‘ಸಾಯುವ ಮುನ್ನ’ ಕವನ – ಮಾರುತಿ ಗೋಪಿಕುಂಟೆ

 

ಸಾಯುವ ಮುನ್ನ ಹೇಳಿಕೊಳ್ಳಬಹುದಿತ್ತು ತನ್ನ ದುಃಖ ಪ್ರವರ ಎಲ್ಲವನ್ನು…ಕವಿ ಮಾರುತಿ ಗೋಪಿಕುಂಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅಯ್ಯೋ ಸಾಯುವ ಮುನ್ನ
ಹೇಳಿಕೊಳ್ಳಬಹುದಿತ್ತು ತನ್ನ
ದುಃಖ ಪ್ರವರ ಎಲ್ಲವನ್ನು
ನಾವಾದರೂ ಕೇಳಿಸಿಕೊಳ್ಳುತ್ತಿದ್ದೆವಲ್ಲ
ಎಂದು ಹಲುಬುವವರೆ ಹೆಚ್ಚು
ಈ ಜನರಿಗೆ ಅದೊಂದು ಹುಚ್ಚು

ಒಂಟಿಯಿದ್ದಾಗಲೆಲ್ಲಾ
ಅವನೊಬ್ಬ ಪಿಶಾಚಿ ಎಂದರು
ಮಾತು ಬಾರದ ಮೂಕ ಎಂದರು
ತನ್ನಷ್ಟಕ್ಕೆ ತಾನು ತಿರುಗುವವ ಎಂದರು
ಯಾವುದೊ ರೋಗವಿದೆ ಎಂದೆ
ಹೀಯಾಳಿಕೆಯ ಊವಾಚ

ಯಾರೂ ಕರೆದು ಮಾತಾಡಿಸಲಿಲ್ಲ
ಸಾಂತ್ವನದ ನುಡಿ ನುಡಿದವರಿಲ್ಲ
ಬೇಸತ್ತ ಮನಸ್ಸಿಗೆ ಕೊಳ್ಳಿ ಇಟ್ಟವರೆ
ಹೆಚ್ಚು, ದಿನದ ಮೂರು ಹೊತ್ತು
ಸತ್ತ ಹೆಣದ ಮುಂದೆ ನಾಟಕದ ಮನೆ
ನೋಡದವರು ನೋಡಿದವರು ರಂಗದ
ಮೇಲೆ ಮಾತಿನ ಮೇಲೆ ಮಾತು
ಹೆಣದ ಮೇಲೆ ಬಿದ್ದು ಜೋತು

ಕೇಳಿಸಿ ಕೊಳ್ಳಲು ಅವನೆ ಇಲ್ಲ

ಅವನೊಬ್ಬ ಪುಣ್ಯಾತ್ಮ ಯಾರಿಗೂ
ತೊಂದರೆ ಕೊಟ್ಟವನಲ್ಲ
ತನ್ನಷ್ಟಕ್ಕೆ ತಾನು ಬದುಕಿದವ
ನೂರು ನೋವ ಎದೆಯಲ್ಲಿಟ್ಟುಕೊಂಡು
ತನಗೆ ತಾನೆ ಸುಟ್ಟುಕೊಂಡವ
ದೇವರಂಥ ಮನಸ್ಸಿನವ ಎಂದೆ
ಎಲ್ಲರ ಊವಾಚ

ಎಷ್ಟೊಂದು ಬಿರುದು ಬಾವಲಿ
ಸತ್ತ ಮೇಲೆ ಇವರದು
ಬರಿ ಮಾತಿನ ಖಯಾಲಿ

ಮಾತಿನ ಮಗ್ಗಲು ಮುಳ್ಳು
ಚುಚ್ಚದೆ ಬಿಡದು ಉಳಿದವರಲ್ಲು
ಮತ್ತದೆ ಮಾತು

ಸಾಯುವ ಮುನ್ನ
ಹೇಳಿಕೊಳ್ಳಬಹುದಿತ್ತು ತನ್ನ
ದುಃಖ ಪ್ರವರ ಎಲ್ಲವನ್ನು
ಇದಕೆ ಕೊನೆಇಲ್ಲ ಇನ್ನೂ…


  • ಮಾರುತಿ ಗೋಪಿಕುಂಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading