ಕಳೆದು ಹೋದ ವೃದ್ಧನ ಕತೆ : ವನವಾಸ

ಪ್ರಸ್ತುತ ದಿನಗಳಲ್ಲಿ ಜನರಿಗೆ ಬೇಕಿರುವುದು ದೊಡ್ಡ ಬಜೆಟ್ ಸಿನಿಮಾಗಳಲ್ಲ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳು. ಅದನ್ನು ನೀಡಲು ನಿರ್ದೇಶಕರು ಮನಸ್ಸು ಮಾಡಬೇಕಷ್ಟೆ. ‘ವನವಾಸ’ ಸಿನಿಮಾ ಸರಳವಾಗಿದ್ದು, ಭಾವನೆಗೆ ಹೆಚ್ಚು ಒತ್ತುಕೊಟ್ಟು ಮಾಡಿದಂತಹ ಸಿನಿಮಾ.

ಸಿನಿಮಾ : ವನವಾಸ
ಕತೆ – ನಿರ್ದೇಶನ : ಅನಿಲ ಶರ್ಮಾ
ತಾರಾಗಣ: ನಾನಾ ಪಾಟೇಕರ್, ಖುಷ್ಬೂ, ಉತ್ಕರ್ಷ ಶರ್ಮಾ, ಸಿಮ್ರಾಟ್ಟ್ ಕೌರ್ ರಾಂಧವಾ,  ರಾಜಪಾಲ್ ಯಾದವ್, ಪಾರಿತೋಷ್ ತ್ರಿಪಾಠಿ, ರಾಜೇಶ್ ಶರ್ಮಾ ಸೇರಿದಂತೆ ತಾರಾಬಳಗವಿದೆ. 

‘ವನವಾಸ’ ಸಿನಿಮಾ ನನ್ನನ್ನು ಸಿಕ್ಕಾಪಟ್ಟೆ ಅಳಿಸಿ ಬಿಡ್ತು ಕಣ್ರೀ. ಈ ಸಿನಿಮಾ ನೋಡಿದ್ಮೇಲೆ ನಿಮ್ಮನೆಯಲ್ಲಿನ ಹಿರಿಯರ ನೆನಪು ಕಾಡದೆ ಬಿಡುವುದಿಲ್ಲ .ವಯಸ್ಸಾದ್ಮೇಲೆ ಬದ್ಕೋದು ಭಯಂಕರ ಕಷ್ಟ ಅನಿಸಿಬಿಡ್ತು. ಆ ಪಾಟಿ ಈ ಸಿನಿಮಾ ನನ್ನ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿತು. ಅಂತದ್ದು ಈ ಸಿನಿಮಾದಲ್ಲಿ ಏನಿದೆ?… ಅಂತ ನೀವು ಕೇಳಬಹುದು. ಅಂತದ್ದು ಏನಿದೆ ಅಂದ್ರೆ… ಮೊದಲನೆಯದಾಗಿ ನನ್ನ ನೆಚ್ಚಿನ ನಟ ನಾನಾ ಪಾಟೇಕರ್ ಇದ್ದಾರೆ. ಅವರು ಇದ್ಮೇಲೆ ಡೈಲಾಗ್ ಹೇಗಿರುತ್ತೆ ನಿಮಗೆ ಗೊತ್ತು, ಬುಲೆಟ್ ಹೊಡೆದಷ್ಟೇ ಕಟುವಾಗಿ ಇರುತ್ತೆ. ಆದ್ರೆ ಈ ಸಿನಿಮಾದಲ್ಲಿ ನಾನು ನಿರೀಕ್ಷಿಸಿದಷ್ಟು ನನ್ನ ನೆಚ್ಚಿನ ಹೀರೋ ನಾನಾ ಪಾಟೇಕರ್ ಅವರಿಗೆ ಡೈಲಾಗ್ ಗೆ ಅವಕಾಶವೇ ಕೊಟ್ಟಿಲ್ಲ. ಆದ್ರೆ ಅವರ ಅಭಿನಯ ಮಾತ್ರ ರಾತ್ರಿ ನಿದ್ದೆ ಬಾರದ ಹಾಗೆ ಕಾಡಿ ಬಿಡ್ತು. ಇನ್ನೂ ನಾನಾ ಪಾಟೇಕರ್ ಜೊತೆಯಾಗಿ ಖ್ಯಾತ ನಾಟಿ ಖುಷ್ಬೂ ಅವರು ಇದ್ದಾರೆ. ಇವರ ಪಾತ್ರದಲ್ಲಿ ಜೀವವೇ ಇಲ್ಲಾ. ಬಂದು ಹೋಗುವ ಪಾತ್ರ. ಹಾಗಾಗಿ ಖುಷ್ಬೂ ಅವರ ಪಾತ್ರದ ಬಗ್ಗೆ ಹೇಳುವಂತದ್ದು ಏನು ಇಲ್ಲಾ.

ಇನ್ನೂ ಕತೆಗೆ ಬರ್ತೀನಿ. ಇದು ವೃದ್ಧ ದಂಪತಿಗಳ ಕತೆ. ಜೋಡಿ ಹಕ್ಕಿಯಲ್ಲಿ ಒಂದು ಬೇಗ ಹೋದ್ರೆ, ಕೆಟ್ಟ ಮಕ್ಕಳ ಕೈಯಲ್ಲಿ ಸಿಕ್ಕಿ ಒಂದಾಡೋದು ಇದೆಯಲ್ಲ ಯಾವ ವನವಾಸಕ್ಕೂ ಕಮ್ಮಿಯಿಲ್ಲ ಎನ್ನುವುದು ಈ ಸಿನಿಮಾದಲ್ಲಿ ತೋರಿಸಿದ್ದಾರೆ.

ದೀಪಕ ತ್ಯಾಗಿ ಎನ್ನುವ ವೃದ್ಧನ ಕತೆಯಿದು. ತಾನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಹೆಂಡತಿ ತನ್ನನ್ನು ಬಿಟ್ಟು ಹೋದಾಗ ದೀಪಕ ತ್ಯಾಗಿ ಒಂಟಿಯಾಗಿ ರೋಧಿಸುತ್ತಾನೆ, ಬಾಳ ಸಂಗಾತಿಗಾಗಿ ಚಡಪಡಿಸುತ್ತಾನೆ. ಎಷ್ಟೇ ಅತ್ತು ಕರೆದರೂ ಹೋದ ಜೀವ ಮತ್ತೆ ಬರೋಲ್ಲ ಅಲ್ವಾ. ಹೆಂಡತಿಗಾಗಿ ಪ್ರೀತಿಯಿಂದ ಕಟ್ಟಿದ ಮನೆ ‘ವಿಮಲಾ ಸದನ’ ದಲ್ಲಿ ತನ್ನ ಹಳೆಯ ನೆನಪುಗಳೊಂದಿಗೆ ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಬಾಳುತ್ತಿರುತ್ತಾನೆ.

ಒಂಟಿತನದಿಂದ ಆಗಾಗ ವಾಸ್ತವ ಮರೆತು ಹಳೆಯ ನೆನಪುಗಳತ್ತ ಜಾರುವ ಕಾಯಿಲೆ ಬೇರೆ ಅವನನ್ನು ಕಾಡುತ್ತಿರುತ್ತದೆ. ಈ ಖಾಯಿಲೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮಕ್ಕಳು ತಂದೆಯನ್ನು ಕಾಶಿಯ ಜನಬೀಡು ಪ್ರದೇಶದಲ್ಲಿ ತಂದು ಬಿಟ್ಟು ಹೋಗುತ್ತಾರೆ. ಹುಚ್ಚ ವೃದ್ಧ ದೀಪಕ ತ್ಯಾಗಿ ಮಕ್ಕಳ ಮೇಲಿನ ಕುರುಡು ಪ್ರೀತಿಯಿಂದ ಇಡೀ ಕಾಶಿಯ ತುಂಬಾ ಮಕ್ಕಳಿಗಾಗಿ ಹುಡುಕುತ್ತಾನೆ. ಮಕ್ಕಳು ತಂದೆಯನ್ನು ನೋಡಿಕೊಳ್ಳಲಾಗದೆ ಅವನ ಆಸ್ತಿ, ಹಣಕ್ಕಾಗಿ ಈ ಕೃತ್ಯ ಮಾಡಿದ್ದು ನೋಡುವಾಗ ನನ್ನ ಗಂಟಲು ಉಬ್ಬಿತು, ಕಣ್ಣುಗಳು ತುಂಬಿದವು.

‘ನನ್ನ ಮಕ್ಕಳು ಕಳೆದು ಹೋಗಿದ್ದಾರೆ… ದಯವಿಟ್ಟು ಹುಡುಕಿ ಕೊಡಿ’… ಎಂದು ಕಾಶಿಯ ತುಂಬಾ ಹುಚ್ಚನಂತೆ ಅಲೆಯುತ್ತಾನೆ. ಪಾಪಿ ಮಕ್ಕಳು ತಂದೆಯ ಬಗಲಿನಲ್ಲಿದ್ದ ಬ್ಯಾಗ್ ನಲ್ಲಿ ಒಂದಷ್ಟು ದುಡ್ಡನ್ನಿಟ್ಟು ಕೈ ತೊಳೆದುಕೊಂಡಿರುತ್ತಾರೆ. ಆ ಬ್ಯಾಗ್ ಕದಿಯಲು ಬರುವ ಕಳ್ಳನೇ ವೀರು ಎನ್ನುವ ಯುವಕ. ಮುಂದೆ ಈ ಯುವಕನೇ ದೀಪಕ ತ್ಯಾಗಿ ಜೀವನದಲ್ಲಿ ನಂದಾದೀಪವಾಗಿ ಬೆಳಗಲು ಬರುತ್ತಾನೆ. ಅದು ಕೂಡಾ ಜಾಸ್ತಿ ದಿನ ಉಳಿಯುವುದಿಲ್ಲ. ರಕ್ತ ಹಂಚಿಕೊಂಡ ತನ್ನ ಮಕ್ಕಳ ಬಣ್ಣ ದೀಪಕ ತ್ಯಾಗಿ ಕಣ್ಣಾರೆ ನೋಡಿದ ಬಳಿಕ ತಾನು ಬದುಕಿರುವಾಗಲೇ ತನಗೆ ಪಿಂಡ ಇಟ್ಟುಕೊಳ್ಳುತ್ತಾನೆ. ಆ ದೃಶ್ಯವಂತೂ ಅಬ್ಬಾ… ನನ್ನ ಹೃದಯದಲ್ಲಿ ಅಷ್ಟೋತ್ತಿನಿಂದ ಅಡುಗಿದ ನೋವು, ಸಂಕಟಗಳ ಕಟ್ಟೆ ಒಡೆದು ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ಅದರಲ್ಲಿ ನಾನಾ ಪಾಟೇಕರ್ ಅವರ ಅಭಿನಯ ಬೇರೆ ಕೇಳಬೇಕಾ…

ದೀಪಕ ತ್ಯಾಗಿ ಕೊನೆಯಲ್ಲಿ  ಸೊಸೆಯಂದಿರ ಬಳಿ ಬಂದು ‘ನಿಮ್ಮ ಸ್ವಂತ ಅಪ್ಪನನ್ನು ಹೀಗೆ  ನೋಡ್ಕೊಳ್ತಿದ್ರಾ?… ತನ್ನ ಮಕ್ಕಳ ಹತ್ರ ಬಂದು ‘ಮಕ್ಕಳಾ… ನೀನು ಮಾಡಿದ್ದು ತಪ್ಪಲ್ಲ, ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನನ್ನ ಮನೆ, ಆಸ್ತಿ ಮಾರಿದ್ದೀರಿ. ಆದರೆ ನಾನು ಎಷ್ಟು ದಿನ ಬದುಕುತ್ತಿದ್ದೆ. ನಾನು ಸತ್ತಮೇಲೆ ಎಲ್ಲವೂ ನಿಮ್ಮದೇ ಆಗುತ್ತಿತ್ತು ಅಲ್ಲವೇ?’…ಮೊಮ್ಮಕ್ಕಳ ಹತ್ತಿರ ಬಂದು ‘ನಿಮ್ಮಪ್ಪ- ಅಮ್ಮ ಮಾಡಿದ್ದು ನಿಮ್ಮ ಮೇಲಿನ ಪ್ರೀತಿಗಾಗಿ ಅವರನ್ನು ತಪ್ಪಾಗಿ ತಿಳಿಬಿಡಿ, ಅವರಿಗೆ ವಯಸ್ಸಾದ ಮೇಲೆ ಚನ್ನಾಗಿ ನೋಡಿಕೊಳ್ಳಿ’… ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಈ ಸಿನಿಮಾ ನನ್ನನ್ನು ತುಂಬಾ ಭಾವುಕಳನ್ನಾಗಿ ಮಾಡಿತು.

‘ಗದರ್ ೨’ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಂತಹ ನಿರ್ದೇಶಕ ಸುನಿಲ್ ಶರ್ಮಾ ಈ ಸಿನಿಮಾಕ್ಕೆ ಆಕ್ಷನ್ – ಕಟ್ ಹೇಳಿದ್ದಾರೆ. ಕತೆ- ನಿರ್ದೇಶನ ತುಂಬಾ ಚನ್ನಾಗಿದೆ. ಆದರೆ ನಾನಾ ಪಾಟೇಕರ್ ಡೈಲಾಗಿನ ಅಭಿಮಾನಿಯಾಗಿರುವ ನಾನು, ಅವರ ಡೈಲಾಗ್ ಗಾಗಿ ಬಾಯಿ ತೆರೆದು ತುಂಬಾ ಹೊತ್ತು ಕಾದು ಕೂತಿದ್ದೆ, ಆಗೊಮ್ಮೆ- ಈಗೊಮ್ಮೆ ಡೈಲಾಗ್ ಕೇಳಿದ್ದು ಬಿಟ್ಟರೇ ನಾನಾ ಪಾಟೇಕರ್ ಡೈಲಾಗ್ ಅಷ್ಟೊಂದು ಇಲ್ಲಾ. ಅದೊಂದು ಬೇಸರವಾಯ್ತು.

‘ವನವಾಸ’ ದ ಕತೆ ಕೇವಲ ಸಿನಿಮಾವಾಗಿದ್ದರೆ ಚನ್ನಾಗಿತ್ತು, ಆದರೆ ಇದು ವಾಸ್ತವದಲ್ಲಿ ನಡೆಯುತ್ತಿರುವ ಕಟುಸತ್ಯ. ಮಚ್ಚು, ಕೊಡಲಿ ಇಲ್ಲದೆ ಭಾವನಾತ್ಮಕವಾಗಿ ನನ್ನನ್ನು ಕೊಂದು ಹಾಕಿದ ಸಿನಿಮಾವಿದು. ಇಂದಿನ ದಿನಗಳಲ್ಲಿ ಸಂಬಂಧಗಳ ನಡುವೆ ಭಾವನೆಗಳು ಸತ್ತು ಹೋಗಿದೆ. ಈ ರೀತಿಯ ಕೌಟುಂಬಿಕ ಕೊಂಡಿಗಳಿರುವಂತಹ ಸಿನಿಮಾಗಳು ಸಮಾಜಕ್ಕೆ ಬೇಕಿದೆ. ದೊಡ್ಡ ಬಜೆಟ್ ಸಿನಿಮಾಗಳು ಭಾವನೆಗಳನ್ನು ಹುಟ್ಟು ಹಾಕುವುದಿಲ್ಲ, ಬದಲಾಗಿ ದಾರಿ ತಪ್ಪಿಸುತ್ತದೆ, ಹಾಗಾಗಿ ಸಿನಿಮಾ ನಿರ್ದೇಶಕರು ಭಾವನೆಗಳನ್ನು ಹುಟ್ಟು ಹಾಕುವಂತಹ ಸಿನಿಮಾಗಳತ್ತ ಮನಸ್ಸು ಮಾಡಲಿ. ಸಮಾಜಕ್ಕೆ ಸಂದೇಶವಿರುವಂತಹ ಸಿನಿಮಾಗಳು ಹೆಚ್ಚೆಚ್ಚು ಬರಲಿ ಎಂದು ಆಶೀಸುತ್ತೇನೆ.

ಅಂದಹಾಗೆ ಈ ಸಿನಿಮಾ zee cinema ದಲ್ಲಿದೆ. ನಿಮ್ಮನ್ನು ನೀವು ಭಾವುಕ ಜೀವಿಗಳಾ? ಎಂದು ಈ ಸಿನಿಮಾ ನೋಡಿ ಪರೀಕ್ಷಿಸಿಕೊಳ್ಳಿ…


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW