ಕನ್ನಡದ ಹಿರಿಯ ನಿರ್ದೇಶಕ ಎಂ ಟಿ ರಘು ನಿಧನ

ರೆಬೆಲ್ ಸ್ಟಾರ್ ಅಂಬರೀಶ್ ಗೆ ೨೭ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮಹಾನ್ ನಿರ್ದೇಶಕ ಎ.ಟಿ.ರಘು ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಕೊನೆಯ ದಿನಗಳಲ್ಲಿ ಕುರಿತು ಖ್ಯಾತ ಪತ್ರಕರ್ತ ಗಣೇಶ್ ಕಾಸರಗೊಂಡು ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಎರಡೂ ಕಿಡ್ನಿ ಫೇಲ್ಯೂರ್ ಆಗಿ, ಬಿಪಿ-ಶುಗರ್ ಏರಿಸಿಕೊಂಡು ರಾಜಾಜಿನಗರದ ಒಂದು ಪುಟ್ಟ ಗುಡಿಸಿಲಿನಂಥಾ ಮನೆಯಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದಾಗ ನನಗೆ ಎ.ಟಿ.ರಘು ಅವರ ಸಂಪರ್ಕವಾಯಿತು. ವಾರಕ್ಕೆ ಮೂರು ಡಯಾಲಿಸಿಸ್ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಇಂಥಾ ದಿನಗಳಲ್ಲಿ ಭೇಟಿಯಾದ ನಾನು ಅವರ ದೈನೇಸಿ ಬದುಕಿನ ಬಗ್ಗೆ ಒಂದು ಪುಟ್ಟ ಲೇಖನ ಬರೆದೆ…

ಫೇಸ್ ಬುಕ್’ನಲ್ಲಿ ಈ ಲೇಖನವನ್ನು ಓದಿದ ವಿಶುಕುಮಾರ್ ತಕ್ಷಣ ಸ್ಪಂದಿಸಿದರು. ಆಗ ಇವರು ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದರು. ನನ್ನ ಈ ಲೇಖನವನ್ನು ಓದಿ ನನಗೆ ಫೋನ್ ಮಾಡಿ ರಘು ಅವರನ್ನು ಭೇಟಿಯಾಗಬೇಕೆಂಬ ಬೇಡಿಕೆಯನ್ನಿಟ್ಟರು. ಪುಣ್ಯ ಆಸ್ಪತ್ರೆಯ ಎದುರಿನ ಯಾವುದೋ ರಸ್ತೆಯಲ್ಲಿದ್ದ ಆ ಗುಡಿಸಲಿಗೆ ಬಂದೇ ಬಿಟ್ಟರು! ರಘು ಅವರ ಎಲ್ಲಾ ವಿವರಗಳನ್ನು ಸ್ವತಃ ನೋಟ್ ಮಾಡಿಕೊಂಡು, ಒಂದು ವಿಡಿಯೋ ಶೂಟ್ ಮಾಡಿ ಹೊರಟೆ ಬಿಟ್ಟರು ವಿಶುಕುಮಾರ್. ಏನಾಯ್ತು ಎಂದು ಯೋಚಿಸುವಷ್ಟರಲ್ಲೇ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿಗಳ ಅಮೌಂಟ್’ನ ಚೆಕ್ ರಘು ಕೈ ಸೇರಿತು!

ಹೀಗೂ ಉಂಟೇ ಎಂದು ಬೆರಗುಗೊಳ್ಳುವ ಸರದಿ ನನ್ನದಾಯಿತು. ಇಂಥಾದ್ದೊಂದು ವ್ಯವಸ್ಥೆಗಾಗಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಯುವ ದಿನಗಳಲ್ಲಿ ಹೀಗೆ ಏಕಾಏಕಿ 5 ಲಕ್ಷದ ದೊಡ್ಡ ಅಮೌಂಟ್ ಇಷ್ಟು ಬೇಗ ಸರ್ಕಾರದಿಂದ ರಿಲೀಸ್ ಆಗುವುದೆಂದರೆ ಅದು ಈ ಕಾಲದಲ್ಲಿ ಪವಾಡವೇ ಸರಿ! ಇಂಥಾ ಪವಾಡ ಪುರುಷನ ಬಗ್ಗೆ ನನಗೆ ಇನ್ನಿಲ್ಲದ ಗೌರವ, ಅಕ್ಕರೆ. ಸರ್ಕಾರದಿಂದ ಒಂದೆರಡು ಸಾವಿರ ರೂಪಾಯಿಗಳಿಗೂ ಕಮಿಷನ್’ಗೆ ಬೇಡಿಕೆ ಇಡುವ ಸರ್ಕಾರಿ ಅಧಿಕಾರಿಗಳ ನಡುವೆ ಕಂಡ ಅದ್ಭುತ ಅಪರಂಜಿ ಈ ವಿಶುಕುಮಾರ್…

ಈ ಐದು ಲಕ್ಷ ಸ್ಯಾಂಕ್ಷನ್ ಆಗುತ್ತಲೇ ನಾನು ಚಿತ್ರನಟ ಅರ್ಜುನ್ ಸರ್ಜಾರನ್ನು ಸಂಪರ್ಕಿಸಿ, ರಘು ಅವರ ದಯನೀಯ ಆರೋಗ್ಯ ಸ್ಥಿತಿಯನ್ನು ವಿವರಿಸಿ ಹೇಳಿದೆ. ಕ್ಷಣಮಾತ್ರವೂ ವೇಸ್ಟ್ ಮಾಡದೇ ಅರ್ಜುನ್ ತಕ್ಷಣವೇ 50,000 ರೂಪಾಯಿಗಳನ್ನು ರಘು ಅಕೌಂಟಿಗೆ ಹಾಕಿದರು. ಬೇಕಿದ್ದರೆ ಇನ್ನಷ್ಟು ಕೊಡುವುದಾಗಿ ನನ್ಗೆ ಪ್ರಾಮಿಸ್ ಮಾಡಿದರು. ರಘು ಅವರು ಅರ್ಜುನ್ ಗುರುಗಳು. ಆ ಕಾಲದಲ್ಲಿ ಅರ್ಜುನ್’ಗಾಗಿಯೇ ‘ಆಶಾ’ ಎಂಬ ಸಿನಿಮಾವನ್ನು ಸಿದ್ಧಪಡಿಸಿದ್ದರು ರಘು. ಆ ಸಿನಿಮಾದಲ್ಲಿ ಬಂದ ಲಾಭದಿಂದ ಅದೇ ರಾಜಾಜಿನಗರದಲ್ಲೊಂದು ಬಂಗಲೆ ಕಟ್ಟಿ ಅದಕ್ಕೆ ‘ಆಶಾ’ ಎಂದೇ ಹೆಸರಿಟ್ಟಿದ್ದರು ರಘು! ಆದರೆ ಕೆಲವೊಂದು ಸ್ವಯಂಕೃತಾಪರಾಧದಿಂದಾಗಿ ಆ ಮನೆಯನ್ನು ಮಾರಬೇಕಾಯಿತೆನ್ನುವುದು ಬೇರೆ ವಿಚಾರ…

ಹೀಗೆ ಸಕಾಲಿಕವಾದ ಆರ್ಥಿಕ ಸಹಾಯದಿಂದಾಗಿ ರಘು ಅವರು ಚೇತರಿಸಿಕೊಂಡರು. ನಂತರ ಆ ಗುಡಿಸಲಿನಿಂದ ರಘು ಅವರನ್ನು ತಮ್ಮ ಮನೆಗೆ ಶಿಫ್ಟ್ ಮಾಡಿಕೊಂಡರು ಹೆಬ್ಬಾಳದಲ್ಲೆಲ್ಲೋ ಇರುವ ಮಗಳು ಎಂಬ ಸುದ್ದಿ ಬಂತು. ಮುಂದೆ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ನಿನ್ನೆ ಅದ್ಯಾರೋ ಫೇಸ್ ಬುಕ್’ನಲ್ಲಿ ಅವರ ಸಾವಿನ ಸುದ್ದಿಯನ್ನು ಪೋಸ್ಟ್ ಮಾಡಿದ್ದನ್ನು ನೋಡಿ ಕರುಳು ಕಿವಿಚಿದಂತಾಯ್ತು. ಯಾರೇ ಭೇಟಿಯಾದರೂ ನನ್ನ ಬಗ್ಗೆ ಮತ್ತು ನಾನು ಮಾಡಿರುವ ಸಹಾಯದ ಬಗ್ಗೆ ಪದೇ ಪದೇ ಹೇಳುತ್ತಿದ್ದರಂತೆ ರಘು ಅವರು. ಇದು ಯಾವ ದೊಡ್ಡ ವಿಷಯ ಅಲ್ವೇ? ಇಷ್ಟಕ್ಕೂ ಇದರಲ್ಲಿ ನನ್ನದು ಪೋಸ್ಟ್ ಮ್ಯಾನ್ ಪಾತ್ರ. ಆದರೂ ಸಣ್ಣದೊಂದು ಸಹಾಯಕ್ಕೆ ನಾನು ಪ್ರೇರಣೆಯಾದದ್ದು ಮಾತ್ರ ನನ್ನ ತೃಪ್ತಿಗೆ ಕಾರಣ…


  • ಗಣೇಶ್ ಕಾಸರಗೊಂಡು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading