“ಹೆಬ್ಬುಲಿ ಕಟ್” ಸಿನಿಮಾ ತಪ್ಪದೆ ನೋಡಿ

ನೀನಾಸಂ ಸತೀಶ್ ಅವರು ನಿರ್ಮಿಸಿರುವ, ಭೀಮರಾವ್ ಪಿ ಅವರ ನಿರ್ದೇಶನದ “ಹೆಬ್ಬುಲಿ ಕಟ್” ಕನ್ನಡ ಸಿನಿಮಾದ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಿನಿಮಾ interval ಬಿಟ್ಟಾಗ ನಾನು, ಹಿರಿಯ ಸಾಮಾಜಿಕ ಹೋರಾಟಗಾರ- ಚಿಂತಕ ಜಿ.ಎನ್. ನಾಗರಾಜ್ ಅವರ ಹತ್ತಿರ, “ಇದೇನು ಸರ್, ಚಮ್ಮಾರರ ಬಡ ಕುಟುಂಬದ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನಿಗೆ ತನ್ನ ಸಹಪಾಠಿ ಹುಡುಗನೊಬ್ಬ, ‘ನೀನು ಸುದೀಪ್ ತರಾ ಹೆಬ್ಬುಲಿ ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡರೆ ಆ ಹುಡುಗಿ ನಿನ್ನನ್ನು ಇಷ್ಟಪಡುತ್ತಾಳೆ’ ಎಂದು ಹೇಳಿದ ಮಾತನ್ನು ಕೇಳಿಕೊಂಡು, ಆ ಹುಡುಗಿಯನ್ನು ತನ್ನ ಕಡೆಗೆ ಸೆಳೆಯಲಿಕ್ಕಾಗಿ ಹೇರ್ ಕಟ್ ಮಾಡಿಸಲು ಆ ಹುಡುಗ ಈ ಪರಿಯಾಗಿ ಪರದಾಡುತ್ತಾನೆ. ಹೈಸ್ಕೂಲ್ ಹುಡುಗ ಹುಡುಗಿಯ ನಡುವೆ ಪ್ರೇಮ- ಕಾಮನೆಯ ಸೆಳೆತ ತೋರಿಸುವುದು ಸಾಮಾಜಿಕ ಪರಿಣಾಮದ ದೃಷ್ಟಿಯಿಂದ ಎಷ್ಟರಮಟ್ಟಿಗೆ ಸರಿ ?” ಎಂದು ಕೇಳಿದೆ. “Interval ಆದಮೇಲೆ ಇನ್ನು ಮುಂದೆ ಈ ಚಿತ್ರ ಯಾವ ರೀತಿ ಇದೆಯೋ ನೋಡೋಣ” ಎಂದಷ್ಟೇ ಹೇಳಿ ಸುಮ್ಮನಾದರು. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಬಡ ಚಮ್ಮಾರರ ಕುಟುಂಬದ ಅಸ್ಪೃಶ್ಯ ಹುಡುಗನೊಬ್ಬ ತನ್ನ ಸಹಪಾಠಿಯಾದ ಹುಡುಗಿಯನ್ನು (ಊರಗೌಡನ ಮಗಳು) ತನ್ನತ್ತ ಸೆಳೆಯಲು ಕ್ಷೌರಿಕನ ಬಳಿ ಹೆಬ್ಬುಲಿ ಕಟ್ ಕ್ಚೌರ ಮಾಡಿಸಿಕೊಳ್ಳಲು ಹೋಗಿ ಬಲಾಢ್ಯ ಜಾತಿಗಳ ದೌರ್ಜನ್ಯಕ್ಕೆ ಗುರಿಯಾಗುವ ಕಥಾವಸ್ತುವನ್ನು ಆಧರಿಸಿದ ಸಿನಿಮಾ ಇದು.

ಪ್ರೀಮಿಯರ್ ಶೋ ಮುಗಿದ ನಂತರ ನೀನಾಸಂ ಸತೀಶ್, ಪ್ರೇಕ್ಷಕರನ್ನು ಉದ್ದೇಶಿಸಿ ಅಸ್ಪೃಶ್ಯತೆ ಆಚರಣೆಯ ಸಾಮಾಜಿಕ ಸೂಕ್ಷ್ಮತೆಯ content ಇರುವ ಸಿನಿಮಾವನ್ನು ನಿರ್ಮಿಸಬೇಕಾಗಿ ಬಂದ ತನ್ನ ಕಾಳಜಿಯನ್ನು ಕುರಿತು ಮಾತನಾಡುತ್ತಾ, “ಈ ಸಿನಿಮಾ ಗೆಲ್ಲದಿದ್ದರೆ ಕನ್ನಡಿಗರು ಸೋತಂತೆ. ಹಾಗೆ ಆಗೋದು ಬೇಡ. ಈಗ ಸಿನಿಮಾ ನೋಡಿರುವ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡು ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿ, ಸಿನಿಮಾವನ್ನು ಯಶಸ್ವಿಗೊಳಿಸಿರಿ” ಎಂದು ವಿನಂತಿ‌ ಮಾಡಿಕೊಂಡರು.

ಅಸ್ಪೃಶ್ಯತೆ, ಹಸಿವು, ಅವಮಾನ, ಬಡತನ ಅನುಭವಿಸುವ ಚಮ್ಮಾರರ ಕುಟುಂಬದಲ್ಲಿ ಹುಟ್ಟಿದ ವಿದ್ಯಾರ್ಥಿ ವಿನಯನಲ್ಲಿ ಉತ್ತಮ ಶಿಕ್ಷಣ ಪಡೆಯುವ ಮತ್ತು ತನ್ನ ಪ್ರತಿಭೆಯನ್ನು ಉಜ್ವಲಗೊಳಿಸಿಕೊಳ್ಳುವ ಹಂಬಲಗಳು ತೀವ್ರವಾಗಿ ಉದ್ದೀಪನಗೊಳ್ಳುವ ಬದಲಿಗೆ ಹೆಬ್ಬುಲಿ ಕಟ್ ಕೇಶ ವಿನ್ಯಾಸದ ವ್ಯಸನ ಆವರಿಸಿಕೊಳ್ಳುತ್ತದೆ . “ಹೆಬ್ಬುಲಿ” ಎಂಬ ಕನ್ನಡ ಚಲನಚಿತ್ರದಲ್ಲಿ ನಾಯಕ ನಟ ಸುದೀಪ್‌ನ ವಿಭಿನ್ನ ರೀತಿಯ ಹೇರ್‌ ಕಟ್‌ ಶೈಲಿಯನ್ನು ಅಪಾರ ವಿದ್ಯಾರ್ಥಿಗಳು ಅನುಕರಿಸತೊಡಗಿದರು. ಸಾಮಾಜಿಕ ಹೊಣೆಗಾರಿಕೆ ಮರೆತ ಸಿನಿಮಾ ಹೀರೋನಿಂದ ಪ್ರಭಾವಿತರಾದ ವಿದ್ಯಾರ್ಥಿಗಳಲ್ಲಿ ಕಂಡುಬಂದ ‘ಹೆಬ್ಬುಲಿ ಕಟ್’ ಎಂಬ ಹೊಸ ಟ್ರೆಂಡಿನಿಂದ ತರಗತಿಗಳಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ವಿಪರೀತವಾಗಿ ಕಿರಿಕಿರಿ ಅನುಭವಿಸಿದ್ದಂತೂ ಸುಳ್ಳಲ್ಲ. ಶಿಕ್ಷಕಿಯೊಬ್ಬರ ಮಗನೇ ಹೀಗೆ ಹೆಬ್ಬುಲಿ ಹೇರ್ ಕಟ್ ಮಾಡಿಸುತ್ತಿದ್ದ ಮಾನಸಿಕ ಕಿರಿಕಿರಿಯನ್ನು ಅನುಭವಿಸಲಾರದೆ ಮನನೊಂದು ಆ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಮಾಧ್ಯಮಗಳಲ್ಲಿ ಕೂಡಾ ಬಿತ್ತರವಾಗಿತ್ತು. ಕರ್ನಾಟಕದಲ್ಲಿ ಅಪಾರ ವಿದ್ಯಾರ್ಥಿಗಳಲ್ಲಿ ಹುಚ್ಚೆಬ್ಬಿಸಿದ್ದ ಹೇರ್‌ ಸ್ಟೈಲ್‌ ಇದು. ‘ಹೆಬ್ಬುಲಿ ಕಟ್’ ಸಿನಿಮಾದಲ್ಲಿ ಚಮ್ಮಾರರ ಕುಟುಂಬದ ಬಡ ವಿದ್ಯಾರ್ಥಿ ವಿನಯ್ ಕೂಡಾ ಸುದೀಪ್‌ನ ಹೆಬ್ಬುಲಿ ಕಟ್‌ ವಿಕೃತಿಯನ್ನು ಅನುಕರಿಸಲು ಹೋದ ಒಬ್ಬ ಹುಚ್ಚು ಅಭಿಮಾನಿ. ಸಾಮಾಜಿಕ ಪರಿಣಾಮದ ದೃಷ್ಟಿಯಿಂದ ಉತ್ತಮ ‌ಮೌಲ್ಯಗಳನ್ನು ಸಿನಿಮಾ ಮತ್ತು ವೈಯಕ್ತಿಕ ಬದುಕಿನ ನಡೆಗಳಲ್ಲಿ ಅಳವಡಿಸಿಕೊಂಡು ತೋರಿಸುವುದರಲ್ಲಿ ನಮಗೆ ಡಾ.ರಾಜ್ ಕುಮಾರ್ ಆದರ್ಶ ಮಾದರಿಯಾಗಿದ್ದಾರೆ.

ಹೆಬ್ಬುಲಿ ಹೇರ್ ಕಟ್ ಮಾಡಿಸುವ ಸಲುವಾಗಿ ಹಣ ಹೊಂದಿಸಲು ತನ್ನ ಮನೆಯಲ್ಲಿಯೇ ಪೋಷಕರಿಗೆ ತಿಳಿಯದಂತೆ ದುಡ್ಡು ಕದಿಯುತ್ತಾನೆ ವಿನಯ. ಅಪ್ಪ ಅಮ್ಮ ಮನೆಯ ಬಾಡಿಗೆ ಕಟ್ಟಲು ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ದುಡ್ಡನ್ನು ಕದ್ದ ಬಗ್ಗೆ ವಿನಯ್ ಎಳ್ಳಷ್ಟೂ ಪಶ್ಚಾತ್ತಾಪ ಪಡುವುದಿಲ್ಲ. ದುಡ್ಡು ಕದ್ದ ಆರೋಪವನ್ನು ವಿನಯನ ಅಮ್ಮ ತನ್ನ ಗಂಡನ ಮೇಲೆ ಹೊರಿಸುತ್ತಾಳೆ. ಪ್ರಾಮಾಣಿಕ ಚಮ್ಮಾರನಾದ ಅವನು ಕಳ್ಳತನದ ಆರೋಪದಿಂದ ಮುಕ್ತವಾದ ಬಗ್ಗೆ ಸಿನಿಮಾದಲ್ಲಿ ಯಾವುದೇ ಸುಳಿವಿಲ್ಲ. ಕದ್ದುಕೊಂಡ ಅದೇ ದುಡ್ಡನ್ನು ಪಂಕ್ಚರ್ ಅಂಗಡಿ ರಫೀಕನ ಮೂಲಕ ಆನ್ಲೈನ್ ಜೂಜಿಗೆ ತೊಡಗಿಸಿ ಜೂಜಿನಲ್ಲಿ ಗೆದ್ದ ದುಡ್ಡು ತೆಗೆದುಕೊಂಡು ಸಿನಿಮಾ ನೋಡಲು ಥಿಯೇಟರ್ ಗೆ ಹೋದಾಗ ನೂಕುನುಗ್ಗುಲಿನಲ್ಲಿ ಜೇಬುಗಳ್ಳರಿಂದ ಕಳುವಾಗುತ್ತದೆ. ತಾನೊಬ್ಬ ವಿದ್ಯಾರ್ಥಿಯಾಗಿ ಜೂಜಾಟ ಆಡುವುದು ತಪ್ಪೆಂಬುದರ ಪಾಪಪ್ರಜ್ಞೆಯಾಗಲೀ, ಕಳ್ಳತನ ಮಾಡಿದ್ದ ಅಪರಾಧಿ ಭಾವನೆಯಾಗಲೀ ವಿನಯನಲ್ಲಿ ಕಾಡುವುದಿಲ್ಲ. ಹೆಬ್ಬುಲಿ ಕಟ್ ಮಾಡಿಸಲೇಬೇಕೆಂದು ಹಟ ತಾಳಿದ ವಿನಯ್, ತನ್ನ ಪೋಷಕರಿಗೆ ತಿಳಿಸದಂತೆ ಚಿಂದಿ ಆಯ್ದು ಮಾರಾಟ ಮಾಡಿ ಹಣ ಸಂಪಾದಿಸಲು ಪ್ರಯತ್ನಿಸುತ್ತಾನೆ. ಈಗಾಗಲೇ ಸಫಾಯಿ ಕರ್ಮಚಾರಿಗಳಾಗಿ, ಜಾಡಮಾಲಿಗಳಾಗಿ ಮಲಿನ ವೃತ್ತಿಗಳಲ್ಲಿ ನಿರತರಾಗಿರುವ ಸಮಾಜದ ಕಟ್ಟಕಡೆಯ ಸಮುದಾಯದ ಮಕ್ಕಳು ಆಧುನಿಕ ನಾಗರಿಕತೆಯ ಕಾಲದಲ್ಲಿಯೂ ಚಿಂದಿ ಆಯುವ ಕೆಲಸಕ್ಕೆ ತೊಡಗಬೇಕೇನು ? ಆಧುನಿಕ ಸೆಲೂನುಗಳಿಗೆ ಹೋಗಿ ಹೆಬ್ಬುಲಿ ಕಟ್ ಮಾಡಿಸಲು ಪ್ರಯತ್ನಿಸುವ ಶಾಲಾ ಹುಡುಗನಿಗೆ ದುಡಿಮೆಯ ಇತರೆ ಆಧುನಿಕ ಸಾಧ್ಯತೆಗಳು‌ ಈ ಸಿನಿಮಾದ ಕಥೆಗಾರನೂ ಆಗಿರುವ ನಿರ್ದೇಶಕನಿಗೆ ಕಾಣಿಸಲಿಲ್ಲವೇನು ? ಜಾತಿ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಕ್ಷೌರಿಕರಿಂದ ನಿರಾಕರಣೆಗೆ ಒಳಗಾಗುತ್ತಾ ಅಸ್ಪೃಶ್ಯತೆಯ ಸಂಕಟವನ್ನು ಅನುಭವಿಸುತ್ತಿದ್ದಾರೆ, ನಿಜ. ದಲಿತ ವಿದ್ಯಾರ್ಥಿಯೊಬ್ಬ ಹೆಬ್ಬುಲಿ ಕಟ್‌ ಮಾಡಿಸಿಕೊಳ್ಳುವ ಮೂಲಕ ಜಾತಿ ಪದ್ದತಿಯ ಕರಾಳ ವಾಸ್ತವವನ್ನು ಎದುರುಗೊಳ್ಳುವ ಬಗೆಯನ್ನು ಸಾಂಕೇತಿಕವಾಗಿ ಮನಗಾಣಿಸಲು ಮಾಡಿರುವ ಪ್ರಯತ್ನ ಇದೆಂದು ಮೆಚ್ಚಬಹುದು. ಆದರೆ ಜಾತಿ ಆಚರಣೆಯ ವಿರುದ್ಧ ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆ, ಆಧುನಿಕ ಶಿಕ್ಷಣದಿಂದ ಮನಃಪರಿವರ್ತನೆ ಅಥವಾ ಸಂವಿಧಾನಾತ್ಮಕವಾಗಿ ಅಸ್ಪೃಶ್ಯತಾ ವಿರೋಧಿ ಕಾನೂನು ಜಾರಿಯಿಂದ ಜಾತ್ಯಾಂಧರು ಸಾಮಾಜಿಕ ಪರಿವರ್ತನೆಯಾಗುವ ಯಾವುದೇ ಅಂಶ ಈ ಚಲನಚಿತ್ರದಲ್ಲಿ ವ್ಯಕ್ತವಾಗಿಲ್ಲ. ಜಾತಿ ಪದ್ದತಿಯ ಆಚರಣೆಯ ವಿರುದ್ಧ ವೈಚಾರಿಕ ಚಿಂತನೆ ಮೂಡಿಸುವ, ಸಂವಿಧಾನದ ಆಶಯಗಳನ್ನು ಕುರಿತು ಹೇಳುವ ಯಾವುದೇ ಪಾತ್ರ ಶಾಲೆಯ ವಾತಾವರಣದಲ್ಲಾಗಲೀ ಸಮಾಜದ ನಡುವೆಯಾಗಲೀ ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ.

‘ಮಾಡರ್ನ್‌ ಮೆನ್ಸ್‌ ಬ್ಯೂಟಿ ಪಾರ್ಲರ್‌’ ನಡೆಸುವ ಚೆನ್ನಯ್ಯನು ಹಸಿಬೆಳಗ್ಗೆಯೇ ದಲಿತ ಹುಡುಗ ವಿನಯನಿಗೆ ‘ಹೆಬ್ಬುಲಿ ಕಟ್’ ಮಾಡಲು ಅಂಗಡಿಯ ಆಸನದ ಮೇಲೆ ಕೂರಿಸಿ, ಹೊರಗಿನ ಯಾರೊಬ್ಬರೂ ನೋಡಬಾರದೆಂದು ಬಾಗಿಲನ್ನು ಮುಚ್ಚಿ ಕ್ಷೌರ ಮಾಡುತ್ತಾನೆ. ದಲಿತನಿಗೆ ಹೇರ್ ಕಟ್ ಮಾಡುವುದನ್ನು ಮೇಲ್ಜಾತಿಯ ಯಾರಾದರೂ ನೋಡಿದರೆ ಮೇಲೆರಗಿ ಬಿದ್ದಾರೆಂಬ ಭಯ ಕ್ಷೌರಿಕ ಚೆನ್ನಯ್ಯನಿಗೆ ಕಾಡುತ್ತದೆ. ಹಾಗಾಗಿಯೇ ಯಾರೊಬ್ಬರೂ ಕ್ಷೌರದ ಅಂಗಡಿಗೆ ಬರುವ ಮುನ್ನ ಹಸಿಬೆಳಗ್ಗೆಯೇ ವಿನಯನಿಗೆ ಕ್ಷೌರ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂಬ, ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಗಬಾರದೆಂಬ ಹಾಗೂ ದಲಿತ ಹುಡುಗನಿಗೆ ಕರುಣೆ ತೋರಿಸಿದೆನೆಂಬ ಮಿಶ್ರ ಆಲೋಚನೆಗಳಲ್ಲಿ ಕ್ಷೌರಿಕ ಚೆನ್ನಯ್ಯ ಕಾರ್ಯಮಗ್ನನಾಗುತ್ತಾನೆ. ತಾನೇನಾದರೂ ಅಮ್ಮನ ಕೈಗಳಿಗೆ ಸಿಕ್ಕಿದರೆ ಅವಳಿಷ್ಟದಂತೆ ನಾದಿರ್ ಎಂಬ ಮುಸ್ಲಿಂ ಕ್ಷೌರಿಕನಿಂದ ಹೇರ್ ಕಟ್ ಮಾಡಿಸಿಬಿಡುತ್ತಾಳೆಂಬ ಅಂಜಿಕೆಯಿಂದ ಹಿಂದಿನ ರಾತ್ರಿಯೇ ವಿನಯ್ ತನ್ನ ಮನೆಗೆ ಹೋಗದೆ ಇಡೀ ರಾತ್ರಿ ತಲೆತಪ್ಪಿಸಿಕೊಂಡು ಮುಂಜಾನೆ ಹೊತ್ತಿಗೆ ಚೆನ್ನಯ್ಯನ ಸೆಲೂನಿಗೆ ಹೋಗಿರುತ್ತಾನೆ. ಬಾಗಿಲು ಮುಚ್ಚಿದ್ದ ಚೆನ್ಯಯ್ಯನ ಸೆಲೂನಿನ ಒಳಗಿನಿಂದ ಶಬ್ದ ಕೇಳಿಬರುತ್ತಿರುವುದನ್ನು ಆಲಿಸಿದ ದಾರಿಹೋಕ ಊರಗೌಡನಿಗೆ ಅನುಮಾನ ಬಂದು ಇದ್ದಕ್ಕಿದ್ದಂತೆ ಅಂಗಡಿಯ ಶೆಟರ್ ತೆರೆದು ಚೆನ್ನಯ್ಯನ ಮೇಲೆ ದಾಳಿ ನಡೆಸುತ್ತಾನೆ. ಹಿಂದಿನ ರಾತ್ರಿ ವಿನಯ್ ಮನೆಗೆ ಹೋಗದೆ ತಲೆತಪ್ಪಿಸಿಕೊಂಡ ದಿನವೇ ಪಂಕ್ಚರ್ ಅಂಗಡಿ ರಫೀಕ್ ತನ್ನ ವ್ಯವಹಾರದ ಮೇಲೆ ಊರುಬಿಟ್ಟು ಹೋಗಿರುತ್ತಾನೆ. ವಿನಯ್ ಗಾಗಿ ಆತನ ತಂದೆತಾಯಿಗಳು ಎಲ್ಲಿ ಹುಡುಕಿದರೂ ಪತ್ತೆಯಾಗುವುದಿಲ್ಲ. “ವಿನಯನನ್ನು ರಫೀಕ್ ಬಾಂಬೆಯಲ್ಲಿ ಮಾರಿಬಿಟ್ಟಿದ್ದಾನೆ” ಎಂದು ಕಿಡಿಗೇಡಿಗಳು ವಾಟ್ಸಾಪ್ ಮೂಲಕ ಸುಳ್ಳು ಸುದ್ದಿ ಹಬ್ಬಿಸಿರುತ್ತಾರೆ. ಇದು ಮುಸ್ಲಿಂ ಸಮುದಾಯದ ವಿರುದ್ಧ ಪುಕಾರು ಹಬ್ಬಿಸುವ ಹಿಂದೂ ಮತೀಯವಾದಿಗಳ ಹವಣಿಕೆಗಳನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ವಿನಯನನ್ನು ಚೆನ್ನಯ್ಯನ ಸೆಲೂನಿನಿಂದ ದರದರನೆ ಹೊರಗೆಳೆದುತಂದ ಊರಗೌಡ ಮತ್ತು ಬಲಾಡ್ಯ ಜಾತಿಗಳ ಜನ ಸೇರಿಕೊಂಡು ವಿನಯನನ್ನು ಹಿಗ್ಗಾಮುಗ್ಗಾ ತಳಿಸತೊಡಗುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ವಾಟ್ಸಾಪ್ ಪುಕಾರಿನಿಂದ ಪ್ರಚೋದಿತರಾದ ಜನರ ಗುಂಪೊಂದು ರಫೀಕನ ತಾಯಿಯ ಮೇಲೆ ದಾಳಿ ನಡೆಸುತ್ತದೆ. ಆಗಲೇ ರಫೀಕ್ ಊರಿಗೆ ಮರಳಿ ಬರುತ್ತಾನೆ. ಊರಿನ ಗೌಡನು ಕ್ಷೌರಿಕ ಚೆನ್ನಯ್ಯನಿಗೆ ಹೇಳಿ ವಿನಯ್ ನ ತಲೆ ಬೋಳಿಸುವ ಶಿಕ್ಷೆ ವಿಧಿಸುತ್ತಾನೆ. ವಿನಯ್ ನ ತಂದೆ ಊರಗೌಡನ ಎದುರು “ಚಮ್ಮಾರರಿಂದ ನನ್ನ ಮಗ ಕ್ಷೌರ ಮಾಡಿಸಿಕೊಳ್ಳುವುದರಲ್ಲಿ ತಪ್ಪೇನಿದೆ… ? ನೀವು ಮಾತ್ರ ಕ್ಷೌರ ಮಾಡಿಸಿಕೊಳ್ಳಬಹುದೇ ?” ಎಂದು ಪ್ರಶ್ನಿಸುತ್ತಾನೆ.‌ ಲಾಗಾಯ್ತಿನಿಂದಲೂ ಸಾಮಾಜಿಕ ಘೋಷಣೆಗಳನ್ನು ಬದುಕಿನ ಅನಿವಾರ್ಯ ನಡೆಯನ್ನಾಗಿ ಸ್ವೀಕರಿಸಿ ಅನುಭವಿಸುತ್ತಾ ಬಂದ ಅನಕ್ಷರಸ್ಥ ಚಮ್ಮಾರನೊಬ್ಬ ಹೀಗೆ ಇದ್ದಕ್ಕಿದ್ದಂತೆ ಊರಗೌಡನ ವಿರುದ್ಧ ತಿರುಗಿ ಬೀಳಲು ಹೇಗೆ ಸಾಧ್ಯ? ಆತನಲ್ಲಿ ಶೋಷಣೆಯ ವಿರುದ್ಧ ಪ್ರಶ್ನಿಸುವ ಮನೋಭಾವ ಮೂಡಿಸಿದವರಾರು ? ಈ ಪ್ರಶ್ನೆಗೆ “ಹೆಬ್ಬುಲಿ ಕಟ್‌” ಸಿನಿಮಾದಲ್ಲಿ ಎಲ್ಲಿಯೂ ಉತ್ತರ ಸಿಗುವುದಿಲ್ಲ. ಹೆಬ್ಬುಲಿ ಕಟ್ ಮಾಡಿಸಿಕೊಳ್ಳಬೇಕಿದ್ದ ದಲಿತ ಹುಡುಗನಿಗೆ ಊರಗೌಡ ತಲೆ ಬೋಳಿಸುವ ಶಿಕ್ಷೆ ವಿಧಿಸಿದಾಗ ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಈ ಸಿನಿಮಾದ ಮೂಲಕ ವಿದ್ಯಾರ್ಥಿಯೊಬ್ಬ ಸಾಮಾಜಿಕ ಸಂಕಟಗಳನ್ನು ಹೋಗಲಾಡಿಸಲು ಶಿಕ್ಷಣವೇ ಮದ್ದೆಂದು ತೋರಿಸುವ ಬದಲು ಚಮ್ಮಾರನ ಮಗ ವಿನಯ ಶಿಕ್ಷೆ ಅನುಭವಿಸಿದ ರೀತಿಯಲ್ಲಿಯೇ ಕ್ಷೌರಿಕನ ಬಳಿ ತನ್ನಿಷ್ಟದ ಹೇರ್‌ ಕಟ್ ಮಾಡಿಸಿಕೊಳ್ಳಲು ಹೋಗುವ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅಸ್ಪೃಶ್ಯರು ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ. ಅಂಬೇಡ್ಕರ್ ಅವರ ಹೋರಾಟದ ಬಗೆಯನ್ನು ಮತ್ತು ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ತೋರಿಸುವ ಎಲ್ಲಾ ಸಾಧ್ಯತೆಗಳಿದ್ದರೂ ಸಾಂಕೇತಿಕವಾಗಿಯಾದರೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೂಡ ತೋರಿಸದಿರುವ ಪರಿಣಾಮ ಇದು. ಸಿನಿಮಾದ ಕೊನೆಯಲ್ಲಿ ಕ್ಷೌರಿಕರಿಂದ ಸೇವೆ ನಿರಾಕರಣೆಗೆ ಗುರಿಯಾದ ಅಸ್ಪೃಶ್ಯರ ಪ್ರಕರಣಗಳನ್ನು ಕುರಿತ ಪತ್ರಿಕಾ ವರದಿಗಳನ್ನು ತೋರಿಸಲಾಗುತ್ತದೆ. ಇದು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಧ್ವನಿಯಾಗುವ ದೃಶ್ಯ ಪ್ರತೀಕವೆಂದು ಎಷ್ಟು ಜನರಿಗೆ ಅರ್ಥವಾಗುವುದೋ ತಿಳಿಯದು. ಸಾಮಾಜಿಕ ಶೋಷಣೆಗೆ ಗುರಿಯಾಗಿರುವ ಮಕ್ಕಳು ಶಿಕ್ಷಣ ಪಡೆದು ಸಂಪತ್ತು ಮತ್ತು ಅಧಿಕಾರಗಳ ರಚನೆಗಳಿಗೆ ಪ್ರವೇಶ ಪಡೆಯಬೇಕೆಂಬ ದಾಹ ಮತ್ತು ಹಂಬಲಗಳನ್ನು ಅಭಿವ್ಯಕ್ತಿಸದಿರುವ “ಹೆಬ್ಬುಲಿ ಕಟ್” ಸಿನಿಮಾ ಆಧುನಿಕ ತಲೆಮಾರಿನ ವ್ಯಸನಗಳ ಮತ್ತು ರೂಢಿಗತ ಸಾಂಪ್ರದಾಯಿಕ ಜಾತಿ ಚೌಕಟ್ಟನ್ನು ಮೀರದೆ ಮತ್ತದೇ ಉಸುಬಿನ ಹೊಂಡದಲ್ಲಿ ಸಿಲುಕಿಸುವಂತೆ ಮೂಡಿಬಂದಿದೆ.


  • ಡಾ.ವಡ್ಡಗೆರೆ ನಾಗರಾಜಯ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW