ಕನ್ನಡ ಜಾನಪದ ಗಾಯನ ಕ್ಷೇತ್ರದ ಅಪ್ಪಟ ದೇಶಿ ಪ್ರತಿಭೆಯಾದ ಡಾ.ಬಾನಂದೂರು ಕೆಂಪಯ್ಯ ಕಳೆದೊಂದು ತಿಂಗಳಿನಿಂದ ಪಿತ್ತಕೋಶದ ಗಂಭೀರ ಸಮಸ್ಯೆಯಿಂದ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾರೆ. ಅವರನ್ನು ಭೇಟಿ ಮಾಡಿದ ಸಾಹಿತ್ಯ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರಹದ ಮೂಲಕ ತಮ್ಮ ಭಾವನೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಹಲವಾರು ದುಬಾರಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಸೋತು ಕಳೆದೊಂದು ವಾರದಿಂದ ಬೆಂಗಳೂರಿನ ಕೋರಮಂಗಲ 4-ನೇ ಹಂತದಲ್ಲಿರುವ ‘ಸುಖಿನೋ ಫಿಜಿಯೋ ಥೆರಪಿ ಆಸ್ಪತ್ರೆ’ ಸೇರಿದ್ದಾರೆ. ಕಳೆದೊಂದು ತಿಂಗಳಿನಿಂದ ಅವರು ಆಸ್ಪತ್ರೆ ಸೇರಿರುವುದು ನನಗೆ ತಿಳಿದಿರಲಿಲ್ಲ.

ಆಗಾಗ್ಗೆ ಅವರೇ ನನಗಾಗಲೀ ಅಥವಾ ನನ್ನ ಹೆಂಡತಿ ರಮಾ ಶಾಕ್ಯ ಅವರಿಗಾಗಲೀ ಫೋನ್ ಮಾಡಿ ಗಂಟೆಯವರೆಗೆ ಮಾತಾಡಿದರೂ ನಮ್ಮ ಮಾತು ಮುಗಿಯುತ್ತಿರಲಿಲ್ಲ. ಮಾತಿನ ನಡುವೆ ಎರಡಾದರೂ ತತ್ವಗಳನ್ನು ಕಡ್ಡಾಯವಾಗಿ ಹಾಡುತ್ತಿದ್ದರು. ಇತ್ತೀಚೆಗೆ ಅವರಿಂದ ಫೋನ್ ಕರೆ ಬಂದಿರಲಿಲ್ಲ. ನಾನು ಕೂಡಾ ಫೋನ್ ಮಾಡದೆ ಸುಮ್ಮನಿದ್ದೆ. ಮೊನ್ನೆ ಭಾನುವಾರ ಅವರು ಆಸ್ಪತ್ರೆಯ ಹಾಸಿಗೆಯ ಮೇಲಿದ್ದುಕೊಂಡೇ ನನಗೆ ಫೋನಾಯಿಸಿದರು. Banandur Kempaiah ಅವರ ಧ್ವನಿ ತುಂಬಾ ಕ್ಷೀಣವಾಗಿತ್ತು. ಯಾಕೆಂದು ವಿಚಾರಿಸಿದಾಗ ಪಿತ್ತ ಕೋಶದ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವುದಾಗಿ ತಿಳಿಸಿದರು. ನಾನಾಗ ಗೌರಿಬಿದನೂರಿನ ಸಮೀಪದ ರಮಾಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿದ್ದೆ. ನಿನ್ನೆ ಸಂಜೆ ಬೆಂಗಳೂರಿಗೆ ವಾಪಸ್ ಬಂದು, ಇವತ್ತು ಕೆಂಪಯ್ಯನವರನ್ನು ಭೇಟಿಯಾಗಲು ಆಸ್ಪತ್ರೆಗೆ ಹೋದೆ.

ಕೆಂಪಯ್ಯನಂತಹ ಕಲಾವಿದರು ಕನ್ನಡದ ಸಾಂಸ್ಕೃತಿಕ ಆಸ್ತಿ. ನನ್ನೊಂದಿಗೆ ಕೈಹಿಡಿದು ಮಾತಾಡುತ್ತಾ ಭಾವುಕರಾಗಿ ಮಗುವಿನಂತೆ ಅತ್ತುಬಿಟ್ಟರು. ನಾಲ್ಕು ದಿನಗಳ ಹಿಂದೆಯಷ್ಟೇ ತಮ್ಮ ಅಣ್ಣನಾದ ನಗಾರಿ ಸಿದ್ದಯ್ಯ ತೀರಿಕೊಂಡಿದ್ದಾರೆ. ಒಡಹುಟ್ಟಿ ಸಲಹಿದ ಅಣ್ಣನ ಅಂತ್ಯಕ್ರಿಯೆಯಲ್ಲಿಯೂ ಪಾಲ್ಗೊಳ್ಳಲಾಗಿಲ್ಲ. ಅಣ್ಣನ ಅಂತ್ಯಕಾಲದಲ್ಲಿ ಮುಖ ದರ್ಶನ ಮಾಡಲಾಗದ ಮತ್ತು ಹಿಡಿ ಮಣ್ಣು ಕೊಡಲಾಗದ ದೌರ್ಭಾಗ್ಯ ತನ್ನದಾಯಿತೆಂದು ಬಲು ನೊಂದುಕೊಂಡರು. ನಾನು ಪ್ರೀತಿಯಿಂದ ಸಂತೈಸಿದೆ. ಆನಂತರ ನನ್ನ ಹೆಂಡತಿಗೆ ಫೋನ್ ಮಾಡಿ, ಕೆಂಪಯ್ಯನವರ ಜೊತೆಯಲ್ಲಿ ಮಾತಾಡಲು ತಿಳಿಸಿ ಕೆಂಪಯ್ಯನವರ ಕೈಗೆ ಮೊಬೈಲ್ ಕೊಟ್ಟೆ. “ಏನು ತಂಗೆಮ್ಮಾ ನೆಂಟರು ಬಂದವ್ರೆ ನನ್ನ ನೋಡೋದಕ್ಕೆ. ನೀವು ನಾವು ಹನ್ನೆರಡನೇ ಶತಮಾನದ ಬಸವಣ್ಣನವರ ಕಾಲದಿಂದಲೂ ನೆಂಟರು ಕಣಮ್ಮ” ಎಂದು ತಮಾಶೆ ಮಾಡಿಕೊಂಡು ನಕ್ಕರು. ಕೆಂಪಯ್ಯ ರವಷ್ಟು ಹಗುರಾದರು.

ಆಗಲೇ ಬಾನಂದೂರು ಕೆಂಪಯ್ಯವರ ಅತ್ತಿಗೆಯಿಂದ ಫೋನ್ ಕರೆ ಬಂತು. ನಾಲ್ಕು ದಿನಗಳ ಹಿಂದೆಯಷ್ಟೇ ಕೆಂಪಯ್ಯನವರ ಅತ್ತಿಗೆ ವಿಧವೆಯಾಗಿರಲಿಲ್ಲ. ಈಗ ವಿಧವೆಯಾಗಿರುವ ಅತ್ತಿಗೆಯು ತನ್ನ ಮೈದುನನಾದ ಕೆಂಪಯ್ಯನವರ ಜೊತೆಯಲ್ಲಿ ಫೋನಿನಲ್ಲಿ ಆರೋಗ್ಯ ವಿಚಾರಿಸುತ್ತಿದ್ದರು. ಫೋನ್ ಸಂಭಾಷಣೆಯಲ್ಲಿಯೇ ಪರಸ್ಪರ ಸಂತೈಕೆಯ ಮಾತಾಡುತ್ತಾ ಇಬ್ಬರೂ ತುಂಬಾ ನೊಂದುಕೊಂಡರು. ಇನ್ನು ಸಂತೈಸುವ ಶಕ್ತಿ ನನಗಿಲ್ಲದಾಯಿತು. ರಾತ್ರಿ 8:40 ರಲ್ಲಿ ಆಸ್ಪತ್ರೆಯಿಂದ ಹೊರಗೆ ಬಂದೆ. ಮಳೆ ಸುರಿಯುತ್ತಿತ್ತು… ನನ್ನ ಕಣ್ಣೀರು ಕೂಡಾ !!
ಹಾಡುಹಕ್ಕಿ ಡಾ.ಬಾನಂದೂರು ಕೆಂಪಯ್ಯವರು ಶೀಘ್ರವಾಗಿ ಗುಣಮುಖರಾಗಿ ಬಂದು ಮತ್ತೆ ಹಾಡಲಿ ಕೋಗಿಲೆ ಎಂದು ಹಾರೈಸೋಣ.
- ಡಾ.ವಡ್ಡಗೆರೆ ನಾಗರಾಜಯ್ಯ
