ಶಿಕ್ಷಕರಾದ ಜಯಮಾರುತಿ.ಟಿ.ಹೆಚ್ ಅವರ ಕವನವನ್ನು ತಪ್ಪದೆ ಮುಂದೆ ಓದಿ…
|ಶೃಂಗೇರಿಪುರ ವಾಸಿ ಶ್ರೀ ಶಾರದಾಂಬೆ
ಸುಗುಣಗಳಗಣಿತ ವೈಭವಿತೆ ಮಧುರಾತೀತೆ…|
ಬಣ್ಣಿಸಲೆನಿತು ಜನುಮವೇ ಮುಗಿದು
ಜನನಿ ಜಾಹ್ನವಿ ಮುನಿಗಣ ಪೂಜಿತೆ
|ಶಂಗೇರಿ ಪುರವಾಸಿ ಶ್ರೀ ಶಾರದಾಂಬೆ..|
ವಿದ್ಯಾದೇವತೆ ವೀಣಾವಾದಿತೆ ಸುಮಧುರವಾಣಿ
ನಾದನೀನಾದಂಗಳ ಸುಲಲಿತ ಸ್ವರಾದಿತೆ
ಸಾನ್ನಿಧ್ಯವೆಮಗೆ ಸಂಚಿತ ಸುಫಲದೈಸಿರಿ
ವಂದಿಸಿ ನಿಂತಿಹೆ ಕರಮುಗಿದನುದಿನ
|ಶೃಂಗೇರಿ ಪುರ ವಾಸಿ ಶ್ರೀ ಶಾರದಾಂಬೆ…|
ಕಮಲನಾಭನ ನಾಭಿಕಮಲದ ಬ್ರಹ್ಮತೇಜ
ಕಮಲಾಸುತನ ಕಾಮಿತ ಕೋಮಲೆ ಹಂಸಕುಲೇ
ಕಾವ್ಯಾಖಿಲನಿಧಿ ಕಲಾ ಕೌಶಲಾಧಿಪತೇ ವಾರೀಧಿಯೇ
ವೇದಾವೇದಿನಿ ಜ್ಞಾನಪ್ರದಾಯಿನಿ ಶಾರದೆಯೇ…
|ಶೃಂಗೇರಿ ಪುರವಾಸಿ ಶ್ರೀ ಶಾರದಾಂಬೆ..|
ಬೇಡುತ ನಿಂತಿಹೇ ಮಡಿಯದ ಜ್ಞಾನವನನುಗ್ರಹಿಸೆನಗೆ
ಪಾಡುವೆಯನುದಿನ ವಾಣಿಯ ಗಾನ ಬ್ರಹ್ಮೀಯಸ್ತುತಿಸಿ
ಒಲಿದರೆ ಹಂಸಿನಿ ಒಲುಮೆಯ ವೇದಿನಿ ಜ್ಞಾನದ ಬೆಳಗು
ಕತ್ತಲ ಸರಿದು ಬಿತ್ತಿದೆ ಕಾಂತಿ ಅಕ್ಕರೆಯಿಂದಲೇ ಅಕ್ಷರಿ ನಿಂದಳು..
|ಶೃಂಗೇರಿ ಪುರ ವಾಸಿ ಶ್ರೀ ಶಾರದಾಂಬೆ…|
ನಿತ್ಯ ನಿರಂತರೇ ನಿಶ್ಚಲೆ ಮತಿಯಲಿ ನೆಲೆಸಿದರೆ
ಚಂಚಲ ಮನವಿದು ಹಂಸಿನಿ ಬರದಿರೆ
ಆದಿ ಲಕ್ಷ್ಮೀ ಈಶ್ವರಿ ಈರ್ವರೂ ನೀನಿರದಿರುವರೇ…?
ಐಸಿರಿ ಬೇಡೇ ಐಭೋಗ ಕೇಳೇ ವಾಗ್ದೇವಿ ನೀನಿರೆ ಸಕಲವೂ ತಾನೇ…
|ಶೃಂಗೇರಿ ಪುರವಾಸಿ ಶ್ರೀ ಶಾರದಾಂಬೆ..
ಸುಗುಣಗಳಗಣಿತ ವೈಭವಿತೆ ಮಧುರಾತೀತೆ.. |
- ಜಯಮಾರುತಿ.ಟಿ.ಹೆಚ್ – ಶಿಕ್ಷಕರು, ಚಳ್ಳಕೆರೆ ತಾ.
