‘ಕೆಂಗುಲಾಬಿ ದೂರೊಂದನು ತಂದಿದೆ ಬಳಿಗೆ’ …ಕವಿಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಸುಂದರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಗುಳಿಕೆನ್ನೆಯ ಸಿಹಿ ಖೆಡ್ಡದಲ್ಲಿ
ಜಾರಿಬಿದ್ದೆ ನಾನು
ನಗಬೇಡವೆ ಮರಿ ರಾಕ್ಷಸಿ
ಒಳಗೊಳಗೇ ನೀನು
ಬಣ್ಣ ಕದ್ದು ಬಳಿದೆಯೆಂದು
ನಿನ್ನಯ ತುಟಿಗೆ
ಕೆಂಗುಲಾಬಿ ದೂರೊಂದನು
ತಂದಿದೆ ಬಳಿಗೆ
ತಂಗಾಳಿಗೂ ಮುನಿಸಾಗಿದೆ
ಮುಂಗುರುಳಿನ ಮೇಲೆ
ಬಿರುಬೇಸಿಗೆಯಂತಾಗಿದೆ
ಶಿಶಿರದ ಈ ವೇಳೆ
ನಕ್ಷತ್ರದ ಪಲ್ಲಕ್ಕಿಯ
ನಡು ನೆತ್ತಿಯ ದೀಪ
ಹುಡುಕುತಿದೆ ಬೆಳಕಿಗಾಗಿ
ಕರುಣೆಸು ಪಾಪ
ಕೇಳುವವರು ಇಲ್ಲವೇಕೆ
ಹೂಶಯ್ಯೆಯ ನೋವ?
ಸುರಲೋಕದ ಮಧುಮಂಚಕೂ
ಕಾಡಿದೆ ವಿರಹ
ಶೃಂಗಾರದ ರಸ ನಿಮಿಷಕೆ
ಕಾದಿದೆ ಹೃದಯ
ಆವರಿಸು ಆಕ್ರಮಿಸು
ತೋರದೆ ದಯೆಯ
- ಸುಮತಿ ಕೃಷ್ಣಮೂರ್ತಿ
