾರಿಗೆ ತರಲು ಶ್ರಮಿಸುತ್ತಿರುವ ಯಶೋಧಾ ನಾಗರಾಜ್.

ಹೀಗೆ ಇನ್ನಷ್ಟು ಸಾಧಕಿ ಮಹಿಳೆಯರ ಸಾಧನೆಗಳು ಇಲ್ಲಿವೆ. ಇವೆಲ್ಲವೂ ಬದುಕು ಬದಲಿಸುವ ಬರಹಗಳು ಎಂದರೆ ಉತ್ಪ್ರೇಕ್ಷೆಯಲ್ಲ. ಸಣ್ಣ ಪುಟ್ಟ ತೊಂದರೆಗಳು ಬಂದಾಗ ನಾವು ಸಾಕಪ್ಪಾ ಈ ಜೀವನ ಎಂದು ಹತಾಶರಾಗುತ್ತೇವೆ. ಆದರೆ ಇಲ್ಲಿನ ಮಹಾನ್ ಸಾಧಕಿಯರ ಬಗ್ಗೆ ಓದಿದಾಗ ಅಚ್ಚರಿಯೂ ಹೆಮ್ಮೆಯೂ ಏಕಕಾಲಕ್ಕೆ ಮೂಡುತ್ತದೆ.

ಅಂತಹ ಮಹಿಳೆಯರ ಬಗ್ಗೆ ಕಲೆ ಹಾಕಿ ಫೋಟೋಗಳ ಸಮೇತ ಮಾಲತಿ ಭಟ್ ಅವರು ಬರೆದ ರೀತಿ ನಿಜಕ್ಕೂ ಅಂತಃಕರಣವನ್ನು ಕಲಕಿ ಆಪ್ತತೆಯನ್ನು ಹುಟ್ಟಿಸು ವಂತಿದೆ. ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಇಂತಹ ಕೃತಿಗಳು ನಮ್ಮನ್ನು ಧನಾತ್ಮಕ ಚಿಂತನೆಯೆಡೆಗೆ ಕೊಂಡೊಯ್ಯುತ್ತದೆ. ಈ ಕೃತಿಯನ್ನು ನೀವೂ ಓದಿ..

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW