ಭಗವದ್ಗೀತೆಯನ್ನೇಕೆ ಓದಬೇಕು? – ಡಾ.ಎಂ.ಎನ್.ಸುಂದರರಾಜ್



ಜೀವನದ ಒಂದು ಘಟನೆ ಎಂತಹ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ವರ್ಣಿಸಲೂ ಸಾಧ್ಯವಿಲ್ಲ. ಆ ಒಂದು ಘಳಿಗೆ ಒಬ್ಬರಿಗೆ ಸ್ಪೂರ್ತಿ ನೀಡಿ, ಅವರ ಆಲೋಚನೆಯನ್ನೇ ಬದಲಾಯಿಸುವುದೆಂದರೆ ಅದು ಸಾಧಾರಣ ವಿಷಯವೇ? – ಡಾ.ಎಂ.ಎನ್.ಸುಂದರರಾಜ್ ಅವರ ಲೇಖನದಲ್ಲಿ ಭಗವದ್ಗೀತೆಯನ್ನೇಕೆ ಓದಬೇಕು? ಎನ್ನುವುದನ್ನು ಸುಂದರವಾಗಿ ಅರ್ಥೈಸಿದ್ದಾರೆ, ತಪ್ಪದೆ ಎಲ್ಲರೂ ಓದಿ…

ಇಲ್ಲಿ ಪ್ರಸ್ತಾಪಿಸಲ್ಪಟ್ಟ ಇಬ್ಬರೂ ಲೋಕ ಪ್ರಸಿದ್ಧಿ ಪಡೆದವರೇ. ಆದರೆ ಮೊದಲು ಅವರಿಬ್ಬರಿಗೂ ಪರಿಚಯವೇ ಇರಲಿಲ್ಲ. ಕ್ರಮೇಣ ಇವರು ಸಲ್ಲಿಸಿದ ಸೇವೆ ಇಡೀ ದೇಶ ಹೆಮ್ಮೆ ಪಡುವಂತಹುದು.

ಒಬ್ಬ ಯುವಕ ಮಂಬೈ ಸಮುದ್ರ ತೀರದಲ್ಲಿ ವಾಯು ಸೇವನೆಗೆ ಹೊರಟಿದ್ದ. ಹಾಗೇ ಸುತ್ತಾಡುವಾಗ ಒಂದು ನಿರ್ಜನ ಪ್ರದೇಶದಲ್ಲಿ ಧೋತಿ ಧರಿಸಿ ಹೆಗಲ ಮೇಲೆ ಬಿಳಿ ವಸ್ತ್ರ ಹೊದ್ದ ಒಬ್ಬ ಹಿರಿಯರು ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ತನ್ಮಯರಾಗಿ ಓದುತ್ತಿದ್ದರು. ಅವರ ಮುಖದಲ್ಲಿನ ತೇಜಸ್ಸು, ಅವರ ಏಕಾಗ್ರತೆಯನ್ನು ಕಂಡು ಯುವಕನಿಗೆ ಆಶ್ಚರ್ಯವಾಯಿತು. ಅಲ್ಲೇ ಒಂದರೆಕ್ಷಣ ನಿಂತು, ಅವರು ತಮ್ಮ ಅಧ್ಯಯನವನ್ನು ಮುಗಿಸಿ ಪುಸ್ತಕವನ್ನು ಮುಚ್ಚಿದ ಮೇಲೆ ಆ ಯುವಕ ಅವರ ಬಳಿ ಬಂದು “ಇಂದಿನ ವೈಜ್ಞಾನಿಕ ಆಧುನಿಕ ಯುಗದಲ್ಲಿಯೂ ತಾವು ಭಗವದ್ಗೀತೆಯನ್ನು ಓದುವುದೇ? ನಮ್ಮ ವಿಜ್ಞಾನಿಗಳು ಈಗಾಗಲೇ ಚಂದ್ರನನ್ನು ಮುಟ್ಟಿ ಬಂದಿದ್ದಾರೆ. ಆದರೆ ತಾವಿನ್ನೂ ಭಗದ್ಗೀತೆ, ರಾಮಾಯಣ ಎಂದು ಹಿಂದಿನ ಕಾಲದಲ್ಲಿಯೇ ಇದ್ದೀರಿ” ಎಂದು ಹೇಳಿದ. ಆಗ ಆ ಹಿರಿಯರು ಕೇಳಿದರು “ನಿನಗೆ ಭಗದ್ಗೀತೆಯ ಬಗ್ಗೆ ಏನು ತಿಳಿದಿದೆ?” ಆ ಯುವಕ ಅದಕ್ಕೆ ಯಾವ ಉತ್ತರವನ್ನೂ ಹೇಳಲಿಲ್ಲ. ಆದರೆ ಯುವಕ ಉದ್ಧಟತನದಿಂದ ಹೀಗೆ ಹೇಳಿದ “ಇದನ್ನೆಲ್ಲಾ ಓದಿದರೆ ಏನು ಸಿಗುತ್ತದೆ? ನಾನು ವಿಕ್ರಂ ಸಾರಾಭಾಯಿ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿ. ನಾನೊಬ್ಬ ವಿಜ್ಞಾನಿ. ವೈಜ್ಞಾನಿಕ ಚಿಂತನೆ ಹೊಂದಿದ್ದೇನೆ. ಅಲ್ಲದೆ ಭಗವದ್ಗೀತೆಯನ್ನು ಓದುವುದು ಸುಮ್ಮನೆ ಸಮಯ ದಂಡ ಎನ್ನುವುದು ನನ್ನ ನಂಬಿಕೆ”.

ಫೋಟೋ ಕೃಪೆ : google

ಆ ಹಿರಿಯರು ಮರುಮಾತನಾಡಲಿಲ್ಲ. ಸುಮ್ಮನೆ ನಕ್ಕುಬಿಟ್ಟರು ಅಷ್ಟೆ. ಆ ಸ್ಥಳ ಬಿಟ್ಟು ಮೇಲೆದ್ದರು. ಅಷ್ಟರಲ್ಲಿ ಅಲ್ಲಿಗೆ ಐಷಾರಾಮಿ ಕಾರುಗಳೆರಡು ಬಂದು ನಿಂತವು. ಒಂದರಲ್ಲಿ ಇಬ್ಬರು ದೈತ್ಯ ಅಂಗರಕ್ಷಕರು ಇಳಿದು ಆ ಮಹಾಶಯರಿಗೆ ಸೆಲ್ಯೂಟ್ ಹೊಡೆದರು. ಕೈನಲ್ಲಿ ಆಧುನಿಕ ರೈಫಲ್ ಇತ್ತು. ಇನ್ನೊಂದು ಕಾರಿನಿಂದ ಕಾರಿನ ಚಾಲಕ ಇಳಿದು ಕಾರಿನ ಬಾಗಿಲನ್ನು ತೆರೆದು ವಿನೀತನಾಗಿ ನಿಂತ. ಆಗ ಆ ಮಹಾಶಯರುಕಾರಿನೊಳಗೆ ಕುಳಿತು ಹೊರಡಲನುವಾದರು. ಇದನ್ನೆಲ್ಲ ಗಮನಿಸುತ್ತಿದ್ದ ಯುವಕನಿಗನ್ನಿಸಿತು, ಈತ ಸಾಮಾನ್ಯನಲ್ಲ ಒಬ್ಬ ಪ್ರಭಾವೀ ವ್ಯಕ್ತಿಯಿರಬೇಕು ಎಂದು. ಕಾರಿನ ಬಳಿ ಓಡಿಬಂದು, “ತಾವು ಯಾರೆಂದು ತಿಳಿಯಬಹುದೇ?” ಎಂದು ಗೌರವಪೂರ್ವಕವಾಗಿ ಕೇಳಿದ. ಆ ಮಹಾಶಯರು ಹೇಳಿದರು “ನಾನು ವಿಕ್ರಂ ಸಾರಾಭಾಯಿ” ಎಂದು. ಅದನ್ನು ಕೇಳಿದೊಡನೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ತಾನು ಕಲಿಯುತ್ತಿರುವುದು ಈ ಮಹಾಶಯರ ಸಂಸ್ಥೆಯಲ್ಲಿ, ಅಲ್ಲದೆ ವಿಕ್ರಂ ಸಾರಾಭಾಯ್ ಒಬ್ಬ ವಿಶ್ವವಿಖ್ಯಾತ ಅಣು ವಿಜ್ಞಾನಿಯಾಗಿದ್ದರು. ಅವರನ್ನು ಪ್ರಶ್ನಿಸಿದ ಯುವಕ ಯಾರು ಗೊತ್ತೇ? ಅವರೇ ನಮ್ಮ ದೇಶದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ!

ಫೋಟೋ ಕೃಪೆ : wikipedia

ಅನಂತರದಲ್ಲಿ ನಡೆದ ಘಟನೆ ಇನ್ನೂ ಸ್ವಾರಸ್ಯಕರವಾದದ್ದು. ಅಂದಿನಿಂದ ಕಲಾಮರು ಭಗವದ್ಗೀತೆಯನ್ನು ಓದತೊಡಗಿದರು. ಅಷ್ಟೇ ಅಲ್ಲ, ಅದರಲ್ಲಿನ ಅಂಶಗಳನ್ನೆಲ್ಲ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳತೊಡಗಿದರು. ಅದರ ಜೊತೆಗೆ ರಾಮಾಯಣ, ಮಹಾಭಾರತಗಳನ್ನೂ ಓದಿದರು. ಇತರ ವೈದಿಕ ಗ್ರಂಥಗಳ ಬಗ್ಗೆಯೂ ಅವರು ಒಲವು ಬೆಳೆಸಿಕೊಂಡರು. ಭಗವದ್ಗೀತೆ ಅವರ ಮೇಲೆ ಅದೆಷ್ಟು ಗಾಢವಾಗಿ ಪರಿಣಾಮ ಬೀರಿತ್ತೆಂದರೆ, ಅಂದಿನಿಂದ ಅವರು ಮಾಂಸಾಹಾರವನ್ನು ತ್ಯಜಿಸಿದರು. ತಮ್ಮ ಆತ್ಮಚರಿತ್ರೆಯಲ್ಲಿ ಅವರು ಭಗವದ್ಗೀತೆ ಒಂದು ಸಂಪೂರ್ಣ ವಿಜ್ಞಾನ ಎಂದು ಬಣ್ಣಿಸಿದ್ದಾರೆ. ಅವರ ಪ್ರಕಾರ ಇದೊಂದು ಸಾಂಸ್ಕೃತಿಕ ಪರಂಪರೆ. ನಮಗೆಲ್ಲಾ ಅದೊಂದು ಹೆಮ್ಮೆಯ ವಿಚಾರವೂ ಆಗಿದೆ.

ನೀವು ಭಗವದ್ಗೀತೆಯನ್ನು ಅರಿತರೆ, ನಿಮ್ಮ ಅರಿವಿನ ಮಟ್ಟ ಹೆಚ್ಚುತ್ತದೆ. ಜೀವನ ಹೋರಾಟಕ್ಕೆ ಅದು ಸಜ್ಜುಗೊಳಿಸುತ್ತದೆ. ದಿನನಿತ್ಯದಲ್ಲಿ ನಾವು ಒಂದಲ್ಲಾ ಒಂದು ಜಂಜಾಟಕ್ಕೆ ಸಿಕ್ಕು ಒದ್ದಾಡುತ್ತಿರುತ್ತೇವೆ. ಅವುಗಳಿಗೆಲ್ಲಾ ಪರಿಹಾರ ಭಗವದ್ಗೀತೆಯಲ್ಲಿ ಅಡಕವಾಗಿದೆ ಎಂಬುದು ಬಲ್ಲವರ ಅಭಿಪ್ರಾಯವೂ ಆಗಿದೆ.

ಭಗವದ್ಗೀತೆ ಮಹಾತ್ಮಾ ಗಾಂಧಿ, ವಿನೋಬಾಭಾವೆ, ಸರ್ವಪಲ್ಲಿ ರಾಧಾಕೃಷ್ಣನ್ ಮುಂತಾದವರ ಪ್ರಿಯವಾದ ಗ್ರಂಥವಾಗಿತ್ತು. ಹಲವಾರು ಪಾಶ್ಚಾತ್ಯ ವಿದ್ವಾಂಸರು ಮತ್ತು ಪ್ರಸಿದ್ಧ ವ್ಯಕ್ತಿಗಳು ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಾರೆ.  ಇಸ್ಕಾನ್ ಸಂಸ್ಥೆಯು ಭಗವದ್ಗೀತೆಯನ್ನು ವಿಶ್ವವ್ಯಾಪಿಯನ್ನಾಗಿ ಮಾಡಿದೆ. ಒಂದು ಅಂದಾಜಿನಂತೆ ೧೫ ಕೋಟಿ ಪ್ರತಿಗಳನ್ನು ಅರಬ್ ದೇಶದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದೆ. ಅರೇಬಿಕ್, ಉರ್ದು, ಇಂಗ್ಲಿಷ್, ಫ್ರೆಂಚ್ ಮುಂತಾದ ವಿಶ್ವದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿರುವ ಭಗವದ್ಗೀತೆ ಕೋಟ್ಯಾಂತರ ಜನರ ಕೈಸೇರಿ ಅವರನ್ನು ಅಧ್ಯಯನಶೀಲರನ್ನಾಗಿ ಮಾಡಿದೆ.


  • ಡಾ. ಎಂ. ಎನ್. ಸುಂದರರಾಜ್ (ಅಧ್ಯಕ್ಷರು ಕರ್ನಾಟಕ ಸಂಘ, ಲೇಖಕರು) ಶಿವಮೊಗ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading